ಹಂಪಿ ಅರಣ್ಯ ಪ್ರದೇಶದಲ್ಲಿ ಹೆಣ ಸುಡುವ ದೃಶ್ಯ; ಜಮೀರ್ ಪುತ್ರ ಜೈದ್ ಖಾನ್ 'ಕಲ್ಟ್' ಚಿತ್ರೀಕರಣ ಸ್ಥಗಿತ
ಅರಣ್ಯ ಇಲಾಖೆ ಅಧಿಕಾರಿಗಳು ಕನ್ನಡ ಸಿನಿಮಾಗಳ ಚಿತ್ರೀಕರಣದ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಕನ್ನಡದ ಎರಡು ದೊಡ್ಡ ಸಿನಿಮಾಗಳು 'ಟಾಕ್ಸಿಕ್' ಹಾಗೂ 'ಕಾಂತಾರ ಚಾಪ್ಟರ್ 1' ಸಿನಿಮಾಗಳು ಅರಣ್ಯ ನಾಶ ಮಾಡಿ ಚಿತ್ರೀಕರಣ ಮಾಡುತ್ತಿವೆ ಎನ್ನಲಾಗಿತ್ತು. ಇದರಲ್ಲಿ 'ಕಾಂತಾರ' ಸಿನಿಮಾ ತಂಡಕ್ಕೆ ಅರಣ್ಯ ಇಲಾಖೆ ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿದೆ. ಈ ಬೆಳವಣಿಗಳು ನಡೆಯುತ್ತಿರುವಾಗಲೇ ಕನ್ನಡದ ಮತ್ತೊಂದು ಸಿನಿಮಾ 'ಕಲ್ಟ್' ಶೂಟಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ.
ಸಚಿವ ಜಮೀರ ಅಹಮದ್ ಖಾನ್ ಪುತ್ರ ಝೈದ್ ಖಾನ್ 'ಕಲ್ಟ್' ಸಿನಿಮಾ ಶೂಟಿಂಗ್ ಹಂಪಿಯ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಕಳೆದ ಎರಡು ಮೂರು ದಿನಗಳಿಂದ ಶೂಟಿಂಗ್ ನಡೆಯುತ್ತಿದ್ದು, ಸೆಟ್‌ಗಳನ್ನು ಹಾಕಿ ಶೂಟಿಂಗ್ ಮಾಡಲಾಗುತ್ತಿತ್ತು. ಇದನ್ನು ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಶೂಟಿಂಗ್ ಸ್ಪಾಟ್‌ಗೆ ತೆರಳಿ ಚಿತ್ರತಂಡಕ್ಕೆ ಶಾಕ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಬುಧವಾರದಿಂದ ಹಂಪಿಯ ಸುತ್ತಮುತ್ತ 'ಕಲ್ಟ್' ಸಿನಿಮಾದ ಶೂಟಿಂಗ್ ಅನ್ನು ಚಿತ್ರೀಕರಣ ಮಾಡುತ್ತಿತ್ತು. ಹಾಗೇ ರಂಗಾಪುರ ಹಾಗೂ ಸಣಾಪುರ ನದಿಯ ದಡದಲ್ಲಿ ಹೆಣ ಸುಡುವ ದೃಶ್ಯವನ್ನು ಶೂಟಿಂಗ್ ಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶೂಟಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದು ಮೂಲದ ಪ್ರಕಾರ, ಚಿತ್ರತಂಡ ಶೂಟಿಂಗ್‌ಗೆ ಅನುಮತಿಯನ್ನು ಪಡೆದಿತ್ತು ಎನ್ನಲಾಗಿದೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಸ್ಥಗಿತಗೊಳಿಸಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 'ಬನಾರಾಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಅವರ ಎರಡನೇ ಸಿನಿಮಾದ 'ಕಲ್ಟ್' ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿದ್ದು, ಹಂಪಿಯ ಸುತ್ತಮುತ್ತ ಶೂಟಿಂಗ್ ಮಾಡುತ್ತಿದೆ. ಈ ಸಿನಿಮಾ ಆರಂಭ ಆದ ದಿನದಿಂದ ಒಂದಲ್ಲ ಒಂದು ವಿವಾದಗಳನ್ನು ಎದುರಿಸುತ್ತಲೇ ಇದೆ. ಇತ್ತೀಚೆಗೆ ಡ್ರೋನ್ ವಿಚಾರಕ್ಕೆ ವಿವಾದವನ್ನು ಮಾಡಿಕೊಂಡಿತ್ತು. ಈಗ ಹಂಪಿಯ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಹೆಣ ಸುಡುವ ದೃಶ್ಯವನ್ನು ಚಿತ್ರೀಕರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಔಟ್ ಡೋರ್ ಚಿತ್ರೀಕರಣ ಮಾಡುವಾಗ ಚಿತ್ರತಂಡ ಮೊದಲೇ ಅನುಮತಿಯನ್ನು ಪಡೆದುಕೊಳ್ಳಬೇಕು. ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸುವಾಗ ಅರಣ್ಯ ಇಲಾಖೆಯಿಂದ ಅನುಮತಿ ಬೇಕು. ಮೂಲಗಳ ಪ್ರಕಾರ, ಚಿತ್ರತಂಡ ಸಾಣಾಪುರ, ರಂಗಾಪುರ ಬಳಿ ಅನುಮತಿಯನ್ನು ಪಡೆದಿತ್ತು. ಆದರೆ, ಅಲ್ಲಿ ಹೆಣ ಸುಡುವ ದೃಶ್ಯದ ಬಗ್ಗೆ ತಿಳಿಸಿರಲಿಲ್ಲ. ಅರಣ್ಯ ಪ್ರದೇಶದಲ್ಲಿ ಬೆಂಕಿಯ ಉಪಯೋಗ ಮಾಡಿದ್ದರಿಂದ ಸ್ಥಳೀಯ ಅರಣ್ಯ ಅಧಿಕಾರಿಗಳು ಚಿತ್ರೀಕರಣ ತಂಡಕ್ಕೆ ನೊಟೀಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 'ಕಲ್ಟ್' ಸಿನಿಮಾ ತಂಡ ಶೂಟಿಂಗ್ ನಿಲ್ಲಿಸಿದೆ.
ಈ ಹಿಂದೆ ಕೂಡ ಸಿನಿಮಾ ಚಿತ್ರೀಕರಣ ಮಾಡುವಾಗ ಡ್ರೋನ್‌ಗೆ ಹಾನಿಯಾಗಿತ್ತು. ನಷ್ಟ ಭರಿಸಿಕೊಡುವಂತೆ ಚಿತ್ರತಂಡವನ್ನು ಕೇಳಿದಾಗ ಸಿನಿಮಾ ತಂಡ ಹಿಂದೇಟು ಹಾಕಿತ್ತು. ಹೀಗಾಗಿ ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿದ್ದರು. ಆ ವೇಳೆ ಕೂಡ ಚಿತ್ರತಂಡ ವಿವಾದಕ್ಕೆ ಸಿಕ್ಕಿಕೊಂಡಿತ್ತು. ಈಗ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾಗಿದ್ದಕ್ಕೆ ಕಾಂಟ್ರವರ್ಸಿಗೆ ಸಿಕ್ಕಿಕೊಂಡಿದೆ.


Click it and Unblock the Notifications











