KD The Devil; 'ಕೆಡಿ' ಸಿನಿಮಾಗೆ ಆರಂಭದಲ್ಲೇ ವಿಘ್ನ.. ಫ್ಯಾನ್ಸ್ ಶೋ ಕ್ಯಾನ್ಸಲ್?
ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಬಹುಕೋಟಿ ವೆಚ್ಚದ ಸಿನಿಮಾ 'ಕೆಡಿ ದಿ ಡೆವಿಲ್' ನಾಳೆ (ಏಪ್ರಿಲ್ 30) ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಇದಕ್ಕೆ ಇಡೀ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಅನ್ನು ಅರೇಂಜ್ ಮಾಡಲಾಗಿತ್ತು. ಬೆಳಗ್ಗೆ ಆರು ಗಂಟೆಯಿಂದಲೇ ಸಿಂಗಲ್ ಸ್ಕ್ರೀನ್ ನಲ್ಲಿ ಮೊದಲ ಪ್ರದರ್ಶನಕ್ಕೆ ಸಿದ್ದತೆ ನಡೆದಿತ್ತು.
ಈಗಾಗಲೇ ಹಲವು ವಿವಾದಗಳನ್ನು ಎದುರಿಸಿರೋ 'ಕೆಡಿ ದಿ ಡೆವಿಲ್' ಬಿಡುಗಡೆಯಾದರೂ ಆರಾಮಾಗಿ ಆಗುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಚಿತ್ರರಂಗದ ಮೂಲಗಳ ಪ್ರಕಾರ ಮೊದಲ ದಿನವೇ ಈ ಸಿನಿಮಾಗೆ ವಿಘ್ನ ಎದುರಾಗಿದೆ. ಜೋಗಿ ಪ್ರೇಮ್ ನಿರ್ದೇಶಿಸಿದ ಈ ಸಿನಿಮಾದ ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆ ಬಳಿಕ ಸೆನ್ಸಾರ್‌ನಲ್ಲಿ ಸಮಸ್ಯೆ ಎದುರಾಯ್ತು. ಹೇಗೋ ಸಂಭಾಳಿಸಿಕೊಂಡು ಅದ್ಧೂರಿ ರಿಲೀಸ್‌ಗೆ ರೆಡಿಯಾಗಿತ್ತು.

ಮೂರು ವರ್ಷಗಳಿಂದ 'ಕೆಡಿ ದಿ ಡೆವಿಲ್' ಸಿನಿಮಾವನ್ನು ನೋಡುವುದಕ್ಕೆ ಕಾದು ಕೂತಿದ್ದ ಧ್ರುವ ಸರ್ಜಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಿನಿಮಾ ಮಂದಿ ಪ್ರಕಾರ, 'ಕೆಡಿ ದಿ ಡೆವಿಲ್' ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದೆ. ಕೆಲವು ಸಮಸ್ಯೆಗಳಿಗೆ ಮೊದಲ ಶೋ ಪ್ರದರ್ಶನ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಅಧಿಕೃತವಾಗಿ ಇನ್ನೂ ಈ ಬಗ್ಗೆ ಕ್ಲಾರಿಟಿ ಕೊಟ್ಟಿಲ್ಲ. ಹಾಗಿದ್ದರೆ, 'ಕೆಡಿ'ಗೆ ಅಂತಹದ್ದೇನಾಯ್ತು ಸಮಸ್ಯೆ?
'ಕೆಡಿ' ಫ್ಯಾನ್ಸ್ ಶೋ ಬಗ್ಗೆ ಏನಿದು ಸುದ್ದಿ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‌ನ 'ಕೆಡಿ ದಿ ಡೆವಿಲ್' ಕುತೂಹಲ ಕೆರಳಿಸಿತ್ತು. ಬಹಳ ದಿನಗಳ ಬಳಿಕ ಕನ್ನಡ ಸಿನಿಮಾವೊಂದಕ್ಕೆ ಫ್ಯಾನ್ಸ್ ಶೋ ಹಾಕಲಾಗಿತ್ತು. 'ಕಾಂತಾರ ಚಾಪ್ಟರ್ 1', 'ಮಾರ್ಕ್' ಬಳಿಕ ರಿಲೀಸ್ ಆಗುತ್ತಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದರಿಂದ ನಿರೀಕ್ಷೆನೂ ಅಷ್ಟೇ ಇದೆ. ಆದ್ರೀಗ 'ಕೆಡಿ' ಫ್ಯಾನ್ಸ್ ಶೋ ರದ್ದಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ. ಇದಕ್ಕೆ ಸಿನಿಮಾ ಮಂದಿ ಎರಡು ಪ್ರಮುಖ ಕಾರಣಗಳನ್ನು ಕೊಡುತ್ತಿದ್ದಾರೆ.
ಕ್ಯೂಬ್-ಯುಎಫ್‌ಓ ಸಮಸ್ಯೆ?
ಫಿಲ್ಮಿಬೀಟ್ ಕನ್ನಡಕ್ಕೆ ಸ್ಯಾಂಡಲ್‌ವುಡ್ ಮೂಲಗಳು ನೀಡಿದ ಮಾಹಿತಿ ಪ್ರಕಾರ, 'ಕೆಡಿ' ಸಿನಿಮಾಗೆ ಕೆಲವು ಸಂಸ್ಥೆಗಳಿಂದ ಕ್ಲಿಯರೆನ್ಸ್ ಸಿಗುವುದು ತಡವಾಗಿದೆ. ಹೀಗಾಗಿ ಸಿನಿಮಾವನ್ನು ಕ್ಯೂಬ್ ಹಾಗೂ ಯುಎಫ್‌ಓಗೆ ಕಳಿಸುವುದು ತಡವಾಗಿದೆ. ಈ ಕಾರಣಕ್ಕೆ ಅಪ್‌ಲೋಡ್ ತಡವಾಗಿದ್ದರಿಂದ ಮೊದಲ ಶೋ ಅಂದರೆ, ಫ್ಯಾನ್ಸ್ ಶೋ ಪ್ರದರ್ಶನ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಬುಕ್ ಮೈ ಶೋನಲ್ಲೂ 6 ಗಂಟೆ ಹಾಗೂ 6.30ರ ಶೋ ಕಾಣಿಸುತ್ತಿಲ್ಲ. ಹೀಗಾಗಿ ಶೇ. 90ರಷ್ಟು ಸಿನಿಮಾ ಬರೋದು ಅನುಮಾನ ಎನ್ನಲಾಗಿದೆ.

ಅಪ್‌ಲೋಡ್‌ಗೆ ಎಷ್ಟು ಸಮಯ ಬೇಕು?
ಸಿನಿಮಾವನ್ನು ಅಪ್‌ಲೋಡ್ ಮಾಡುವುದಕ್ಕೆ ಕಮ್ಮಿ ಅಂದರೂ 18 ರಿಂದ 20 ಗಂಟೆಗಳು ಬೇಕು. 'ಕೆಡಿ' ತಂಡ ಕ್ಯೂಬ್ ಹಾಗೂ ಯುಎಫ್‌ಓಗೆ ಇಂದು ಮಧ್ಯಾಹ್ನ ಕಳಿಸಿದ್ದು, ಅದು ಮಾಸ್ಟರಿಂಗ್ ಆಗಿ ಅಪ್‌ಲೋಡ್ ಆಗುವುದಕ್ಕೆ ಸುಮಾರು 18 ಗಂಟೆ ಬೇಕಾಗಬಹುದು. ಈ ಕಾರಣಕ್ಕೆ 'ಕೆಡಿ' ಸಿನಿಮಾದ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಹೀಗಾಗಿ 8 ಗಂಟೆ ಬಳಿಕ ಮೊದಲ ಶೋ ಆರಂಭ ಆಗುತ್ತಿದೆ.
ಏನಂತಿದೆ ಕೆವಿಎನ್?
'ಕೆಡಿ ದಿ ಡೆವಿಲ್' ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಇನ್ನೂ ಅಧಿಕೃತವಾಗಿ ಈ ಬಗ್ಗೆ ಇನ್ನೂ ಹೇಳಿಕೆ ಕೊಟ್ಟಿಲ್ಲ. ಒಟ್ನಲ್ಲಿ ಈ ಸಂಸ್ಥೆ ಬ್ಯಾಡ್ ಲಕ್ ಅನ್ನೋದು ಮುಂದುವರೆದಿದೆ. ಮೊದಲ ದಿನ, ಮೊದಲ ಶೋನೇ ಕ್ಯಾನ್ಸಲ್ ಆಗಿದೆ. ಹಾಗೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೂ ಸಿಕ್ಕಪಟ್ಟೆ ನಿರಾಸೆಯಂತೂ ಆಗಿದೆ.


Click it and Unblock the Notifications