ಕಿಚ್ಚನಿಗೆ ಬೆದರಿಕೆ ಪತ್ರ ಕಳುಹಿಸಿದ ಆರೋಪಿ ಬಂಧನ: ಯಾರೀ ರಮೇಶ್ ಕಿಟ್ಟಿ?
ಕಿಚ್ಚ ಸುದೀಪ್ ಕೆಲವು ದಿನಗಳ ಹಿಂದಷ್ಟೇ ಅಪರಿಚಿತರಿಂದ ಬೆದರಿಕೆ ಪತ್ರ ಬಂದಿತ್ತು. ಎರಡು ಬಾರಿ ಬೆದರಿಕೆ ಪತ್ರ ಬಂದ ಬಳಿಕ ಕಿಚ್ಚ ಸುದೀಪ್ ಆಪ್ತ ಚಾಕ್ ಮಂಜು ಪೊಲೀಸರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದರು.
ಕಿಚ್ಚ ಸುದೀಪ್ ಬೆದರಿಕೆ ಪ್ರಕರಣದ ತನಿಖೆಗೊಳಿಸಿದ ಪೊಲೀಸರು ಈ ಕೇಸ್ ಸಿಸಿಬಿ ಹಸ್ತಾಂತರಿಸಿದ್ದರು. ಕಳೆದ ಎರಡು ತಿಂಗಳಿನಿಂದ ಸುದೀಪ್‌ಗೆ ಬೆದರಿಕೆ ಪತ್ರ ಕಳುಹಿಸಿದ್ದವರ ಹುಡುಕಾಟ ನಡೆಯುತ್ತಲೇ ಇತ್ತು. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟಕ್ಕೂ ಬಂಧಿಸಲಾದ ಆರೋಪಿ ಹೆಸರು ರಮೇಶ್ ಕಿಟ್ಟಿ. ನಿರ್ದೇಶಕರೂ ಆಗಿರುವ ರಮೇಶ್ ಕಿಟ್ಟಿ, ಕಿಚ್ಚ ಸುದೀಪ್‌ಗೆ ಆತ್ಮೀಯರಾಗಿದ್ದರು. ಕೆಲವು ದಿನಗಳ ಕಾಲ ಸುದೀಪ್ ಅವರ ಚಾರಿಟಬಲ್ ಟ್ರಸ್ಟ್ ಅನ್ನು ಇವರೇ ನೋಡಿಕೊಳ್ಳುತ್ತಿದ್ದರು.
ಸುದೀಪ್‌ಗೆ ಬೆದರಿಕೆ ಪತ್ರ ಬರೆಯಲು ಕಾರಣವೇನು?
ಕಿಚ್ಚ ಸುದೀಪ್ ಅವರ ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದ್ದ ರಮೇಶ್ ಕಿಟ್ಟಿ ಎರಡು ಕೋಟಿ ರೂ. ಹೂಡಿಕೆ ಮಾಡಿದ್ದರಂತೆ. ಬಳಿಕ ರಮೇಶ್ ಆ ಹಣವನ್ನು ಕೇಳಿದಾಗ ಸುದೀಪ್ ಹಿಂತಿರುಗಿಸಲಿಲ್ಲ. ಈ ಕಾರಣಕ್ಕೆ ಬೆದರಿಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಸುದೀಪ್ ಹಾಗೂ ರಮೇಶ್ ಕಿಟ್ಟಿ ನಡುವಿನ ಹಣಕಾಸಿನ ವೈಷಮ್ಯವೇ ಬೆದರಿಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಮಾತನ್ನು ಸ್ವತ: ರಮೇಶ್ ಕಿಟ್ಟಿನೇ ಒಪ್ಪಿಕೊಂಡಿದ್ದಾರೆಂದು ವರದಿಯಾಗಿವೆ. ಬೆದರಿಕೆ ಪತ್ರದ ಹಿಂದಿರುವ ಅಸಲಿ ಕಾರಣವೇನು? ಅನ್ನೋದು ಪೊಲೀಸರಿಂದಲೇ ಹೊರಬೀಳಬೇಕಿದೆ.
ಇನ್ನೂ ಹಲವರ ಕೈವಾಡವಿರುವ ಶಂಕೆ
ಕಿಚ್ಚ ಸುದೀಪ್ ಹಾಗೂ ರಮೇಶ್ ಕಿಟ್ಟಿ ನಡುವೆ ಹಣಕಾಸಿನ ವ್ಯವಹಾರವಿದ್ದು, ಇದರ ವೈಷಮ್ಯದಿಂದಲೇ ಬೆದರಿಕೆ ಪತ್ರ ಬರೆದಿದ್ದಾಗಿ ರಮೇಶ್ ಕಿಟ್ಟಿ ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಇದರ ಜೊತೆ ಈ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಕಿಚ್ಚ ಸುದೀಪ್ ಕೆಲವು ದಿನಗಳ ಹಿಂದಷ್ಟೇ ಇದು ಚಿತ್ರರಂಗದವರ ಕೆಲಸ ಎಂದು ಹೇಳಿದ್ದರು. ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳುವುಕ್ಕೆ ಒಂದು ದಿನ ಮುನ್ನವಷ್ಟೇ ಬೆದರಿಕೆ ಪತ್ರದ ವಿಷಯ ಬಹಿರಂಗವಾಗಿತ್ತು. ಆದರೆ, ಅದಕ್ಕೂ ಮುನ್ನ ಮತ್ತೊಂದು ಬೆದರಿಕೆ ಪತ್ರ ಕಿಚ್ಚ ಸುದೀಪ್‌ಗೆ ತಲುಪಿತ್ತು.
ಸಿಸಿಬಿ ತಲೆ ನೋವಾಗಿದ್ದ ಪ್ರಕರಣ
ಸಿಸಿಬಿ ಅಧಿಕಾರಿಗಳು ಮೊದಲ ಬೆದರಿಕೆ ಪತ್ರ ಎಲ್ಲಿಂದ ಬಂದಿತ್ತು ಅನ್ನೋದನ್ನು ಪತ್ತೆ ಹಚ್ಚಿದ್ದರು. ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಮಾಡಿದ್ದರು. ಆದರೆ, ಆ ಕಾರಿನದ್ದು ನಕಲಿ ನಂಬರ್ ಪ್ಲೇಟ್ ಆಗಿತ್ತು.

ಇನ್ನೊಂದು ಕಡೆ ಕಿಚ್ಚ ಸುದೀಪ್‌ಗೆ ಆಪ್ತರಾಗಿದ್ದವರಿಂದಲೇ ಬೆದರಿಕೆ ಪತ್ರ ಬಂದಿದೆ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಆರಂಭದಲ್ಲಿ ಕಿಚ್ಚ ಸುದೀಪ್ ಅವರ ಮಾಜಿ ಕಾರು ಚಾಲಕನ ಮೇಲೆ ಅನುಮಾನ ಮೂಡಿತ್ತು. ಹೀಗಾಗಿ ಕೆಲವು ದಿನಗಳ ಹಿಂದಷ್ಟೇ ಕಾರು ಚಾಲಕ ಹಾಗೂ ಸುದೀಪ್ ಆಪ್ತ ಜಾಕ್ ಮಂಜು ಅವರನ್ನು ಕರೆದು ವಿಚಾರಣೆ ಮಾಡಿದ್ದರು ಎನ್ನಲಾಗಿದೆ.


Click it and Unblock the Notifications











