'ಮಜಾಭಾರತ'ದ ಜೂನಿಯರ್ ದರ್ಶನ್ ಈಗಲೂ ಆಟೋ ಚಾಲಕ; ರಿಯಾಲಿಟಿ ಶೋ ಬಳಿಕ ಹೇಗಿದೆ ಜೀವನ?
ಒಂದೇ ಒಂದು ಅವಕಾಶ ಜೀರೋನಾ ಹೀರೋ ಮಾಡಿಬಿಡುತ್ತೆ. ಒಂದು ಚಿಕ್ಕ ಅವಕಾಶ ಬದುಕನ್ನೇ ಬದಲಾಯಿಸಿಬಿಡುತ್ತೆ.ಹೀಗಾಗಿ ಚಿಕ್ಕಮಗಳೂರಿನಲ್ಲಿ ಆಟೋ ಓಡಿಸಿಕೊಂಡಿದ್ದ ಒಬ್ಬ ವ್ಯಕ್ತಿಗೆ ಸಿಕ್ಕಿದ ಒಂದು ಅವಕಾಶ ಕನ್ನಡಿಗರೇ ಮೆಚ್ಚಿಕೊಂಡಾಡುವಂತೆ ಮಾಡಿದೆ. ಅದಕ್ಕೆ ಅವರ ಲುಕ್. ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನೇ ಹೋಲುವ ಈ ವ್ಯಕ್ತಿ ಒಂದು ಶೋ ಮೂಲಕ ವೇದಿಕೆ ಹತ್ತಿದ್ದಷ್ಟೇ. ಬದುಕೇ ಬದಲಾಗಿ ಬಿಟ್ಟಿತ್ತು. ಅವರೇ ಜೂನಿಯರ್ ದರ್ಶನ್ ಅಲಿಯಾಸ್ ಅವಿನಾಶ್.
ಚಿಕ್ಕಮಗಳೂರಿನಲ್ಲಿ ಅವಿನಾಶ್ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದರು. ಫರ್ನೀಚರ್ ಅಂಗಡಿಯಲ್ಲಿ ಕೆಲಸ. ಬಳಿಕ ಆಟೋ ಓಡಿಸಿಕೊಂಡಿದ್ದ ಅವಿನಾಶ್ ನೋಡುವುದಕ್ಕೆ ಥೇಟ್ ಯಂಗ್ ದರ್ಶನ್ ರಂತೆಯೇ ಕಾಣುತ್ತಿದ್ದರು. ಹೀಗಾಗಿ ಅವಿನಾಶ್ ಅವರನ್ನು ಜೂನಿಯರ್ ದರ್ಶನ್ ಅಂತಲೇ ಕರೆಯುತ್ತಿದ್ದರು. ಟಿಕ್ ಟಾಕ್‌ನಲ್ಲಿ ಸ್ನೇಹಿತರ ಜೊತೆ ಸೇರಿ ಮೂರು ವಿಡಿಯೋ ಮಾಡಿ ಹಾಕಿದ್ದರು. ಆ ಮೂರು ವಿಡಿಯೋಗಳೇ ಇವರನ್ನು ಮಜಾಭಾರತ ವೇದಿಕೆ ಮೇಲೆ ತಂದು ನಿಲ್ಲಿಸಿತ್ತು.

'ಮಜಾಭಾರತ'ದ ಒಂದು ಶೋಗೆಂದು ಬಂದಿದ್ದ ಅವಿನಾಶ್ ಅಲ್ಲಿಂದ ಒಂದೂವರೆ ವರ್ಷ ರಿಯಾಲಿಟಿ ಶೋಗಳಲ್ಲಿ ನಟಿಸುವಂತಾಯ್ತು. ಅಲ್ಲಿಂದ ಸಿನಿಮಾಗಳಿಗೂ ಅವಕಾಶ ಸಿಕ್ಕಿತು. ಕನ್ನಡಿಗರ ಮನೆ ಮನೆಗಳಲ್ಲಿ ಜೂನಿಯರ್ ದರ್ಶನ್ ಅಲಿಯಾಸ್ ಅವಿನಾಶ್ ಅನ್ನು ಮೆಚ್ಚಿಕೊಂಡರು. ಇಲ್ಲಿಂದ ಇವರ ಬದುಕು ಬದಲಾಗಬಹುದು ಎಂದುಕೊಂಡಿದ್ದರು. ಆದರೆ, ಇನ್ನೂ ಒಳ್ಳೆಯ ಅವಕಾಶ ಸಿಕ್ಕಿಲ್ಲ. ಇನ್ನೂ ಕೈಯಲ್ಲಿರುವ ಸಿನಿಮಾ ಮಾಡುತ್ತಲೇ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ತಮ್ಮ ಈಗ ಜೀವನದ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ರಾತ್ರಿ ಹೊತ್ತು ಆಟೋ ಓಡಿಸುತ್ತಿದ್ದೆ"
"ಚಿಕ್ಕಮಗಳೂರಿನಲ್ಲಿ ಆಟೋ ಓಡಿಸಿಕೊಂಡು ಕೂಲಿ ಕೆಲಸ ಮಾಡಿಕೊಂಡು ಇದ್ದೆ. ನಾನು ಮೊದಲು ಶುರು ಮಾಡಿದ್ದು ಶಾಮಿಲ್‌ನಲ್ಲಿ ದೊಡ್ಡ ದೊಡ್ಡ ರೀಪರ್ ಬರುತ್ತಲ್ಲ ಅದನ್ನು ಎತ್ತಿಕೊಂಡು ಹೋಗಿ ಗಾಡಿಗೆ ಲೋಡ್ ಮಾಡುತ್ತಿದ್ದೆ. ಅದಕ್ಕೆ 50 ರೂಪಾಯಿ ಕೊಡೋರು. ಒಂದು ಮರ ಬರೋದು ಅದರ ಶೀಟ್ ತೆಗೆದರೆ, ಎರಡು ರೂಪಾಯಿ ಕೊಡೋರು. ಅಲ್ಲಿಂದ ನಾನು ಕೆಲಸ ಶುರುಮಾಡಿದೆ. ಆಗ ನಾನು 8ನೇ ತರಗತಿ ಓದುತ್ತಿದ್ದೆ. ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಇದ್ದೆ. ಅದಾದ್ಮೇಲೆ ಒಂದು ಫರ್ನಿಚರ್ ಅಂಗಡಿಗೆ ಕೆಲಸಕ್ಕೆ ಸೇರಿಕೊಂಡೆ.ಆಟೋ ಗ್ಯಾರೇಜ್‌ಗೆ ಸೇರಿಕೊಂಡಿದ್ದೆ. ಅಲ್ಲಿ 10 ರೂಪಾಯಿ ಕೊಡೋರು. ಯಾರಾದರೂ ತಿಂಡಿಗೆ ಅಂತ ಕೊಡೋರು. ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡಿದೆ. 2500 ರೂಪಾಯಿ ಮೊದಲ ಸಂಬಳ. ಆಮೇಲೆ ನಂದೇ ಏನಾದರೂ ಒಂದು ಮಾಡೋಣ ಅಂದುಕೊಂಡು ಆಟೋ ಓಡಿಸುತ್ತಿದೆ. ಡೇನಲ್ಲಿ ಬಾಡಿಗೆ ಕಡಿಮೆ ಅಂತ ರಾತ್ರಿ ಆಟೋ ಓಡಿಸುತ್ತಿದ್ದೆ. ಮತ್ತೆ ಗ್ಯಾಪ್‌ನಲ್ಲಿ ಬಂದು ಗ್ಯಾಸ್‌ಗೆ ಆಗುತ್ತೆ ಅಂತ ಬೆಳಗ್ಗೆ ಆಟೋ ಓಡಿಸಿದ್ದೂ ಇದೆ. ಇಂದಿಗಿಂತ ಅಂದಿನ ಲೈಫ್ ತುಂಬಾನೇ ಚೆನ್ನಾಗಿತ್ತು."
"ದರ್ಶನ್ ಸರ್ ಹೋಲುತ್ತೇನೆ ಅಂದುಕೊಂಡಿರಲಿಲ್ಲ"
"ನಾನು ದರ್ಶನ್ ಸರ್ ಅನ್ನು ಹೋಲುತ್ತೇನೆಂದು ಸತ್ಯವಾಗಲೂ ನನಗೆ ಅನಿಸಿಯೇ ಇಲ್ಲ. ನಾನು ಈ ರೀತಿ ಇದ್ದೀನಿ. ಹೀಗೆ ಕಾಣಿಸುತ್ತಿದ್ದೀನಿ ಅನಿಸಲಿಲ್ಲ. ಫ್ರೆಂಡ್ಸ್ ನೀನು ಸ್ವಲ್ಪ ಹಾಗೇ ಕಾಣಿಸುತ್ತಿದ್ದೀಯ ಅಂತ ಹೇಳುತ್ತಿದ್ದರು. ಆಗ ಟಿಕ್ ಟಾಕ್ ಶುರುವಾಗಿತ್ತು. ಹುಡುಗರು ಎಲ್ಲಾ ಸೇರಿಕೊಂಡು ಟಿಕ್ ಟಾಕ್ ಶುರು ಮಾಡಿದಾಗ ಮೂರು ವಿಡಿಯೋ ಮಾಡಿದ್ವಿ. ಆಗ ಜನರು ದರ್ಶನ್ ಸರ್ ಅವರಂತೆ ಕಾಣಿಸುತ್ತಾನೆ ಅಂದರು. ಅಲ್ಲಿವರೆಗೂ ನನಗೆ ಗೊತ್ತೇ ಇರಲಿಲ್ಲ."

ಮಜಾಭಾರತದ ಎಂಟ್ರಿ ಹೇಗಾಯ್ತು?
"ಸುತ್ತಾ ಕ್ಯಾಮರಾ ಲೈಟ್ಸ್ ಇತ್ತು. ನನಗೆ ಏನು ಮಾಡಬೇಕು ಅಂತಾನೇ ಗೊತ್ತಿಲ್ಲ. ನಾನು ಆಕ್ಟಿಂಗ್ ಕಲಿತಿಲ್ಲ. ಆಟೋ ಡ್ರೈವರ್, ಕೂಲಿ ಕೆಲಸ ಮಾಡಿದ್ದವನು. ನಾನು ಡೈರೆಕ್ಟರ್ ಅವರನ್ನು ಕೇಳಿದೆ. ನಾನು ಏನು ಮಾಡಲಿ ಅಂದೆ? ಅವರು ಏನಿಲ್ಲ, ನಾನು ಡೋರ್ ಓಪನ್ ಮಾಡುತ್ತೇನೆ. ನೀನು ಬಾ ಅಂದರು. ಎಲ್‌ಇಡಿ ಓಪನ್ ಆಯ್ತು. ಇತ್ತ ರಚಿತಾ ರಾಮ್ ಅವರು, ಗುರು ಸರ್ ಎಲ್ಲಾ ಇದ್ದರು. ನಾನು ಏನು ಮಾಡುತ್ತಿದ್ದೇನೆ ಅನ್ನೋದು ಗೊತ್ತಿರಲಿಲ್ಲ. ರಚಿತಾ ರಾಮ್ ಮೇಡಂ ಸ್ಟೇಜ್ ಮೇಲೆ ಬಂದಿದ್ದು, ಅವರು ದರ್ಶನ್ ಸರ್ ತರಾನೇ ಕಾಣುತ್ತಿದ್ದೀಯಾ ಅಂತ ಹೇಳಿದರು. ಅಮೇಲೆ ಶುರುವಾಯ್ತು. ಒಂದು ದಿನಕ್ಕೆ ಬೇಡ ನೀನು. ಪೂರ್ತಿ ಇರು ಅಂತ ಹೇಳಿದರು"
ಒಂದು ದಿನಕ್ಕೆ ಬಂದವರು, ಒಂದೂವರೆ ವರ್ಷ ಆಯ್ತು
"ಒಂದು ದಿನಕ್ಕೆ ಅಂತ ಕರೆದವರು ಒಂದೂವರೆ ವರ್ಷ ಆಯ್ತು. ಕಲರ್ಸ್ ಕನ್ನಡ ಆಯ್ತು. ಆಮೇಲೆ ಕಲರ್ಸ್ ಸೂಪರ್ ಆಯ್ತು. ನನಗೆ ಏನಂದರೆ ಏನೂ ಗೊತ್ತಿಲ್ಲ. ಚಿಕ್ಕದಾಗಿ ಆಕ್ಟ್ ಮಾಡುವುದಕ್ಕೆ ಗೊತ್ತಿಲ್ಲ. ಸಣ್ಣದೊಂದು ಎಕ್ಸ್‌ಪ್ರೆಷನ್ ಕೊಡುವುದಕ್ಕೂ ಗೊತ್ತಿಲ್ಲ. ಡೈಲಾಗ್ ಡಿಲೆವರಿ ಗೊತ್ತಿಲ್ಲ. ಆಕ್ಟಿಂಗ್ ಮಾಡುವುದೂ ಗೊತ್ತಿಲ್ಲ. ಕೊಟ್ಟಿರುವ ಡೈಲಾಗ್ ಅನ್ನು ಕಲಿತು ಹೇಳುತ್ತಾ ಹೋದೆ. ಎಲ್ಲಾ ಮೆಂಟರ್‌ಗಳು ಹೇಳಿಕೊಟ್ಟಿದ್ದಾರೆ. ಇವತ್ತಿಗೂ ಸಹಾಯ ಆಗುತ್ತಿದೆ."
ಫ್ಯಾಮಿಲಿ ನಡೆಸಲು ಆಟೋ ಓಡಿಸುತ್ತೇನೆ
"ಈ ಫೀಲ್ಡ್‌ನಲ್ಲಿ ಕಷ್ಟ ಇದ್ದೇ ಇರುತ್ತೆ. ಯಾಕಂದ್ರೆ, ನಾವು ಹೊಸಬರು. ಈಗೀಗ ಕಾಲಿಡುತ್ತಿದ್ದೇನೆ. ಪೇಮೆಂಟ್ ಅಂದರೆ, ನೂರು ರೂಪಾಯಿ ಕೆಲಸ ಮಾಡಿದರೆ, ಒಂದು ರೂಪಾಯಿ ಸಿಗುತ್ತೆ. ಇನ್ನೂ ಅಷ್ಟೂ ಕೊಡುತ್ತಿಲ್ಲ. ಯಾಕಂದ್ರೆ ಫ್ಯಾಮಿಲಿ ನೋಡಿಕೊಳ್ಳಬೇಕು. ಅದಕ್ಕಾಗಿಯೇ ನಾನು ಇವತ್ತೂ ಆಟೋ ಓಡಿಸುತ್ತೇನೆ. ಶೂಟಿಂಗ್ ಇದ್ದಾಗ ಶೂಟಿಂಗ್ ಮಾಡುತ್ತೇನೆ. ಇಲ್ಲದೇ ಇದ್ದಾಗ ಆಟೋ ಓಡಿಸುತ್ತೇನೆ. ಯಾರಿಗೂ ಗೊತ್ತಾಗಲ್ಲ. ಯಾರಾದರೂ ಕಂಡು ಹಿಡಿದರೆ ಪಾರ್ಟ್ ಟೈಮ್ ಮಾಡುತ್ತಿದ್ದೇನೆ ಎಂದು ಹೇಳುತ್ತೇನೆ."
ಕಲಾವಿದರೊಳಗೆ ನೂರು ನೋವಿರುತ್ತೆ
"ನಾನು ಡಿಫ್ರೆಷನ್‌ಗೆ ಹೋಗಿದ್ದೆ. ನಾನು ಇಲ್ಲಿಗೆ ಬಂದ್ಬಿಟ್ನಪ್ಪ ಅಂತ ಅನಿಸಿತ್ತು. ಯಾಕಂದ್ರೆ, ಆರ್ಟಿಸ್ಟ್‌ಗಳು ಕಲರ್‌ಫುಲ್ ಆಗಿ ಬಣ್ಣ ಹಚ್ಚಿಕೊಂಡು ಆಕ್ಟ್ ತುಂಬಾ ಚೆನ್ನಾಗಿ ಅನಿಸುತ್ತೆ. ಆದರೆ, ಅದರೊಳಗೆ ನೂರು ಪಟ್ಟು ನೋವು ಇರುತ್ತೆ. ಒಬ್ಬ ಮಿಡಲ್ ಕ್ಲಾಸ್‌ನಿಂದ ಬಂದವನು ಈ ರೀತಿ ಶೋ ಮಾಡುತ್ತೇನೆ ಅಂದುಕೊಂಡವನಿಗೆ ಅವತ್ತಿಗೆ ಮಾತ್ರ ಚೆನ್ನಾಗಿರುತ್ತೆ. ಅದು ಮುಗಿದ ಮೇಲೆ ಬೇರೆ ಏನು ಮಾಡೋಕೆ ಆಗುತ್ತೆ."


Click it and Unblock the Notifications











