'ಕಿರಾತಕ' ಸಿನಿಮಾದ ವಿಲನ್ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ; ಚಿತ್ರರಂಗಕ್ಕೆ ಆಘಾತ
ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ವಿಧಿವಶರಾಗಿದ್ದಾರೆ. ಯಶ್ ನಟಿಸಿದ ಕನ್ನಡದ 'ಕಿರಾತಕ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಕರುನಾಡಿನಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ದಿಢೀರನೇ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಚೆನ್ನೈನಲ್ಲಿ ವಾಸವಿದ್ದ ಡ್ಯಾನಿಯಲ್ ಬಾಲಾಜಿಗೆ ನಿನ್ನೆ (ಮಾರ್ಚ್ 29) ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಚೆನ್ನೈನ ಕೊಟ್ಟಿವಾಖಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ದಿಢೀರ್ ನಿಧನ ದಕ್ಷಿಣ ಭಾರತದ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.

ಡ್ಯಾನಿಯಲ್ ಬಾಲಾಜಿಗೆ 48 ವರ್ಷ ವಯಸ್ಸಾಗಿತ್ತು. ತಮಿಳಿನ ಧಾರಾವಾಹಿ ಚಿಟ್ಟಿಯಿಂದ ನಟನಾ ವೃತ್ತಿಯನ್ನು ಆರಂಭಿಸಿದ್ದರು. ಅಲ್ಲಿಂದ ಸುಮಾರು 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ವಿಲನ್ ಆಗಿ ಕಾಣಿಸಿಕೊಂಡು, ಜನ ಮನ್ನಣೆ ಪಡೆದಿದ್ದರು. ತಮಿಳಿನ 'ಚಿಥಿ', 'ಕಾಕ ಕಾಕ' , 'ಪೊಲ್ಲಾದವನ್', 'ವೆಟ್ಟೈಯಾಡು ವಿಲಯಾಡು', 'ವಡಾ ಚೆನ್ನೈ' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಡ್ಯಾನಿಯಲ್ ಕಾಣಿಸಿಕೊಂಡಿದ್ದರು.
ಕನ್ನಡದ ಹಲವು ಸಿನಿಮಾಗಳಲ್ಲಿ ಡ್ಯಾನಿಯಲ್ ನಟಿಸಿದ್ದಾರೆ. ಅದರಲ್ಲಿ ಯಶ್‌ಗೆ ಸೂಪರ್ ಸಕ್ಸಸ್ ಕೊಟ್ಟ 'ಕಿರಾತಕ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಕರ್ನಾಟಕದಲ್ಲೂ ವಿಲನ್ ಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದರು. ಇದರೊಂದಿಗೆ 'ಶಿವಾಜಿನಗರ', 'ಡವ್','ಬೆಂಗಳೂರು ಅಂಡರ್‌ವರ್ಲ್ಡ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಡ್ಯಾನಿಯಲ್ ಬಾಲಾಜಿ ಮೊದಲು ರಿಲೀಸ್ ಆಗದ ಕಮಲ್ ಹಾಸನ್ ಸಿನಿಮಾ 'ಮರುದನಾಗನ್'ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೆಜರ್ ಆಗಿ ಕೆಲಸ ಮಾಡಿದ್ದರು. ಬಳಿಕ ತಮಿಳು ಧಾರಾವಾಹಿ 'ಚಿಥಿ'ಯಲ್ಲಿ ಡ್ಯಾನಿಯಲ್ ಅನ್ನುವ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಅಲ್ಲಿಂದ ತಮ್ಮ ಹೆಸರಿನ ಜೊತೆಗೆ ಡ್ಯಾನಿಯಲ್ ಎಂದು ಹೆಸರು ಸೇರಿಸಿಕೊಂಡಿದ್ದರು.

ಡ್ಯಾನಿಯಲ್ ಬಾಲಾಜಿಗೂ ಕನ್ನಡ ಚಿತ್ರರಂಗಕ್ಕೂ ಒಂದು ನಂಟು ಇದೆ. ಡ್ಯಾನಿಯಲ್ ಬಾಲಾಜಿ ಕನ್ನಡದ ಲೆಜೆಂಡರಿ ನಟ ಸಿದ್ಧಲಿಂಗಯ್ಯ ಅವರ ಸಂಬಂಧಿ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಸಿನಿಮಾಗಳನ್ನು ಹೊರತು ಪಡಿಸಿ ಬೇರೆಯದ್ದೇ ಸಂಬಂಧವಿದೆ. ಅಂದ ಹಾಗೆ ಡ್ಯಾನಿಯಲ್ ಬಾಲಾಜಿ ನಟಿಸಿದ ಮೊದಲ ತಮಿಳು ಸಿನಿಮಾ 'ಎಪ್ರಿಲ್ ಮಾದಥಿಲ್'. ಇಲ್ಲಿಂದ ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಾಕಷ್ಟು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿಗೆ ಇತ್ತೀಚೆಗೆ ಆಫರ್‌ಗಳು ಕಡಿಮೆ ಆಗಿದ್ದವು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ಬಾಲಾಜಿ ಕಳೆದ ಕೆಲವು ವರ್ಷದಿಂದ ಆಫರ್‌ಗಳು ಕಡಿಮೆ ಆಗಿದ್ದವು. ಡ್ಯಾನಿಯಲ್ ಬಾಲಾಜಿ ಸಿನಿಮಾ ಅಷ್ಟೇ ಅಲ್ಲ.
ಧಾರ್ಮಿಕ ಕೆಲಸಗಳನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ದೇವಸ್ಥಾನಗಳನ್ನು ಕಟ್ಟಿಸಿದ್ದರು. ಇತ್ತೀಚೆಗೆ ದೇವಸ್ಥಾನ ಕಟ್ಟಿಸಲು ಯಶ್ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡಿದ್ದರು. ಸಿನಿಮಾವೊಂದರಲ್ಲಿ ನಟಿಸಲು ಆಫರ್ ನೀಡಿದ್ದರು. ಆ ವೇಳೆ ದೇವಸ್ಥಾನ ಕಟ್ಟಿಸುತ್ತಿದ್ದೇನೆ. ಅಲ್ಲಿವರೆಗೂ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದೆ. ದಿಢೀರನೇ ನನ್ನ ಅಕೌಂಟ್‌ಗೆ ಹಣ ಬಂದಿತ್ತು. ಪುನ: ಕರೆ ಮಾಡಿ ಕೇಳಿದಾಗ ನನ್ನ ಕಡೆಯಿಂದ ದೇವಸ್ಥಾನಕ್ಕೆ ದೇಣಿಗೆ ಎಂದಿದ್ದರು ಅನ್ನೋ ಮಾತನ್ನು ನೆನಪಿಸಿಕೊಂಡಿದ್ದರು.
ಡ್ಯಾನಿಯಲ್ ಬಾಲಾಜಿಯ ದಿಢೀರ್ ನಿಧನ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ಆಗಿದ್ದು, ಇವರ ಅಂತ್ಯಕ್ರಿಯೆ ಇಂದು (ಮಾರ್ಚ್ 30) ಪರಸೈವಾಕಮ್‌ನಲ್ಲಿ ಜರುಗಲಿದೆ.


Click it and Unblock the Notifications











