"ಡೆವಿಲ್ ಬಗ್ಗೆ ಏನೇ ಸುದ್ದಿ ಬಂದ್ರೂ ನಂಬಬೇಡಿ"; ಹೀಗಂತ ದರ್ಶನ್ ಸಿನಿಮಾದ ನಿರ್ದೇಶಕ ಮನವಿ ಮಾಡಿದ್ದೇಕೆ?
ಚಾಲೆಂಜಿಂಗ್‌ಸ್ಟಾರ್ ದರ್ಶನ್ ಹೊಸ ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ 57ನೇ ಸಿನಿಮಾ ಶೂಟಿಂಗ್ ಶುರುವಾಗುವುದಕ್ಕೂ ಮುನ್ನವೇ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ 'ಡೆವಿಲ್'ಗೆ ನಾಯಕಿ ಆಯ್ಕೆ ಆಗಿರೋ ಬಗ್ಗೆನೂ ಹಲ್‌ಚಲ್ ಎದ್ದಿತ್ತು.
ಕರಾವಳಿ ಮೂಲದ ರಚನಾ ರೈ 'ಡೆವಿಲ್' ಸಿನಿಮಾಗೆ ನಾಯಕಿ ಅನ್ನೋ ಬಗ್ಗೆ ಸುದ್ದಿ ಹಬ್ಬಿತು. ಸೋಶಿಯಲ್ ಮೀಡಿಯಾದಲ್ಲಿ ಈ ನಟಿಯ ಫೋಟೊಗಳು ಸಿಕ್ಕಾಪಟ್ಟೆ ಶೇರ್ ಆಗಿದ್ದವು. ದರ್ಶನ್ ಸಿನಿಮಾ ನಾಯಕಿ ಅಂದಾಕ್ಷಣ ನೆಟ್ಟಿಗರು ರಚನಾ ರೈ ಬಗ್ಗೆ ಹುಡುಕಾಡುವುದಕ್ಕೆ ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ನಟಿ ಫುಲ್ ಟ್ರೆಂಡಿಂಗ್‌ನಲ್ಲಿ ಇದ್ದರು.

'ಕಾಟೇರ' ಸೂಪರ್ ಸಕ್ಸಸ್ ಬಳಿಕ ದರ್ಶನ್ ಹೊಸ ಸಿನಿಮಾ 'ಡೆವಿಲ್' ಬಗ್ಗೆ ನಾನಾ ಸುದ್ದಿಗಳು ಓಡಾಡುತ್ತಿವೆ. ಹೀಗಾಗಿ 'ಡೆವಿಲ್' ಚಿತ್ರತಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆ. ಇದೇ ಕಾರಣಕ್ಕೆ ದರ್ಶನ್ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ನೀಡುವವರೆಗೂ ಯಾವುದನ್ನೂ ನಂಬಬೇಡಿ ಅಂತ ನಿರ್ದೇಶಕರೇ ಸಂದೇಶ ರವಾನೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಇತ್ತೀಚೆಗಷ್ಟೇ 'ಡೆವಿಲ್' ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಎರಡು ತಿಂಗಳ ಹಿಂದಷ್ಟೇ ನಡೆದ ಸಮಾರಂಭದಲ್ಲಿ 'ಡೆವಿಲ್' ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಅಷ್ಟರಲ್ಲೇ 'ಡೆವಿಲ್' ತರಹೇವಾರಿ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡಿದ್ದವು. ಈ ಬಗ್ಗೆ ಚಿತ್ರತಂಡ ಕ್ಲಾರಿಟಿ ಕೊಟ್ಟಿದೆ. 'ಡೆವಿಲ್' ಫಸ್ಟ್ ಲುಕ್ ಅಂತ ಹೇಳಿರುವ ಫೋಟೊಗಳು ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸಿದ್ದವು. ಆದರೆ, ಅದು ಅಧಿಕೃತ ಪೋಸ್ಟರ್ ಅಲ್ಲ ಅಂತ ಚಿತ್ರತಂಡ ಹೇಳಿಕೊಂಡಿದೆ.

ಹಾಗೇ ಇತ್ತೀಚೆಗೆ ಕರಾವಳಿ ನಟಿ ರಚನಾ ರೈ ಆಯ್ಕೆ ಬಗ್ಗೆನೂ ಜೋರಾಗಿಯೇ ಚರ್ಚೆಯಾಗಿತ್ತು. ದರ್ಶನ್ ಸಿನಿಮಾಗೆ ನಾಯಕಿ ಅಂತ ಹೇಳಲಾಗಿದ್ದ ರಚನಾ ರೈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹುಡುಕಾಟ ನಡೆದಿತ್ತು. ಆದರೆ, ನಿರ್ದೇಶಕ ಮಿಲನ ಪ್ರಕಾಶ್ ಈ ಸುದ್ದಿ ಕೂಡ ಸುಳ್ಳು ಎಂದು ಮಾಹಿತಿ ರವಾನೆ ಮಾಡಿದ್ದಾರೆ.
"ಮೊದಮೊದಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟರ್ ಹಾಕಿ 'ಡೆವಿಲ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಹೇಳಿಕೊಂಡಿದ್ದರು. ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ ಮೇಲ್ಕಂಡ ಯಾವುದೇ ವಿಷಯಗಳು ಚಿತ್ರತಂಡದ ಅಧಿಕೃತ ಮಾಹಿತಿ ಆಗಿರುವುದಿಲ್ಲ. ಸದ್ಯದಲ್ಲೇ ನಮ್ಮ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ನಮ್ಮ 'ವೈಷ್ಣೊ' ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ 'ಡೆವಿಲ್' ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ" ಎಂದು ನಿರ್ದೇಶಕ ಮಿಲನ ಪ್ರಕಾಶ್ ಸಂದೇಶ ರವಾನೆ ಮಾಡಿದ್ದಾರೆ.
ಅಂದ್ಹಾಗೆ 'ಡೆವಿಲ್' ಸಿನಿಮಾದ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ. ಜೊತೆಗೆ ಸಿನಿಮಾದ ಪ್ರಚಾರ ಕೂಡ ಆರಂಭ ಮಾಡಿಲ್ಲ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಹೀಗಾಗಿ ಇಷ್ಟು ದಿನ ಹರಿದಾಡಿದ್ದ 'ಡೆವಿಲ್' ಬಗೆಗಿನ ಸುದ್ದಿಗಳು ಸುಳ್ಳು ಎಂದು ಚಿತ್ರತಂಡವೇ ಹೇಳಿಕೊಂಡಿದೆ. ಹೀಗಾಗಿ 'ಡೆವಿಲ್ ದಿ ಹೀರೊ'ಗೆ ನಾಯಕಿ ಯಾರಾಗಬಹುದು? ದರ್ಶನ್ ಲುಕ್ ಹೇಗಿರುತ್ತೆ? ಅನ್ನೋದನ್ನು ತಿಳಿದುಕೊಳ್ಳಲು ಡಿಬಾಸ್ ಫ್ಯಾನ್ಸ್ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications











