"ಮೇ 7ಕ್ಕೋ.. ಜೂನ್ 04ಕ್ಕೋ.. ಯಾವಾಗ ಮನೆ ಖಾಲಿ ಮಾಡ್ತಾರೋ ಗೊತ್ತಿಲ್ಲ"; ಕುಮಾರ್ ಬಂಗಾರಪ್ಪ ವ್ಯಂಗ್ಯ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಇನ್ನೂ ಮುಗಿದಿಲ್ಲ. ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೇ 7ರಂದು ಇನ್ನೊಂದು ಹಂತದಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಇನ್ನೂ ಭರ್ಜರಿಯಾಗಿ ಪ್ರಚಾರ ನಡೆಯುತ್ತಲೇ ಇದೆ. ಸದ್ಯ ಶಿವಮೊಗ್ಗ ಕ್ಷೇತ್ರ ಎಲ್ಲರಿಗೂ ಕುತೂಹಲದ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಅದಕ್ಕೆ ಕಾರಣ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಕಣಕ್ಕೆ ಇಳಿದಿದ್ದಾರೆ. ಹಾಲಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಈಶ್ವರಪ್ಪ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತ್ರಿಕೋನ ಸ್ಪರ್ಧೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಮಾಡಿರುವ ಬಗ್ಗೆ ಅಣ್ಣ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.

ಚುನಾವಣೆ ಸಮಯದಲ್ಲಿ ಮಾತ್ರ ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಭಾವ ಶಿವರಾಜ್‌ಕುಮಾರ್, ತಮ್ಮ ಮಧು ಬಂಗಾರಪ್ಪ ಬಗ್ಗೆನೂ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ. ಅವರ ಮಾತಿನ ಝಲಕ್ ಇಲ್ಲಿದೆ.
ತಂಗಿ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಬಗ್ಗೆ ಕುಮಾರ್ ಬಂಗಾರಪ್ಪ ಅಸಮಧಾನ ಹೊರಹಾಕಿದ್ದಾರೆ. ತಂಗಿ ಗೀತಾ, ಭಾವ ಶಿವರಾಜ್‌ಕುಮಾರ್, ತಮ್ಮ ಮಧು ಅಂತ ಹೇಳುತ್ತೇನೆ. ಆದರೆ, ಅವರು ಮಾತ್ರ ಅಣ್ಣ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

"ಈಗ ಅಭ್ಯರ್ಥಿ ಆಗಿ ನಮ್ಮ ತಂಗಿನೇ ನಿಂತಿರೋದು. ನಮ್ಮ ಭಾವನೇ ಪ್ರಚಾರಕ್ಕೆ ಬಂದಿರೋದು. ನಮ್ಮ ತಮ್ಮನೇ ಜಿಲ್ಲಾ ಮಂತ್ರಿಯಾಗಿ ಇರೋದು. ನಾನು ತಮ್ಮ, ತಂಗಿ, ಭಾವ ಅನ್ನೋದನ್ನು ಸ್ಪಷ್ಟವಾಗಿ ಶಿವರಾಜ್‌ಕುಮಾರ್, ಗೀತಂಗೆ ಮತ್ತು ಮಧುಗೆ ಅಂತ ನಾನು ಹೇಳಿದರೆ, ಅವರು ಅಣ್ಣ ಅಂತ ಮಾತ್ರ ಒಪ್ಪಿಕೊಳ್ಳುವುದಿಲ್ಲ. ಕುಟುಂಬದ ಪರಿಕಲ್ಪನೆಯೇ ಇವರಲ್ಲಿ ಸಾಧ್ಯವಿಲ್ಲ ಅಂತಾದರೆ, ಇಲ್ಲಿ ಕೇವಲ ದುರುಪಯೋಗ ಮಾಡಿಕೊಂಡು ರಾಜಕಾರಣ ಮಾಡಿಕೊಳ್ಳುವ ಉದ್ದೇಶ ಮಾತ್ರವಿದೆ ಎಂದರ್ಥ." ಎಂದು ಕುಮಾರ್ ಬಂಗಾರಪ್ಪ ಗುಡುಗಿದ್ದಾರೆ.
ಇದೇ ವೇಳೆ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗೆ ಇಲ್ಲಿಯೇ ಮತ ಹಾಕುವ ಅವಕಾಶವಿತ್ತು. ಆದರೂ, ಬೆಂಗಳೂರಿಗೆ ಹೋಗಿ ವೋಟ್ ಮಾಡಿ ಬಂದಿದ್ದಾರೆ ಎಂದು ದೂರಿದ್ದಾರೆ. "ಕನಿಷ್ಠ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗೆ, ಗೀತಾಗೆ, ಶಿವುಗೆ ಶಿವಮೊಗ್ಗದಲ್ಲೇ ನಾವು ನೆಲೆಯೂರಬೇಕು ಅಂತಿದ್ದರೆ, ಯಾಕಂದ್ರೆ ಐದೌದು ವರ್ಷಕ್ಕೊಮ್ಮೆ ಚುನಾವಣೆ ಬಂದಾಗ ಹೋಗಿ ಬರುತ್ತೇವೆ. ಕನಿಷ್ಠ ಪಕ್ಷ ಗೀತಾ ವೋಟ್ ಅನ್ನು ಇಲ್ಲಿಗೆ ಶಿಫ್ಟ್ ಮಾಡಿಸಿಕೊಳ್ಳಬೇಕು ಅನ್ನೋ ಪರಿಕಲ್ಪನೆನೂ ಇರಲಿಲ್ಲ. ಬೆಂಗಳೂರಿನಲ್ಲಿ ವೋಟ್ ಮಾಡಿದ್ರು." ಎಂದಿದ್ದಾ ಕುಮಾರ್ ಬಂಗಾರಪ್ಪ.
ಇದೇ ಸಂದರ್ಭದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಮನೆ ಖಾಲಿ ಮಾಡಿಕೊಂಡು ಹೋಗ್ತಾರೆ. ನೀವು ಮನೆ ಬಳಿ ಹೋಗಿ ನೋಡಿ ಬೇಕಿದ್ರೆ ಲಾಕ್ ಆಗಿರುತ್ತೆ ಎಂದು ವ್ಯಂಗ್ಯ ಮಾಡಿದ್ದಾರೆ. "ಇದೇ ಮೇ 7ಕ್ಕೆ ಮನೆ ಖಾಲಿ ಮಾಡುತ್ತಾರೋ.. ಇಲ್ಲ ಜೂನ್ 04ಕ್ಕೆ ಖಾಲಿ ಮಾಡುತ್ತಾರೋ ಗೊತ್ತಿಲ್ಲ. ಮನೆಯಂತೂ ಖಾಲಿ ಮಾಡುತ್ತಾರೆ. ನೀವು ಯಾರಾದರೂ ಬೇಕಿದ್ದರೆ, ಮೇ 7ರ ಸಂಜೆ ಹೋಗಿ ನೋಡಿದರೆ, ಲಾಕ್ ಆಗಿರುತ್ತೆ. ಮೇ 8ರ ಬೆಳಗ್ಗೆ ಅಂತೂ ತೆಗೆಯುವುದೇ ಇಲ್ಲ. ಇದು 100ಕ್ಕೆ 100 ಸತ್ಯ. ಮೊದಲು ಮಾಡಿದ್ದೂ ಅದೇ ಈಗ ಮಾಡುವುದೂ ಕೂಡ ಅದೇನೆ." ಎಂದಿದ್ದಾರೆ.


Click it and Unblock the Notifications











