"ಮೈಸೂರು ಮೈಸೂರಾಗಿರಲಿ" ಎಂದ 'ಮ್ಯಾಂಗೋ ಪಚ್ಚ'; ಅಲ್ಲಿನ ಜನತೆ ಥ್ಯಾಂಕ್ಯೂ ಎಂದ ಕಿಚ್ಚನ ಅಳಿಯ
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾರೆ. ಇಲ್ಲಿವರಗೂ 'ಮ್ಯಾಂಗೋ ಪಚ್ಚ' ಪಾಸಿಟಿವ್ ವೈಬ್ಸ್ ಅನ್ನು ಕೊಟ್ಟಿದೆ. ಸಿನಿಮಾ ತುಣುಕುಗಳು, ಹಾಡು ಸಿನಿಮಾ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಕಿಚ್ಚನ ಅಳಿಯ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬಹುದೆಂಬ ಸುಳಿವಂತೂ ಸಿಕ್ಕಿದೆ. ಇದನ್ನು ನಿಜ ಮಾಡೋದು ಸಿನಿಮಾ.
ಒಬ್ಬ ಹೀರೋಗೆ ಬೇಕಾದ ಹೈಟ್, ಪರ್ಸನಾಲಿಟಿ ಎಲ್ಲವೂ ಇದೆ. ಬೆಳ್ಳಿ ಪರದೆ ಮೇಲೆ ಸಂಚಿತ್ ಸಂಜೀವ್ ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋದರ ಮೇಲೆ ಅವರ ಭವಿಷ್ಯ ನಿರ್ಧಾರ ಆಗಲಿದೆ. 'ಮ್ಯಾಂಗೋ ಪಚ್ಚ'ದಲ್ಲಿ ಸಂಚಿತ್ ಲುಕ್ ಮತ್ತು ಮ್ಯಾನರಿಸಂ ನೋಡಿದರೆ, ಇವರು ಮಾಸ್ ಹೀರೋಗಳ ಸಾಲಿಗೆ ಸೇರಬಹುದೆಂದು ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ.

ಈಗ 'ಮ್ಯಾಂಗೂ ಪಚ್ಚ'ನ ಬಗ್ಗೆ ಯಾಕಿಷ್ಟು ಮಾತು ಅಂದರೆ, ಈ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಅರಮನೆ ನಗರಿ ಮೈಸೂರಿನಲ್ಲಿ ಮಾಡಲಾಗಿದೆ. ಅಲ್ಲಿನ ಜನರು, ಮಾತು, ಸಂಸ್ಕೃತಿ, ಅಲ್ಲಿನ ವಾತಾರಣಕ್ಕೆ ಸಂಚಿತ್ ಸಂಜೀವ್ ಫಿದಾ ಆಗಿದ್ದಾರೆ. ಅದೇ ನೆನಪಲ್ಲಿ ಅವರೇ ಮೈಸೂರಿನ ಬಗ್ಗೆ ಒಂದು ಕಾನ್ಸೆಪ್ಟ್ ಮಾಡಿ, ಶೂಟ್ ಮಾಡಿ ಮೈಸೂರಿನ ಜನತೆ ಥ್ಯಾಂಕ್ಯೂ ಅಂದಿದ್ದಾರೆ. 'ಮೈಸೂರು ಮೈಸೂರಾಗಿರಲಿ' ಎಂದಿದ್ದಾರೆ.
ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾಗಾಗಿ ಮೈಸೂರಿನಲ್ಲಿ ಸುಮಾರು 70 ದಿನಗಳನ್ನು ಕಳೆದಿದ್ದಾರೆ. ಹೀಗಾಗಿ ಮೈಸೂರು ಅವರಿಗೆ ತುಂಬಾನೇ ಇಷ್ಟ ಆದಂತೆ ಇದೆ. ಅದೇ ಕಾರಣಕ್ಕೆ ಅವರೇ ಕಾನ್ಸೆಪ್ಟ್ ಮಾಡಿ ಮೈಸೂರಿಗೆ ಹಾಗೂ ಅಲ್ಲಿನ ಜನರಿಗೆ ಧನ್ಯವಾದಗಳನ್ನು ಹೇಳುವುದಕ್ಕೆ ಒಂದು ಪುಟ್ಟ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿವೆ. ಈ ವಿಡಿಯೋದಲ್ಲಿ ಸಂಚಿತ್ ತಮಗಾದ ಮೈಸೂರಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
"ಮೈಸೂರು ರಾಜರು ಇರುವ ಊರು ಅಂತ ಕೇಳಿದ್ದೆ ಹೊರತು ನೋಡಿರಲಿಲ್ಲ. ಆ ಊರಿನ ಜನರು ಏನು ಅಂತ ಕೊತ್ತಿರಲಿಲ್ಲ. ಆ ಊರಿನ ಮಜಾ ಏನು ಅಂತ ಗೊತ್ತಿರಲಿಲ್ಲ. ಆ ಊರಿನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹುಡುಕಿಕೊಂಡು ಬಂದಿದ್ದ ಮೊದಲನೇ ಅವಕಾಶ ನನ್ನ ಮೊದಲನೇ ಸಿನಿಮಾ 'ಮ್ಯಾಂಗೋ ಪಚ್ಚ'. ಆಗ ಮೈಸೂರು ಒಂದು ಊರು ಆಗಿರಲಿಲ್ಲ. ನಾನು ಹುಟ್ಟಿ ಬೆಳೆದ ಮನೆಯ ರೀತಿ ಇತ್ತು. ನಾನು ನನ್ನ ತಂಡ 70 ದಿನ ಮೈಸೂರಿನ ಪ್ರತಿ ಗಲ್ಲಿಯಲ್ಲಿ ಶೂಟ್ ಮಾಡಿದ್ವಿ. ಇಂತಹ ಐತಿಹಾಸಿಕ ಜಾಗದಲ್ಲಿ ನಿಂತು ಇದರ ಕಥೆ ಏನು ಅಂತ ಯೋಚನೆ ಮಾಡಿದೆ. ಮೈಸೂರಿನ ಜನರು ಅದೆಷ್ಟೇ ಬ್ಯುಸಿ ಇದ್ದರೂ ಅವರ ಮುಖದ ಮೇಲಿನ ನಗು, ಅವರ ಸಂಸ್ಕೃತಿ ಏನು? ಪ್ರೀತಿ ಏನು? ಅಂತ ತಿಳಿಸಿಕೊಡ್ತು." ಎಂದು ಸಂಚಿತ್ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಈ ವಿಡಿಯೋದ ಕಾನ್ಸೆಪ್ಟ್ ಸಂಚಿತ್ ಅವರದ್ದಾದರೆ, ಅನಿಲ್ ಅನಿರುದ್ಧ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ತರುಣ್ ಕ್ಯಾಮರಾ ವರ್ಕ್ ಹಾಗೂ ಡಿಐ-ಕಲರಿಸ್ಟ್ ಆಗಿ ಯತೀಶ್ ವೈಡಿ ಕೆಲಸ ಮಾಡಿದ್ದಾರೆ. ವಿಡಿಯೋ ಕಂಪ್ಲೀಟ್ ಆಗಿ ಮೈಸೂರಿನ ಜನತೆಗೆ ಧನ್ಯವಾದಗಳನ್ನು ಅರ್ಪಿಸುವುದಾಗಿತ್ತು. "ಎಲ್ಲೋ ಒಂದು ಕಡೆ ರಾತ್ರಿಯಿಡಿ ಶೂಟಿಂಗ್ ಮಾಡುತ್ತಿದ್ದ ನಮಗೆ ಆ ಊರಿನ ಜಾಗ ಕೊಟ್ಟು, ಗಟ್ಟಿಯಾಗಿ ತಬ್ಬಿಕೊಂಡು, ನನ್ನ ಕಥೆಯ ಭಾಗ ಅಷ್ಟೇ ಅಲ್ಲ. ಅದೇ ನಮ್ಮ ಕಥೆ ಆಯ್ತು. ಆ ಕಥೆಯೊಳಗೆ ಬಿಟ್ಟುಕೊಂಡ ಇಡೀ ಮೈಸೂರಿನ ಜನತೆಗೆ ಥ್ಯಾಂಕ್ಯೂ." ಎಂದು ಹೇಳಿದ್ದಾರೆ.
ಇದರೊಂದಿಗೆ ಚಿಕ್ಕದೊಂದು ಸಂದೇಶವನ್ನು ನೀಡಿದ್ದಾರೆ. ಮೈಸೂರು ಮೈಸೂರಾಗಿಯೇ ಇರಲಿ ಎಂದಿದ್ದಾರೆ. "ಮ್ಯಾಂಗೊ ಪಚ್ಚ ಒಂದು ಸಿನಿಮಾ ಅಷ್ಟೇ ಅಲ್ಲ. ನನ್ನ ಮನೆ ಅಂತ ಕರೆಯೋ ಸುಂದರ ಮೈಸೂರಿಗೆ ನನ್ನ ಲವ್ ಲೆಟರ್. ಶೂಟ್ ಮಾಡಬೇಕಾದರೆ, ಯಾರೋ ಒಬ್ಬರು ಹೇಳಿದರು. ಮೈಸೂರಿನಲ್ಲಿ ಏನು ಇಲ್ಲಾ ಅಂದರೂ ನೆಮ್ಮದಿ ಇದೆ ಅಂತ. ನಿಜ ಆ ನೆಮ್ಮದಿ ಹಾಗೇ ಇರಲಿ. ಮೈಸೂರು ಮೈಸೂರಾಗಿರಲಿ" ಎಂದು ಸಂಚಿತ್ ಸಂಜೀವ್ ಸಂದೇಶ ಸಾರಿದ್ದಾರೆ.


Click it and Unblock the Notifications











