ಮೊದಲ ಲವ್ ವಿಫಲ.. ವಿಚ್ಛೇದನ.. 2ನೇ ಮದುವೆ.. 2 ವರ್ಷದ ಮಗು: 'ಮಠ' ಗುರುಪ್ರಸಾದ್‌ಗೆ ಇದೆಲ್ಲ ಬೇಕಿತ್ತಾ?
'ಮಠ' ಗುರುಪ್ರಸಾದ್ ಎಲ್ಲಿ ಕಾಣಿಸುತ್ತಲೇ ಇಲ್ಲ. ಸಿನಿಮಾ ಬಗ್ಗೆ ಸುದ್ದಿಯಿಲ್ಲ. ಹೊಸ ಪ್ರಾಜೆಕ್ಟ್ ಬಗ್ಗೆ ಸುಳಿವಿಲ್ಲ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ತಮ್ಮ ಬದುಕಿನ ಕೆಲವು ಸಂಗತಿಗಳ ಬಗ್ಗೆ ಬಾಯಿಬಿಟ್ಟಿದ್ದಾರೆ.
'ಮಠ', 'ಎದ್ದೇಳು ಮಂಜುನಾಥ'ದಂತಹ ಸೂಪರ್ ಹಿಟ್ ಕೊಟ್ಟಿರೋ ಗುರುಪ್ರಸಾದ್ ನಿರಂತರವಾಗಿ ಯಾಕೋ ಸಿನಿಮಾ ಮಾಡುತ್ತಿಲ್ಲ. ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರೂ, ಆ ಸಿನಿಮಾಗಳ ಬಗ್ಗೆ ಸುಳಿವಿಲ್ಲ.

ಈ ಮಧ್ಯೆ ಗುರುಪ್ರಸಾದ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಗುರುನಂದ್ ನಟಿಸಿರುವ 'ರಾಜು ಜೇಮ್ಸ್ ಬಾಂಡ್' ಸಿನಿಮಾದ ಬೇಕಿತ್ತಾ ಬೇಕಿತ್ತಾ ಹಾಡಿನ ಬಗ್ಗೆ ಮಾತಾಡುವಾಗ ತಮ್ಮ ವಿಚ್ಛೇದನ, ಎರಡನೇ ಮದುವೆ, ಮಗುವಿನ ಬಗ್ಗೆ ರಿವೀಲ್ ಮಾಡಿದ್ದಾರೆ.
ಗುರುಪ್ರಸಾದ್‌ಗೆ ಇದು ಬೇಕಿತ್ತಾ?
ಸ್ಯಾಂಡಲ್‌ವುಡ್‌ನ ಕಂಟೆಂಟ್ ಡೈರೆಕ್ಟರ್ ಗುರುಪ್ರಸಾದ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಗುರುಪ್ರಸಾದ್ ಎರಡನೇ ಮದುವೆ ಬಗ್ಗೆ ಮಾತಾಡಿದ್ದರು. ಈ ಬೆನ್ನಲ್ಲೇ ಈಗ ಮತ್ತೊಂದು ವಿಡಿಯೋ ಹರಿದಾಡುತ್ತಿದ್ದು, ಇದರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ಎರಡನೇ ಮದುವೆ ಬಗ್ಗೆ ಮಾತಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ಗುರುಪ್ರಸಾದ್, " ಈ ಹಾಡಿನ ಬಗ್ಗೆ ಇನ್ನೊಂದು ವಿಶೇಷವಿದೆ. ನನ್ನ ಜೀವನವನ್ನು ಇಟ್ಟುಕೊಂಡೇ ದೀಪಕ್ ಮಧುವನಹಳ್ಳಿ ಬರೆದಂತೆ ಇದೆ." ಎಂದು ನಿರ್ದೇಶಕ ಗುರುಪ್ರಸಾದ್ 'ರಾಜು ಜೇಮ್ಸ್ ಬಾಂಡ್' ಸಿನಿಮಾದ ಬಗ್ಗೆ ಮಾತಾಡಿದ್ದಾರೆ.
ಗುರುಪ್ರಸಾದ್ ವಿಡಿಯೋದಲ್ಲೇನಿದೆ?
'ರಾಜು ಜೇಮ್ಸ್ ಬಾಂಡ್' ಸಿನಿಮಾದ ಬೇಕಿತ್ತಾ ಹಾಡನ್ನು ನೋಡಿ ನಿರ್ದೇಶಕ ಮಠ ಗುರುಪ್ರಸಾದ್ ಖುದ್ದು ಮಾತನಾಡಿದ್ದಾರೆ. ಈ ಹಾಡು ನನ್ನ ಬದುಕಿಗೆ ತೀರಾ ಹತ್ತಿರವಾಗಿ ಎನ್ನುತ್ತಾ ಮೊದಲ ಲವ್, ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಬಾಯ್‌ಬಿಟ್ಟಿದ್ದಾರೆ.
"ನೋಡಿ ನನಗೆ ಮೊದಲನೇ ಲವ್ ವಿಫಲ ಆಯ್ತು. ವಿಫಲ ಆಗಿ ಡಿವೋರ್ಸ್ ಕೂಡ ಆಗುತ್ತಿದೆ. ಹಾಗೆ ನೋಡಿದರೆ, ನನ್ನ ಈ ಪರಿಸ್ಥಿತಿಗೆ ಈ ಹಾಡು ಯೋಗ್ಯ ಅಂತ ಅನಿಸುತ್ತೆ. ಇಷ್ಟು ಆದ್ಮೇಲೆ ಮುಚ್ಕೊಂಡು ಇರಬೇಕಿತ್ತಲ್ವಾ? ಇನ್ನೊಂದು ಮದುವೆಯಾದೆ. ಎರಡು ವರ್ಷದ ಮಗುನೂ ಇದೆ. ಇದೆ ಬೇಕಿತ್ತಾ? ಅನಿಸುತ್ತೆ" ಎಂದು ಗುರುಪ್ರಸಾದ್ ವಿಡಿಯೋದಲ್ಲಿ ಹೇಳಿದ್ದಾರೆ.
ವೈರಲ್ ಆಗುತ್ತಿದೆ ಬೇಕಿತ್ತಾ ಬೇಕಿತ್ತಾ?
'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ನಟಿಸುತ್ತಿರುವ ಹೊಸ ಸಿನಿಮಾ 'ರಾಜು ಜೇಮ್ಸ್ ಬಾಂಡ್'. ಈ ಸಿನಿಮಾದ ಮೊದಲ ಹಾಡು ಬೇಕಿತ್ತಾ ಬೇಕಿತ್ತಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದು, ಅನೂಪ್ ಸೀಳಿನ್ ಟ್ಯೂನ್ ಹಾಕಿ, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ.
ಬಹಳ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಎಣ್ಣೆ ಸಾಂಗ್ ಬಂದಿರಲಿಲ್ಲ. ಈಗ ಈ ಸಿನಿಮಾ ಮೂಲಕ ಮತ್ತೊಂದು ಎಣ್ಣೆ ಹಾಡು ಬಂದಿದೆ. ಈ ಹಾಡು ಕೂಡ ಸಿನಿಪ್ರಿಯರಿಗೆ ಇಷ್ಟ ಆಗುತ್ತಿದೆ. ಮಂಜುನಾಥ್ ವಿಶ್ಚಕರ್ಮ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುನಂದನ್ ಜೊತೆ ಮೃದುಲಾ, ರವಿಶಂಕರ್, ಅಚ್ಚುತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲಾ ಸೇರಿದಂತೆ ಹಲವು ನಟಿಸಿದ್ದಾರೆ.


Click it and Unblock the Notifications











