Koragajja: 'ಕೊರಗಜ್ಜ' ಸಿನಿಮಾದ ಪ್ರಚಾರಕ್ಕೆ ಮಮುಟ್ಟಿಯಿಂದ ಬ್ರೇಕ್? ಕಬೀರ್ ಬೇಡಿಗೆ ಅವಮಾನ.. ಚಿತ್ರತಂಡದ ಆರೋಪವೇನು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೊರಗಜ್ಜ' ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಇತ್ತೀಚೆಗೆ ಕೊಚ್ಚಿಯಲ್ಲಿ ಪ್ರಚಾರಕ್ಕೆ ಮುಂದಾಗಿತ್ತು. ಜನವರಿ 24ರಂದು ರಾತ್ರಿ 8ಕ್ಕೆ ಅದ್ಧೂರಿಯಾಗಿ ಪ್ರತಿಕಾಗೋಷ್ಠಿ ನಡೆಸುವುದಕ್ಕೆ ಪ್ಲಾನಿಂಗ್ ಮಾಡಿಕೊಂಡಿತ್ತು. ಸುಮಾರು ಒಂದು ವಾರಗಳ ಮೊದಲೇ ಕೊಚ್ಚಿಯ ಪಿ ಆರ್ ಒ ಮುಖಾಂತರ ಎಲ್ಲಾ ಮಾಧ್ಯಮಗಳಿಗೆ ಪತ್ರಿಕಾ ಗೋಷ್ಟಿಯ ಆಮಂತ್ರಣ ಕೂಡ ನೀಡಲಾಗಿತ್ತು.
ಆದರೆ, ಕೊರಗಜ್ಜ ಸಿನಿಮಾದ ಪ್ರೆಸ್ ಮೀಟ್ ನಡೆಯುವುದಕ್ಕೆ ಒಂದು ದಿನ ಮುಂಚೆ ತಡರಾತ್ರಿ ಪಿಆರ್‌ಒ ಚಿತ್ರತಂಡಕ್ಕೆ ಕರೆ ಮಾಡಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವಂತೆ ಹೇಳಿದ್ದರು. ಕಾರಣವೇನು ಅಂತ ಕೇಳಿದಾಗ, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ನಟನೆಯ 'ಛಾತಪಾಚ' ಸಿನಿಮಾತಂಡ ಅದೇ ದಿನ ಪತ್ರಿಕಾಗೋಷ್ಠಿಯನ್ನು ಕೊನೆಯ ಕ್ಷಣದಲ್ಲಿ ಹಮ್ಮಿಕೊಂಡಿತ್ತು. ಆ ಪತ್ರಿಕಾಗೋಷ್ಠಿಗೆ ಮಮ್ಮುಟ್ಟಿ ಹಾಜರಾಗುತ್ತಿದ್ದಂತೆ ಅಲ್ಲಿನ ಪತ್ರಕರ್ತರು 'ಛಾತಪಾಚ' ಪತ್ರಿಕಾಗೋಷ್ಠಿಗೆ ಹೋದರು.

ಅದಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಬೀರ್ ಬೇಡಿಯಂತಹ ಹಿರಿಯ ನಟರು ಮಾರನೇ ದಿನ ಆಗಮಿಸಲು ಬುಕ್ ಮಾಡಲಾಗಿತ್ತು. ಅಲ್ಲದೆ ಹೋಟೆಲ್ ಸೇರಿದಂತೆ ಎಲ್ಲದಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಹೀಗಾಗಿ 'ಕೊರಗಜ್ಜ' ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವುದ ಅಸಾಧ್ಯವಾಗಿತ್ತು. ಹೀಗಾಗಿ ಇದು ಮಮ್ಮುಟ್ಟಿಯಂತಹ ನಟ ಮತ್ತು ಅವರ ತಂಡದ ಏಕಸ್ವಾಮ್ಯದಿಂದಾಗಿ ಯಾರೊಂದಿಗೂ ತಮ್ಮ ಸಂಕಟವನ್ನು ಹೇಳಿಕೊಳ್ಳದ ಪರಿಸ್ಥಿತಿ ಎದುರಾಯ್ತು ಎಂದು ಚಿತ್ರತಂಡ ಆರೋಪಿಸಿದೆ.
"ತಾನು ಪ್ರಮೋಷನ್‌ನಲ್ಲಿ ಭಾಗವಹಿಸಿದರೆ, ಮುಖ್ಯ ವಾಹಿನಿಗಳ ಮತ್ತು ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳೆಲ್ಲರೂ ಸೇರುತ್ತಾರೆ ಎಂಬ ವಿಚಾರ ಮಮುಟ್ಟಿಯಂತಹ ನಟರಿಗೆ ಖಂಡಿತಾ ತಿಳಿದಿರುತ್ತದೆ. ಹಾಗಿರುವಾಗ ಅದೇ ಸಮಯದಲ್ಲಿ ಪೂರ್ವಭಾವಿಯಾಗಿ ಯಾವುದಾದರೂ ಸಿನಿಮಾದ ಪ್ರಮೋಷನ್ ಮೊದಲೇ ನಿರ್ಧಾರವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಾಗಿರುವುದು ನೈತಿಕತೆ. ತಮಗೆ ಪವರ್ ಇದೆ, ತಾವು ಹೇಳಿದರೆ ಎಲ್ಲರೂ ನಮ್ಮ ಮಾತು ಕೇಳುತ್ತಾರೆ ಎಂಬ ಮನೋಭಾವದಿಂದ ಸಡನ್ ಆಗಿ ತಮ್ಮ ಸಿನಿಮಾದ ಪ್ರಮೋಷನ್ ಏರ್ಪಡಿಸಿ ಮೊದಲೇ ನಿಗದಿಯಾಗಿದ್ದ ಪತ್ರಿಕಾಗೋಷ್ಟಿಯನ್ನು ರದ್ದು ಪಡಿಸುವ ನಿರ್ದಾಕ್ಷಿಣ್ಯ ಧೋರಣೆ ತೋರಿಸುವುದು ಒಳ್ಳೆ ಬೆಳವಣಿಗೆಯೇ?" ಎಂದು ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ಪ್ರಶ್ನಿಸಿದ್ದಾರೆ.
ಇನ್ನು "ನಾನು ಮಲಯಾಳಂ ಭಾಷೆಯ ಸಿನಿಮಾಗಳನ್ನು ಇಷ್ಟ ಪಡುತ್ತೇನೆ. ದೇಶದ ಸುಮಾರು 25% ರಾಷ್ಟ ಪ್ರಶಸ್ತಿಗಳನ್ನು ಮಲಯಾಳಂ ಭಾಷೆ ಪಡೆದುಕೊಂಡಿದೆ. ಮಲಯಾಳಂ ಭಾಷೆಯ ಮೇಲಿನಿ ಗೌರವದಿಂದಲೇ ಕೊರಗಜ್ಜ ಚಿತ್ರದ ಪ್ರಮೋಷನ್‌ಗೆ ಕೊಚ್ಚಿಗೆ ಬಂದಿದ್ದೇನೆ. ಆದರೆ ಈ ಘಟನೆ ಮೋಸ್ಟ್ ಅನ್ಫಾರ್ಚುನೇಟ್ ಎಂದು ಕಬೀರ್ ಬೇಡಿ ಹೇಳಿ, ಮಮ್ಮುಟ್ಟಿಗೆ ಈ ವಿಚಾರ ತಿಳಿಯದೆ ಮಾಡಿರಬಹುದು. ಆದರೆ, ಕೇವಲ ಒಂದು ದಿನ ಮುಂಚಿತವಾಗಿ ನಿಗದಿಯಾಗಿದ್ದ ಪ್ರೆಸ್ಸ್ ಮೀಟ್‌ಗೆ ಹೋಗಿದ್ದು ಸರಿ ಎನಿಸುವುದಿಲ್ಲ. ಸಡನ್ ಆಗಿ ಕಾರ್ಯಕ್ರಮ ನಡೆಸುವ ಮುಂಚೆ ಮಾಧ್ಯಮದವರೊಂದಿಗಾಗಲಿ, ಪಿಆರ್‌ಒ ಗಳೊಂದಿಗಾಗಲಿ, ಅದೇ ಸಮಯದಲ್ಲಿ ಮಾಧ್ಯಮ ಪ್ರತಿನಿದಿಗಳು ಸೇರುವಂತಹ ಬೇರೆ ಕಾರ್ಯಕ್ರಮ ಇದೆಯೇ ಎಂದು ಪರೀಕ್ಷಿಸಬೇಕಿತ್ತು" ಎಂದು ಕಬೀರ್ ಬೇಡಿ ತನ್ನ ಬೇಸರ ವ್ಯಕ್ತ ಪಡಿಸಿದ್ದಾರೆ.

"ನಮ್ಮ ಕೊರಗಜ್ಜ ಸಿನಿಮಾದ ಪ್ರಮೋಷನ್ ಪತ್ರಿಕಾಗೋಷ್ಟಿಗೆ ಆಗಮಿಸಿದ್ದ ಹಾಲಿವುಡ್-ಬಾಲಿವುಡ್ ಚಿತ್ರಗಳ ಅಂತಾರಾಷ್ಟ್ರೀಯ ಖ್ಯಾತಿಯ ಕಬೀರ್ ಬೇಡಿಯಂತಹ ಹಿರಿಯ ನಟನಿಗೆ ಮಮುಟ್ಟಿಯಂತಹ ನಟರು ಮಾಡಿದ ಅವಮಾನದಂತಿತ್ತು. ಮಮುಟ್ಟಿಯವರು ತನ್ನ ಸಿನಿಮಾದ ಪ್ರಮೋಷನ್ ಮಾಡುವುದು ತಪ್ಪೇನೂ ಅಲ್ಲ. ಆದರೆ ಕಬೀರ್ ಬೇಡಿಯಂತಹ ಅತ್ಯಂತ ಗೌರವಾನ್ವಿತ ಹಿರಿಯ ನಟ ಪತ್ರಿಕಾಗೋಷ್ಟಿಗೆ ಹಾಜರಾಗುವ ವಿಚಾರವನ್ನು ಸುಮಾರು ಒಂದು ವಾರಗಳಷ್ಟು ಹಿಂದೆಯೇ ಎಲ್ಲಾ ಮಲಯಾಳಂ ಮಾಧ್ಯಮಕ್ಕೆ ಆಮಂತ್ರಣ ಮುಖಾಂತರ ತಿಳಿಸಿ ಆಗಿತ್ತು. ಆದರೂ ಈ ರೀತಿಯ ದಬ್ಬಾಳಿಕೆ ಮಾಡಿ, ಕಬೀರ್ ಬೇಡಿಯಂತಹ ರಾಷ್ಟ್ರ-ಅಂತರರಾಷ್ಟ್ರೀಯ ಮನ್ನಣೆಯ ಅತ್ಯಂತ ಗೌರವಾನ್ವಿತ ನಟನಿಗೆ ಅವಮಾನ ಮಾಡಿರುವುದು ಒಪ್ಪುವಂತಹ ವಿಚಾರವಲ್ಲ" ಎಂದು ಹಿರಿಯ ನಟಿ ಭವ್ಯಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಾವು ಮಂಗಳೂರಿನಲ್ಲಿ ನಡೆಸಿದ್ದ ಚಿತ್ರದ ಆಡಿಯೋ ಲಾಂಚ್ ಸಮಾರಂಭಕ್ಕೆ ದೇಶಾದ್ಯಂತ ಸುಮಾರು ಇನ್ನೂರು ಪತ್ರಕರ್ತರು ಆಗಮಿಸಿದರು, ಬೆಂಗಳೂರು, ಹೈದರಾಬಾದ್, ಮಂಗಳೂರು, ಮುಂಬಾಯಿ ಹೀಗೆ ದೇಶದ ಹಲವಾರು ಭಾಗಗಳಲ್ಲಿ ಚಿತ್ರದ ಪ್ರಮೋಷನಲ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು.ಅಲ್ಲೆಲ್ಲಾ ನಮಗೆ ಸಾಕಷ್ಟು ಪ್ರೊತ್ಸಾಹ ಮತ್ತು ಸಹಾಯ ದೊರಕಿದೆ. ಆದರೆ ಕೇರಳದ ಕೊಚಿಯಲ್ಲಿ ಮಾತ್ರ ಈ ರೀತಿ ನಡೆದಿರುವುದು ದುರದೃಷ್ಟಕರ ಬೆಳವಣಿಗೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹೇಳಿದ್ದಾರೆ.


Click it and Unblock the Notifications











