'ಮಾರ್ಟಿನ್' ಬಳಿಕ ಹೊಸ ಸಿನಿಮಾ; ಎಪಿ ಅರ್ಜುನ್ ಪಾಲಿಗೆ 'ಲಕ್ಷ್ಮಿಪುತ್ರ'ನಾಗ್ತಾರಾ ಚಿಕ್ಕಣ್ಣ?
ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ 'ಉಪಾಧ್ಯಕ್ಷ' ಮೂಲಕ ಹೀರೋ ಆಗಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಹೀರೋ ಆಗಿ ಚಿಕ್ಕಣ್ಣ ಗೆದ್ದಿದ್ದಾರೆ. ಚಿಕ್ಕಣ್ಣ ಕಾಮಿಡಿ ಟೈಮಿಂಗ್ ಸಿನಿಪ್ರಿಯರಿಗೆ ಬಲು ಇಷ್ಟ. ಯಾವುದೇ ಸಿನಿಮಾದಲ್ಲಿ ಚಿಕ್ಕಣ್ಣ ಇದ್ದರೂ, ಅಲ್ಲಿಗೆ ಕಾಮಿಡಿಗೇನು ಕೊರತೆ ಇರುವುದಿಲ್ಲ. ಇನ್ನು ಹೀರೋ ಆದರೆ, ಆ ಸಿನಿಮಾದಲ್ಲೂ ಭರಪೂರ ಹಾಸ್ಯ ಇದ್ದೇ ಇರುತ್ತೆ.
'ಉಪಾಧ್ಯಕ್ಷ' ಬಳಿಕ ಚಿಕ್ಕಣ್ಣ ಸೋಲೋ ಹೀರೋ ಆಗಿ ನಟಿಸಲು ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾವನ್ನು 'ಮಾರ್ಟಿನ್' ನಿರ್ದೇಶಕ ಎ ಪಿ ಅರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಎಪಿ ಅರ್ಜುನ್ ತಮ್ಮದೇ ನಿರ್ಮಾಣ ಸಂಸ್ಥೆ ಎಪಿ ಅರ್ಜುನ್ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಣ್ಣ ಹಾಗೂ ಎಪಿ ಅರ್ಜುನ್ ಕಾಂಬೋ ಹೇಗೆ ವರ್ಕ್ ಆಗುತ್ತೆ ಅನ್ನೋದು ಸದ್ಯಕ್ಕೆ ಕುತೂಹಲ.

ಎ ಪಿ ಅರ್ಜುನ್ ನಿರ್ದೇಶಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೇ ಬೆನ್ನಲ್ಲೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಬಾರಿ ನಿರ್ದೇಶನದ ಬದಲಾಗಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅದೂ ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್ ಚಿಕ್ಕಣ್ಣನಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ಅದುವೇ 'ಲಕ್ಷ್ಮಿಪುತ್ರ'. ಈ ಸಿನಿಮಾ ಇದೇ ತಿಂಗಳು ಮುಹೂರ್ತ ಕಾಣುತ್ತಿದೆ.
ಇದು ಎಪಿ ಅರ್ಜುನ್ ನಿರ್ಮಾಣದ ಮೂರನೇ ಸಿನಿಮಾ. ಈಗಾಗಲೇ ತಮ್ಮ ಎಪಿ ಅರ್ಜುನ್ ಫಿಲ್ಮಂಸ್ ಬ್ಯಾನರ್‌ನಿಂದ ವಿರಾಟ್ ನಟನೆಯ 'ಕಿಸ್', 'ಅದ್ಧೂರಿ ಲವರ್ಸ್' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈಗ ಚಿಕ್ಕಣ್ಣ ನಾಯಕಿನಾಗಿ ನಟಿಸಲಿರುವ 'ಲಕ್ಷ್ಮಿಪುತ್ರ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ಮೂರನೇ ಸಿನಿಮಾ.

'ಲಕ್ಷ್ಮಿಪುತ್ರ'ನಿಗೆ ಎಪಿ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಇವರದ್ದೇ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಎಸ್.ಸ್ವಾಮಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವೆಲ್ಲ ಮುಗಿದಿದ್ದು, ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ.
'ಲಕ್ಷ್ಮಿಪುತ್ರ' ಸಿನಿಮಾ ಮೂಲಕ ಚಿಕ್ಕಣ್ಣ ನ್ಯಾಚುರಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸಚಿವ ಸಂತೋಷ್ ಲಾಡ್ ಲಕ್ಷ್ಮೀಪುತ್ರ ಚಿತ್ರವನ್ನು ಅರ್ಪಿಸುತ್ತಿದ್ದು, ಗಿರೀಶ್ ಆರ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿದೆ. ಡಾ.ಕೆ.ರವಿ ವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ರಾಜೇಶ್ ರಾವ್ ಸಹ ನಿರ್ದೇಶನ ಮಾಡುತ್ತಿದ್ದಾರೆಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರುತ್ತೆ? 'ಲಕ್ಷ್ಮಿಪುತ್ರ' ಟೈಟಲ್ ಯಾಕೆ? ಇವರಿಗೆ ಹೀರೋಯಿನ್ ಯಾರು? ಅನ್ನೋದನ್ನು ಜನವರಿ 24ಕ್ಕೆ ಗೊತ್ತಾಗಲಿದೆ. ಈ ಸಿನಿಮಾ ಜನವರಿ 24ರಂದು ಸೆಟ್ಟೇರುತ್ತಿದ್ದು, ಕ್ಯಾಚಿ ಟೈಟಲ್ ಹಿಂದಿನ ರಹಸ್ಯ ಇನ್ನು ಕೆಲವೇ ಗೊತ್ತಾಗಲಿದೆ. ಅಂದೇ ಚಿಕ್ಕಣ್ಣನ ಲುಕ್ ಹೇಗಿರುತ್ತೆ ಅನ್ನೋದು ಗೊತ್ತಾಗಲಿದೆ.


Click it and Unblock the Notifications











