ಕ್ಯಾನ್ಸರ್‌ನಿಂದ ಬಳಲುತ್ತಿರೋ ಪುಟ್ಟ ಅಭಿಮಾನಿಗೆ ಧೈರ್ಯ ತುಂಬಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಅಭಿಮಾನಿಗಳಿಗಾಗಿ ಮಿಡಿಯುತ್ತಿದ್ದ ಜೀವ. ಅಣ್ಣಾವ್ರಂತೆ ತಮ್ಮ ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದ ನಟ ಅಪ್ಪು. ಇವರದ್ದೇ ಹಾದಿಯಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಸಾಗುತ್ತಿದ್ದಾರೆ.
ತಮ್ಮ ಅಭಿಮಾನಿಗೆ ಏನಾದರೂ ಕಷ್ಟ ಬಂತು ಅಂದರೆ ಅಲ್ಲಿ ಪುನೀತ್ ರಾಜ್‌ಕುಮಾರ್ ಇರುತ್ತಿದ್ದರು. ಅಪ್ಪು ಬ್ಯುಸಿ ಇದ್ದರೆ ಅವರ ಆಪ್ತರ ಮೂಲಕ ಸಹಾಯ ಹಸ್ತ ಚಾಚುತ್ತಿದ್ದರು. ಪುನೀತ್ ಅಗಲಿದ ಬಳಿಕವೇ ಈ ಸಹಾಯ ಮನೋಭಾವ ಜಗತ್ತಿಗೆ ಗೊತ್ತಾಗಿತ್ತು. ಈಗ ಅದೇ ದಾರಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಸಾಗುತ್ತಿದ್ದಾರೆ.

ಈ ಪುಟ್ಟ ಅಭಿಮಾನಿಯ ಹೆಸರು ಹರ್ಷ. ಈ ಪುಟಾಣಿ ಅಭಿಮಾನಿಗೆ ಈಗ 6 ವರ್ಷ. ಬ್ಲಾಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹರ್ಷನಿಗೆ ಅಪ್ಪು ಅಂದರೆ ಪಂಚ ಪ್ರಾಣ. ಪುನೀತ್ ರಾಜ್‌ಕುಮಾರ್ ಅಗಲಿದಾಗ ಈತನಿಗೆ ನಾಲ್ಕೂವರೆ ವರ್ಷ. ಅಲ್ಲಿಂದ ಪುನೀತ್ ರಾಜ್‌ಕುಮಾರ್ ಮನೆಗೆ ಹೋಗಬೇಕು. ಅವರ ಮನೆಯನ್ನು ನೋಡಬೇಕು ಅನ್ನೋ ಆಸೆ.
ಹರ್ಷನ ತಂದೆ-ತಾಯಿ ಇಬ್ಬರೂ ಚಿತ್ರದುರ್ಗದವರು. ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ತಂದೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ. ಅಮ್ಮ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಬಡತನವಿದ್ದರೂ, ಹರ್ಷನಿಗೆ ಬ್ಲಾಕ್ ಕ್ಯಾನ್ಸರ್ ಅಂತ ಗೊತ್ತಾದಾಗ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೂ ಏನೂ ಪ್ರಯೋಜನ ಆಗಲಿಲ್ಲ.
ವೈದ್ಯರೂ ಕೂಡ ಕೈ ಚಲ್ಲಿ ಕೂತಿದ್ದಾರೆ. ಹರ್ಷನ ಆಸೆಗಳು ಏನಿವೆಯೋ ಅದನ್ನೆಲ್ಲ ತೀರಿಸಿ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳಿದ್ದಾರೆ. ಇದೇ ಸಮಯದಲ್ಲಿ ಅಪ್ಪು ಮನೆಗೆ ನೋಡಬೇಕು ಅಂತ ಹರ್ಷ ಹಠ ಹಿಡಿದಿದ್ದಾನೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂದಿದ್ದ. ಆಪ್ತರ ಮೂಲಕ ಹರ್ಷನ ಆಸೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವರೆಗೂ ಮುಟ್ಟಿಸಿದ್ದಾರೆ.
ಹರ್ಷನ ಮೆಡಿಕಲ್ ಡಿಟೈಲ್ಸ್, ಫೋಟೊಗಳು, ಪುನೀತ್ ಅಗಲಿದಾಗ ಅತ್ತಿದ್ದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಅವರು ಇಂದು (ನವೆಂಬರ್ 6) ಹರ್ಷನನ್ನು ಮನೆಗೆ ಕರೆಸಿಕೊಂಡು ಧೈರ್ಯ ತುಂಬಿ ಕಳುಹಿಸಿದ್ದಾರೆ.
ಇಷ್ಟೇ ಅಲ್ಲದೆ ತಮ್ಮದೇ ಕಾರಿನಲ್ಲಿ ಹರ್ಷನ ಜೊತೆ ಡ್ರೈವರ್ ಅನ್ನು ಕಳುಹಿಸಿ ಪಿಆರ್‌ಕೆ ಸ್ಟುಡಿಯೋ ಹಾಗೂ ಮನೆಯನ್ನು ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ. ಇದೇ ವೇಳೆ ಏನಾದರೂ ಸಹಾಯ ಬೇಕಿದ್ದರೆ ಕೇಳಿ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪ್ಪು ಅಭಿಮಾನಿ ಹರ್ಷನ ಕುಟುಂಬ ಅಷ್ಟೊಂದು ಸ್ಥಿತಿವಂತರಲ್ಲ. ಹೀಗಾಗಿ ಅಪ್ಪುವಿನಂತೆಯೇ ಅಶ್ವಿನಿ ಪುನೀತ್‌ಕುಮಾರ್ ಕೂಡ ಸಹಾಯ ಹಸ್ತ ಚಾಚುವುದಕ್ಕೆ ಮುಂದಾಗಿದ್ದರು. ಆದರೆ, ಸದ್ಯ ಹರ್ಷನ ಪರಿಸ್ಥಿತಿ ಬೇರೆನೇ ಇದೆ ಎನ್ನಲಾಗಿದೆ.


Click it and Unblock the Notifications











