ಏಪ್ರಿಲ್ 1 ರಿಂದ 'ಲೋಕಲ್ ಟ್ರೈನ್' ಹತ್ತಲು ಸಜ್ಜಾದ ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಮತ್ತೊಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 'ಲವ್ ಮಾಕ್ಟೇಲ್' ಸಿನಿಮಾ ಬಳಿಕ ಇದೇ ಚಿತ್ರದ ಸೀಕ್ವೆಲ್ 'ಲವ್ ಮಾಕ್ಟೇಲ್ 2' ಕೂಡ ರಿಲೀಸ್ ಆಗಿ, ಸೂಪರ್ ಹಿಟ್ ಆಗಿದೆ. ಇದೇ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯಕ್ಕೀಗ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹೊಸ ಸಿನಿಮಾ 'ಲೋಕಲ್ ಟ್ರೈನ್' ಇದೇ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಡಾರ್ಲಿಂಗ್ ಕೃಷ್ಣ ಅಭಿನಯಿಸಿದ ಸಿನಿಮಾ 'ಲವ್ ಮಾಕ್ಟೇಲ್ 2' ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಇನ್ನೂ ಓಡುತ್ತಲೇ ಇದೆ. ಅದಾಗಲೇ 'ಲೋಕಲ್ ಟ್ರೈನ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ಪ್ರಚಾರಕ್ಕೆ ಸಜ್ಜಾಗಿ ನಿಂತಿದ್ದಾರೆ. 'ಲೋಕಲ್ ಡ್ರೈನ್' ಸಿನಿಮಾದ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಲೋಕಲ್ ಟ್ರೈನ್‌ನಲ್ಲಿ ನಡೆಯೋ ಕಥೆಯೇ ಸಿನಿಮಾ ಕಥೆ
'ಲೋಕಲ್ ಟ್ರೈನ್' ಪರಿಚಯ ಎಲ್ಲರಿಗೂ ಇದ್ದೇ ಇರುತ್ತೆ. ಟ್ರೈನ್‌ನಲ್ಲಿ ಪ್ರಯಾಣ ಮಾಡುವುದೇ ಒಂದು ಸುಂದರ ಅನುಭವ. ಅದೇ ಇನ್ನೊಂದು ಕಡೆ ಕೆಲಸಕ್ಕೆ, ವ್ಯಾಪಾರಕ್ಕೆ, ಹೀಗೆ ಬೇರೆ ಬೇರೆ ಉದ್ದೇಶಕ್ಕೆ ಅಂತ ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಲೋಕಲ್ ಟ್ರೈನ್ ಬಹುತೇಕ ಸಾಮಾನ್ಯ ಜನರ ಜೀವನದ ಒಂದು ಭಾಗವಾಗಿ ಹೋಗಿದೆ. ಈ ಸಿನಿಮಾದ ಕಥೆ ಕೂಡ ರೈಲಿನಲ್ಲೇ ಸಾಗುತ್ತೆ. ಹೀಗಾಗಿ 'ಲೋಕಲ್ ಟ್ರೈನ್' ಸಿನಿಮಾ ಕನ್ನಡ ಸಿನಿಪ್ರಿಯರಿಗೆ ಹೊಸ ಮೇಲಿಗಲ್ಲಾಗುತ್ತೆ.

ಡಾರ್ಲಿಂಗ್ ಕೃಷ್ ಅಭಿನಯದ 'ಲೋಕಲ್ ಟ್ರೈನ್' ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಲೋಕಲ್ ಟ್ರೈನ್‌ನಲ್ಲಿಯೇ ಸಿನಿಮಾದ ಕಥೆ ಸಾಗುವುದರಿಂದ ಕಥೆ ಇಂಟ್ರೆಸ್ಟಿಂಗ್ ಆಗಿರಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಇನ್ನೊಂದು ಕಡೆ ಭರ್ಜರಿ ಆಕ್ಷನ್ ಸನಿವೇಶಗಳಿವೆಯಂತೆ. ಹಾಗೇ ಸುಮಧುರ ಹಾಡುಗಳೂ ಕೂಡ ಇವೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ಮತ್ತೊಂದು ಯಶಸ್ಸನ್ನು ಈ ಸಿನಿಮಾ ಮೂಲಕ ಪಡೆಯಲು ಎದುರು ನೋಡುತ್ತಿದ್ದಾರೆ.
ಕೊರೊನಾದಿಂದ ಸೈಲೆಂಟ್ ಆಗಿದ್ದ 'ಲೋಕಲ್ ಟ್ರೈನ್'
ಕೊರೊನಾ ಭಾರತಕ್ಕೆ ಕಾಲಿಡುವುದಕ್ಕೂ ಮುನ್ನ ಈ ಸಿನಿಮಾ ಸೆಟ್ಟೇರಿತ್ತು. ಆದರೆ, ಕೊರೊನಾ ಲಗ್ಗೆ ಇಟ್ಟ ಬಳಿಕ ಸಿನಿಮಾದ ಚಿತ್ರೀಕರಣ ಕೊಂಚ ನಿಧಾನವಾಗಿ ಸಾಗಿತ್ತು. ಹೀಗಾಗಿ ಸಿನಿಮಾ ಬಿಡುಗಡೆ ಕೂಡ ತಡವಾಯ್ತು. ಈಗ ಕೊರೊನಾ ಆತಂಕ ಕೊಂಚ ಕಡಿಮೆಯಾಗಿರುವುದರಿಂದ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿ ನಿಂತಿದೆ. ಏಪ್ರಿಲ್ 1ರಿಂದ ತಮ್ಮ 'ಲೋಕಲ್ ಟ್ರೈನ್' ಅನ್ನು ಥಿಯೇಟರ್‌ಗಳಿಗೆ ಬಿಡಲು ಸಜ್ಜಾಗಿದೆ.

ಲೋಕಲ್ ಟ್ರೈನ್ ಸಿನಿಮಾವನ್ನು ಸುಬ್ರಾಯ ವಾಳ್ಕೆ ನಿರ್ಮಿಸಿದ್ದಾರೆ. ಡಾರ್ಲಿಂಗ್ ಕೃಷ್ಣಗೆ ಈ ಸಿನಿಮಾದಲ್ಲಿ ಎಸ್ತರ್ ನರೋನಾ ಹಾಗೂ ಮೀನಾಕ್ಷಿ ದೀಕ್ಷಿತ್ ಇಬ್ಬರು ನಾಯಕಿಯರು. ಹಾಡುಗಳು ಸಿನಿಮಾದ ಹೈಲೈಟ್ ಆಗಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರುದ್ರಮುನಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಾಧುಕೋಕಿಲಾ, ಭಜರಂಗಿ ಲೋಕಿ ಹಾಗೂ ಟೆನ್ನಿಸ್ ಕೃಷ್ಣ ಈ ಸಿನಿಮಾದ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.


Click it and Unblock the Notifications











