Exclusive:"ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಆಪ್ತರೇ ನನ್ನನ್ನು ಅರೆಸ್ಟ್ ಮಾಡಿಸಿದ್ದು"; ಲಾಯರ್ ಜಗದೀಶ್
ಬಿಗ್‌ಬಾಸ್ ಕನ್ನಡ 11 ರಿಯಾಲಿಟಿ ಶೋನಿಂದ ಹೊರ ಬಂದ್ಮೇಲೆ ಲಾಯರ್ ಜಗದೀಶ್ ಮತ್ತಷ್ಟು ಆಕ್ಟೀವ್ ಆಗಿದ್ದರು. ರಿಯಾಲಿಟಿ ಶೋ, ಹೋರಾಟ ಅಂತ ಸದಾ ಸುದ್ದಿಯಲ್ಲಿ ಇದ್ದರು. ಈ ವೇಳೆ ಬೆಂಗಳೂರಿನ ಕೂಡಿಗೇಹಳ್ಳಿ ಸಮೀಪ ಅಣ್ಣಾಮ್ಮ ದೇವಿ ಉತ್ಸವದ ವೇಳೆ ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಸ್ಥಳೀಯರು ಹಾಗೂ ಲಾಯರ್ ಜಗದೀಶ್ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಟದವರೆಗೂ ಹೋಗಿತ್ತು.
ಈ ಗಲಾಟೆ ವೇಳೆ ಲಾಯರ್ ಜಗದೀಶ್ ಅವರ ಬಾಡಿ ಗಾರ್ಡ್ ಕಾನೂನು ಬಾಹಿರವಾಗಿ ಗುಂಡು ಹಾರಿಸಿದ್ದರೆಂಬ ಆರೋಪ ಮಾಡಲಾಗಿತ್ತು. ಜಗದೀಶ್ ಬಳಿ ಇದ್ದ ಗನ್ ಕೇವಲ ಉತ್ತರ ಪ್ರದೇಶದಲ್ಲಿ ಬಳಸುವುದಕ್ಕೆ ಮಾತ್ರ ಅವಕಾಶವಿತ್ತು. ಅದನ್ನು ಇಲ್ಲಿ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೂಡ ಇವರ ಮೇಲಿತ್ತು. ಗಲಾಟೆ ನಡೆದ ವೇಳೆ ಲಾಯರ್ ಜಗದೀಶ್ ಅವರನ್ನು ಈ ಎಲ್ಲಾ ಕಾರಣಕ್ಕೆ ಬಂಧಿಸಲಾಗಿತ್ತು.

ಈ ಸಂಬಂಧ ಲಾಯರ್ ಜಗದೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಸುಮಾರು 93 ದಿನಗಳ ಕಾಲ ಲಾಯರ್ ಜಗದೀಶ್ ಜೈಲಿನಲ್ಲಿಯೇ ಇರಬೇಕಾಯ್ತು. ಜಾಮೀನು ಸಿಗದೇ ಪರದಾಡಿದ್ದ ಜಗದೀಶ್ ಕೊನೆಗೂ ಜಾಮೀನ ಮೇಲೆ ಹೊರ ಬಂದಿದ್ದಾರೆ. ಹೊರ ಬಂದ ಬಳಿಕ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದು, "ನನ್ನ ಬಂಧನಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಿ ಎಂ ಸಿದ್ಧರಾಮಯ್ಯ ಅವರ ಆಪ್ತರು ಕಾರಣ ಎಂದಿದ್ದಾರೆ. ಈ ಸಂದರ್ಶನದಲ್ಲಿ ಡ್ರಗ್, ರಾಜಕಾರಣ, ಸಂಚು, ದ್ವೇಷದ ಬಗ್ಗೆ ಮಾತಾಡಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.
ರಿಯಲ್ ಜೈಲ್ ಎಂಜಾಯ್ ಮಾಡಿದೆ
"ಆಗ ಸಿನಿಮಾದಲ್ಲಿ ಜೈಲು ತೋರಿಸಿದಾಗ ಜನರೆಲ್ಲ ಎಂಜಾಯ್ ಮಾಡಿದರು. ರಿಯಾಲಿಟಿ ಶೋ ಎಂಜಾಯ್ ಮಾಡಿದ ಮೇಲೆ ರಿಯಲ್ ಜೈಲ್ ಅನ್ನೂ ಎಂಜಾಯ್ ಮಾಡಬೇಕು. ಅದನ್ನು ಎಂಜಾಯ್ ಮಾಡಿಕೊಂಡೇ ಬಂದಿದ್ದೇನೆ ಅಂತ ಹೇಳುತ್ತಿದ್ದೇನೆ. ಪ್ರಬಲವಾದ ಕಾರಣವಿಲ್ಲದೆ ನನ್ನನ್ನು ಜೈಲಿಗೆ ಹಾಕಿದರು." ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

ಸೈಕೋ ಪೊಲಿಟಿಕಲ್ ರೋಗವಿದೆ
"ಸಾಮಾನ್ಯ ಜನರ ಮನೆ ಮಕ್ಕಳು ರಾಜಕೀಯಕ್ಕೆ ಬರಬಾರದು, ಸಾಮಾನ್ಯ ಜನರ ಮನೆ ಮಕ್ಕಳು ಒಳ್ಳೊಳ್ಳೆ ಸಿನಿಮಾ ಮಾಡಬಾರದು, ಸಾಮಾನ್ಯ ಜನರ ಮನೆ ಮಕ್ಕಳು ಪ್ರಖ್ಯಾತಿ ಆಗಬಾರದು ಅನ್ನೋ ಒಂದು ಸೈಕೋ ಪೊಲಿಟಿಕಲ್ ರೋಗವಿದೆ ಅಂತ ಅಂದುಕೊಳ್ಳುತ್ತೇನೆ. ನನ್ನನ್ನು ಯಾರೂ ಬೆಳೆಸಲಿಲ್ಲ. ನನ್ನ ತಂದೆ ಕುಮಾರಸ್ವಾಮಿ ಏನೂ ಅಲ್ಲ. ನಮ್ಮ ಅಪ್ಪ ಏನೂ ಯಡಿಯೂರಪ್ಪ ಅಲ್ಲ. ನಮ್ಮ ಅಪ್ಪ ಸಿದ್ಧರಾಮಯ್ಯ ಕೂಡ ಅಲ್ಲ. ಆದರೂ ಏನೋ ಬೆಳೆದುಕೊಂಡು ಬಂದಿದ್ದೇನೆ. ದೇವರು ಬೆಳೆಸಿದರು. ಜನರು ನನ್ನನ್ನು ಇಷ್ಟ ಪಟ್ಟರು. ನಮ್ಮ ಬೆಳವಣಿಗೆಯನ್ನು ನೋಡಿಯೇ ಕೆಲವು ಊಸರವಳ್ಳಿ ರಾಜಕಾರಣಿಗಳು ಹಾಗೂ ಒಂದಷ್ಟು ಅಧಿಕಾರಿಗಳಿಗೆ ಭಯ. ನಾಳೆ ದಿನ ನಮಗೆ ಏನಾದರೂ ಆಗಬಹುದು ಅಂತ. ಈಗಾಗಲೇ ಒಂದಿಷ್ಟು ಮುಗಿಸಿದ್ದೀವಿ. ಇನ್ನೊಂದಿಷ್ಟು ಮುಗಿಸುತ್ತೇವೆ." ಎಂದು ಸೈಲೆಂಟ್ ಎಚ್ಚರಿಕೆ ಕೊಟ್ಟಿದ್ದಾರೆ.
ತಗ್ಗಲ್ಲ.. ಬಗ್ಗಲ್ಲ.. ಜಗ್ಗಲ್ಲ..
"ಒಂದು ಸತ್ಯವನ್ನು ಇಟ್ಕೊಂಡು ಎಫ್‌ಐಆರ್ ಮಾಡಿ ಕಳಿಸುವುದು ಬೇರೆ. ಒಬ್ಬರನ್ನು ಸುಳ್ಳು ಆರೋಪದ ಮೇಲೆ ಒಳಗಡೆ ಕಳಿಸುವುದು ಬೇರೆ. ಜನರಿಗೆ ಒಂದು ಅರ್ಥ ಆಗಬೇಕು. ನನ್ನಂಥವನಿಗೆ ಇಷ್ಟು ಚಾಲೆಂಜ್ ಮಾಡುತ್ತಾರೆ ಅಂದರೆ, ಸಾಮಾನ್ಯ ಜನರ ಪರಿಸ್ಥಿತಿ ಇವತ್ತಿನ ದಿನಗಳಲ್ಲಿ ಏನಾಗುತ್ತಿದೆ ಅನ್ನೋದನ್ನು ನಾನು ಯೋಚನೆ ಮಾಡಬೇಕಾಗಿದೆ. ಏನೇ ಮಾಡಿದರೂ ತಗ್ಗಲ್ಲ.. ಬಗ್ಗಲ್ಲ.. ಜಗ್ಗಲ್ಲ.. ಟ್ರೈ ಮಾಡಿದರು ಅಗಲಿಲ್ಲ" ಎನ್ನುತ್ತಾರೆ.
ಈ ಗಲಾಟೆಗೆ ಡ್ರಗ್ ಕಾರಣ
"ನಮ್ಮ ಗಲಾಟೆಗೆ ಡ್ರಗ್ ಕಾರಣ. ಯಾಕಂದ್ರೆ, ಅಲ್ಲಿ ಬಂದವರು ಯಾರೂ ಪಂಚೆ ಉಟ್ಕೊಂಡು, ಒಂದು ತಿಲಕ ಇಟ್ಕೊಂಡು ದೇವರನ್ನು ಇಟ್ಟಾಗ ನಡೆದುಕೊಳ್ಳುವಂತಹವರು ಯಾರೂ ಬರಲಿಲ್ಲ. ಆ ದೇವರನ್ನು ತಂದು ಬೀದಿಯಲ್ಲಿ ಇಟ್ಬಿಟ್ಟು. ಡ್ರಗ್ ಸೇವನೆ ಮಾಡಿ, ಹಲ್ಲೆ ಮಾಡುವಂತಹ ವಿಚಾರ ಇದೆಯಲ್ಲ ಅದಕ್ಕೆ ನಾನು ಸಪೋರ್ಟ್ ಮಾಡುವುದಿಲ್ಲ. ಅಲ್ಲಿ ಹೆಸರಿಗೆ ದೇವರು ಅಂತ ಇಡೋದು. ಹಿಂದೆ 400 ರಿಂದ 500 ಜನ ಡ್ರಗ್ ಪಾರ್ಟಿ ಮಾಡೋದು ಮಾಡಿದ್ದರು. ಅದಕ್ಕೆ ಗಲಾಟೆ ಆಯ್ತು." ಎಂದು ಅಂದಿನ ಗಟನೆಯನ್ನು ವಿವರಿಸಿದ್ದಾರೆ.
ನೀನು ಪ್ರಶ್ನೆ ಮಾಡುವುದನ್ನು ನಿಲ್ಲಿಸಬೇಕು ಅಂದ್ರು
"ಕರ್ನಾಟಕದಲ್ಲಿ ಎಷ್ಟೋ ಪೊಲೀಸರಿಗೆ, ರಾಜಕಾರಣಿಗಳಿಗೆ ನಾವೂ ನಿದ್ದೆಗೆಡಿಸಿದ್ದೇವೆ. ಇವತ್ತಿನ ಸಮಾಜದಲ್ಲಿ ಧ್ವನಿ ಎತ್ತುವವರು ಬೇಕಾಗಿದ್ದಾರೆ. ನಮ್ಮ ದೇಶದ ಸಂವಿಧಾನ ಕೂಡ ಅದನ್ನೇ ಹೇಳುತ್ತೆ. ಪ್ರಶ್ನೆ ಮಾಡಬೇಕು ಅನ್ನುತ್ತೆ. ಆದರೆ, ಜನರಿಗೆ ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ. ನಮ್ಮ ಜಾಗದಲ್ಲಿ ಬಂದು, ಯಾರೋ ಡ್ರಗ್ ಸೇವನೆ ಮಾಡಿ ಗಲಾಟೆ ಮಾಡಿದರೆ, ಅಂತಹವನ್ನು ಬಿಟ್ಟು, ನನ್ನನ್ನು ತೆಗೆದುಕೊಂಡು ಹೋಗಿ ಒಳಗಡೆ ಹಾಕಿ ಜೈಲಲ್ಲಿ ನನ್ನ ಜೊತೆ ಚೌಕಾಸಿಗೆ ಕೂರುತ್ತಾರೆ. ನೀನು ಪ್ರಶ್ನೆ ಮಾಡುವುದನ್ನು ನಿಲ್ಲಿಸಬೇಕು. ಇದೆಲ್ಲ ಮಾಡುವುದನ್ನು ನಿಲ್ಲಿಸಿದರೆ ಹೊರಗಡೆ ಬಿಡುತ್ತೇನೆ ಅಂತಾರೆ. ನಾನು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಅದಕ್ಕೆ ಇಷ್ಟೊಂದು ದಿನ ಆಯ್ತು." ಎನ್ನುತ್ತಾರೆ ಲಾಯರ್ ಜಗದೀಶ್.
ಪೊಲಿಟಿಕಲ್ ಗೇಮ್ ಆಡಿದ್ದಾರೆ
"ಆ ಸಮಯದಲ್ಲಿ ನನಗೆ ಯಾರು ಇದರಲ್ಲಿ ಇದ್ದರು ಅನ್ನೋದು ಗೊತ್ತಿರಲಿಲ್ಲ. ಆದರೆ, ಪೊಲೀಸರು ಸೇರಿಕೊಂಡು ಮಾಡಿದ್ದಾರೆ ಅನ್ನೋದು ಗೊತ್ತಿತ್ತು. ಆ ಗಲಾಟೆಯಲ್ಲಿ ನನ್ನ ಗಾಡಿಯನ್ನೆಲ್ಲ ಒಡೆದು ಹಾಕುತ್ತಾರೆ. ನಾನಾಗೇ ಪೊಲೀಸರ ಜೊತೆ ಸ್ಟೇಷನ್‌ಗೆ ಹೋಗಿದ್ದೆ. ತುಂಬಾನೇ ಪ್ಲ್ಯಾನ್ ಮಾಡಿ, ಪೊಲಿಟಿಕಲ್ ಆಗಿ ಆಟ ಆಡಿದ್ದಾರೆ." ಎಂದಿದ್ದಾರೆ.
ರಾಜಕೀಯಕ್ಕೆ ನಿಲ್ಲುತ್ತೇನೆ
"2019ರಲ್ಲಿ ಎಂಪಿಗೆ ನಿಂತುಕೊಂಡಿದ್ದೆ. ಆರು ವರ್ಷದ ಹಿಂದೆ ಎಂಟೂವರೆ ಸಾವಿರ ಓಟು ತೆಗೆದುಕೊಂಡಿದ್ದೆ. ಇವತ್ತಿನ ಮಟ್ಟದಲ್ಲಿ ಬ್ಯಾಟರಾಯನಪುರದಲ್ಲಿ ಚುನಾವಣೆಗೆ ನಿಲ್ಲಬೇಕು ಅಂತ ನಮ್ಮದೇ ಆದಂತಹ ರಾಜಕೀಯ ನಡೆಯನ್ನು ಶುರು ಮಾಡಿದ್ದೇವೆ. ಇವತ್ತಿನ ಎಂಎಲ್‌ಎ ಕೃಷ್ಣಬೈರೇ ಗೌಡರು. ಕೋಲಾರದಿಂದ ಬಂದು ನಿಂತುಕೊಂಡಿದ್ದಾರೆ. ನಮ್ಮ ಕ್ಷೇತ್ರ ರಾಜಕೀಯವಾಗಿ ಎಲ್ಲೋ ಒಂದು ಕಡೆ ಅನಾಥವಾಗಿದೆ. ನಾವ್ಯಾರೂ ನಿಲ್ಲುತ್ತಿಲ್ಲ. ಯಾರೋ ಬಂದು ನಿಂತುಕೊಳ್ಳುತ್ತಾರೆ. ಸುಳ್ಯದಿಂದ ಬಂದು ಸದಾನಂದ ಗೌಡರು ನಿಲ್ಲುತ್ತಾರೆ. ಕೋಲಾರದಿಂದ ಬಂದು ಕೃಷ್ಣಬೈರೇಗೌಡರು ನಿಲ್ಲುತ್ತಾರೆ. ನಾನು ನಿಂತರೆ ತಪ್ಪೇನು ಅಂತ ಹೇಳಿ. ಈ ಪ್ರಖ್ಯಾತಿಯನ್ನು ರಾಜಕೀಯವಾಗಿ ಬಳಸಿಕೊಂಡು ಎಂಎಲ್‌ಎ ಚುನಾವಣೆಗೆ ನಿಂತುಕೊಳ್ಳೋಣ ಎನ್ನುವ ರೀತಿಯಲ್ಲಿ ನಮ್ಮ ಕೆಲಸ ಶುರು ಮಾಡಿದ್ದೇವೆ." ಎಂದು ರಾಜಕೀಯ ನಡೆಯ ಬಗ್ಗೆ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅರೆಸ್ಟ್ ಮಾಡಿಸಿದ್ದು
"ಆ ಗಲಾಟೆಯನ್ನು ಪೊಲೀಸರು ಬಳಸಿಕೊಂಡರು. ನನ್ನ ಮೇಲೆ ಎಫ್‌ಐಆರ್ ಹಾಕಿದರು. ಮಹೇಶ ಅಂತ ಇನ್‌ಸ್ಪೆಕ್ಟರ್ ನಾನು ಒಳಗೆ ಬಂದಾಗ ಕೇಳಿದೆ. ಏನಿದು ನಾನು ಡಿಕೆ ಶಿವಕುಮಾರ್‌ಗೆ ಹೇಳುತ್ತೇನೆ ಅಂತ ಹೇಳಿದೆ. ಆಗ ಅವರು ಡಿಕೆ ಶಿವಕುಮಾರ್ ಅವರೇ ಹೇಳಿದ್ದು ನಿಮ್ಮನ್ನು ಅರೆಸ್ಟ್ ಮಾಡುವುದಕ್ಕೆ ಅಂದರು. ಸಿದ್ಧರಾಮಯ್ಯ ಆಪ್ತ ವಲಯದಲ್ಲಿರುವ ಪೊನ್ನಣ್ಣ ಅವರೇ ಹೇಳಿದ್ದು, ನೀವ್ಯಾಕೆ ನಕರ ಮಾಡುತ್ತೀರ ಅಂದರು." ಎಂದು ಆರೋಪಿಸಿದ್ದಾರೆ.
ಪದೇ ಪದೆ ಒತ್ತಡ ಹಾಕಿದ್ರು
"ಒಂದಂತೂ ನಿಜ ನಾವಂತೂ ಎಲ್ಲರಿಗೂ ಕಡ್ಡಿ ಅಲ್ಲಾಡಿಸಿದ್ದೇವೆ. ಪ್ರಶ್ನೆ ಮಾಡಿದ್ದೇವೆ. ಮೂರು ತಿಂಗಳು ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿ, ಬೇಲ್ ಸಿಗದಂತೆ ಮಾಡಿ ಒತ್ತಡ ಹಾಕಿದ್ದೇ ನನ್ನ ಜೊತೆ ಒಪ್ಪಂದ ಮಾಡುವುದಕ್ಕೆ. ಪದೇ ಪದೆ ಜಗದೀಶ್ ಅವರೇ ನೀವು ಸುಮ್ಮನೆ ಇದ್ದರೆ ಬೇಲ್ ಆಗುತ್ತೆ ಎನ್ನುತ್ತಿದ್ದರು. ಆಗ ನಾನು ಬಿಡಿ ಪರ್ವಾಗಿಲ್ಲ. ನಾನು ಇಲ್ಲೇ ಇರುತ್ತೇನೆ ಅಂದೆ. ಜಗದೀಶ್ ಅಂದರೆ, ಬರೀ ಮೊಬೈಲ್ ಅಂದುಕೊಂಡರು. ಆದರೆ, ಪೆನ್ನು ಪೇಪರ್ ಇಟ್ಕೊಂಡು ಜೈಲಿನಲ್ಲಿ ಶಕ್ತಿ ಪ್ರದರ್ಶನ ಮಾಡಬೇಕಾಯ್ತು. ಜನರಿಗೆ ಏನಾಗುತ್ತಿದೆ ಅಂತ ಗೊತ್ತಾಗುತ್ತಿರಲಿಲ್ಲ. ಜನರಿಗಾಗಿ ನಾನು ಫೈಟ್ ಮಾಡುತ್ತಿದ್ದೆ. ಈಗ ನನಗೋಸ್ಕರ ನಾನು ಫೈಟ್ ಮಾಡಿಕೊಂಡು ಹೊರಗಡೆ ಬರಬೇಕಾಗಿದೆ." ಎಂದಿದ್ದಾರೆ ಲಾಯರ್ ಜಗದೀಶ್.


Click it and Unblock the Notifications











