ಸ್ವಿಪ್ಟ್ ಕಾರಿಗೆ ನಕಲಿ ನಂಬರ್ ಪ್ಲೇಟ್: ಕಿಚ್ಚನಿಗೆ ಬೆದರಿಕೆ ಪತ್ರ ಕಳಿಸಲು ಕಿಡಿಗೇಡಿಗಳ ಮಾಸ್ಟರ್ ಪ್ಲ್ಯಾನ್!
ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಬಂದಿರೋ ಸಂಗತಿ ಈಗ ಹೊಸದೇನು ಅಲ್ಲ. ಕೆಲ ಕಿಡಿಗೇಡಿಗಳು ಕಳೆದ ತಿಂಗಳು ಕಿಚ್ಚ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಪತ್ರ ಕಳುಹಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಮಹತ್ವ ವಿಷಯವೊಂದು ಹೊರಬಿದ್ದಿದೆ.
ಕಳೆದ ತಿಂಗಳೇ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಬಂದಿತ್ತು ಎನ್ನಲಾಗಿದೆ. ಈ ಸಂಬಂಧ ಕಿಚ್ಚ ಸುದೀಪ್ ಆಪ್ತ ಹಾಗೂ ನಿರ್ಮಾಪಕ ಕೆ ಮಂಜು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಇದು ಸಿಸಿಬಿಗೆ ಹಸ್ತಾಂಗರಗೊಂಡ ಬಳಿಕ ತನಿಖೆ ಚುರುಕುಗೊಂಡಿದೆ. ಈ ವೇಳೆ ತನಿಖೆಯಲ್ಲೊಂದು ಟ್ವಿಸ್ಟ್ ಸಿಕ್ಕಿದೆ.

ಬೆದರಿಕೆ ಪತ್ರ ಎಲ್ಲಿಂದ ಬಂತು? ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಿದವರು ಯಾರು? ಯಾವಾಗ ಈ ಪತ್ರವನ್ನು ರವಾನೆ ಮಾಡಿದ್ರು? ಇಂತಹದ್ದೇ ಕೆಲವು ಪ್ರಶ್ನೆಗಳಿಗೆ ತನಿಖೆ ಮೂಲಕ ಉತ್ತರ ಹುಡುಕುತ್ತಿದ್ದಾರೆ. ಈ ವೇಳೆ ದೊಮ್ಮಲೂರಿನಿಂದ ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದೊಮ್ಮಲೂರಿನಿಂದ ಬೆದರಿಕೆ ಪತ್ರ
ಕಿಚ್ಚ ಸುದೀಪ್ ಅಧಿಕೃತವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳುವುದಕ್ಕೂ ಮುನ್ನವೇ ಈ ಬೆದರಿಕೆ ಪತ್ರ ಬಂದಿತ್ತು. ಅಂದ್ಹಾಗೆ ಮೊದಲ ಪತ್ರ ಮಾರ್ಚ್ 10ರಂದೇ ಸುದೀಪ್ ಮನೆಗೆ ಬಂದಿದೆ. ಈ ಪತ್ರಕ್ಕೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ಕಿಚ್ಚ, ಎರಡನೇ ಬೆದರಿಕೆ ಪತ್ರ ಬಂದಾಗ ಸಹಜವಾಗಿ ಗಾಬರಿಗೊಂಡಿದ್ದಾರೆ.
ಈ ಬೆದರಿಕೆ ಪತ್ರವನ್ನು ಹುಡುಕಿ ಹೊರಟಾಗ ಬೆಂಗಳೂರಿನ ದೊಮ್ಮಲೂರಿನಿಂದ ಪೋಸ್ಟ್ ಆಗಿದ್ದು ತಿಳಿದು ಬಂದಿದೆ. ಇಲ್ಲಿಂದಲೇ ಎರಡೂ ಪತ್ರಗಳೂ ಪೋಸ್ಟ್ ಆಗಿದ್ದು, ಹೆಚ್ಚಿನ ಮಾಹಿತಿ ಹಲೆ ಹಾಕಲು ಹೋದಾಗ, ಸಿಸಿಟಿವಿಯಲ್ಲಿ ಮಹತ್ವದ ವಿಷಯವೊಂದು ಬಹಿರಂಗಗೊಂಡಿದೆ.

ಸ್ವಿಪ್ಟ್ ಕಾರಿಗೆ ನಕಲಿ ನಂಬರ್ ಪ್ಲೇಟ್
ದೊಮ್ಮಲೂರಿನ ಪೋಸ್ಟ್ ಆಫೀಸ್‌ನಿಂದ ಬೆದರಿಕೆ ಪತ್ರ ಪೋಸ್ಟ್ ಮಾಡಿರೋ ಕಿಡಿಗೇಡಿಗಳು ಸ್ವಿಪ್ಟ್ ಕಾರನ್ನು ಬಳಸಿದ್ದರು. ಇದು ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಈ ಸಂಬಂಧ ಸಿಸಿಬಿ ಅಧಿಕಾರಿಗಳು ಕಾರಿನ ಮಾಲೀಕರು ಯಾರು ಹುಡುಕಿಕೊಂಡು ಹೊರಟಿದ್ದರು.
ಈ ವೇಳೆ ಪೊಲೀಸರಿಗೆ ಇದು ಸ್ವಿಫ್ಟ್ ಕಾರಿನಲ್ಲಿ ಕಿಡಿಗೇಡಿಗಳು ಬಂದಿದ್ದೇನೋ ನಿಜ. ಆದರೆ, ಆ ಕಾರು ಕೂಡ ಅಸಲಿ. ಆದರೆ, ಆ ಕಾರಿಗೆ ಬಳಸಿದ್ದ ನಂಬರ್ ಪ್ಲೇಟ್ ಮಾತ್ರ ನಕಲಿ. ತನಿಖೆ ನಡೆಸಿದ್ದ ಪೊಲೀಸರಿಗೆ ಇದು ಕೆಂಗೇರಿಯಲ್ಲಿರುವ ನಿವಾಸಿಯೊಬ್ಬರ ಕಾರು ಎಂದು ತಿಳಿದು ಬಂದಿದೆ. ಆದರೆ, ಸ್ವಿಪ್ಟ್ ಕಾರಿಗೂ ಆ ಮಾಲೀಕರಿಗೂ ಯಾವುದೇ ಸಂಬಂಧವಿಲ್ಲ ಗೊತ್ತಾದ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಬೆದರಿಕೆ ಪತ್ರದಿಂದ ಸಾಕ್ಷಿ ಸಿಗುತ್ತಿಲ್ಲ
ಕಿಡಿಗೇಡಿಗಳು ಸಖತ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಕೈಯಲ್ಲಿ ಬೆದರಿಕೆ ಪತ್ರ ಬರೆದರೆ ಸಿಕ್ಕಿಬೀಳುವ ಸಾಧ್ಯತೆ ಇದ್ದಿದ್ದರಿಂದ ಸಿಸ್ಟಂ ಮೂಲಕ ಬೆದರಿಕೆ ಪತ್ರವನ್ನು ಟೈಪ್ ಮಾಡಿ, ಆ ಬಳಿಕ ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಲಾಗಿದೆ.
ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಎಲ್ಲಾ ಸಿಸಿ ಕ್ಯಾಮರಾಗಳನ್ನು ಜಾಲಾಡುತ್ತಿದ್ದಾರೆ. ಸೈಬರ್ ವಿಂಗ್ ಕೂಡ ಈ ಕೇಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಿಡಿಗೇಡಿಗಳನ್ನು ಸೆರೆ ಹಿಡಿಯುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ.
ಈಗ ಸಿಸಿಬಿ ಲೆಟರ್ ಹಾಕಿದ ಪೋಸ್ಟ್ ಬಾಕ್ಸ್ ಬಳಿ ಇರೋ ಸಿಸಿ ಕ್ಯಾಮೆರಾಗಳನ್ನು ಜಾಲಾಡುತ್ತಿದ್ದಾರೆ. ಸಿಸಿಬಿಯ ಸೈಬರ್ ವಿಂಗ್ ಕೂಡ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನದಲ್ಲಿ ನಟ ಸುದೀಪ್ಗೂ ನೋಟಿಸ್ ನೀಡಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಇನ್ಯಾವ ತಿರುವು ಪಡೆಯಲಿದೆ ಅನ್ನೋದು ಕುತೂಹಲ ಕೆರಳಿಸಿದೆ.


Click it and Unblock the Notifications











