ಪೈರೇಟೆಡ್ ಕಾಪಿ ನೋಡುತ್ತಿರುವವರಿಗೆ 'ಲವ್ ಮಾಕ್‌ಟೇಲ್' ಆದಿ ಮಾಡಿದ ಮನವಿ
ಸ್ಟಾರ್ ನಟರ ಅಬ್ಬರದ ನಡುವೆ ಆಗಾಗ ಹೊಸಬರ ಚಿತ್ರಗಳು ಸದ್ದು ಮಾಡುತ್ತವೆ. ಅವುಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಹಿಟ್ ಪಡೆದುಕೊಳ್ಳುವುದು ಕೆಲವೇ ಚಿತ್ರಗಳು. ಏಕೆಂದರೆ ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಒಳ್ಳೆಯ ಸಿನಿಮಾಗಳಾದರೂ, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರೂ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ. ಅಂತಹ ಸಿನಿಮಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ತೀವ್ರ ಚರ್ಚೆಯಲ್ಲಿರುವ ಸಿನಿಮಾಗಳಲ್ಲಿ 'ಲವ್ ಮಾಕ್‌ಟೇಲ್' ಒಂದು.
ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತಿದ್ದಾಗಲೂ, ಉತ್ತಮ ಮಾತುಗಳು ಕೇಳಿಬಂದಾಗಲೂ ಟಿಕೆಟ್ ಪಡೆದು ಸಿನಿಮಾ ನೋಡಿದವರ ಸಂಖ್ಯೆ ಕಡಿಮೆ. ಚಿತ್ರಮಂದಿರದಲ್ಲಿ ಇರುವಾಗಲೇ ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿಯೂ ಬಂದಿದ್ದು ಮತ್ತೊಂದು ಕಾರಣ. ಆದರೆ ಅಮೆಜಾನ್ ಪ್ರೈಮ್‌ನಲ್ಲಿ ಬಂದ ಬಳಿಕ 'ಲವ್ ಮಾಕ್‌ಟೇಲ್' ಎಲ್ಲಿಲ್ಲದ ಪ್ರಚಾರ ಮತ್ತು ಪ್ರಶಂಸೆ ಪಡೆದುಕೊಂಡಿತು. ಆದರೆ ಅದಕ್ಕಿಂತಲೂ ಹೆಚ್ಚು ಜನರು ಸಿನಿಮಾವನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಿದರು. ಇನ್ನು ಕೆಲವರು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಕೂಡ ಮಾಡಿದ್ದರು. ಮುಂದೆ ಓದಿ.

ಪೈರಸಿ ಬಗ್ಗೆ ಬೇಸರ
ಹೆಚ್ಚಿನ ಜನರು 'ಲವ್ ಮಾಕ್‌ಟೇಲ್'ಅನ್ನು ಟೆಲಿಗ್ರಾಂ ಆಪ್‌ನಲ್ಲಿ ಡೌನ್‌ಲೋಡ್ ಮಾಡಿ ಅಥವಾ ಫೇಸ್‌ಬುಕ್‌ನಲ್ಲಿ ಅಕ್ರಮವಾಗಿ ಅಪ್‌ಲೋಡ್ ಮಾಡಿದ್ದ ಲಿಂಕ್‌ನಿಂದ ವೀಕ್ಷಿಸಿದ್ದಾರೆ. ಅದರ ಬಗ್ಗೆ 'ಲವ್ ಮಾಕ್‌ಟೇಲ್' ನಿರ್ದೇಶಕ, ನಿರ್ಮಾಪಕ ಹಾಗೂ ನಟ ಡಾರ್ಲಿಂಗ್ ಕೃಷ್ಣ ಬೇಸರ ಹೊರಹಾಕಿದ್ದಾರೆ.

ತಪ್ಪಿತಸ್ಥ ಭಾವನೆ ಕಾಡುತ್ತಿದೆ
ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಪ್ರಸಾರವಾದ ಬಳಿಕ ಅನೇಕರು ಪೈರೇಟೆಡ್ ಕಾಪಿಯ ಮೂಲಕ ಸಿನಿಮಾ ವೀಕ್ಷಿಸಿದ್ದಾರೆ. ಈ ಕುರಿತು ಡಾರ್ಲಿಂಗ್ ಕೃಷ್ಣ ವಿಡಿಯೋದಲ್ಲಿ ಬೇಸರ ಮತ್ತು ಸಲಹೆಯನ್ನು ಹಂಚಿಕೊಂಡಿದ್ದಾರೆ. 'ಎರಡು ದಿನದ ಹಿಂದೆ ತುಂಬಾ ಜನರು ಮೆಸೇಜ್‌ಗಳನ್ನು ಮಾಡುತ್ತಿದ್ದರು ಎಂದು ಗೂಗಲ್ ಯುಪಿಐ ಐಡಿಯನ್ನು ನೀಡಿದ್ದೆ. ಸಿನಿಮಾದ ಪೈರೇಟೆಡ್ ಕಾಪಿಯನ್ನು ನೋಡಿದೆ. ನಮ್ಮ ಕಡೆಯಿಂದ ತಪ್ಪಾಗಿದೆ. ಈಗ ಗಿಲ್ಟ್ ಕಾಡುತ್ತಿದೆ. ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಬೇಕುತ್ತು. ದಯವಿಟ್ಟು ಅಕೌಂಟ್ ನಂಬರ್ ಕಳಿಸಿ. ಟಿಕೆಟ್ ದರ ನೀಡಬೇಕು ಎಂದು ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪೈರೇಟೆಡ್ ಕಾಪಿ ನೋಡಿದಾಗ ನೋವಾಗುತ್ತದೆ
ಅನೇಕರು ಫೋನ್ ಮಾಡಿ ಫೇಸ್‌ಬುಕ್ ಅಥವಾ ಯೂಟ್ಯೂಬ್‌ನಲ್ಲಿ ನಿಮ್ಮ ಸಿನಿಮಾ ನೋಡಿದೆವು. ಚೆನ್ನಾಗಿದೆ ಎಂದಾಗ ನೋವಾಗುತ್ತದೆ. ಏಕೆಂದರೆ ಒಂದೂವರೆ ವರ್ಷ ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ ಎಂಬ ಆಶಯ ಹೊಂದಿರುತ್ತಾರೆ. ಬಹಳ ಜನ ಥಿಯೇಟರ್‌ನಲ್ಲಿ ನೋಡಿದ್ದಾರೆ ಕೂಡ. ಬಹಳ ಸಂತೋಷ. ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಅಮೆಜಾನ್ ಪ್ರೈಮ್ ಲೀಗಲ್
ಬಹಳಷ್ಟು ಜನರು ಚಿತ್ರಮಂದಿರದಲ್ಲಿ ನೋಡಿಲ್ಲ. ಅವರಿಗೆ ಸಮಯ ಸಿಕ್ಕಿರದೆ ಇರಬಹುದು. ನಾನಾ ಕಾರಣಗಳಿರಬಹುದು. ಈಗ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಂದಿದೆ. ಅದರಲ್ಲಿ ಸಿನಿಮಾ ನೋಡುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ಲೀಗಲ್. ಏಕೆಂದರೆ ಅವರು ಚಿತ್ರವನ್ನು ಕೊಂಡುಕೊಂಡಿರುತ್ತಾರೆ.

ಯೂಟ್ಯೂಬ್, ಫೇಸ್‌ಬುಕ್ ಅಕ್ರಮ
ಆದರೆ ಯೂಟ್ಯೂಬ್ ಅಥವಾ ಫೇಸ್‌ಬುಕ್‌ನಲ್ಲಿ ಸಿನಿಮಾ ನೋಡುವುದು ಖಂಡಿತಾ ತಪ್ಪು. ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ಅದರಿಂದ ಮೇಕರ್‌ಗಳ ಶ್ರಮಕ್ಕೆ ನಿಜವಾಗಿಯೂ ಬೆಲೆ ಕೊಟ್ಟಂತೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಜನರ ಪ್ರೀತಿಗೆ ಧನ್ಯವಾದ
ಅಮೆಜಾನ್ ಪ್ರೈಮ್‌ನಲ್ಲಿ ನೋಡದೆ, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ನೋಡಿದವರು ನನಗೆ ದುಡ್ಡು ಕಳಿಸುತ್ತಿದ್ದಾರೆ. ಈ ರೀತಿಯ ಅವಕಾಶಗಳನ್ನು ಬಳಸು ಸಿನಿಮಾವನ್ನು ಎಲ್ಲರೂ ನೋಡುತ್ತಿರುತ್ತಾರೆ. ನನ್ನ ಸಿನಿಮಾ ಏನೂ ಹೊಸದಲ್ಲ. ಆದರೆ ಹೀಗೆ ನೋಡುವುದು ತಪ್ಪು ಎಂಬುದನ್ನು ಅರ್ಥ ಮಾಡಿಕೊಂಡು ಸಾವಿರಾರು ಜನರು ನನಗೆ ಗೂಗಲ್ ಪೇನಲ್ಲಿ ಒಂದು ರೂಪಾಯಿಯಿಂದ ಸಾವಿರ ರೂಪಾಯಿವರೆಗೆ ದುಡ್ಡು ಕಳಿಸುತ್ತಿದ್ದಾರೆ. ನಮ್ಮ ಚಿತ್ರ ಎಂದು, ಈ ಬೆಳವಣಿಗೆ ಖುಷಿ ನಿಡುತ್ತಿದೆ. ಲವ್ ಮಾಕ್‌ಟೇಲ್ ಚಿತ್ರದ ಮೇಲಿನ ಪ್ರೀತಿಗೆ ಬಹಳ ಧನ್ಯವಾದ ಎಂದಿದ್ದಾರೆ.

ಮತ್ತೆ ಬಿಡುಗಡೆಯಾಗಲಿದೆ ಲವ್ ಮಾಕ್‌ಟೇಲ್
ಸಿನಿಮಾ ನೋಡಲು ಸಾಧ್ಯವಾಗದವರಿಗೆ ಮತ್ತೊಂದು ಖುಷಿಯ ಸಂಗತಿಯನ್ನು ಕೃಷ್ಣ ನೀಡಿದ್ದಾರೆ. ಕೊರೊನಾ ಹಾವಳಿ ಮುಗಿದ ಬಳಿಕ ಖಂಡಿತವಾಗಿಯೂ ಚಿತ್ರ ಮತ್ತೆ ಚಿತ್ರಮಂದಿರಕ್ಕೆ ಬರುತ್ತದೆ. ಆಮೇಲೆ ಅದನ್ನು ನೋಡಿ. ಇಲ್ಲದಿದ್ದರೆ ಈಗಲೇ ನೋಡಬೇಕು ಎಂದುಕೊಂಡವರು ಅಮೆಜಾನ್ ಪ್ರೈಮ್‌ನಲ್ಲಿಯೇ ನೋಡಿ. ಪೈರೇಟೆಡ್ ಕಾಪಿ ನೋಡಬೇಡಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











