ಗೆಳತಿ ಬಳಿ ದೈಹಿಕ ಸಂಪರ್ಕಕ್ಕೆ ಒತ್ತಾಯ; ಲೈಂಗಿಕ ದೌರ್ಜನ್ಯ ಆರೋಪದಡಿ 'ಮುದ್ದುಲಕ್ಷ್ಮಿ' ನಟ ಚರಿತ್ ಬಾಳಪ್ಪ ಅರೆಸ್ಟ್
ಕಿರುತೆರೆಯ ಜನಪ್ರಿಯ ನಟ ಚರಿತ್ ಬಾಳಪ್ಪ ಅವರನ್ನು ಆರ್ಆರ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಕಾರಣ ಬಂಧಿಸಲಾಗಿದೆ. ನಟ ಚರಿತ್ ಬಾಳಪ್ಪ 'ಮುದ್ದುಲಕ್ಷ್ಮಿ' ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಭಾಷೆಯ ಸೀರಿಯಲ್‌ಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
ಈಗ ತನಗೆ ಪರಿಚಯವಿದ್ದ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಯುವತಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ರಾಜ ರಾಜೇಶ್ವರಿ ನಗರ ಠಾಣೆಯ ಪೊಲೀಸರು ಮುದ್ದುಲಕ್ಷ್ಮಿ ಧಾರಾವಾಹಿಯ ನಟ ಚರಿತ್ ಬಾಳಪ್ಪ ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಆತ್ಮೀಯ ಗೆಳತಿ ದೈಹಿಕ ಸಂಪರ್ಕಕ್ಕೆ ಒತ್ತಡ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ಚರಿತ್ ಬಾಳಪ್ಪ ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆನೂ ಆಗುತ್ತೇನೆ ಎಂದು ಹೇಳಿ ದೈಹಿಕ ಸಂಪರ್ಕಕ್ಕೆ ಯುವತಿಯ ಮೇಲೆ ಒತ್ತಡ ಹಾಕಿದ್ದ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಘಟನೆಯ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ.
ಕನ್ನಡದಲ್ಲಿ 'ಮುದ್ದುಲಕ್ಷ್ಮಿ' ಅಂತಹ ಜನಪ್ರಿಯ ಧಾರಾವಾಹಿಯಲ್ಲಿ ನಟಿಸಿದ್ದ ನಟ ತೆಲುಗು ಸೀರಿಯಲ್‌ನಲ್ಲೂ ಬ್ಯುಸಿಯಾಗಿದ್ದಾರೆ. ಈ ನಟ ಕೆಲವು ದಿನಗಳಿಂದ ತನ್ನ ಗೆಳತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಆಕೆಗೆ ಕಿರುಕುಳ ನೀಡಿದ್ದು, ಮದುವೆ ಆಗುತ್ತೇನೆ ಎಂದು ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾನೆ ಎಂದು ಆರೋಪಿ ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ದೂರಿನಲ್ಲಿ ನಟ ಚರಿತ್ ಬಾಳಪ್ಪ ತನ್ನ ಗೆಳತಿಗೆ ಬೆದರಿಕೆ ಕೂಡ ಹಾಕಿದ್ದಾನೆ ಎನ್ನಲಾಗಿದೆ. ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಹಣ ಕೊಡದೇ ಹೋದರೆ ಅವುಗಳನ್ನು ಲೀಕ್ ಮಾಡುವುದಾಗಿ ಹೇಳಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪವನ್ನು ನಟ ಚರಿತ್ ಬಾಳಪ್ಪ ಮೇಲೆ ಮಾಡಲಾಗಿದೆ. ಹೀಗಾಗಿ ಪೊಲೀಸರು ನಟ ಚರಿತ್ ಬಾಳಪ್ಪನನ್ನು ಬಂಧಿಸಿದ್ದಾರೆ.
ಚರಿತ್ ಬಾಳಪ್ಪ ಈಗಾಗಲೇ ಮಂಜುಶ್ರೀ ಎಂಬುವವರನ್ನು ಮದುವೆ ಆಗಿದ್ದರು. 2017ರಲ್ಲಿ ವಿವಾಹವಾಗಿದ್ದ ನಟನ ಸಂಸಾರದಲ್ಲಿ ಕಿತ್ತಾಟ ಶುರುವಾಗಿತ್ತು. ಹೀಗಾಗಿ 2022ರಲ್ಲಿ ಇವರು ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ವಿಚ್ಚೇದನ ಪಡೆದ ಬಳಿಕವೂ ಮಾಜಿ ಪತ್ನಿ ನಟ ಚರಿತ್ ಬಾಳಪ್ಪ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಗ ಕೂಡ ಬೀದಿ ರಂಪಾಟ ಆಗಿತ್ತು.
ನ್ಯಾಯಾಲಯ ಸೂಚಿಸಿದಂತೆ ಜೀವನಾಂಶ ಚರಿತ್ ಬಾಳಪ್ಪ ಜೀವನಾಂಶ ನೀಡಬೇಕಿತ್ತು. ಅದನ್ನು ಕೊಡುವುದಕ್ಕೆ ಹಿಂದೇಟು ಹಾಕಿದ ಆರೋಪ ಕೂಡ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪತ್ನಿ ನೋಟೀಸ್ ಕಳುಹಿಸಿದ್ದರು ಎನ್ನಲಾಗಿದೆ. ಅದಕ್ಕೆ ಚರಿತ್ ಬಾಳಪ್ಪ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದರು ಎಂಬುವುದಾಗಿ ತಿಳಿದು ಬಂದಿದೆ. ಈ ಸಂಬಂದ ಇದೇ ವರ್ಷ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಎನ್‌ಸಿಆರ್ ದಾಖಲಿಸಿದ್ದು ವರದಿಯಾಗಿದೆ. ಈಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.


Click it and Unblock the Notifications











