ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಚಿತ್ರಕ್ಕೆ OTTಯಿಂದ 100 ಕೋಟಿ ಆಫರ್: 3D ಟೀಸರ್ ಯಾವಾಗ?
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ 'ವಿಕ್ರಾಂತ್ ರೋಣ'. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಸಜ್ಜಾಗುತ್ತಿರುವ ಈ ಸಿನಿಮಾಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸುದೀಪ್ ಚಿತ್ರಕ್ಕೆ ಆಫರ್ ನೀಡಲಾಗುತ್ತಿದೆ. ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್ ಅನ್ನು ಮುಂದಿಟ್ಟಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಆಫರ್ ಅಂತಲೇ ಹೇಳಲಾಗುತ್ತಿದೆ.
Recommended Video
'ವಿಕ್ರಾಂತ್ ರೋಣ' ಫೆಬ್ರವರಿ 24ಕ್ಕೆ ಬಿಡುಗಡೆ ಸಜ್ಜಾಗುತ್ತಿದೆ. ಇದಕ್ಕಾಗಿ ಚಿತ್ರತಂಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದೆ. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಮತ್ತೆ ಲಾಕ್‌ಡೌನ್ ಆದರೆ, ವಿಕ್ರಾಂತ್ ರೋಣ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರಾ? ಇಲ್ಲಾ ಸಿನಿಮಾ ಬಿಡುಗಡೆ ಮುಂದೂಡುತ್ತಾರಾ? ಓಟಿಟಿ ರಿಲೀಸ್ ಬಗ್ಗೆ ಕಿಚ್ಚ ಸುದೀಪ್ ನಿಲುವೇನು ಅನ್ನುವುದನ್ನು ಚಿತ್ರದ ನಿರ್ಮಾಪಕ ಜಾಕ್ ಮಂಜು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

OTTಯಿಂದ 'ವಿಕ್ರಾಂತ್ ರೋಣ'ಗೆ ಬಿಗ್ ಆಫರ್
ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ಎಲ್ಲಾ ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಿನಿಮಾ ಬಿಡುಗಡೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಓಟಿಟಿ ಸಂಸ್ಥೆಗಳು ಮತ್ತೆ ಆಕ್ಟೀವ್ ಆಗಿದ್ದು, 'ವಿಕ್ರಾಂತ್ ರೋಣ' ಸಿನಿಮಾವನ್ನು ನೇರವಾಗಿ ಓಟಿಟಿ ರಿಲೀಸ್ ಮಾಡಲು 95 ರಿಂದ 100 ಕೋಟಿ ಆಫರ್ ನೀಡಿವೆ. "RRR, ರಾಧೆ ಶ್ಯಾಮ್ ಪೋಸ್ಟ್‌ಪೋನ್ ಆದ ನಂತರ ಎರಡು-ಮೂರು ಓಟಿಟಿಗಳ ಮ್ಯಾನೇಜರ್‌ಗಳಿಂದ ಹಾಗೂ ಮಧ್ಯವರ್ತಿಗಳಿಂದ ನಮಗೆ ಆಫರ್‌ಗಳು ಬರುತ್ತಿವೆ. ಈ ಆಫರ್‌ಗಳನ್ನು ನಾವು ಇನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಕಾರಣ ಏನೆಂದರೆ, ನಾವು ಎರಡೂವರೆಗೂ ಮೂರು ವರ್ಷಗಳಿಂದ ಕಷ್ಟ ಪಟ್ಟು ಕ್ವಾಲಿಟಿ ಸಿನಿಮಾ ಮಾಡಿ, 3ಡಿ ಕೂಡ ಮಾಡಿದ್ದೇವೆ. 3ಡಿ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದರನೇ ಚಂದ. ಈಗ 3ನೇ ಲಾಕ್‌ಡೌನ್ ಆಗುವ ಭೀತಿಯಲ್ಲಿ ನಾವಿರುವಾಗ ನಿರ್ಮಾಪಕನಾಗಿ ಓಟಿಟಿ ಆಫರ್ ಅನ್ನು ತೆಗೆದುಕೊಳ್ಳಬೇಕಾ ಬೇಡವಾ ಅನ್ನುವ ಗೊಂದಲದಲ್ಲಿ ನಾನಿದ್ದೇನೆ." ಎಂದು ನಿರ್ಮಾಪಕ ಜಾಕ್ ಮಂಜು ಇದ್ದಾರೆ.

ಥಿಯೇಟರ್‌ನಲ್ಲಿಯೇ ಸಿನಿಮಾ ನೋಡಲಿ
ಓಟಿಟಿಯಲ್ಲಿ ರಿಲೀಸ್ ಮಾಡಬೇಕಾ ಬೇಡವಾ ಅನ್ನುವ ಗೊಂದಲದಲ್ಲಿದ್ದ ನಿರ್ಮಾಪಕ ಜಾಕ್ ಮಂಜು ಅವರಿಗೆ ಕಿಚ್ಚ ಸುದೀಪ್ ಸಲಹೆ ನೀಡಿದ್ದಾರೆ. ಓಟಿಟಿಯಲ್ಲಿ ರಿಲೀಸ್ ಮಾಡುವುದು ಬೇಡವೆಂದು ಕಿಚ್ಚ ನಿರ್ಮಾಪಕರಿಗೆ ಹೇಳಿದ್ದಾರೆ. "ಓಟಿಟಿ ಆಫರ್ ಬಗ್ಗೆ ಸುದೀಪ್ ಸರ್ ಬಳಿ ಮಾತನಾಡಿದಾಗ, ಅವರು ಬೇಡಾ ಚಿನ್ನ ನಾವು ಕಷ್ಟಪಟ್ಟು ಮಾಡಿರುವುದು ಥಿಯೇಟರ್‌ನಲ್ಲಿ ಜನ ನೋಡಬೇಕು ಅನ್ನುವ ಉದ್ದೇಶದಿಂದ. ಇಷ್ಟೇ ದಿನ ಕಾದಿದ್ದೇವೆ. ಇನ್ನೂ ಓಟಿಟಿಯಲ್ಲಿ ರಿಲೀಸ್ ಮಾಡುವುದು ಬೇಡ ಅಂತ ನನಗೆ ಸಲಹೆ ನೀಡಿದ್ದಾರೆ. ಆದರೆ, ಓಟಿಟಿಗಳಲ್ಲಿ ಇಷ್ಟು ದೊಡ್ಡ ಮೊತ್ತಕ್ಕೆ ಕೇಳುತ್ತಿದ್ದಾರಲ್ಲ. ಆ ಬಗ್ಗೆ ಒಬ್ಬ ಕನ್ನಡ ನಿರ್ಮಾಪಕನಾಗಿ ನನಗೆ ಹೆಮ್ಮೆಯಿದೆ." ಎನ್ನುತ್ತಾರೆ ಜಾಕ್ ಮಂಜು.

4 ಭಾಷೆಯಲ್ಲಿ ಕಿಚ್ಚ ಸುದೀಪ್ ಡಬ್ಬಿಂಗ್
"ಸುದೀಪ್ ಸರ್ ಸಿನಿಮಾ ನೋಡಿ, ಬಹಳ ಚೆನ್ನಾಗಿ ಬಂದಿದೆ ಎಂದಿದ್ದಾರೆ. ಹೀಗಾಗಿ ಅವರೇ ನಾಲ್ಕು ಭಾಷೆಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಡಬ್ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ 3ಡಿ ಮತ್ತು 2ಡಿಯಲ್ಲಿ ಬಿಡುಗಡೆಯಾಗುತ್ತೆ. ನಾವು ಎಲ್ಲಾ ಭಾಷೆಯಿಂದಲೂ ಸುಮಾರು 1500 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಬೇಕು ಎಂದುಕೊಂಡಿದ್ದೇವೆ. ಆದರೆ, ಬಿಡುಗಡೆ ದಿನ ಹೆಚ್ಚು ಕಡಿಮೆ ಆಗಬಹುದು." ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ.

3D ಟೀಸರ್ ಬಿಡುಗಡೆ ಮುಂದೂಡಿಕೆ
'ವಿಕ್ರಾಂತ್ ರೋಣ' ಚಿತ್ರದ 3ಡಿ ಟೀಸರ್ ಅನ್ನು ಬಿಡುಗಡೆ ಮಾಡಲು ಜಾಕ್ ಮಂಜು ಮುಂದಾಗಿದ್ದರು. ಆದರೆ, ದೊಡ್ಡ ದೊಡ್ಡ ಸಿನಿಮಾಗಳು ಪೋಸ್ಟ್‌ಪೋನ್ ಆಗಿದ್ದರಿಂದ 3ಡಿ ಟೀಸರ್ ಕೂಡ ಮುಂದೂಡಲ್ಪಟ್ಟಿದೆ. "3ಡಿ ವರ್ಷನ್‌ನಲ್ಲಿ ಒಂದು ಟೀಸರ್ ರಿಲೀಸ್ ಮಾಡ್ಬೇಕು ಅಂತ ಪ್ಲ್ಯಾನ್ ಮಾಡಿದ್ವಿ. ಜನವರಿ 4ನೇ ತಾರೀಕು ರಿಲೀಸ್ ಮಾಡಿ, ಜನವರಿ 7 ತಾರೀಕಿನಿಂದ RRR, ಜನವರಿ 13ರಂದು ವಲಿಮೈ, ಜನವರಿ 14ರಂದು ರಾಧೆ ಶ್ಯಾಮ್, ಎಲ್ಲಾ ಸಿನಿಮಾ ಥಿಯೇಟರ್‌ಗಳಲ್ಲಿ ಇಡೀ ಭಾರತದಾದ್ಯಂತ ನಾಲ್ಕರಿಂದ ಐದು ಸಾವಿರ ಚಿತ್ರಮಂದಿರಗಳಲ್ಲಿ ಟೀಸರ್ ಪ್ರದರ್ಶನ ಮಾಡಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದೆವು. ಆದರೆ, ಈ ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ಹೀಗಾಗಿ 11ರಂದು ಅದ್ಧೂರಿಯಾಗಿ ಟೀಸರ್ ಲಾಂಚ್ ಮಾಡೋಣವೆಂದು ನಿರ್ಧಾರ ಮಾಡಿದ್ದೆ. ಟೀಸರ್ ಅನ್ನು 3ಡಿಯಲ್ಲಿ ಬಿಗ್ ಸ್ಕ್ರೀನ್‌ನಲ್ಲೇ ನೋಡಲಿ ಅಂತ ಅದನ್ನೂ ಪೋಸ್ಟ್‌ಪೋನ್ ಮಾಡಿದ್ದೇನೆ." ಅಂತ ಜಾಕ್ ಮಂಜು ಫಿಲ್ಮಿ ಬೀಟ್‌ಗೆ ಮಾಹಿತಿ ನೀಡಿದ್ದಾರೆ.

ಫೆಬ್ರವರಿ 24ಕ್ಕೆ 'ವಿಕ್ರಾಂತ್ ರೋಣ' ರಿಲೀಸ್
"ಫೆಬ್ರವರಿ 24 ರಂದು ರಿಲೀಸ್ ಮಾಡ್ಬೇಕು ಅಂತ ನಿರ್ಧಾರ ಮಾಡಿಕೊಂಡಿದ್ದೇನೆ. ಈಗಾಗಲೇ ಸಿನಿಮಾ ಕೆಲಸಗಳು ಮುಗಿಯುತ್ತಾ ಬಂದಿವೆ. ಸೆನ್ಸಾರ್‌ಗೆ ಸಿನಿಮಾ ತೋರಿಸುವ ಹಂತಕ್ಕೆ ಬಂದು ರೀಚ್ ಆಗಿದ್ದೇವೆ. 3ಡಿ ಕೆಲಸವೊಂದು ನಡೆಯುತ್ತಿದೆ ಅಷ್ಟೇ. ಥಿಯೇಟರ್‌ಗಳೇ ಓಪನ್ ಇಲ್ಲಾ ಅಂದಾಗ, ನಾನು ಹೇಗೆ ರಿಲೀಸ್ ಮಾಡಲಿ? ಆದರೆ, ರಿಲೀಸ್ ಡೇಟ್ ಅನ್ನು ಮುಂದೂಡಬೇಕು ಅನ್ನುವ ನಿರ್ಧಾರ ಮಾಡಿಲ್ಲ. ಅಷ್ಟರೊಳಗೆ ಸರಿ ಹೋಗಬಹುದು ಅನ್ನುವ ನಂಬಿಕೆ ಇದೆ." ಎನ್ನುತ್ತಾರೆ ಜಾಕ್ ಮಂಜು.


Click it and Unblock the Notifications











