ಮದುವೆ ಮನೆಯೊಳಗೆ ನಡೆಯೋ ಕಥೆಯೇ 'ಶುಭಮಂಗಳ'
'ಶುಭಮಂಗಳ' ಅನ್ನೋ ಟೈಟಲ್ ಕೇಳಿದ್ರೆ ಸಾಕು ಮೊದಲಿಗೆ ನೆನಪಾಗೋದು ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇವರೇ ನಿರ್ದೇಶಿಸಿದ ಜನಮೆಚ್ಚಿದ ಸಿನಿಮಾದ ಟೈಟಲ್ ಈಗ ಮರುಬಳಕೆಯಾಗುತ್ತಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಆಗಿದ್ದು, ಬಿಡುಗಡೆಗೂ ಸಜ್ಜಾಗಿದೆ.
ಹಾಗಂತ ಹಳೆಯ ಸಿನಿಮಾಗಳ ಟೈಟಲ್‌ಗಳನ್ನು ಮತ್ತೆ ಬಳಸಿಕೊಳ್ಳೋದು ಹೊಸದೇನಲ್ಲ. ಆಗಾಗ ಈ ಪ್ರಯತ್ನ ನಡೆಯುತ್ತಲೇ ಇರುತ್ತೆ. ಈ ಪ್ರಯತ್ನದ ಅಂಗವಾಗಿಯೇ 'ಶುಭ ಮಂಗಳ' ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ.
ಅಂದ್ಹಾಗೆ ಹೊಸ ಶುಭ ಮಂಗಳ ಮದುವೆ ಮನೆಯಲ್ಲಿ ನಡೆಯುವ ಕಥೆ. ಮದುವೆ ಮನೆಗೆ ಹೋದಾಗ ಅಲ್ಲಿ ನಡೆಯೋ ಎಮೋಷನಲ್, ಡ್ರಾಮಾ ಸೇರಿದಂತೆ ಹಲವು ಸನ್ನಿವೇಶಗಳು ಕಣ್ಮುಂದೆ ಕಾಣುತ್ತೆ. ಅಂತಹ ಕಥೆಗಳಲ್ಲಿ ಐದು ಕಥೆಗಳನ್ನು ಆಯ್ಕೆ ಮಾಡಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ಪುರುಷರು ಹಾಗೂ ಮಹಿಳೆಯ ಕಲಾವಿದರಿಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸಂತೋಷ್ ಗೋಪಾಲ್ ಈ ವಿನೂತನ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ.

ಸಂತೋಷ್ ಗೋಪಾಲ್ ಈಗಾಗಲೇ ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಆದರೆ. ನಿರ್ದೇಶಕರಾಗಿ ಇದು ಮೊದಲ ಸಿನಿಮಾ. ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನುಇಟ್ಟುಕೊಂಡು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
'ಶುಭಮಂಗಳ' ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಸೇರಿದಂತೆ ಹಲವರು ನಟಿಸಿದ್ದಾರೆ.

ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ ರಾಜ್ ಕ್ಯಾಮೆರಾ ವರ್ಕ್ ಇದೆ. ಸಂತೋಷ್ ನಿರ್ದೇಶನದ ಜೊತೆಗೆ ಎಡಿಟಿಂಗ್ ಕೂಡ ಮಾಡಿದ್ದಾರೆ. ಸಂತೋಷ್ ಸ್ನೇಹಿತರ ಜೊತೆಗೂಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮದುವೆಗೆ ಮನೆಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸಿದ್ದು, 'ಶುಭ ಮಂಗಳ' ಸಿನಿಮಾವನ್ನು ಅಕ್ಟೋಬರ್ 14ಕ್ಕೆ ರಿಲೀಸ್ ಮಾಡುತ್ತಿದ್ದಾರೆ.


Click it and Unblock the Notifications











