"ಸುಳ್ಳು ದುಷ್ಟ ಆರೋಪದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವೆ": ಫಿಲ್ಮ್ ಚೇಂಬರ್‌ಗೆ ಪತ್ರದ ಮೂಲಕ ಉತ್ತರ

ಎಂಎನ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಡುವಿನ ವಿವಾದ ದಿನದಿಂದ ದಿನಕ್ಕೆ ತಾರಕ್ಕೆ ಏರುತ್ತಲೇ ಇದೆ. ಕಿಚ್ಚ ಸುದೀಪ್ ಹಣ ಪಡೆದು ಸಿನಿಮಾ ಮಾಡಿ ಕೊಡುತ್ತಿಲ್ಲ ಎಂದು ನಿರ್ಮಾಪಕ ಎಂಎನ್ ಕುಮಾರ್ ಆರೋಪ ಮಾಡಿದ್ದರು. ಈ ವಿವಾದವೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ಕಿಚ್ಚ ಸುದೀಪ್ ಈ ಆರೋಪಗಳನ್ನು ಸುಳ್ಳು ಎಂದು ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಎನ್ಎಂ ಸುರೇಶ್ ವಿರುದ್ಧ 10 ಕೋಟಿ ರೂ. ಮಾನಹಾನಿ ದೂರನ್ನು ದಾಖಲಿಸಿದ್ದಾರೆ. ಈ ಸಂಬಂಧ ನಿರ್ಮಾಪಕರು ಮತ್ತೊಂದು ಪ್ರತಿಕಾಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ದರು.

Kichcha Sudeep Wrote a Letter to KFCC Chairman After Allegation on MN Kumar.

ಈ ಬೆನ್ನಲ್ಲೇ ಕಿಚ್ಚ ಸುದೀಪ್ ಆಪ್ತರು ಆಗಿರೋ ಜಾಕ್ ಮಂಜು ಹಾಗೂ ಚಕ್ರವರ್ತಿ ಚಂದ್ರಚೂಡ್ ಪ್ರತ್ಯೇಕವಾಗಿ ಘಟನೆಯನ್ನು ವಿವರಿಸಿದ್ದರು. ಈ ಬೆಳವಣಿಗೆಗಳ ಮಧ್ಯೆನೇ ಕಿಚ್ಚ ಸುದೀಪ್ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಿರ್ಮಾಪಕ ಆರೋಪ ಹಾಗೂ ಫಿಲ್ಮ್ ಚೇಂಬರ್ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅದರ ಸಾರಾಂಶ ಹೀಗಿದೆ.

ಫಿಲ್ಮ್ ಚೇಂಬರ್‌ಗೆ ಕಿಚ್ಚ ಸುದೀಪ್ ಪತ್ರ

ಎಲ್ಲರಿಗೂ ನಮಸ್ಕಾ ರ. ಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದೆ.ಅಂತಹ ಮಹಾನ್ ಸಾಧಕರೆದುರು ನಾನು ತುಂಬಾ ಕಿರಿಯವ. ಈ ಕಳೆದ 27 ವರ್ಷಗಳಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ,
ಕಲಾವಿದನಾಗಿ, ಬರಹಗಾರ, ಗಾಯಕ, ಇತ್ಯಾದಿ ಇತ್ಯಾದಿ ಆಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ ಆ 27 ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆಯ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರ ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾಗಿದದ್ದು ನಿಮ್ಮ ಕರ್ತವ್ಯ. ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆ ಇಂದು ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದ್ಯಾಕೋ ನಡೆಯುತ್ತಿಲ್ಲ. ಕಾರಣವೂ ನನಗೆ ತಿಳಿಯುತ್ತಿಲ್ಲ.

ನ್ಯಾಯಾಲಯದ ಮೊರೆ ಹೋಗಿದ್ದೇಕೆ?

"ಈಗಾಗಲೇ ಒಂದು ಪತ್ರ ದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ- ಎನ್ಎಂ ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತ: ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಲು ಶುರು ಮಾಡಿದಾಗ, ಕುಮಾರ್ ಅವರನ್ನು ಮುಖತ: ಭೇಟಿಯಾಗುವುದನ್ನು ನಿಲ್ಲಿಸಿದೆ. ಇದೆಲ್ಲವನ್ನೂ ತಮಗೆ ವಿವರಿಸಿದ್ದೆ. ಅದಾದ ನಂತರವೂ ಮಂಡಳಿಯ ಕಚೇರಿಯಲ್ಲಿ ನನ್ನ ವಿರುದ್ಧ ಸುಳ್ಳು, ನಿರಾಧಾರಾ ಆರೋಪಗಳ ಪತ್ರಿಕಾ ಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರವನ್ನು ನಾನು ಗೌರವಿಸುತ್ತೇನೆ. ಜೊತೆಗೆ ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿಕೊಂಡಿತು. ಸಂಧಾನವೆಂದರೇನು? ಆ ನಿರ್ಮಾಪಕರು ಅವರೆಲ್ಲಾ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರರನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು, ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ಧವಾಗುವುದು."

ಇದನ್ನು ಒಂದು ಉದಾಹರಣೆಯಾಗಿ ತಮಗೆ ಅರ್ಧ ಮಾಡಿಸುವುದಾದರೆ, ಒಂದು ದಾಂಪತ್ಯದಲ್ಲಿ ಬಿರುಕು ಬಂದರೆ, ಆ ಕುಟುಂಬದ ಸ್ನೇಹಿತರು ಯಾರ ಪರವಾಗಿ ನಿಲ್ಲಬೇಕೆಂದು ಸಂಕಟ ಪಡುತ್ತಾರೆ. ಆ ಸಂಧಿಗ್ಧತೆಯಲ್ಲಿ ಒಬ್ಬರ ಪರವಾಗಿ ನಿಲ್ಲುವುದು ಸಮಂಜಸವೂ ಆಗಿರುವುದಿಲ್ಲ. ಅಂತಹದ್ದೇ ಒಂದು ಒತ್ತಡ, ಸಂದಿಗ್ಧತೆ ಈಗ ನಮ್ಮ ಮಾತೃ ಸಂಸ್ಥೆಗಳದ್ದು. ಆ ಒತ್ತಡ ಸಂಕಷ್ಟಕ್ಕೆ ನೀವುಗಳು ಸಿಲುಕ ಬಾರದೆಂದು ನಾನು ನ್ಯಾಯಾಲಯದ ಮೊರೆ ಹೋಗಿದ್ದು."

Kichcha Sudeep Wrote a Letter to KFCC Chairman

"ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ."

"27 ವರ್ಷಗಳ ಕಾಲ ನಾನು ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟ ತನಕಲ್ಲ."

"ಯಾಕೆ ನಿಮ್ಮ ಬಳಿ ಆಗ ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ. ನಾನವರಿಗೆ ಋಣಿ ಆಗಿದ್ದೇನೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆ ಇಂದಲೇ. ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾನೇ ಪಾಠ ಕಲಿತಿದ್ದೇನೆ."

"ಈಗಲೂ, ಈ ವಿಷಯದಲ್ಲಿ ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದು ಚಿತ್ರರಂಗದ ಮುಂದಿನ ಭವಿತವ್ಯಕ್ಕೆ ಕೆಟ್ಟ ಉದಾಹರಣೆಗಳು ದಕ್ಕಬಾರದು ಎಂದು. ಸಂಪೂರ್ಣ ಸಂಭಾವನೆ ಪಡೆದು ಸಿನಿಮಾ ಮಾಡಲಿಲ್ಲವೆಂಬ ದುಷ್ಟ ಸುಳ್ಳು, ಉದಾಹರಣೆಗೆ ನಾನು ಸಿಲುಕಬಾರದು. ಈ ಕಾರಣಕ್ಕೆ ಬೇರೆಲ್ಲರ ವಿಷಯದಲ್ಲಿ ಅತ್ಯಂತ ಮಾನವೀಯವಾಗಿ, ಪ್ರೀತಿಯಿಂದ ವರ್ತಿಸುವ ನಾನು ಕಠಿಣವಾಗಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ನಿಲುವಿಗೆ ಬದ್ಧನಾಗಿದ್ದೇನೆ."

Kichcha Sudeep Wrote a Letter to KFCC Chairman

ಸುರೇಶ್‌ಗೆ ನೋಟೀಸ್ ಕಳಿಸಿದ್ದೇಕೆ?

"ಒಂದು ಮಾತು ನಿಮ್ಮ ಪತ್ರಿಕಾಗೋಷ್ಠಿಯಲ್ಲಿ ಹೊರಬಂತು. ಅದು ನನಗೆ ತೀವು ನೋವು ಉಂಟು ಮಾಡಿತು. ದುಃಖ ಉಂಟು ಮಾಡಿತು. ಶ್ರೀಯುತ ಸುರೇಶ್ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವಷ್ಟು ಸಲಿಗೆ ಉಳ್ಳವರು. ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕೆಂಬ ಸೀಮಿತವಾದ ಕಾರಣಕ್ಕೆ, ಕುಮಾರ್ ಅವರು ಮೂರು ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು, ನನಗಲ್ಲ, ಇಡೀ ಸಮಾಜಕ್ಕೆ ಕೊಟ್ಟ ಅಪಾಯಕಾರಿ ಸಂದೇಶ. ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿ ಈ ಕೆಟ್ಟ ಬೆಳವಣಿಗೆ ಆರಂಭವಾಯಿತು?"

"ದೈಹಿಕವಾಗಿ, ಮಾನಸಿಕವಾಗಿ, ಕುಮಾರ್‌ಗಾಗಲಿ, ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು. ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನನಗೆ ತೀವ್ರು ನೋವು ತಂದಿದೆ. ನಾನು ಬದುಕಿನುದ್ದಕ್ಕೂ ಈ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞೆ ಆಗಲಾರೆ. ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ ಸುರೇಶ್‌ ಅವರನ್ನು ಭಾಗಿ ಮಾಡಿದೆ. ಅವರಿಗೂ ನೋಟೀಸ್ ಕಳುಸಿದೆ ವಿನಃ ಕೋಪ ತಾಪ ಆಕ್ರೋಶದಿಂದಲ್ಲ. ನೋವಿನಿಂದ ಸುರೇಶ್ ಅವರ ವಿಚಾರದಲ್ಲಿ ಇನ್ನೂ ವಿವರಿಸುವುದಾದರೆ ನನ್ನ ತನಕ ಅಪರಿಚಿತರೋ, ಪರಿಚಿತರೋ, ಸಿನಿಮಾ ರಂಗದವರೋ ಅಲ್ಲವೋ, ಸಹಕಲಾವಿದರೋ, ತಂತ್ರಜ್ಞರೋ ಯಾರೇ ಬಂದು ಸಹಾಯ ಕೇಳಿದಾಗಲೂ ದೇವರು ಕೊಟ್ಟಿರುವ ಶಕ್ತಿಯಲ್ಲಿ ನನ್ನ ಕೈಲಾದಷ್ಟೂ ಸಹಾಯ ಮಾಡಿದ್ದೇನೆ. ಯಾರದೇ ಆಗಲಿ ಜೀವನ-ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ."

"ನ್ಯಾಯಾಲಯದಲ್ಲಿ ಬಗೆ ಹರಿಸಿಕೊಳ್ಳಲು ಬಿಡಿ"

"ಎಲ್ಲ ನಿರ್ಮಾಪಕರ ಬಗ್ಗೆ ಗೌರವವಿಲ್ಲದೆ, ನಂಬಿಕೆ ಇಲ್ಲದೆ, ಇಷ್ಟರವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನಂಗೂ ಕಣ್ಣೀರಿದೆ. ದುಃಖ ದುಮ್ಮಾನಗಳಿವೆ. ನಮ್ಮಲ್ಲಿ ಯಾರಿಗೇ ತೊಂದರೆಯಾದರೂ, ಮಂಡಳಿಯೇ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೂಣೆಗಾರ ಎನ್ನಲಾದೀತೆ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ?"

"ಇನ್ನು, ರಾಜರಾಜೇಶ್ವರಿ ನಗರದ ಮನೆಯ ವಿಷಯದಲ್ಲಿ ಒಂದು ಸ್ಪಷ್ಟನೆ ತಮಗೆ ವಯಕ್ತಿಕವಾಗಿ ನೀಡುತ್ತೇನೆ. ನಾನು ತುಂಬಾ ಆಸ್ತಿವಂತ ಅಲ್ಲದೇ ಇರಬಹುದು. ಆದರೆ, ಸಂಪಾದಿಸಿದ ಆಸ್ತಿಯಲ್ಲಿ ನನ್ನ ಬೆವರಿದೆ, ಶ್ರಮವಿದೆ. ಶೇಕಡ 95ರಷ್ಟು ಬ್ಯಾಂಕ್ ಲೋನ್ ಪಡೆದು ಆ ಮನೆ ಖರೀದಿಸಿದ್ದೇನೆ. ಈ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ ಎಂಬ ನೈತಿಕ ಶಕ್ತಿಯ ಮೇರೆಗೆ ಈ ಕಠಿಣ ನಿಲುವು ಹೊಂದಿದ್ದೇನೆ."

"ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ. ಯಾರೇ ನಿಮ್ಮಲ್ಲಿ ದೂರಿಟ್ಟರೂ, ಯಾವುದೇ ಕಲಾವಿದರಿರಬಹುದು, ತಂತ್ರಜ್ಞರಿರಬಹುದು, ಯಾವುದೇ ವಿಭಾಗದವರಾಗಿರಬಹುದು, ಆ ದೂರಿನ ಕುರಿತಾದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮುಂದುವರಿಯಿರಿ ಮತ್ತು ಈ ಕೆಟ್ಟ ಪರಂಪರೆಗೆ ನಾಂದಿ ಹೇಳುವುದಕ್ಕೆ ನಾವು ಯಾರು ಹೊಣೆಗಾರರಾಗುವುದು ಬೇಡ. ದಯಮಾಡಿ ತಾವು ಸಂದಿಗ್ಧತೆಗೆ ಒಳಗಾಗದೆ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದರೆ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದ್ದೇನೆ. ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೊಡಿ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಾ"

ಎಂದೆಂದಿಗೂ ನಿಮ್ಮವ

ಕಿಚ್ಚ ಸುದೀಪ.

More from Filmibeat

English summary
Kichcha Sudeep Wrote a Letter to KFCC Chairman After Allegation on MN Kumar, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X