'ಬದಲಾಗು ನೀನು...' ಹಾಡಿನಲ್ಲಿ ಸುದೀಪ್ ಏಕಿಲ್ಲ?: ಸಚಿವರೇ ನೀಡಿದ ಕಾರಣ
ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರು, ಕೆಲವು ನಟಿಯರು ಹಾಗೂ ಕ್ರಿಕೆಟಿಗರು ಕಾಣಿಸಿಕೊಂಡಿರುವ 'ಬದಲಾಗು ನೀನು ಬದಲಾಯಿಸು' ನೀನು ದೃಶ್ಯ ರೂಪಕದಲ್ಲಿ ನಟ ಕಿಚ್ಚ ಸುದೀಪ್ ಇಲ್ಲದೆ ಇರುವುದು ಅವರ ಅಭಿಮಾನಿಗಳನ್ನು ಕೆರಳಿಸಿತ್ತು.
Recommended Video
ವೈದ್ಯಕೀಯ ಶಿಕ್ಷಣ ಇಲಾಖೆಯು ಜನರಲ್ಲಿ ಕೊರೊನಾ ನಂತರದ ದಿನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದೃಶ್ಯ ರೂಪಕ ನಿರ್ಮಿಸಿದೆ. ನಿರ್ದೇಶಕ ಪವನ್ ಒಡೆಯರ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ಸಂಗೀತ ನಿರ್ದೇಶಕ ಹರಿಕೃಷ್ಣ ಮುಂತಾದವರ ತಂಡ ಸೇರಿಕೊಂಡು ಈ ಅಪರೂಪದ ಪ್ರಯತ್ನ ಮಾಡಿದೆ. 10.38 ನಿಮಿಷಗಳಷ್ಟು ಸುದೀರ್ಘವಾಗಿರುವ ವಿಡಿಯೋವನ್ನು ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಶುಕ್ರವಾರ ಬಿಡುಗಡೆ ಮಾಡಿದ್ದರು. ಮುಂದೆ ಓದಿ....

ಆರಂಭದಿಂದಲೂ ವಿವಾದ
ಈ ವಿಡಿಯೋ ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿಸಿತ್ತು. ಸೆಲೆಬ್ರಿಟಿಗಳನ್ನು ಆಯ್ದುಕೊಂಡು ಸೀಮಿತ ಅವಧಿಯಲ್ಲಿ ಈ ವಿಡಿಯೋ ಸಿದ್ಧಪಡಿಸುವ ಹೊಣೆಗಾರಿಕೆ ತಂಡದ ಮೇಲಿತ್ತು. ಚಿತ್ರೀಕರಣ ಮಾಡಿದಂತೆ ಸ್ಟಾರ್ ನಟರ ಫೋಟೊಗಳನ್ನು ಹಂಚಿಕೊಂಡು ಪ್ರಚಾರ ನೀಡಲಾಗುತ್ತಿತ್ತು. ಆರಂಭದಲ್ಲಿ ಯಶ್ ಹೆಸರಿಲ್ಲ ಎಂದು ಕೆಲವರು ತಗಾದೆ ಎತ್ತಿದ್ದರು. ಇನ್ನು ಶೂಟಿಂಗ್ ಸಮಯದಲ್ಲಿನ ಫೋಟೊ ಹಂಚಿಕೊಂಡಿದ್ದ ಪವನ್ ಒಡೆಯರ್, 'ಯಶ್ ಬಾಸ್' ಎಂದು ಕರೆದಿದ್ದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಪವನ್ ಒಡೆಯರ್ ವಿರುದ್ಧ ಆಕ್ರೋಶ
ವಿವಾದ ಉಲ್ಬಣವಾಗಿದ್ದು, ಸುದೀಪ್ ಅವರ ಚಿತ್ರ ಎಲ್ಲಿಯೂ ಕಾಣದೆ ಇದ್ದಿದ್ದರಿಂದ. ಸುದೀಪ್ ಇಲ್ಲದಿದ್ದರೆ ಈ ಹಾಡು ಅಪೂರ್ಣ. ಅವರು ಇರಬೇಕು ಎಂದು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸುದೀಪ್ ಅವರಿಲ್ಲದ ಕಾರಣ ಪವನ್ ಒಡೆಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಪವನ್ ಒಡೆಯರ್ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸಚಿವರೇ ಈ ಆರೋಪಗಳಿಗೆ ಉತ್ತರ ನೀಡಲಿದ್ದಾರೆ ಎಂದಿದ್ದರು.

ಆಹ್ವಾನ ನೀಡಿದ್ದೆವು
ಶುಕ್ರವಾರ ಸಂಜೆ ದೃಶ್ಯ ರೂಪಕವನ್ನು ಬಿಡುಗಡೆ ಮಾಡಿದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್, ಇದರಲ್ಲಿ ಸುದೀಪ್ ಯಾಕೆ ಇಲ್ಲ ಎಂಬ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ಸೆಲೆಬ್ರಿಟಿಗಳಿಗೂ ನಾನೇ ಕರೆ ಮಾಡಿ ಮನವಿ ಮಾಡಿದ್ದೆ. ಹಾಗೆಯೇ ಸುದೀಪ್ ಅವರಿಗೂ ಆಹ್ವಾನಿಸಿದ್ದೆವು ಎಂದು ತಿಳಿಸಿದ್ದಾರೆ.

ಸಂಪರ್ಕಕ್ಕೆ ಸಿಗಲಿಲ್ಲ
ಸುದೀಪ್ ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರ ಮ್ಯಾನೇಜರ್‌ಗೆ ತಿಳಿಸಿದ್ದೆವು. ಆದರೆ ಅವರು ಇದಕ್ಕೆ ಏಕೆ ಒಪ್ಪಿಕೊಂಡು ಸ್ಪಂದಿಸಿಲ್ಲ ಎನ್ನುವುದು ನಮಗೆ ತಿಳಿದಿಲ್ಲ. ಬಹುತೇಕ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಸುದೀಪ್ ಅವರಿಗೂ ಅವಕಾಶವಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ದೃಶ್ಯ ರೂಪಕಕ್ಕೆ ಮೆಚ್ಚುಗೆ
ಬದಲಾಗು ನೀನು, ಬದಲಾಯಿಸು ನೀನು ದೃಶ್ಯ ರೂಪಕಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಜನಜೀವನವನ್ನು ತೋರಿಸುವುದರ ಜತೆಗೆ, ಕಲಾವಿದರು ತಮ್ಮ ಸಿನಿಮಾ ಮತ್ತು ಕ್ರೀಡೆಗೆ ಹತ್ತಿರವಾಗಿ ಬದುಕನ್ನು ವಿಶ್ಲೇಷಿಸುವ ವಿಡಿಯೋ ಈಗಾಗಲೇ ಯೂಟ್ಯೂಬ್‌ನಲ್ಲಿ ಸುಮಾರು 4 ಲಕ್ಷ ವೀಕ್ಷಣೆಗೆ ಒಳಗಾಗಿದೆ.


Click it and Unblock the Notifications











