ಹೊಸ ಟ್ರೆಂಡಿಗೆ ನಾಂದಿ ಹಾಡಿದ ಕಿಚ್ಚ ಅಭಿನಯದ 'ರನ್ನ'
ಎರಡು ತಿಂಗಳಿನಿಂದ ಕಿಚ್ಚ ಸುದೀಪ್ ಅಭಿನಯದ ವರ್ಷದ ಬಹುನಿರೀಕ್ಷಿತ 'ರನ್ನ' ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ.
ಚಿತ್ರದ ಸುತ್ತಮುತ್ತ ಹಲವು ಗೊಂದಲಗಳಿವೆ, ಸೋಮವಾರ (ಮೇ 18) ಚಿತ್ರ ಸೆನ್ಸಾರಿಗೆ ಹೋಗಲಿದೆ ಎಂದು ಕಿಚ್ಚ ಸುದೀಪ್ ಖುದ್ದು ಟ್ವೀಟ್ ಮಾಡಿದ್ದರು.
ಇದೆಲ್ಲಾ ಒಂದು ಕಡೆಯಾದರೆ, ರನ್ನ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ನಿರ್ಮಾಪಕರು ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ರನ್ನ ಚಿತ್ರ ಬಿಡುಗಡೆಯಾಗುತ್ತಿಲ್ಲ ಎನ್ನುವುದು ವಿಶೇಷ.
ಇನ್ನೊಂದೆಡೆ ರನ್ನ ಚಿತ್ರ ಬಿಡುಗಡೆಗೆ ಕಾದು ಕಾದು ಇತರ ಸಿನಿಮಾದ ನಿರ್ಮಾಪಕರು ತಮ್ಮ ಚಿತ್ರ ಬಿಡುಗಡೆ ಮಾಡಲಾಗದೇ ಹೈರಾಣವಾಗಿ ಹೋಗಿದ್ದಾರೆ. (ರನ್ನ ಚಿತ್ರ ಮೇ 22ಕ್ಕೆ ಬಿಡುಗಡೆ)
ಇದರ ಜೊತೆಗೆ ವರ್ಷದ ಮತ್ತೊಂದು ಬಹುನಿರೀಕ್ಷಿತ ಶಿವರಾಜ್ ಕುಮಾರ್ ಅಭಿನಯದ, ಹರ್ಷ ನಿರ್ದೇಶನದ 'ವಜ್ರಕಾಯ' ಚಿತ್ರ ಕೂಡಾ ಬಿಡುಗಡೆಗೆ ಸಜ್ಜಾಗಿ ಕೂತಿದೆ.

ರನ್ನ ಚಿತ್ರ ಯಾವ ರೀತಿ ಬಿಡುಗಡೆಯಾಗುತ್ತಿದೆ?
ಇದೇ ಮೊದಲ ಬಾರಿಗೆ ರನ್ನ ಚಿತ್ರ 'Fixed Hire Basis' ಸಿಸ್ಟಂ ಮೂಲಕ ಬಿಡುಗಡೆಯಾಗಲಿದೆ. ಈ ಪದ್ದತಿ ತೆಲುಗು ಮತ್ತು ತಮಿಳಿನಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ, ಆದರೆ ಕನ್ನಡದಲ್ಲಿ ಇದೇ ಮೊದಲು.

ನಿರ್ಮಾಪಕರು ಮತ್ತು ಹಂಚಿಕೆದಾರರಿಗೆ ರಿಸ್ಕ್ ಇಲ್ಲ
ಈ ಸಿಸ್ಟಂನಲ್ಲಿ ನಿರ್ಮಾಪಕರಿಗಾಗಲಿ ಅಥವಾ ಹಂಚಿಕೆದಾರರಿಗಾಗಲಿ ಯಾವುದೇ ರಿಸ್ಕ್ ಇರುವುದಿಲ್ಲ. ನೇರ ಚಿತ್ರಮಂದಿರದ ಮಾಲೀಕರು ನಿರ್ಮಾಪಕರಿಂದ ನಿಗದಿತ ಮೊತ್ತಕ್ಕೆ ಚಿತ್ರ ಪ್ರದರ್ಶನದ ರೈಟ್ ಪಡೆದಿರುತ್ತಾರೆ.

ಇಷ್ಟು ದಿನಾಂತ ಇಲ್ಲ
ಎ, ಬಿ ಮತ್ತು ಸಿ ಸೆಂಟರ್ ಚಿತ್ರಮಂದಿರಗಳಿಗೆ ಬೇರೆ ಬೇರೆ ಬೆಲೆ ನಿಗದಿಯಾಗಿರುತ್ತದೆ. ಚಿತ್ರ ಪ್ರದರ್ಶನದ ರೈಟ್ಸ್ ಪಡೆದ ಥಿಯೇಟರ್ ಮಾಲೀಕರಿಗೆ ಇಷ್ಟು ದಿನ ಮಾತ್ರ ಚಿತ್ರ ಪ್ರದರ್ಶನ ಮಾಡಬೇಕೆನ್ನುವ ಯಾವುದೇ ಕಟ್ಟುಪಾಡುಗಳಿರುವುದಿಲ್ಲ.

ಈ ಪದ್ದತಿಯೇ ಬಿಡುಗಡೆಗೆ ವಿಳಂಬ?
ರನ್ನ ಚಿತ್ರಕ್ಕೆ ಈಗಾಗಲೇ 255 ಚಿತ್ರಮಂದಿರ ಫೈನಲ್ ಆಗಿದೆ. ಇನ್ನಷ್ಟು ಥಿಯೇಟರುಗಳು ಮಾತುಕತೆಯ ಹಂತದಲ್ಲಿದ್ದು, ಕನ್ನಡ ಚಿತ್ರಗಳ ಇದುವರೆಗಿನ ಇತಿಹಾಸದಲ್ಲೇ ದಾಖಲೆ ಮುನ್ನೂರು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದೇ ಚಿತ್ರ ಬಿಡುಗಡೆ ವಿಳಂಬ ಎನ್ನಲಾಗುತ್ತಿದೆ.

ಚಿತ್ರಮಂದಿರಕ್ಕೆ ಆಗುವ ಲಾಭ, ನಷ್ಟ
ರನ್ನ ಚಿತ್ರದ ಯಶಸ್ಸು ಮತ್ತು ವೈಫಲ್ಯದ ನೇರ ಇಂಪ್ಯಾಕ್ಟ್ ಚಿತ್ರಮಂದಿರದ ಮಾಲೀಕರ ಮೇಲಾಗುತ್ತದೆ. ಜೊತೆಗೆ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರಿಗೆ ಯಾವುದೇ ದಿನದ restriction ಇಲ್ಲದೇ ಇರುವುದರಿಂದ, ಚಿತ್ರದ ಯಶಸ್ಸಿನ ಆಧಾರದ ಮೇಲೆ ಎಷ್ಟು ದಿನ ಬೇಕಾದರೂ ಚಿತ್ರ ಪ್ರದರ್ಶಿಸಬಹುದು.

ಇತರ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ
ರನ್ನ ಚಿತ್ರ ಉತ್ತಮ ಪ್ರದರ್ಶನ ಕಂಡು, ಚಿತ್ರಮಂದಿರದ ಮಾಲೀಕರು ರನ್ನ ಚಿತ್ರ ಎತ್ತಂಗಡಿ ಮಾಡದೇ ಇದ್ದಲ್ಲಿ, ಇತರ ಚಿತ್ರಗಳಿಗೆ ಚಿತ್ರಮಂದಿರದ ಸಮಸ್ಯೆ ಕಾಡದೇ ಇರದು. ಇತರ ಚಿತ್ರಗಳು ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆಂದು ಮೀಸಲಾಗಿರುವ ಚಿತ್ರಮಂದಿರಗಳಿಗಾಗಿ ಗುದ್ದಾಡುವ ಪರಿಸ್ಥಿತಿ ಎದುರಾಗಬಹುದು.

ಹದಿನೈದು ಚಿತ್ರಗಳು ರಿಲೀಸಿಗೆ ರೆಡಿ
ಸುಮಾರು ಹದಿನೈದು ಚಿತ್ರಗಳು ಈಗಾಗಲೇ ಬಿಡುಗಡೆಗೆ ಸಿದ್ದವಾಗಿದೆ. ನಿರ್ಮಾಪಕರು ರನ್ನ ಚಿತ್ರ ಬಿಡುಗಡೆಯಾಗಲಿ ಎಂದು ಹೆಚ್ಚುಕಮ್ಮಿ ಏಪ್ರಿಲ್ ತಿಂಗಳಿನಿಂದ ಕಾದು ಕೂತಿದ್ದಾರೆ. ಒಂದು ವೇಳೆ ಮೇ 22ಕ್ಕೆ ರನ್ನ ಚಿತ್ರ ಬಿಡುಗಡೆಯಾದರೆ, ಜೂನ್ ಮೊದಲ ವಾರದಲ್ಲಿ ವಜ್ರಕಾಯ ಬಿಡುಗಡೆಯಾದರೆ ಇತರ ಚಿತ್ರಗಳ ಬಿಡುಗಡೆ ಭಾಗ್ಯ ಮತ್ತೆ ಮೂರು ವಾರ ಲೇಟಾಗುವ ಸಾಧ್ಯತೆ ಇಲ್ಲದಿಲ್ಲ.


Click it and Unblock the Notifications











