"ಅಪ್ಪ ಹೋದ್ಮೇಲೆ ಮೂವರೂ ದಿಕ್ಕಾಪಾಲಾಗಿದ್ದೇವೆ.. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ"; ಹರೀಶ್ ರಾಯ್ ಪುತ್ರ
'ಕೆಜಿಎಫ್' ಚಾಚಾ ಹರೀಶ್ ರಾಯ್ ಮೂರು ತಿಂಗಳ ಹಿಂದಕ್ಕೆ ಅಗಲಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿದ್ದರು. ಖಳನಾಯಕನಾಗಿ ಗುರುತಿಸಿಕೊಂಡಿದ್ದ ಇವರಿಗೆ ಯಶ್ ನಟಿಸಿದ ಕೆಜಿಎಫ್ ಸಿನಿಮಾದಿಂದ ಒಳ್ಳೆಯ ಹೆಸರು ಬಂದಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದರು. ಇಲ್ಲಿಂದ ಇವರ ವೃತ್ತಿ ಬದುಕಿನ ಹೊಸ ಅಧ್ಯಾಯ ಶುರುವಾಗಬಹುದೆಂದು ಆಸೆ ಪಟ್ಟಿದ್ದರು. ಆದರೆ, ಅಷ್ಟರಲ್ಲೇ ಅವರ ಜೀವನದಲ್ಲಿ ವಿಧಿ ಆಟ ಆಡಿತ್ತು.
ಹರೀಶ್ ರಾಯ್ ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ, ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಚಿಕಿತ್ಸೆಗೆ ಹರೀಶ್ ರೈ ಸಹಾಯವನ್ನು ಆ ವೇಳೆ ಚಿತ್ರರಂಗದ ಗಣ್ಯರು ಹಾಗೂ ಅವರ ಆಪ್ತರು ಹಣಕಾಸಿನ ನೆರವನ್ನು ನೀಡಿದ್ದರು. ಯಶ್, ದರ್ಶನ್ ಸೇರಿದಂತೆ ಹಲವು ಮಂದಿ ಸಹಾಯ ಮಾಡಿದ್ದರು.

ಹರೀಶ್ ರೈ ಅಗಲಿದ ಬಳಿಕ ಅವರ ಕುಟುಂಬ ಏನು ಮಾಡುತ್ತಿದೆ. ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ? ಅಂತ ಅವರ ಪುತ್ರ ರೋಷನ್ ರಾಯ್ ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ರೋಷನ್ ತಮ್ಮ ಕುಟುಂಬದ ಬಗ್ಗೆ ಏನು ಹೇಳಿದ್ದಾರೆ? ಯಶ್ ಕಾರಿನಲ್ಲಿ ಕೂರಿಸಿಕೊಂಡು ಹೇಳಿದ್ದು ಏನು? ತಿಳಿಯುವುದಕ್ಕೆ ಮುಂದೆ ಓದಿ.
"ಅಮ್ಮ ಕೆಲಸಕ್ಕೆ ಹೋಗ್ತಿದ್ದಾರೆ"
"ಅಪ್ಪ ಹೋದ್ಮೇಲೆ ನಾವು ಮೂವರೂ ದಿಕ್ಕುಪಾಲು. 25-30 ವರ್ಷ ಜೊತೆಯಲ್ಲಿದ್ದ ಗಂಡನನ್ನು ಕಳೆದುಕೊಂಡು ಬೇಸರದಲ್ಲಿದ್ದಾರೆ. ನನ್ನ ಮತ್ತು ಅಣ್ಣನನ್ನು ಸಾಕಬೇಕು ಅನ್ನೋದಕ್ಕೆ ಸ್ಕೂಲ್‌ಗೆ ಹೋಗಿ ಕೆಲಸ ಮಾಡಿ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದಾರೆ. ಅಣ್ಣನೂ ಅಷ್ಟೇ ನಾನು ಹುಟ್ಟಿದ್ದಕ್ಕಿಂತ 8 ವರ್ಷ ಅವನು ಹುಟ್ಟಿರೋದು. ಅವನು ಕ್ಲೋಸ್ ಆಗಿದ್ದ ತಂದೆಗೆ. ಅವನು ಬೇಸರದಲ್ಲಿ ಇರುತ್ತಾನೆ. ನಾನು ಇಡೀ ದಿನ ನನ್ನ ತಂದೆಯ ಜೊತೆಯಲ್ಲಿಯೇ ಇದ್ದೋನು. ನನಗೆ ತಂದೆ ಹೋದ್ಮೇಲೆ ಎರಡು ಮೂರು ತಿಂಗಳಿಂದ ತಲೆನೇ ಓಡುತ್ತಿಲ್ಲ. ನನಗೆ ಏನೇ ಡೌಟ್ ಇದ್ದರೂ ತಂದೆ ಹತ್ತಿರನೇ ಕೇಳುತ್ತಿದ್ದೆ. ಈಗ ಏನಾದರೂ ಹೇಳಿಕೊಳ್ಳುವುದಕ್ಕೆ ಅಂತಹ ವ್ಯಕ್ತಿ ಇಲ್ಲ ಅಂದಾಗ ಮನಸ್ಸು ಬೇಜಾರಾಗುತ್ತೆ." ಎಂದು ಹೇಳಿದ್ದಾರೆ.
"ಆರ್ಥಿಕವಾಗಿ ನಾವು ಚೆನ್ನಾಗಲ್ಲ"
"ತಂದೆ ಬಂದಿರೋ ದುಡ್ಡನ್ನೆಲ್ಲ ಆಸ್ಪತ್ರೆಗೆ ಖರ್ಚು ಮಾಡಿದ್ದೇವೆ. ಮೊದಲು ಅವರು ವಾರ್ಡ್‌ನಲ್ಲಿ ಇದ್ದರು. ಆಮೇಲೆ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ರು. ತಂದೆಗೆ ಬಂದಿದ್ದೆಲ್ಲ ಅವರ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಈಗ ಅಮ್ಮ-ಅಣ್ಣ ದುಡಿಯುತ್ತಿದ್ದಾರೆ. ಈಗ ಅದರಲ್ಲಿ ಏನೋ ಒಂದು ಜೀವನ ಸಾಗಿಸುತ್ತಿದ್ದೇವೆ. ಆದರೆ, ಆರ್ಥಿಕವಾಗಿ ನಾವು ತುಂಬಾ ಚೆನ್ನಾಗಲ್ಲ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಹೇಳಿದ್ದಾರೆ.

"ಕೆಜಿಎಫ್ 3ಗೆ ಬಣ್ಣ ಹಚ್ಚುತ್ತೇನೆ ಅಂತಿದ್ರು"
"ನಮ್ಮ ತಂದೆಯವರು ಐಸಿಯುನಲ್ಲಿ ಇದ್ದಾಗ ಯಶ್ ಅವರನ್ನು ಸಂಪರ್ಕ ಮಾಡುವುದಕ್ಕೆ ಪ್ರಯತ್ನ ಪಟ್ಟರು. ಆಗ ಅವರು ಬ್ಯುಸಿ ಇದ್ದರು. ಅವರು ಮಾಡುವುದಕ್ಕೆ ಆಗಿಲ್ಲ ಅಂತ ಹೇಳಿ, ಅವರ ಪಿಎ ಫೋನ್ ಮಾಡಿ ವಿಚಾರಿಸಿದರು. ಅವರಿಗೆ ಫೇವರಿಟ್ ಕನ್ನಡ ಆಕ್ಟರ್ ಅಂದರೆ, ಯಶ್ ಮಾಮ.. ಮತ್ತು ದರ್ಶನ್ ಮಾಮ. ಅವರು ಐಸಿಯುನಲ್ಲಿ ಇದ್ದಾಗ ಕಣ್ಣೀರಿಟ್ಟರು. ಯಾವಾಗ ಐಸಿಯುನಿಂದ ಹೊರಗೆ ಬರುತ್ತೇನೆ. ಕೆಜಿಎಫ್ 3ಗೆ ಬಣ್ಣ ಹಚ್ಚುತ್ತೇನೆ ಅಂತ ಕೇಳುತ್ತಿದ್ದರು. ಆಗ ನಾನು ಕೆಜಿಎಫ್ 3ನಲ್ಲಿ ಆಕ್ಟ್ ಮಾಡಬೇಕು ಅಂತ ಆಸೆಯಿತ್ತು. ಈಗ ನೋಡಿ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ ಎಂದು ಅವರ ಹತ್ತಿರ ಹೇಳಿದೆ." ಎಂದು ರೋಷನ್ ಹೇಳಿದ್ದಾರೆ.
ಯಶ್ ಕಾರಿನಲ್ಲಿ ಕೂರಿಕೊಂಡು ಹೇಳಿದ್ದೇನು?
"ಕಾರಿನ ಒಳಗೆ ಕೂರಿಸಿಕೊಂಡು ಈಗ ನಿಮ್ಮ ಕಾಲಿನಲ್ಲಿ ನೀವೇ ನಿಂತು ಸಾಧನೆ ಮಾಡಬೇಕು. ಅಪ್ಪ ಅನ್ನೋ ಶಕ್ತಿಯಿಲ್ಲ. ಈಗ ನಿಮ್ಮ ಕಾಲಲ್ಲಿ ನೀವೆ ನಿಂತು ಸಾಧನೆ ಮಾಡಿ, ಜೀವನದಲ್ಲಿ ಮುಂದೆ ಬನ್ನಿ. ಏನಾದರೂ ಇದ್ದರೆ, ನಾನು ಇರುತ್ತೇನೆ ಎಂದು ಬೆಂಬಲ ಕೊಟ್ಟಿದ್ದಾರೆ. ದುಡ್ಡಿನ ವಿಚಾರವನ್ನೆಲ್ಲ ನನ್ನ ಹತ್ತಿರ ಮಾತಾಡಿಲ್ಲ." ಎಂದು ರೋಷನ್ ಅಂದು ಯಶ್ ಕಾರಿನ ಒಳಗೆ ನಡೆದಿದ್ದನ್ನು ರಿವೀಲ್ ಮಾಡಿದ್ದಾರೆ.


Click it and Unblock the Notifications











