₹18.5 ಲಕ್ಷ ಸಂಭಾವನೆ.. ಫೋರ್ಜರಿ ಸಹಿ ಆರೋಪ: 'ಲವ್ ಬರ್ಡ್ಸ್' ನಿರ್ಮಾಪಕ, ನಿರ್ದೇಶಕರ ವಿವಾದವೇನು?
ಕೆಲವು ದಿನಗಳ ಹಿಂದಷ್ಟೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ಸಿನಿಮಾ 'ಲವ್ ಬರ್ಡ್ಸ್' ರಿಲೀಸ್ ಆಗಿತ್ತು. ಈ ಸಿನಿಮಾವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಿದ್ದರೆ, ಪಿ ಸಿ ಶೇಖರ್ ನಿರ್ದೇಶನ ಮಾಡಿದ್ದಾರೆ.
'ಲವ್ ಬರ್ಡ್ಸ್' ಸಿನಿಮಾ ಈಗಾಗಲೇ ತೆರೆಕಂಡು ಓಟಿಟಿಯಲ್ಲೂ ಬಿಡುಗಡೆಯಾಗಿದೆ. ಈಗ ನಿರ್ಮಾಪಕ ಕಡ್ಡಿಪುಡಿ ಚಂದ್ರು, ಸಂಭಾವನೆ ಕೊಟ್ಟಿಲ್ಲ ಅಂತ ನಿರ್ದೇಶಕ ಪಿಸಿ ಶೇಖರ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರೋ ಪಿಸಿ ಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

₹25 ಲಕ್ಷದಲ್ಲಿ ಕೊಟ್ಟಿದ್ದು ₹6.5 ಲಕ್ಷ ಅಷ್ಟೇ
'ಲವ್ ಬರ್ಡ್ಸ್' ಸಿನಿಮಾ ನಿರ್ದೇಶನದ ಜೊತೆ ಎಡಿಟಿಂಗ್ ಮಾಡಲು ಪಿ ಸಿ ಶೇಖರ ಜೊತೆ ಮಾತುಕತೆ ನಡೆದಿತ್ತು. ಅದಕ್ಕೆ ನಿರ್ದೇಶಕನಕ್ಕೆ 20 ಲಕ್ಷ ರೂ. ಹಾಗೂ ಎಡಿಟಿಂಗ್‌ಗೆ 5 ಲಕ್ಷ ರೂ. ಎಂದಾಗಿತ್ತು. ಆದರೆ, ಕೇವಲ 6.5 ಲಕ್ಷ ರೂ. ಮಾತ್ರ ಬಂದಿದೆ ಎಂದು ಪಿ ಸಿ ಶೇಖರ್ ಆರೋಪ ಮಾಡಿದ್ದಾರೆ.
"ಕೊನೆ ದಿನ ಡಬ್ಬಿಂಗ್ ಟೈಮ್‌ನಲ್ಲಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ಗೊತ್ತಾಗಿ, ಅವರು ಫೋರ್ಸ್ ಮಾಡಿದ ಮೇಲೆ ಎರಡು ಲಕ್ಷ ಕೊಟ್ಟರು. ಆಗ 6.5 ಆಯ್ತು. ಇದು ಬಿಟ್ಟರೆ 18.5 ಲಕ್ಷ ಇನ್ನೂ ಉಳಿಸಿಕೊಂಡಿದ್ದರು. ಹಾರ್ಡ್ ಡಿಸ್ಕ್ ತೆಗೆದುಕೊಳ್ಳುವವರೆಗೂ ಒಂದು ಮಾತು ಇತ್ತು. ಹಾರ್ಡ್ ಡಿಸ್ಕ್ ಕೊಟ್ಟಾದ್ಮೇಲೆ ಮಾತುಗಳೆಲ್ಲಾ ಬದಲಾಗುವುದಕ್ಕೆ ಶುರುವಾಯ್ತು." ಎಂದು ಪಿ ಸಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
"ಫೋರ್ಜರಿ ಸಹಿ ಮಾಡಿದ್ದಾರೆ"
ಸಿನಿಮಾ ರಿಲೀಸ್ ಆದ್ಮೇಲೆ ರಿಸಲ್ಟ್ ನೋಡಿಕೊಂಡು ಸಂಭಾವನೆ ಕೊಡುತ್ತೇನೆ ಅಂತೆಲ್ಲ ಹೇಳಿದ್ದಾಗಿ ಆರೋಪ ಮಾಡಿದ್ದಾರೆ. ಅಲ್ಲದೆ ಅದಕ್ಕೂ ಮೀರಿ ಕೇಳುವುದಕ್ಕೆ ಹೋದರೆ, ಅವಾಜ್ ಹಾಕುತ್ತಿದ್ದರು ಎಂದಿದ್ದಾರೆ. ಅಲ್ಲದೆ ಪೋರ್ಜರಿ ಸಹಿ ಹಾಕಿ, ಅಮೆಜಾನ್‌ಗೆ ಒಳ್ಳೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

"ಹಣದ ವಿಷಯ ಇದ್ದರೂ, ನಾವು ಸಿವಿಲ್ ಸೂಟ್ ಫೈಲ್ ಮಾಡಿದ್ದೀವಿ. ಇದರಲ್ಲಿ ಅಮೆಜಾನ್, ಸುವರ್ಣ ಎಲ್ಲರೂ ಭಾಗಿಯಾಗಿದ್ದಾರೆ. ಎನ್‌ಓಸಿ ತೆಗೆದುಕೊಳ್ಳದೆ ಒಂದು ಸಿನಿಮಾ ಮಾರಾಟ ಮಾಡುವುದಕ್ಕೆ ಆಗುವುದಿಲ್ಲ. ಆಗ ಯೋಚನೆ ಮಾಡಿದಾಗ, ಇವರು ನನ್ನ ಹತ್ತಿರ ಸಹಿ ಮಾಡಿಸಿಕೊಳ್ಳದೆ ಹೇಗೆ ಮಾರಿದ್ರು? ಅನ್ನೋ ಪ್ರಶ್ನೆ ಬಂತು. RTIಯಿಂದ ಮಾಹಿತಿ ತೆಗೆದುಕೊಂಡಾಗ, ನನ್ನ ಸಹಿ ಫೋರ್ಜರಿ ಆಗಿರುವುದು ಬೆಳಕಿಗೆ ಬಂದಿದೆ. ಸಹಿ ನನ್ನ ಹಕ್ಕು ಅಂತ ಯಾರೋ ಹಾಕಿದರೆ, ಅದನ್ನು ನೋಡಿಕೊಂಡು ನಾನು ಇರೋದಕ್ಕೆ ಆಗೋದಿಲ್ಲ. ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೋ, ಅದನ್ನು ನಾನು ತೆಗೆದುಕೊಂಡಿದ್ದೀನಿ." ಎಂದು ನಿರ್ದೇಶಕ ಪಿ ಸಿ ಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ಮಾಪಕರ ವಾದವೇನು?
ಈ ವಿವಾದ ಪೊಲೀಸ್ ಸ್ಟೆಷನ್ ಮೆಟ್ಟಿಲು ಏರುತ್ತಿದ್ದಂತೆ ನಿರ್ಮಾಪಕ ಕಡ್ಡಿಪುಡಿ ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕರಿಗೆ ಕೊಡಬೇಕಾದ ಸಂಭಾವನೆಯನ್ನು ಕೊಟ್ಟಿದ್ದೇನೆ. ಅವರ ಧರ್ಮ ಪತ್ನಿ ಹಾಗೂ ಅಣ್ಣನಿಗೂ ಸಂಭಾವನೆ ಕೇಳುತ್ತಿದ್ದಾರೆ. ನಿರ್ಮಾಪಕನಿಗೆ ಕಷ್ಟ ಆಗುತ್ತಿದೆ. ನನಗೆ ಪ್ರಿಂಟು, ಪಬ್ಲಿಸಿಟಿ ಹಣ ಕೂಡ ಬಂದಿಲ್ಲ" ಎಂದು ಕಡ್ಡಿಪುಡಿ ಚಂದ್ರು ಹೇಳುತ್ತಿದ್ದಾರೆ.
'ಲವ್ ಬರ್ಡ್ಸ್' ವಿವಾದ ಈಗ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘದ ಮೆಟ್ಟಿಲೇರಿದೆ. ಅಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ (ಮೇ 21) ಚರ್ಚೆ ನಡೆಯುವ ಸಾಧ್ಯತೆಯಿದೆ. ಅಲ್ಲಿ ಈ ವಿವಾದಕ್ಕೆ ಯಾವ ರೂಪ ಪಡೆದುಕೊಳ್ಳುತ್ತೋ ಗೊತ್ತಿಲ್ಲ.


Click it and Unblock the Notifications











