Love Mocktail 3: 25 ದಿನಗಳನ್ನು ಪೂರೈಸಿದ 2026ರ ಮೊದಲ ಸೂಪರ್ ಹಿಟ್ ಸಿನಿಮಾ 'ಲವ್ ಮಾಕ್ಟೇಲ್ 3'
ಕನ್ನಡ ಚಿತ್ರರಂಗದಲ್ಲಿ ಸೋಲುಗಳ ದುರಂತ ಕಥೆಯ ಈ ವರ್ಷವೂ ಕೂಡ ಮುಂದುವರೆದಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ಯಾಂಡಲ್‌ವುಡ್ ಕಡೆಗೆ ತಿರುಗಿ ನೋಡುವಂತಹ ಸಿನಿಮಾ ಬಂದಿಲ್ಲ. ಸತತ ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. ಒಂದಾದರೂ ಸಿನಿಮಾ ದೇಶಾದ್ಯಂತ ಗಮನ ಸೆಳೆಯಬಹುದೆಂಬ ನಂಬಿಕೆ ಇತ್ತು. ಹೀಗೆ ಸೋಲಿನಿಂದ ಕಂಗೆಟ್ಟಿರುವ ಸ್ಯಾಂಡಲ್‌ವುಡ್‌ಗೆ ಸಂಜೀವಿನಿಯಂತೆ ಬಂದಿದ್ದು 'ಲವ್ ಮಾಕ್ಟೇಲ್ 3'.
ಡಾರ್ಲಿಂಗ್ ಕೃಷ್ಣ ಕಥೆ ಬರೆದು, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ 'ಲವ್ ಮಾಕ್ಟೇಲ್ 3' ಮಾರ್ಕ್ 19ರಂದು ರಿಲೀಸ್ ಆಗಿತ್ತು. ನಿರೀಕ್ಷೆ ಮಾಡಿದ್ದಕ್ಕಿಂತ ಬೇಗನೇ ರಿಲೀಸ್ ಆಗಿತ್ತು. ಯಶ್ 'ಟಾಕ್ಸಿಕ್' ಸಿನಿಮಾ ಮುಂದಕ್ಕೆ ಹೋಗಿದ್ದರಿಂದ ಅದೇ ಡೇಟ್‌ಗೆ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಯುಗಾದಿ ಹಬ್ಬದ ಸಂಭ್ರಮದಲ್ಲಿ ತಂದೆ-ಮಗಳ ಭಾವನಾತ್ಮಕ ಸಂಬಂಧವನ್ನು ತೆರೆ ಮೇಲೆ ತಂದು ಡಾರ್ಲಿಂಗ್ ಕೃಷ್ಣ ಗೆದ್ದಿದ್ದಾರೆ.

'ಲವ್ ಮಾಕ್ಟೇಲ್ 3' ಸಿನಿಮಾ ಈಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಈ ಸಿನಿಮಾ ಫಸ್ಟ್ ಡೇ ಫಸ್ಟ್ ಶೋನೇ ಒಳ್ಳೆಯ ಓಪನಿಯನ್ ಸಿಕ್ಕಿತ್ತು. ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಮುನ್ನುಗ್ಗಿತ್ತು. ಇದೀಗ ಇಪ್ಪತೈದು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಮುನ್ನುಗ್ಗುತ್ತಿದೆ. ಈ ಮೂಲಕ 2026ರ ಮೊದಲ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ.
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ರಿಲೀಸ್ ಮುಂದಕ್ಕೆ ಹೋಯ್ತು. ಈ ಹಿನ್ನೆಲೆಯಲ್ಲಿಯೇ ಹಬ್ಬದ ಲಾಭವನ್ನು ಪಡೆದುಕೊಳ್ಳಲು 'ಲವ್ ಮಾಕ್ಟೇಲ್ 3' ಮುಂದಾಗಿತ್ತು. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯೇ ವಿತರಣೆ ಮಾಡಿದ್ದರಿಂದ ಯುಗಾದಿಗೆ ರಿಲೀಸ್ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು.
ಕೆವಿಎನ್ ಸಂಸ್ಥೆ ಬೆಂಬಲಕ್ಕೆ ನಿಂತಿದ್ದರಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದಿದೆ. ಎಲ್ಲ ಕಡೆಯಿಂದಲೂ ಸಕಾರಾತ್ಮಕವಾಗಿದ್ದರಿಂದ 'ಲವ್ ಮಾಕ್ಟೇಲ್ 3' ಯಾವುದೇ ಅಡೆ ತಡೆಯಿಲ್ಲದೆ ರಿಲೀಸ್ ಆಗಿತ್ತು. ಈಗ ಅದೇ ವೇಗದೊಂದಿಗೆ 25 ದಿನಗಳನ್ನು ಪೂರೈಸಿದೆ. ಇಂಥಾ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸುತ್ತಲೇ, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಸರಣಿಯ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ್ದಾರೆ.

ಇನ್ನು 'ಲವ್ ಮಾಕ್ಟೇಲ್ 3' 25 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋ ಕುತೂಹಲವಂತೂ ಇದ್ದೇ ಇರುತ್ತೆ. ಬಾಕ್ಸಾಫೀಸ್ ಅನ್ನು ಟ್ರ್ಯಾಕ್ ಮಾಡುವ sacnilk.com 16.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ಇನ್ನೊಂದು ಕಡೆ ಕರ್ನಾಟಕದ ವಿತರಕರು ಈ ಸಿನಿಮಾ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ಒಟ್ನಲ್ಲಿ ಒಂದೊಳ್ಳೆ ಕಲೆಕ್ಷನ್ ಮಾಡಿದೆ ಅನ್ನೋದಂತೂ ಗ್ಯಾರಂಟಿ.
ಇನ್ನು ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಆರ್ಟ್ ಡೈರೆಕ್ಷನ್ ಇದೆ. ಇನ್ನು ಇದೇ ಯಶಸ್ಸಿನಲ್ಲಿ ಡಾರ್ಲಿಂಗ್ ಕೃಷ್ಣ ಮುಂದಿನ ಸಿನಿಮಾವನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications















