ಒಂದೇ ನಿರ್ಮಾಣ ಸಂಸ್ಥೆಯಲ್ಲಿ ಮೂರು ಸಿನಿಮಾಗಳು ಒಟ್ಟೊಟ್ಟಿಗೆ ಶುರು; ಟೈಟಲ್‌ಗಳೇನು?
ಸಾಮಾನ್ಯವಾಗಿ ನಿರ್ಮಾಣ ಸಂಸ್ಥೆಗಳು ಒಮ್ಮೆಗೆ ಒಂದೇ ಸಿನಿಮಾವನ್ನು ನಿರ್ಮಿಸುವುದಕ್ಕೆ ಕೈ ಹಾಕುತ್ತವೆ. ಸಿನಿಮಾ ಬಿಡುಗಡೆಯಾಗುವವರೆಗೂ ಇನ್ನೊಂದು ಪ್ರಾಜೆಕ್ಟ್‌ಗಳಿಗೆ ತಯಾರಿ ನಡೆಸುತ್ತಿರುತ್ತೆ. ಅದರಲ್ಲೂ ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ನಿರ್ಮಾಣ ಸಂಸ್ಥೆಗಳು ಸಿನಿಮಾ ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತವೆ. ಅಂತಹದರಲ್ಲಿ ಇಲ್ಲೊಂದು ಸಂಸ್ಥೆ ಮೂರು ಸಿನಿಮಾಗಳನ್ನು ಏಕಕಾಲಕ್ಕೆ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ.
ಮ್ಯಾಟ್ರಿಕ್ ಮೂವೀ ಮೇಕರ್ಸ್ ಸಂಸ್ಥೆಯ ಮಾಲೀಕರಾದ ಅರುಣ್ ಕುಮಾರ್ ಮೂರು ಸಿನಿಮಾಗಳನ್ನು ಏಕಕಾಲಕ್ಕೆ ನಿರ್ಮಾಣ ಮಾಡುತ್ತಿದ್ದಾರೆ. ಆ ಮೂರು ಸಿನಿಮಾಗಳು ಯಾವುದೆಂದರೆ, ಕೀರ್ತಿ ಕೃಷ್ಣ ನಿರ್ದೇಶನ ಮಾಡುತ್ತಿರುವ 'ಸೀತಾ ರಾಮ ರಾಜು', ಸ್ವಸ್ತಿಕ್ ನಿದೇಶನದ 'ದರ್ಶನ' ಹಾಗೂ ಕುಮಾರ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾಗೆ ಮುಹೂರ್ತ ನಡೆದಿದೆ.

ಇನ್ನು ಈ ಮೂರು ಸಿನಿಮಾಗಳಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಅನ್ನೋದನ್ನು ನೋಡುವುದಾರೇ, 'ಸೀತಾರಾಮ ರಾಜು' ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತೀಕ್ ಮಹೇಶ್ ಹೀರೋ. ಹಾಗೇ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ. ಇವರೊಂದಿಗೆ ಆರ್ಮುಗಂ ರವಿಶಂಕರ್, ಜಗಪ್ಪ, ಮಹಾನಟಿ ಖ್ಯಾತಿಯ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಸುತ್ತ ನಡೆಯುವ ಕಥೆಯಿದು ಎಂದು ನಿರ್ದೇಶಕ ಕೀರ್ತಿ ಕೃಷ್ಣ ಹಿಂಟ್ ಕೊಟ್ಟಿದ್ದಾರೆ.
ಮೂರು ಸಿನಿಮಾಗಳನ್ನು ಒಟ್ಟೊಟ್ಟಿಗೆ ನಿರ್ಮಾಣ ಮಾಡುತ್ತಿರುವುದಕ್ಕೆ ನಿರ್ಮಾಪಕ ಅರುಣ್ ಕುಮಾರ್ ಕಾರಣ ಕೊಟ್ಟಿದ್ದಾರೆ. "ನಮಗೆ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು. ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ" ಎಂದರೆ, ಸಹ ನಿರ್ಮಾಪಕಿ ಭವ್ಯಾ ಅರುಣ್‌ಕುಮಾರ್ "ಹಲವಾರು ವರ್ಷದಿಂದ ಸುಮಾರು ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಈ ಮೂರು ಕಥೆಗಳು ನಮಗೆ ತುಂಬಾ ಹಿಡಿಸಿದವು. ಹಾಗಾಗಿ ಈಗ ಪ್ರಾರಂಭಿಸಿದ್ದೇವೆ" ಎನ್ನುತ್ತಾರೆ.
ಇನ್ನೂ ನಾಯಕನಾಗಿ ನಟಿಸುತ್ತಿರುವ ಕಾರ್ತಿಕ್ ಮಹೇಶ್ "ಒಂದೇ ದಿನ 3 ಸಿನಿಮಾ ಪ್ರಾರಂಭಿಸುವುದು ಸುಲಭದ ಮಾತಲ್ಲ. ನನಗೆ ತುಂಬಾ ಕಾಡಿದಂತಹ ಕಥೆ ಇದು. ಒಂದು ಸುಂದರವಾದ ಲವ್ ಸ್ಟೋರಿಯೂ ಇದರಲ್ಲಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ನಾಯಕಿ ಪ್ರಿಯಾಂಕಾ ಕುಮಾರ್ ಕೂಡ "ಇದೊಂದು ಎಮೋಷನಲ್ ಲವ್‌ಸ್ಟೋರಿ, ನನ್ನ ಪಾತ್ರಕ್ಕೆ ತುಂಬಾ ಲೇರ‍್ಸ್ ಇದೆ" ಎಂದು ಪಾತ್ರದ ಬಗ್ಗೆ ಹಂಚಿಕೊಂಡಿದ್ದಾರೆ.
ಹಾಗೇ ನಟ ರವಿಶಂಕರ್ ಮಾತನಾಡಿ, "ನಿರ್ದೇಶಕ ಕೀರ್ತಿ ಹಾರ್ಡ್ ವರ್ಕ್ ಮಾಡೋ ಹುಡುಗ, ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ಕೆಲವು ಸೀನ್‌ಗಳನ್ನು ನನಗೆ ಹೇಳಿದ್ದಾರೆ. ಡೈಲಾಗ್‌ಗಳೂ ಅದ್ಭುತವಾಗಿವೆ" ಎಂದು ಖುಷಿ ಪಟ್ಟಿದ್ದಾರೆ. ಇನ್ನು ಈ ಸಿನಿಮಾ ಕ್ರಾಂತಿ ಕುಮಾರ್ ಸಂಭಾಷಣೆ, ರಾಘವೇಂದ್ರ ವಿ. ಸಂಗೀತ ನಿರ್ದೇಶಕ ಹಾಗೂ ಅಭಿಲಾಶ್ ಕಳತಿ
'ಸೀತಾರಾಮ ರಾಜು' ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.
ಇನ್ನು ಸ್ವಸ್ತಿಕ್ ನಿದೇಶನದಲ್ಲಿ ಮೂಡಿಬರುತ್ತಿರುವ 'ದರ್ಶನ' ಸಿನಿಮಾ ಕೂಡ ಮುಹೂರ್ತ ಕಂಡಿದೆ. ಈ ಸಿನಿಮಾಗೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ನಿಶಾ ರವೀಂದ್ರ ಕಾಣಿಸಿಕೊಳ್ಳಲಿದ್ದಾರೆ." ಇದೊಂದು ಕಾಮಿಡಿ ಡ್ರಾಮಾ ಜಾನರ್ ಸಿನಿಮಾ. ಇದು ನನ್ನ ಪ್ರಥಮ ಪ್ರಯತ್ನ ಕೂಡ ಹೌದು. ಕಥೆ ಕೇಳಿ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ಅರುಣ್ ಕುಮಾರ್ ಹಾಗೂ ಭವ್ಯಾ ಮೇಡಂಗೆ ಕೃತಜ್ಞತೆಗಳು. ಬೆಂಗಳೂರು ಸುತ್ತಮುತ್ತ ನಮ್ಮ ಚಿತ್ರದ ಚಿತ್ರೀಕರಣ ನಡೆಯಲಿದೆ. ಗೌರವ ಶೆಟ್ಟಿ , ಸಂತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳ 8 ರಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ" ಎಂದು ನಿರ್ದೇಶಕ ಸ್ವಸ್ತಿಕ್ ಮಾಹಿತಿ ಹಂಚಿಕೊಂಡಿದ್ದಾರೆ.
ನಾಯಕನಾಗಿ ನಟಿಸುತ್ತಿರುವ ಪೃಥ್ವಿ ಅಂಬಾರ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರೆ, ನಾಯಕಿ ನಿಶಾ ರವೀಂದ್ರ "ಈ ಸಿನಿಮಾದಲ್ಲಿ ನಾನು ಪ್ರೀತಿ ಎಂಬ ಕ್ಯೂಟ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ" ಎನ್ನುತ್ತಾರೆ. ನಟ ತಬಲಾನಾಣಿ ಈ ಸಿನಿಮಾದಲ್ಲಿ ಬಂಗಾರಪ್ಪ ಅನ್ನೋ ಪಾತ್ರದಲ್ಲಿ ನಟಿಸುತ್ತಿದ್ದಾರೆ. "ನಾನು ಬಂಗಾರಪ್ಪ ಎಂಬ ಪಾತ್ರ ಮಾಡುತ್ತಿದ್ದು, ನನಗೆ ಇಬ್ಬರು ಹೆಣ್ಣು ಮಕ್ಕಳು ಎಂದು ಪಾತ್ರದ ಬಗ್ಗೆ ಹೇಳಿದ್ದಾರೆ.
ಇದೇ ವೇದಿಕೆಯಲ್ಲಿ ಲವ್‌ಯು ಮುದ್ದು ಖ್ಯಾತಿಯ ನಿರ್ದೇಶಕ ಕುಮಾರ್ ನಿರ್ದೇಶನದ ಸಿನಿಮಾಗೂ ಚಾಲನೆ ಸಿಕ್ಕಿದೆ. ಈ ಸಿನಿಮಾದಲ್ಲೂ ನಟ ತಬಲಾನಾಣಿ ಅವರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವಿನ್ನೂ ಪ್ರಾಥಮಿಕ ಹಂತದಲ್ಲಿದ್ದು, ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಿದೆ. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕುಮಾರ್ "ಎದ್ದೇಳು ಮಂಜುನಾಥ ಚಿತ್ರದಲ್ಲಿ ತಬಲಾನಾಣಿ ಅವರ ಪಾತ್ರ ನನ್ನ ಮನಸನ್ನು ತುಂಬಾ ದಿನಗಳಿಂದ ಕಾಡುತ್ತಿತ್ತು. ಅದೇ ಪಾತ್ರವನ್ನು ಈ ಚಿತ್ರದಲ್ಲೂ ಮುಂದುವರೆಸುತ್ತಿದ್ದೇವೆ. ಆದರೆ, ಆ ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಧವಿಲ್ಲ. ಆ ಪಾತ್ರದ ಸುತ್ತ ನಡೆಯುವ ಕಥೆಯಿದು. ಪ್ರೇಕ್ಷಕರನ್ನು ನಗಿಸಲೇಬೇಕು ಅಂತ ಮಾಡುತ್ತಿರುವ ಸಿನಿಮಾ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications