ಊಟಕ್ಕೆ ಮೊಟ್ಟೆ ಹಾಕಿ ಹುಡುಗ ಇಷ್ಟ ಇಲ್ಲ ಅಂದಿದ್ರು: ಐಎಎಸ್ ಫಲಿತಾಂಶ ಬರುತ್ತಿದ್ದಂತೆ ಛತ್ರ ಬುಕ್ ಮಾಡಿದ್ದ ಕೆ ಶಿವರಾಂ!
ಕೆ ಶಿವರಾಂ ಕನ್ನಡ ಚಿತ್ರರಂಗಕ್ಕೆ ಸಿಕ್ಕ ವಿಶಿಷ್ಠ ಪ್ರತಿಭೆ. ಐಎಎಸ್ ಅಧಿಕಾರಿಯಾಗಿ ಹಾಗೂ ನಟನಾಗಿ ಎರಡರಲ್ಲೂ ಯಶಸ್ಸು ಕಂಡಿದ್ದರು. ಇವರು ಹೀರೊನಾ ಅಂತ ಅಂದವರೆಲ್ಲ ಭೇಷ್ ಅನ್ನುವಂತಹ ಸಂದರ್ಭವನ್ನು ಸೃಷ್ಟಿಸಿದರು. ಆ ಸಿನಿಮಾವೇ 'ಬಾ ನಲ್ಲೆ ಮಧು ಚಂದ್ರಕೆ'. ಇಲ್ಲಿಂದ ಶಿವರಾಂ ಕೇವಲ ಐಎಎಸ್ ಅಧಿಕಾರಿಯಷ್ಟೇ ಅಲ್ಲ. ಸ್ಯಾಂಡಲ್‌ವುಡ್‌ನ ನಟನಾಗಿಯೂ ಜನಪ್ರಿಯೆ ಗಳಿಸಿದ್ದರು.
ಹಾಗಂತ ಕೆ ಶಿವರಾಂ ಇಷ್ಟೆಲ್ಲ ಜನಪ್ರಿಯತೆಯನ್ನು ಪಡೆಯುವುದಕ್ಕೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ತನ್ನ ಜೀವನದಲ್ಲಿ ಬಡತನವನ್ನು ಹೋಗಲಾಡಿಸಲೇಬೇಕು ಅಂತ ಪಣತೊಟ್ಟಿದ್ದವರು ಕೆ ಶಿವರಾಂ. ಹೀಗಾಗಿ ನೂರೆಂಟು ಕಷ್ಟಗಳನ್ನು ಮೆಟ್ಟಿ ನಿಂತು ಉನ್ನತ ಹುದ್ದೆಗೆ ಏರಿದ್ದರು. ಎರಡು ವರ್ಷದ ಹಿಂದೆ ರಘುರಾಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟ ಹಾಗೂ ಅವಮಾನದ ದಿನಗಳನ್ನು ನೆನಪಿಸಿಕೊಂಡಿದ್ದರು.

ಅದರಲ್ಲೂ ಮದುವೆಯಾಗಲು ಹೆಣ್ಣು ನೋಡುವುದಕ್ಕೆ ಹೋಗಿದ್ದ ಸಂದರ್ಭದಲ್ಲಿ ಆದ ಅವಮಾನಗಳನ್ನು ನೆನಪಿಸಿಕೊಂಡಿದ್ದರು. ಎರಡು ಮೂರು ಬಾರಿ ಹೆಣ್ಣನ್ನು ತೋರಿಸದೇ ಅವಮಾನ ಮಾಡಿದ್ದನ್ನು ಹೇಳಿಕೊಂಡಿದ್ದರು. ಅದರಲ್ಲೂ ಊಟಕ್ಕೆ ಮೊಟ್ಟೆ ಹಾಕಿ ಹುಡುಗಿ ಇಷ್ಟವಿಲ್ಲ ಎಂದಿದ್ದ ಘಟನೆಯನ್ನು ದಿವಂಗತ ಐಎಎಸ್ ಅಧಿಕಾರಿ ಕೆ ಶಿವರಾಂ ಓಪನ್ ಆಗಿ ಹಂಚಿಕೊಂಡಿದ್ದರು. ಅದರ ಝಲಕ್ ಇಲ್ಲಿದೆ.
ಶಿವರಾಂ ಅವರಿಗೆ ಜೀವನದಲ್ಲಿ ಇದ್ದಿದ್ದು ಎರಡೇ ಗುರಿ. ಆ ಎರಡು ಗುರಿಯನ್ನೂ ಈಡೇರಿಸಿಕೊಂಡಿದ್ದರು. ಐಎಎಸ್ ಅಧಿಕಾರಿಯೂ ಆದರು. ಇನ್ನೊಂದು ಕಡೆ ಸಿನಿಮಾ ನಟನೂ ಆದರು. ಇದರನ್ನು ಅವರ ಮಾತಿನಲ್ಲೇ ಕೇಳುವುದಾದರೆ, "ಜೀವನದಲ್ಲಿ ಎರಡು ಗುರಿ. ಒಂದು ಐಎಎಸ್ ಅಧಿಕಾರಿ ಆಗಬೇಕು. ಮತ್ತೊಂದು ಸಿನಿಮಾ ನಟನಾಗಬೇಕು. ಇವೆರಡು ನನ್ನ ಜೀವನದ ಟಾರ್ಗೆಟ್ ಆಗಿತ್ತು. ನನಗೆ ಡಿವೈಎಸ್‌ಪಿ ಕೆಲಸ ಆಯ್ತು ಅಂತ ನನ್ನ ತಾಯಿಗೆ ಹೋಗಿ ಹೇಳಿದರೆ, ಆಗ ನನ್ನ ತಾಯಿ ಇದು ಬೇಡ ಮಗ. ಅದು ಇನ್ನೇನು ಹೇಳ್ತಿಯಲ್ಲ ಅದು ಆಗು ಅಂತಿದ್ದರು." ಎಂದು ಕೆಲಸದ ಬಗ್ಗೆ ಹೇಳಿಕೊಂಡಿದ್ದರು.

ಆಗಿನ್ನೂ ಶಿವರಾಂ ಐಎಎಸ್ ಅಧಿಕಾರಿಯಾಗಿರಲಿಲ್ಲ. ಡಿಗ್ರಿ ಪಾಸ್ ಮಾಡಿಕೊಂಡು ಎಂಎ ಮಾಡಿಕೊಂಡಿದ್ದರು. ಆಗ ಅಮ್ಮನ ಒತ್ತಾಯದ ಮೇರೆಗೆ ಹೆಣ್ಣು ನೋಡುವುದಕ್ಕೆ ಹೋಗಿದ್ದರು. ಆಗ ಮಂಡ್ಯದಲ್ಲಿ ನಡೆದ ಘಟನೆಯನ್ನು ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. "ಒಮ್ಮೆ ಹೆಣ್ಣು ನೋಡುವುದಕ್ಕೆ ಹೋಗಿದ್ದೆವು. ನಮ್ಮ ಮಾವ ಮಂಡ್ಯದಲ್ಲಿ ಹೆಣ್ಣು ನೋಡುವುದಕ್ಕೆ ಕರೆದುಕೊಂಡು ಹೋದರು. ಅವರು ಹೆಣ್ಣೇ ತೋರಿಸಲಿಲ್ಲ ನನಗೆ. ಆಗ ನಾನು ಬರೀ ಡಿಗ್ರಿ ಮಾಡಿದ್ದೆ. ಎಂಎ ಅನ್ನೂ ಕರೆಸ್ಪಾಂಡೆನ್ಸ್‌ನಲ್ಲಿ ಮಾಡಿದ್ದೆ. ಅವರು ಇಂಜಿನಿಯರ್, ಡಾಕ್ಟರ್ ಅನ್ನು ನಿರೀಕ್ಷೆ ಮಾಡಿದ್ದರು ಅನ್ಸತ್ತೆ." ಎಂದು ಅಂದಿನ ಘಟನೆ ಬಗ್ಗೆ ಹೇಳಿಕೊಂಡಿದ್ದರು.
"ಹೆಣ್ಣು ನೋಡುವುದಕ್ಕೆ ಹೋದಾಗ, ಅವರಿಗೆ ಇಷ್ಟ ಆಗಿಲ್ಲ ಅಂದರೆ ಊಟ ಕೊಡುವುದಿಲ್ಲ. ನನಗೆ ಮೊಟ್ಟೆ ಹಾಕಿ ಊಟ ಕೊಟ್ಟರು. ಮೊಟ್ಟೆ ಹಾಕಿ ಊಟ ಕೊಟ್ಟರೆ, ಅವರಿಗೆ ಇಷ್ಟವಿಲ್ಲ ಅಂತ ಅರ್ಥ. ವಾಪಸ್ ಬರುತ್ತಾ ನಮ್ಮ ಮಾವನಿಗೆ ಹೇಳಿದ್ದೆ. ಇನ್ನು ಜೀವನದಲ್ಲಿ ಹೆಣ್ಣು ನೋಡುವುದಕ್ಕೆ ಹೋಗಲ್ಲ. ಅವರೇ ಹುಡುಕಿಕೊಂಡು ಬರಬೇಕು. ಅಲ್ಲಿವರೆಗೂ ಮದುವೆ ಆಗಲ್ಲ ಅಂದೆ." ಎಂದು ಶಪಥ ಮಾಡಿ ಬಂದ ದಿನವನ್ನು ನೆನಪಿಸಿಕೊಂಡಿದ್ದರು.
ಇಷ್ಟೇ ಅಲ್ಲ ಎರಡು ಮೂರು ಬಾರಿ ಹೀಗೆ ಆಗಿತ್ತು. ಐಎಎಸ್ ರಿಸಲ್ಟ್ ಬರುತ್ತಿದ್ದಂತೆ ಹುಡುಗಿ ಮನೆಗೆ ಫೋನ್ ಮಾಡಿ ಛತ್ರ ಬುಕ್ ಮಾಡಿಕೊಳ್ಳುವಂತೆ ಹೇಳಿದ್ದರು. "ಎರಡು ಮೂರು ಜನ ನನಗೆ ಹೆಣ್ಣು ತೋರಿಸಲಿಲ್ಲ. ಒಬ್ಬರಂತೂ ಮುಖಕ್ಕೆ ಮುಖ ಕೊಟ್ಟು ನೋಡಲಿಲ್ಲ. ಎರಡು ಮೂರು ಬಾರಿ ಹೀಗೆ ಆಯ್ತು. ಬಾರಿ ಬೇಸರ ಆಗಿತ್ತು. ಡಿವೈಎಸ್‌ಪಿ ಆದಾಗ ನನ್ನ ಪತ್ನಿಯನ್ನು ನೋಡಿದ್ದೆ. ಆಗಲೂ ಏನೂ ಹೇಳಿರಲಿಲ್ಲ. ಐಎಎಸ್ ಅನೌನ್ಸ್ ಆದಾಗ ಫೋನ್ ಮಾಡಿ ಛತ್ರ ಬುಕ್ ಮಾಡಿ ಅಂತ ಹೇಳಿದೆ." ಎಂದು ಹೆಮ್ಮೆಯಿಂದ ಹೇಳಿದ್ದರು.


Click it and Unblock the Notifications











