ಪ್ರೀತಿಯ ತಂದೆ ಪಕ್ಕದಲ್ಲೇ ಖಳನಟ ಅನಿಲ್ ಅಂತ್ಯಕ್ರಿಯೆ
ಸತತ ಮೂರು ದಿನಗಳ ಶೋಧ ಕಾರ್ಯಚರಣೆ ಬಳಿಕ ನಟ ಅನಿಲ್ ರವರ ಮೃತದೇಹ ಇಂದು ಬೆಳಗ್ಗೆ ಪತ್ತೆ ಆಯ್ತು. 'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದ ಸ್ಪಾಟ್ ನಿಂದ 50 ಮೀಟರ್ ದೂರದಲ್ಲಿ ಅನಿಲ್ ಶವ ತೇಲಿ ಬಂದ ಪರಿಣಾಮ, ಎನ್.ಡಿ.ಆರ್.ಎಫ್ ಸಿಬ್ಬಂದಿಗೆ ಅನಿಲ್ ಮೃತದೇಹ ಸಿಕ್ಕಿದೆ.
ತಿಪ್ಪಗೊಂಡನಹಳ್ಳಿ ಕೆರೆಯ ದಡದಲ್ಲೇ ಶವ ಪರೀಕ್ಷೆ ಮುಗಿದ ಬಳಿಕ, ಅನಿಲ್ ಪಾರ್ಥೀವ ಶರೀರ ಬೆಂಗಳೂರಿನ ಕದಿರೇನಹಳ್ಳಿಯಲ್ಲಿರುವ ಅವರ ನಿವಾಸ ತಲುಪಿದೆ. ಕದಿರೇನಹಳ್ಳಿ ಮುಖ್ಯ ರಸ್ತೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. [ನಿನ್ನೆ ಉದಯ್ ಶವ, ಇಂದು ಅನಿಲ್ ಶವ ಪತ್ತೆ]

ಅನಿಲ್ ರವರ ಅಂತಿಮ ದರ್ಶನ ಪಡೆಯಲು, ನಿವಾಸದತ್ತ ಜನಸಾಗರವೇ ಹರಿದುಬರುತ್ತಿದೆ. ನಟ ದುನಿಯಾ ವಿಜಯ್, ಪ್ರೇಮ್, ಥ್ರಿಲ್ಲರ್ ಮಂಜು, ಪುನೀತ್ ರಾಜ್ ಕುಮಾರ್, ರವಿಶಂಕರ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಅನಿಲ್ ರವರಿಗೆ ಅಂತಿಮ ನಮನ ಸಲ್ಲಿಸಿದರು. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]
ಕೆಲವೇ ಗಂಟೆಗಳಲ್ಲಿ ಅನಿಲ್ ರವರ ಅಂತ್ಯ ಸಂಸಾರ ನಡೆಯಲಿದ್ದು, ಬನಶಂಕರಿ ರುದ್ರಭೂಮಿಯಲ್ಲಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಂದೆ ವೇಣುಗೋಪಾಲ್ ಪಕ್ಕದಲ್ಲೇ ಪುತ್ರ ಅನಿಲ್ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. 2012, ನವೆಂಬರ್ 14 ರಂದು ಅನಿಲ್ ತಂದೆ ವೇಣುಗೋಪಾಲ್ ಇಹಲೋಕ ತ್ಯಜಿಸಿದ್ದರು. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]
ಇಂದು ಸಂಜೆಯೊಳಗೆ ನಡೆಯುವ ಅನಿಲ್ ರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ರವರಿಗೆ ರಾಮನಗರ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ ಎನ್ನಲಾಗಿದೆ. [ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]
ರಾಮನಗರ ಜಿಲ್ಲೆ ತಾವೆರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಹೆಲಿಕಾಪ್ಟರ್ ನಿಂದ ನೀರಿಗೆ ಹಾರಿ ನಾಯಕನಿಂದ ತಪ್ಪಿಸಿಕೊಳ್ಳುವ ಸನ್ನಿವೇಶದಲ್ಲಿ ಖಳನಟರಾದ ಅನಿಲ್ ಮತ್ತು ಉದಯ್ ನೀರುಪಾಲಾಗಿದ್ದರು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
ಉದಯ್ ರವರ ಮೃತದೇಹ ನಿನ್ನೆ (ನವೆಂಬರ್ 9) ಮಧ್ಯಾಹ್ನ ಪತ್ತೆ ಆಗಿದ್ದು, ಇಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅನಿಲ್ ರವರ ಮೃತದೇಹ ಇಂದು ಮುಂಜಾನೆ 5.50 ರ ಸುಮಾರಿಗೆ ಪತ್ತೆ ಆಗಿತ್ತು. [ಮಣ್ಣಲ್ಲಿ ಮಣ್ಣಾದ 'ಮಾಸ್ತಿ ಗುಡಿ' ನಟ ರಾಘವ ಉದಯ್]


Click it and Unblock the Notifications











