"ಆವರಿಸಿದ ಶೂನ್ಯವನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ"; ಅಮ್ಮನ ನೆನೆದು ಭಾವನಾತ್ಮಕ ಪತ್ರ ಬರೆದ ಕಿಚ್ಚ
ಕಿಚ್ಚ ಸುದೀಪ್ ಅಮ್ಮನನ್ನು ಕಳೆದುಕೊಂಡ ಕುಗ್ಗಿ ಹೋಗಿದ್ದಾರೆ. ಎಲ್ಲವೂ ಸರಿಯಾಗಿಯೇ ಇದ್ದ ಸಮಯದಲ್ಲಿ ದಿಢೀರನೇ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಅಮ್ಮ ಅಗಲಿದ್ದಾರೆ. ಆ ಶಾಕ್‌ನಿಂದ ಸುದೀಪ್ ಇನ್ನೂ ಹೊರಬಂದಿಲ್ಲ. ಆ ನೋವಿನಲ್ಲಿಯೇ ಕಷ್ಟದ ಸಮಯದಲ್ಲಿ ಬಂದಿದ್ದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ನೆನೆದು ಕಿಚ್ಚ ಸುದೀಪ್ ಭಾವನಾತ್ಮಕವಾಗಿ ಪತ್ರವನ್ನು ಬರೆದಿದ್ದಾರೆ. ತನ್ನ ಬಾಳಲ್ಲಿ ಅಮ್ಮನ ಪಾತ್ರವೇನು? ಒಂದು ದಿನದಲ್ಲಿ ಏನೆಲ್ಲ ಆಯ್ತು? ಅನ್ನೋದನ್ನು ಭಾವನಾತ್ಮಕವಾಗಿ ವಿವರಿಸಿದ್ದಾರೆ. ಕಿಚ್ಚ ಸುದೀಪ್ ಬರೆದ ಪತ್ರದ ಸಾರಾಂಶ ಇಲ್ಲಿದೆ.

ಕಿಚ್ಚ ಸುದೀಪ್ ಬರೆದ ಭಾವನಾತ್ಮಕ ಪತ್ರ
ನನ್ನ ಅಮ್ಮ, ಪಕ್ಷಪಾತವಿಲ್ಲದ, ಪ್ರೀತಿಸುವ, ಕ್ಷಮಿಸುವ, ಕಾಳಜಿ ಮಾಡುವ ಮತ್ತು ಕೊಡುಗೈ ವ್ಯಕ್ತಿತ್ವವುಳ್ಳವರು. ನನ್ನ ಬದುಕು ಮೌಲ್ಯದಿಂದ ಕೂಡಿತ್ತು. ಸಂಭ್ರಮದಲ್ಲಿತ್ತು. ಅದನ್ನು ಯಾವಾಗಲೂ ನಾನು ಸಂಭ್ರಮಿಸುವ ವಿಷಯ.
*ಮೌಲ್ಯ... ಏಕೆಂದರೆ, ಅವರು ಮಾನವನ ರೂಪದಲ್ಲಿ ನನ್ನ ಪಕ್ಕದಲ್ಲಿ ಸದಾ ಇರುತ್ತಿದ್ದ ನಿಜವಾದ ದೇವರಾಗಿದ್ದರು.
*ಸಂಭ್ರಮ... ಏಕೆಂದರೆ, ಅವರು ನನ್ನ ಖುಷಿ. ಆಕೆ ನನ್ನ ಗುರು. ಆಕೆ ನಿಜವಾಗಿಯೂ ನನ್ನ ಒಳಿತನ್ನು ಬಯಸುವವರಾಗಿದ್ದರು. ಹಾಗೇ ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಕೆಲಸವನ್ನೂ ಪ್ರೀತಿಸಿದವರು.
*ಅಚ್ಚುಮೆಚ್ಚು.. ಏಕೆಂದರೆ ಆಕೆ ಈಗ ನನ್ನ ಸುಂದರ ನೆನಪು ಅಷ್ಟೇ.
ನಾನು ಈಗ ಎಷ್ಟು ನೋವನ್ನು ಅನುಭವಿಸುತ್ತಿದ್ದೇನೆ ಎನ್ನುವುದನ್ನು ಹೇಳುವುದಕ್ಕೆ ನನ್ನ ಬಳಿ ಪದಗಳೇ ಇಲ್ಲ. ಈ ಘಟನೆಯನ್ನು, ಆವರಿಸಿದ ಶೂನ್ಯವನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯ್ತು.
ಪ್ರತಿ ದಿನ ಬೆಳ್ಳಂಬೆಳಗ್ಗೆ ನನ್ನ ಫೋನ್‌ಗೆ ಒಂದು ಸಂದೇಶ ಬರುತ್ತಿತ್ತು. ಬೆಳಗ್ಗೆ 5.30ಕ್ಕೆ ಆ ಸಂದೇಶದಲ್ಲಿ "ಶುಭೋದಯ ಕಂದಾ.." ಎಂದು ಇರುತ್ತಿತ್ತು. ಅಕ್ಟೋಬರ್ 18ರಂದು ನನಗೆ ಆಕೆಯ ಕೊನೆಯ ಸಂದೇಶ ಸಿಕ್ಕಿತ್ತು. ಮಾರನೇ ದಿನ ನಾನು ಬಿಗ್ ಬಾಸ್‌ನಲ್ಲಿ ಇರುವಾಗ ಆಕೆಯ ಸಂದೇಶವನ್ನು ನೋಡಲಿಲ್ಲ. ಹಲವು ವರ್ಷಗಳಲ್ಲಿಇದೇ ಮೊದಲು. ನಾನು ಬೆಳಗಿನ ಸಂದೇಶವನ್ನು ಕಳಿಸಿ, ಎಲ್ಲವೂ ಸರಿಯಾಗಿದೆಯೇ ಎಂದು ತಿಳಿದುಕೊಳ್ಳಲು ಕರೆ ಮಾಡುವುದಕ್ಕೆ ಬಯಸಿದ್ದೆ. ಆದರೆ, ಶನಿವಾರದ ಬಿಗ್‌ಬಾಸ್ ಎಪಿಸೋಡ್ ತುಂಬಾ ಸಮಯವನ್ನು ಕೇಳಿತ್ತು. ಇನ್ನೇನು ವೇದಿಕೆ ಹತ್ತಿದ್ದೆ ಅಷ್ಟೇ, ನನಗೆ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಮುಟ್ಟಿತ್ತು.
ನಾನು ತಕ್ಷಣವೇ ಆಸ್ಪತ್ರೆಯಲ್ಲಿದ್ದ ನನ್ನ ಸಹೋದರಿಗೆ ಕರೆ ಮಾಡಿದೆ. ವೈದ್ಯರ ಬಳಿ ಮಾತಾಡಿ ಮತ್ತೆ ವೇದಿಕೆ ಹತ್ತಿದೆ. ನಾನು ಬಿಗ್ ಬಾಸ್ ವೇದಿಕೆ ಮೇಲಿದ್ದಾಗ ಸ್ವಲ್ಪ ಸಮಯದ ನಂತರ ನನ್ನ ಹತ್ತಿರದವರಿಗೆ ಅಮ್ಮನ ಸ್ಥಿತಿ ಗಂಭೀರವಾಗಿದೆ ಎಂಬ ಸಂದೇಶವನ್ನು ಕಳುಹಿಸಲಾಗಿತ್ತು. ಈ ಅಸಹಾಯಕತೆಯನ್ನು ನಾನು ಮೊದಲ ಬಾರಿಗೆ ಎದುರಿಸುತ್ತಿದ್ದೆ. ಇಲ್ಲಿ ಶನಿವಾರ ಎಪಿಸೋಡ್‌ನಲ್ಲಿ ಹಲವು ಸಮಸ್ಯೆಗಳನ್ನು ಬಗೆ ಹರಿಸುತ್ತಿದ್ದೆ. ಆ ವೇಳೆ ನನ್ನ ತಾಯಿಯ ಬಗ್ಗೆ ಭಯ ಶುರುವಾಗಿತ್ತು.
ಆ ಎಪಿಸೋಡ್ ಅನ್ನು ಶಾಂತಯುತವಾಗಿ ಚಿತ್ರೀಕರಿಸಿದೆ. ಇಂತಹ ಗೊಂದಲಗಳ ಸಂದರ್ಭದಲ್ಲಿ ತಾನು ಒಪ್ಪಿಕೊಂಡ ಕೆಲಸವನ್ನು ಹೇಗೆ ನಿಭಾಯಿಸಬೇಕು ಅನ್ನೋದನ್ನು ನನ್ನ ತಾಯಿ ಕಲಿಸಿದ್ದಕ್ಕಾಗಿ ಅವರಿಗೆ ಚಿರಋಣಿಯಾಗಿದ್ದೇನೆ.
ಶನಿವಾರದ ಶೂಟ್ ಅನ್ನು ಮುಗಿಸಿ ತಕ್ಷಣವೇ ಆಸ್ಪತ್ರೆಗೆ ಹೋದೆ. ನಾನು ಆಸ್ಪತ್ರೆ ತಲುಪುವ ಕೆಲವೇ ನಿಮಿಷಗಳ ಹಿಂದಷ್ಟೆ ಅವರನ್ನು ವೆಂಟಿಲೇಟರ್‌ನಲ್ಲಿ ಇಟ್ಟಿದ್ದರು. ಅವರು ಎಚ್ಚರವಿದ್ದಾಗ ನಾನು ಅವರನ್ನು ನೋಡಲು ಸಾಧ್ಯವಾಗಲೇ ಇಲ್ಲ. ಅಮ್ಮ ಭಾನುವಾರ ಬೆಳಗ್ಗೆ ಕೈ ಚಲ್ಲುವ ಮುನ್ನ ಹೋರಾಡಿದ್ದರು. ಎಲ್ಲವೂ.. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯ್ತು.
ಈ ಘಳಿಗೆಯನ್ನು ಹಿಂದಕ್ಕೆ ಚಲಿಸುವಂತೆ ಹೇಗೆ ಮಾಡಬೇಕು ಅನ್ನೋದು ನನಗೆ ಗೊತ್ತಿಲ್ಲ. ಈ ವಾಸ್ತವವನ್ನು ಹೇಗೆ ಒಪ್ಪಿಕೊಳ್ಳಬೇಕು ಅನ್ನೋದು ನನಗೆ ಗೊತ್ತಿಲ್ಲ. ಇದು ನಮಗೆ ಕೊಟ್ಟ ದೊಡ್ಡ ಹೊಡೆತ. ನನ್ನ ಅಮ್ಮ ನಾನು ಶೂಟ್‌ಗೆ ಹೋಗುವಾಗ ಗಟ್ಟಿಯಾಗಿ ಅಪ್ಪುಗೆ ಕೊಟ್ಟು ಕಳಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರೇ ಇಲ್ಲ. ಈ ಕಟುವಾದ ಸತ್ಯ ನಮ್ಮ ಮನಸ್ಸು ಹಾಗೂ ಹೃದಯವನ್ನು ಹತೋಟಿಗೆ ತರಲು ತನ್ನದೇ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತೆ. ನನ್ನ ಅಮ್ಮ ಒಳ್ಳೆಯ ವ್ಯಕ್ತಿ. ಅವರನ್ನು ಅವರನ್ನು ನಾನು ಕಳೆದುಕೊಂಡಿದ್ದೇನೆ. ನಿನ್ನೆ ಪ್ರಕೃತಿ ಮತ್ತು ದೇವರು ಆಕೆಯನ್ನು ಈ ಭೂಮಿಯಿಂದ ಕರೆದುಕೊಳ್ಳಲು ಒಳ್ಳೆಯ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆಂದು ನಂಬಿದ್ದೇನೆ.
ಅಮ್ಮನಿಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದವನ್ನು ಹೇಳುತ್ತೇನೆ. ನೀವು ಸಂದೇಶ ಹಾಗೂ ಟ್ವೀಟ್‌ಗಳ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೀರಿ ಅದಕ್ಕೆ ಧನ್ಯವಾದಗಳು.
ಅನ್ನ ಅಮ್ಮ ನನ್ನ ಜೀವನದ ಅತ್ಯಮೂಲ್ಯ ಮುತ್ತು ನನ್ನಿಂದ ದೂರ ಹೋಗಿದೆ. ನೆಮ್ಮದಿ ಇರುವ ಸ್ಥಳಕ್ಕೆ ನನ್ನ ಅಮ್ಮ ಹೋಗಿದ್ದಾರೆಂದು ನನಗೆ ಗೊತ್ತಿದೆ. ಅಮ್ಮಾ ಚೆನ್ನಾಗಿ ವಿಶ್ರಾಂತಿ ಪಡೆಯಿರಿ. ಅಮ್ಮ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಇನ್ನಿಲ್ಲದಂತೆ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ.
ದೀಪು..


Click it and Unblock the Notifications











