"ನಾನು ಸಾಯೋದಕ್ಕೆ ರೆಡಿಯಿಲ್ಲ ಅಂದ್ರು ಧ್ರುವ"; ಫ್ಲೈಟ್‌ನ ಕರಾಳ ಅನುಭವ ಬಿಚ್ಚಿಟ್ಟ ಮಾರ್ಟಿನ್ ತಂಡ!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್'. ಹಲವು ದಿನಗಳಿಂದ ಈ ಸಿನಿಮಾದ ಶೂಟಿಂಗ್ ನಡೆಯುತ್ತಲೇ ಇತ್ತು. ಮತ್ತೆ ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಒಂದಾಗಿದ್ದು, ಈಗಾಗಲೇ ರಿಲೀಸ್ ಆಗಿರೋ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೀಗ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿ ಮುಗಿದಿದೆ.
ಸಿನಿಮಾ ಮುಗಿಸಿದ ಖುಷಿಯಲ್ಲಿ 'ಮಾರ್ಟಿನ್' ತಂಡ ಇದೂವರೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದೆ. ಇದೇ ವೇಳೆ ಕೆಲವು ದಿನಗಳ ಹಿಂದಷ್ಟೇ ಸಾಂಗ್ ಶೂಟಿಂಗ್‌ಗೆ ಕಾಶ್ಮೀರಕ್ಕೆ ವಿಮಾನದಲ್ಲಿ ಪಯಣ ಬೆಳೆಸುವಾಗ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ, ನಿರ್ದೇಶಕ ಎ ಪಿ ಅರ್ಜುನ್ ಹಾಗೂ ಇಮ್ರಾನ್ ಸರ್ದಾರಿಯಾ ಕಹಿ ಘಟನೆಯನ್ನು ಮತ್ತೆ ಮೆಲುಕು ಹಾಕಿದ್ದಾರೆ.

ಧ್ರುವ ಸರ್ಜಾಗೆ ಫ್ಲೈಟ್ ಅಂದರೆ ಭಯ. ಇನ್ನೇನು ನಮ್ಮ ಕಥೆ ಮುಗೀತು ಅಂದುಕೊಂಡಿರುವಾಗಲೇ ವಿಮಾನ ಹತೋಟಿಗೆ ಬಂದಿತ್ತು. ಇಳಿದು ಹೊರಬರುತ್ತಿದ್ದಂತೆ ಧ್ರುವ ಸರ್ಜಾ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾಗೆ ಒಂದು ಮಾತು ಹೇಳಿದ್ದರು. "ನಾನು ಸಾಯೋದಕ್ಕೆ ರೆಡಿಯಿರಲಿಲ್ಲ." ಈ ಮಾತನ್ನು ಇಮ್ರಾನ್ ಸರ್ದಾರಿಯಾ ಮಾಧ್ಯಮಗಳ ಮುಂದೆ ಆ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ಧ್ರುವ ಸರ್ಜಾ ಕೂಡ ಫ್ಲೈಟ್‌ನಲ್ಲಾದ ಕಹಿ ಘಟನೆಯನ್ನು ನೆನೆದಿದ್ದಾರೆ. ಆ ವೇಳೆ ಧ್ರುವ ಮೈಂಡ್‌ನಲ್ಲಿ ಏನು ಓಡಾಡುತ್ತಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಮನುಷ್ಯ ಸತ್ತ ಮೇಲೆ ಅವನ ಬೆಲೆ ಗೊತ್ತಾಗುತ್ತೆ ಅಂತ ಹೇಳ್ತಾರಲ್ಲ. ನನ್ನ ಅನುಭವ ಏನು ಅಂದರೆ, ಮನುಷ್ಯ ಸಾಯಬೇಕಾದ್ರೆ, ಇಷ್ಟ ಪಟ್ಟವರ ಬೆಲೆ ಎಲ್ಲಾ ಗೊತ್ತಾಗುತ್ತೆ. ಇನ್ನೇನು ಎಂಡ್ ಆಯ್ತು ಅಂದಾಗ, ಎಲ್ಲಾರೂ ನೆನಪಾದ್ರು. ಹೆಂಡ್ತಿ, ಮಕ್ಕಳು, ತಂದೆ, ತಾಯಿ, ಅಂಕಲ್, ನನ್ನ ವಿಐಪಿಗಳು, ಸಾಕಷ್ಟು ಜನ ಗುರುಗಳು ಎಲ್ಲಾ ನೆನಪಾದ್ರು. ಅವರ ಬೆಲೆ ನನಗೆ ತುಂಬಾ ಚೆನ್ನಾಗಿ ಗೊತ್ತಾಯ್ತು." ಎಂದು ಧ್ರುವ ಹೇಳಿದ್ದಾರೆ.
ಹಾಗೇ ಸುಮಾರು 28 ನಿಮಿಷಗಳ ಕಾಲ ಫ್ಲೈಟ್ ಒಳಗೆ ಆದ ಕಹಿ ಘಟನೆಯಿಂದ ತಮ್ಮ ಕಥೆ ಮುಗೀತು ಅಂತಲೇ ಅಂದುಕೊಂಡಿದ್ದರು. "ಅಲ್‌ಮೋಸ್ಟ್ ಆಗಿ ಹೋಯ್ತು ಅಂತ ಅಂದ್ಕೊಂಡಿದ್ವಿ. ಅದೃಷ್ಟವಷಾತ್ ರೆಡಾರ್‌ನಿಂದ ಆಚೆ ಹೋಗಿದ್ದು ವಾಪಸ್ ಬಂದು ಕಂಟ್ರೋಲ್ ಸಿಕ್ಕು.. ಇದೊಂದು ಮಿರಾಕಲ್ ಅಂತ ಹೇಳಬಹುದು." ಎಂದು ಧ್ರುವ ಹೇಳಿದ್ದಾರೆ.

ಅಂದಿನ ವಿಮಾನ ಪ್ರಯಾಣದ ಕಂಪ್ಲೀಟ್ ಮಾಹಿತಿಯನ್ನು ನಿರ್ದೇಶಕ ಎಪಿ ಅರ್ಜುನ್ ಬಿಟ್ಟಿದ್ದಾರೆ. "ನಮ್ಮದು ಶ್ರೀನಗರ ಅನ್ನೋ ಪ್ಲಾನಿಂಗ್ ಇರಲಿಲ್ಲ. ಸಾಂಗ್ ಶೂಟ್ ಮಾಡಬೇಕು ಅಂದಾಗ, ರಾಜಸ್ಥಾನ್‌ನ ಜೈಪುರ್, ಇನ್ನೊಂದು ತಾಜ್ ಮಹಲ್, ಅಲ್ಲಿಂದ ಲೇ ಲಡಾಖ್ ಹೋಗ್ಬೇಕು ಅಂತ ಅಂದ್ಕೊಂಡಿದ್ವಿ. ಈ ಎರಡೂ ಕಡೆ ಶೂಟಿಂಗ್ ಮುಗಿಸಿದ್ವಿ. ಅಲ್ಲಿಂದ ದೆಹಲಿ ಬಂದು ಇಳಿದಿದ್ವಿ. ನೈಟ್ ಅಲ್ಲೇ ಇದ್ದು 8.30ಕ್ಕೆ ವಿಮಾನವಿತ್ತು. ಲೇಟ್ ಆಗಿತ್ತು. ಆಗ ಧ್ರುವದು ಇನ್ನೇನು ಫ್ಲೈಟ್ ಮಿಸ್ ಆಗುವಂತಹ ಸನ್ನಿವೇಶ. ಧ್ರುವ ಲೇಟ್ ಆಗಿ ಬಂದೂ ಫ್ಲೈಟ್ ಡಿಲೇ ಆಗಿದ್ದರಿಂದ ಟೇಕಾಫ್ ಆಗುತ್ತೆ ಅಂತ ಕಾದಿದ್ವಿ, ಆದರೆ ಫ್ಲೈಟ್ ಕ್ಯಾನ್ಸಲ್ ಅಂದರು. ಆಗ ಶ್ರೀನಗರಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ವಿ." ಎಂದು ಆ ದಿನ ಸನ್ನಿವೇಶವನ್ನು ನೆನೆದಿದ್ದಾರೆ.
ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಶ್ರೀನಗರಕ್ಕೆ ಹೋಗಬೇಕಿದ್ದ ವಿಮಾನ ಗಾಳಿಪಟದಂತೆ ಹಾರಾಡುತ್ತಿತ್ತು ಎಂದಿದ್ದಾರೆ. "ನಾವು ಮೂವತ್ತು ಜನ ಇದ್ವಿ. 14 ಜನ ಒಂದು ಫ್ಲೈಟ್‌ಗೆ ಹೋದ್ರು. ನಾನು ಧ್ರುವ ಎಲ್ಲಾ ಇನ್ನೊಂದು ಫ್ಲೈಟ್‌ಗೆ ಹೋದ್ವಿ. ನನಗೆ ಯಾವಾಗಲೂ ಇಂತಹ ಅನುಭವ ಆಗಿಲ್ಲ. ನಾನು 22 ನಿಮಿಷ ಜೀವನ ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆವು. ಒಳ್ಳೆ ಗಾಳಿಪಟ ಹಾರಾಡಿದ ಹಾಗೆ ಆಗ್ತಿತ್ತು. ಹೀರೋಯಿನ್ ಅಂತೂ ಅವರ ಅಪ್ಪ ಅಮ್ಮನಿಗೆ ನನ್ನಿಂದ ಏನಾದ್ರೂ ತಪ್ಪಾಗಿದ್ದರೆ ಕ್ಷಮಿಸಿ ಅಂತ ಮೆಸೇಜ್ ಕೂಡ ಹಾಕಿ ಅಳುತ್ತಿದ್ದರು. ಫ್ಲೈಟ್‌ನಲ್ಲಿ ಇರುವವರದ್ದು ಯಾರದ್ದೋ ಆಯಸ್ಸು ಗಟ್ಟಿಯಾಗಿತ್ತು ಅನಿಸುತ್ತೆ. ಇವತ್ತು ನಿಮ್ಮ ಮುಂದೆ ಕೂತು ಮಾತಾಡುತ್ತಿದ್ದೇವೆ." ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


Click it and Unblock the Notifications











