ಪತ್ನಿಗೆ 58ನೇ ಹುಟ್ಟುಹಬ್ಬ.. ಪತ್ನಿಯೊಂದಿಗೆ ಪ್ರಧಾನಿ ಮೋದಿ ಜೊತೆಗಿರುವ ಫೋಟೊ ಹಾಕಿ ವಿಶ್ ಮಾಡಿದ್ದೇಕೆ?
ಕನ್ನಡದ ಚಿತ್ರರಂಗದ ಎವರ್‌ಗ್ರೀನ್ ಲವ್ ಬರ್ಡ್ಸ್ ಜಗ್ಗೇಶ್ ಹಾಗೂ ಪತ್ನಿ ಪರಿಮಳಾ. ಇವರಿಬ್ಬರ ಕ್ರಾಂತಿಕಾರಿ ಲವ್ ಸ್ಟೋರಿ ಬಗ್ಗೆ ಈಗಾಗಲೇ ಗೊತ್ತೇ ಇದೆ. ಇವರಿಬ್ಬರ ಪ್ರೀತಿಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. ಜಗ್ಗೇಶ್ ಇನ್ನೂ ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಪರದಾಡುತ್ತಿದ್ದರು. ಆ ವೇಳೆ ಮನೆಯವರ ವಿರೋಧ ನಡುವೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಇಂದು ಯುವ ಪ್ರೇಮಿಗಳಿಗೆ ಮಾದರಿ.
ಪತಿಯಂತೆ ಪರಿಮಳಾ ಜಗ್ಗೇಶ್ ಅವರು ಕೂಡ ತಮ್ಮದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮನೆಯವರ ವಿರೋಧದ ನಡುವೆಯೂ ಜಗ್ಗೇಶ್ ಅವರನ್ನು ಪ್ರೀತಿ, ಮದುವೆ ಬಳಿಕ ಪರಿಮಳಾ ಜಗ್ಗೇಶ್ ಶಿಕ್ಷಣವನ್ನು ಮುಂದುವರೆಸಿದ್ದರು. ಇಂದು ಅವರದ್ದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. 58ನೇ ವಯಸ್ಸಿನಲ್ಲಿಯೂ ಕಲಿಯುವ ಉತ್ಸಾಹ ಇನ್ನೂ ಕುಗ್ಗಿಲ್ಲ.

ಸದ್ಯ ಸೀನಿಯರ್ಸ್ ಶೂಟಿಂಗ್ ತರಬೇತಿ ಪಡೆಯುತ್ತಿದ್ದು, ಈಗಾಗಲೇ ಫಿಟ್ನೆಸ್, ಸಕ್ಕರೆ ಖಾಯಿಲೆ ಇರುವವರಿಗೆ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಲಹೆ ನೀಡುತ್ತಿದ್ದಾರೆ. ಪತಿ ಜಗ್ಗೇಶ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಅವರ ಸಲಹೆಯಂತೆ ಅನ್ನದ (ಮಿಲೆಟ್ಸ್) ಬಗ್ಗೆ ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ. ಇಂದು (ಅಕ್ಟೋಬರ್ 27) ಅವರಿಗೆ 58ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಜಗ್ಗೇಶ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತ್ನಿ ಸಾಧನೆಯನ್ನು ಹೊಗಳಿ ಪೋಸ್ಟ್ ಮಾಡಿದ್ದಾರೆ. ಅದರ ಸಾರಾಂಶ ಹೀಗಿದೆ.
"1982 ಸೆಪ್ಟೆಂಬರ್‌ನಲ್ಲಿ ಪರಿಮಳನ ಪ್ರಥಮ ಕಂಡದ್ದು. ಆಗ ಆಕೆಗೆ 14ವರ್ಷ. ಆಕೆಯನ್ನ ನೋಡಿದಾಗ ಪ್ರಥಮ ನೋಟಕ್ಕೆ ಇಷ್ಟವಾಗಿಬಿಟ್ಟಳು. 1984 ನಾನು ಅವಳ ಮದುವೆಯಾದೆ. ಏನು ಇಲ್ಲದ ನನ್ನ ನಂಬಿ ಬಂದವಳು ನನ್ನ ಕೇಳಿದ್ದು ಒಂದೇ, ನನ್ನನ್ನು ಓದಿಸು ಎಂದು. ಮರುಮಾತಾಡದೆ ಆಗಬಹುದು ಎಂದು ಮಾತು ಕೊಟ್ಟು ಪಿಯುಸಿಗೆ ಈಸ್ಟ್ ವೆಸ್ಟ್ ಕಾಲೇಜಿಗೆ ಸೇರಿಸಿದೆ.
ಅದ್ಭುತ ಅಂಕ ಪಡೆದು ಬಿಎಂಎಸ್ ಇಂಜಿನಿಯರಿಂಗ್ ಸೇರಿಸಿದೆ ಪದವಿ ಪಡೆದು ನಂತರ ಅನೇಕ ವಿಭಾಗದಲ್ಲಿ ಓದಿ, ಈಗ ಸಾವಿರಾರು ಜನರಿಗೆ ಸಕ್ಕರೆ ಖಾಯಿಲೆ ಹಾಗು ತೂಕ ಇಳಿಸುವ ಕಾಯಕದಲ್ಲಿ ಹೆಸರು ಮಾಡುತ್ತಿದ್ದಾಳೆ. ಶ್ರೀ ನರೇಂದ್ರಮೋದಿರವರು ಈಕೆಯ ಸಾಧನೆ ಕೇಳಿ ಅನ್ನದ ಮೇಲೆ ಪುಸ್ತಕ ಬರೆಯುವಂತೆ ಪ್ರೇರೇಪಿಸಿದರು. ಅದನ್ನು ಪೂರ್ಣಮಾಡಿ ಬಿಡುಗಡೆ ಮಾಡಿದಳು. ಇಷ್ಟು ಸಾಲದಂತೆ ಈಗ ಸೀನಿಯರ್ಸ್ ಶೂಟಿಂಗ್ ಪರಿಣಿತಿ ಪಡೆಯುತ್ತಿದ್ದಾಳೆ.
ಸಾಧನೆಗೆ ವಯಸ್ಸಿಲ್ಲ, ಬೇಕಿರುವುದು ಮನಸ್ಸು ಮಾತ್ರ ಎಂದು ನಿರೂಪಿಸುತ್ತಿದ್ದಾಳೆ.ಆಕೆಯ ಬಗ್ಗೆ ಈ ಬರವಣಿಗೆಯ ಕಾರಣ ನಾನು ಭೇಟಿ ಮಾಡಿದ ಅಂದಿನ 14ರ ತರುಣಿಗೆ ಇಂದು '58'ರ ಸಂಭ್ರಮ. ಪತಿಯಾಗಿ ಅವಳಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳು." ಎಂದು ಜಗ್ಗೇಶ್ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಜಗ್ಗೇಶ್ ಅಭಿಮಾನಿಗಳು ಹಾಗೂ ಹಿತೈಶಿಗಳು ಕೂಡ ಪರಿಮಳಾ ಜಗ್ಗೇಶ್ ಅವರಿಗೆ ಶುಭಾಶಗಳನ್ನು ತಿಳಿಸುತ್ತಿದ್ದಾರೆ.
ಜಗ್ಗೇಶ್ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಂತವರು ಪರಿಮಳಾ ಜಗ್ಗೇಶ್. ಅತೀ ಚಿಕ್ಕ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಕಷ್ಟದಲ್ಲಿ ಸಂಸಾರವನ್ನು ತೂಗಿಸಿಕೊಂಡು ಬಂದವರು. ಅಂತಹ ಕಷ್ಟದಲ್ಲಿಯೂ ವಿದ್ಯಾಭ್ಯಾಸ ಮುಂದುವರೆಸಿ, ತಮ್ಮದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದು ಜಗ್ಗೇಶ್ ಅವರು ಮಾಡಿದ ಸಾಧನೆಗಿಂತ ಕಮ್ಮಿಯೇನಲ್ಲ.


Click it and Unblock the Notifications











