ಡಿಸಿಎಂ ಡಿಕೆ ಶಿವಕುಮಾರ್‌ಗೆ ಧನ್ಯವಾದ ಹೇಳಿದ ಕಿಚ್ಚ ಸುದೀಪ್; ಬಿಗ್ ಬಾಸ್ ಸಮಸ್ಯೆ ಅಂತ್ಯ.. ಆದರೆ, ಶೂಟಿಂಗ್ ಕಥೆಯೇನು?
ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಚರ್ಚೆಯ ವಿಷಯವಾಗಿತ್ತು. ಜಾಲಿವುಡ್ ಸ್ಟುಡಿಯೋ ಮಾಡಿದ ಎಡವಟ್ಟಿನಿಂದ ಬಿಗ್ ಬಾಸ್ ಕನ್ನಡ ಶೋ ಸ್ಥಗಿತಗೊಂಡಿತ್ತು. ಈ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಪರಿಸರದ ನಿಯಮಗಳನ್ನು ಪಾಲಿಸಿರಲಿಲ್ಲ. ಹಾಗೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್‌ಗೆ ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ.
ಈ ಕಾರಣಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋವನ್ನು ಸೀಲ್ ಮಾಡಿದ್ದರು. ಹೀಗಾಗಿ ಅನಿವಾರ್ಯವಾಗಿ ಬಿಗ್ ಬಾಸ್ ಶೋ ಅನ್ನು ಸ್ಥಗಿತಗೊಳಸಬೇಕಾಯ್ತು. ಈ ಬೆನ್ನಲ್ಲೇ ಶೋ ಮತ್ತೆ ಆರಂಭ ಆಗುತ್ತಾ? ಇಲ್ವಾ? ಅನ್ನೋ ಗೊಂದಲ ಕೂಡ ಎದ್ದಿತ್ತು. ಒಂದಿಷ್ಟು ಪರ-ವಿರೋಧದ ಚರ್ಚೆಗಳು ಕೂಡ ನಡೆದಿದ್ದವು. ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ವಿರೋಧವನ್ನು ವ್ಯಕ್ತಪಡಿಸಿದ್ದರು.

ಈ ವೇಳೆ ಬಿಗ್ ಬಾಸ್ ಸ್ಥಗಿತಗೊಂಡಿದ್ದಕ್ಕೆ ರಾಜಕೀಯ ಬಣ್ಣ ಕೂಡ ಬಳಿಯಲಾಗಿತ್ತು. ಕಿಚ್ಚ ಸುದೀಪ್ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಸೇಡು ತೀರಿಸಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು. ಹೀಗಾಗಿ ಬಿಗ್ ಬಾಸ್ ಶೋ ಮತ್ತೆ ಆರಂಭ ಆಗುವುದು ಜಟಿಲ ಸಮಸ್ಯೆಯಾಗಿ ಪರಿಣಮಿಸಿತ್ತು. ಕೊನೆಗೂ ಕಿಚ್ಚ ಸುದೀಪ್ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಮಾತಾಡಿ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬಿಗ್ ಬಾಸ್ ಸಮಸ್ಯೆಗೆ ಅಂತ್ಯ ಹಾಡಿದ್ದಾರೆ.
ಕಿಚ್ಚ ಸುದೀಪ್ ಪೋಸ್ಟ್
ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಬಿಗ್ ಬಾಸ್ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ ಬಳಿಕ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸಮಸ್ಯೆ ಬಗೆಹರಿಸಿದ್ದಕ್ಕೆ ಡಿಕೆ ಶಿವಕುಮಾರ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ."ಸರಿಯಾದ ಸಮಯಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನು ಗೌರವಾನ್ವಿತ ಡಿಕೆ ಶಿವಕುಮಾರ್ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಹಾಗೇ ಇತ್ತೀಚೆಗೆ ನಡೆದ ಅವಾಂತರದಲ್ಲಿ ಬಿಗ್ ಬಾಸ್ ಕನ್ನಡ ಭಾಗಿಯಾಗಿಲ್ಲ ಹಾಗೂ ಅದರ ಭಾಗವಾಗಿಲ್ಲ ಎಂದು ತಿಳಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ." ಎಂದು ಹೇಳಿದ್ದಾರೆ.
ಹಾಗೇ ತನ್ನ ಫೋನ್ ಕರೆಗೆ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಡಿಕೆ ಶಿವಕುಮಾರ್‌ಗೆ ಧನ್ಯವಾದ ಅರ್ಪಿಸಿದ್ದಾರೆ. "ಹಾಗೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನನ್ನ ಕರೆಗೆ ಪ್ರತಿಕ್ರಿಯಿಸಿದ್ದಾಗಿ ನಾನು ಅವರನ್ನು ಪ್ರಶಂಶಿಸುತ್ತೇನೆ. ಹಾಗೇ ನಲಪಾಡ್ ಅವರ ಪ್ರಯತ್ನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬಿಗ್ ಬಾಸ್ ಕನ್ನಡ 12 ಮುಂದುವರೆಯುತ್ತೆ." ಎಂದು ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಪೋಸ್ಟ್‌ನಲ್ಲೇನಿದೆ?
ಕಿಚ್ಚ ಸುದೀಪ್ ಪೋಸ್ಟ್‌ಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಬಿಗ್ ಬಾಸ್ ಸಮಸ್ಯೆಗೆ ಸ್ಪಂದಿಸಿ, ಬಗೆ ಹರಿಸಿದ್ದಾಗಿ ಪೋಸ್ಟ್ ಮಾಡಿದ್ದರು. "ಬಿಡದಿಯ ಜಾಲಿವುಡ್‌ನಲ್ಲಿ ಬಿಗ್ ಬಾಸ್ ಕನ್ನಡ ಶೂಟಿಂಗ್ ಜಾಗದ ಸೀಲ್ ಅನ್ನು ತೆಗೆದು ಹಾಕಲು ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ. ಆದರೆ, ಪರಿಸರ ನಿಯಮಗಳನ್ನು ಪಾಲಿಸುವುದು ಪ್ರಮುಖ ಆದ್ಯತೆಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಯಾಗಿದ್ದನ್ನು ಪರಿಹರಿಸಲು ಜಾಲಿವುಡ್ ಸ್ಟುಡಿಯೋಗೆ ಸಮಯಾವಕಾಶ ನೀಡಲಾಗುತ್ತದೆ.ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಎತ್ತಿ ಹಿಡಿಯುತ್ತಾ ನಾನು ಕನ್ನಡ ಚಲಚಿತ್ರರಂಗಕ್ಕೆ ಬೆಂಬಲ ನೀಡುವುದಕ್ಕೆ ಬದ್ಧನಾಗಿದ್ದೇನೆ." ಎಂದು ಪೋಸ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಥಗಿತಗೊಂಡಿದ್ದರಿಂದ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಿದೆ. ಇಂದಿನಿಂದ ಮತ್ತೆ ಬಿಗ್ ಬಾಸ್ ಶೋ ಎಂದು ಆರಂಭ ಆಗಲಿದೆ. ಒಂದು ದಿನ ಸ್ಥಗಿತಗೊಂಡಿದ್ದರಿಂದ ಪ್ರಸಾರವನ್ನು ತಡವಾಗುತ್ತಾ? ಅಂದುಕೊಂಡಂತೆ ಟೆಲಿಕಾಸ್ಟ್ ಆಗುತ್ತಾ? ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.


Click it and Unblock the Notifications











