ಡಾಲಿ ಅಭಿಮಾನಿ ಈಗ ಹೀರೊ: ಮಾರ್ಗರೇಟ್ ಹಿಂದೆ ಬಿದ್ದ ರಾಮಾಚಾರಿಗೆ ನಟರಾಕ್ಷಸ ಸಾಥ್!
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಹೊಸಬರು ಸಿನಿಮಾ ಟೈಟಲ್ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈಗ ಇಂತಹದ್ದೇ ಒಂದು ಮಾಸ್ ಹಾಗೂ ಇಂಟ್ರೆಸ್ಟಿಂಗ್ ಟೈಟಲ್ ಇಟ್ಕೊಂಡು ಹೊಸ ಸಿನಿಮಾ ಸೆಟ್ಟೇರಿದೆ. ಅದಕ್ಕೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ.
ಹೊಸ ಪ್ರತಿಭೆಯ ಹೊಸ ಸಿನಿಮಾದ ಹೆಸರು 'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ'. ಈ ಎರಡೂ ಹೆಸರುಗಳನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆಯೋಕೆ ಸಾಧ್ಯವೇ ಇಲ್ಲ. ಹೌದು, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದಿದ್ದ ನಾಗರಹಾವು ಸಿನಿಮಾ ಎರಡು ಪ್ರಮುಖ ಪಾತ್ರಗಳಿವು. ರಾಮಾಚಾರಿ ಹಾಗೂ ಮಾರ್ಗರೇಟ್ ಪಾತ್ರಗಳು ಇಂದಿಗೂ ಪ್ರೇಕ್ಷಕರ ಫೇವರಿಟ್.

ಕನ್ನಡ ಚಿತ್ರರಂಗಕ್ಕೆ ರಾಮಾಚಾರಿ ಅನ್ನೋ ಹೆಸರು ಮತ್ತು ಟೈಟಲ್ ಎರಡೂ ಲಕ್ಕಿ. ಈ ಹಿಂದೆ ಇದೇ ಹೆಸರನ್ನು ಇಟ್ಕೊಂಡು ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿವೆ. ಕ್ರೇಜಿಸ್ಟಾರ್ ನಟಿಸಿದ 'ರಾಮಾಚಾರಿ', ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸಿನಿಮಾಗಳು ಬಾಕ್ಸಾಫೀಸ್ ಅನ್ನೇ ಚಿಂದಿ ಉಡಾಯಿಸಿವೆ.
ಈ ಸಿನಿಮಾಗೆ 'ನಾಗರಹಾವು' ಸ್ಪೂರ್ತಿ
ಈಗ ಸೆಟ್ಟೇರಿರುವ ಯುವ ಪ್ರತಿಭೆಯ ಸಿನಿಮಾ ಕೂಡ 'ನಾಗರಹಾವು' ಸಿನಿಮಾದ ಎರಡು ಪಾತ್ರಗಳಿಂದ ಸ್ಫೂರ್ತಿ ಪಡೆದಿದೆ. ಈ ಕಾರಣಕ್ಕೆ 'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ' ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ.
'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ' ಸಿನಿಮಾಗೆ ಕನ್ನಡದ ಯುವ ಪ್ರತಿಭೆ ಅಭಿಲಾಶ್ ನಾಯಕ. ಇನ್ನು ಮಾರ್ಗರೇಟ್ ಆಗಿ ಸೋನಲ್ ಮೊಂಥೆರೋ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ನಟರಾಕ್ಷಸ ಡಾಲಿ ಧನಂಜಯ್ ಅತಿಥಿಯಾಗಿ ಆಗಮಿಸಿ ಹೊಸ ತಂಡಕ್ಕೆ ಶುಭ ಕೋರಿದ್ದಾರೆ.

ಅಭಿಮಾನಿಯಾಗಿ ಪರಿಚಯ
ರಾಮಾಚಾರಿ ಪಾತ್ರದಲ್ಲಿ ನಟಿಸುತ್ತಿರುವ ಅಭಿಲಾಶ್ ಈ ಹಿಂದೆ ಡಾಲಿ ಧನಂಜಯ್ ಜೊತೆ ನಟಿಸಿದ್ದಾರೆ. 'ಬಡವ ರಾಸ್ಕಲ್', 'ಗುರುದೇವ್ ಹೊಯ್ಸಳ'ದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ 'ಕೆಜಿಎಫ್', 'ಲವ್ ಮಾಕ್ಟೇಲ್'ನಲ್ಲೂ ಅಭಿಲಾಶ್ ನಟಿಸಿದ್ದಾರೆ. ಆದರೆ, ಡಾಲಿಗೆ ಮಾತ್ರ ಈತ ಅಭಿಮಾನಿಯಾಗಿ ಪರಿಚಯ.
"ಅಭಿ 'ಬಡವ ರಾಸ್ಕಲ್', 'ಹೊಯ್ಸಳ'ದಲ್ಲಿ ಸಣ್ಣ ಪಾತ್ರ ಮಾಡಿದ್ದಾನೆ. ಆತ ಅಭಿಮಾನಿಯಾಗಿ ಪರಿಚಯ. ಈಗ ಹೀರೋ ಆಗುತ್ತಿದ್ದಾನೆ. ಸುಮಾರು ವರ್ಷಗಳ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು ಡಾಲಿ ಧನಂಜಯ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಇದೇ ವೇಳೆ "ಧನಂಜಯ್ ಅಣ್ಣ ಹೇಳಿಕೊಟ್ಟ ಮಾರ್ಗದರ್ಶನಲ್ಲಿ ನಾನು ನಡೆಯುತ್ತಿದ್ದೇವೆ. ಈಗ ಅವರು ನನ್ನ ಚಿತ್ರಕ್ಕೆ ಹಾರೈಸಿರುವುದು ಖುಷಿಕೊಟ್ಟಿದೆ" ಎಂದು ಹೀರೊ ಎಮೋಷನಲ್ ಆಗಿದ್ದಾರೆ.
ಸೋನಲ್ ಮೊಂಥೆರೋ ಹೀರೊಯಿನ್
'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ' ಸಿನಿಮಾಗೆ ಸೋನಲ್ ಮಾಂಥೆರೋ ಹೀರೊಯಿನ್. ಈ ಸಿನಿಮಾಗೆ ಗಿರಿಧರ್ ಕುಂಬಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. " ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡರಿ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೇ ಕಥೆ. ಮೇ 15ರಂದು ಶೂಟಿಂಗ್ ಶುರುವಾಗಲಿದೆ" ಎಂದು ನಿರ್ದೇಶಕ ಸಿನಿಮಾ ಮಾಹಿತಿ ಕೊಟ್ಟಿದ್ದಾರೆ.
ಅಂದ್ಹಾಗೆ, ಅಭಿಲಾಶ್ ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಅವಿನಾಶ್ ಮತ್ತು ರವಿಶಂಕರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹರೀಶ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತವಿದೆ.


Click it and Unblock the Notifications











