'ಗಾರ್ಡನ್'ಗೆ ಹೀರೋ ಫಿಕ್ಸ್; ಸೆಟ್ಟೇರಿತು ದರ್ಶನ್ ಸೋದರಳಿಯನ ಮತ್ತೊಂದು ಸಿನಿಮಾ
ಸುಮಾರು ಎಂಟು ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 2017ರಲ್ಲಿ ಬಂದಿದ್ದ 'ಟಕ್ಕರ್' ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಬಹುದೆಂಬ ಭರವಸೆಯನ್ನು ಮೂಡಿಸಿದ್ದರು. ಅದಕ್ಕೂ ಮುನ್ನ ದರ್ಶನ್ ನಟಿಸಿದ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಮನೋಜ್ ಕುಮಾರ್ ಕಾಣಿಸಿಕೊಂಡಿದ್ದರು.
'ಟಕ್ಕರ್' ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಅನಂತು ವರ್ಷಸ್ ನುಸ್ರತ್' ನಿರ್ದೇಶಿಸಿದ ಸುಧೀರ್ ಶ್ಯಾನುಭೋಗ್ 'ಧರಣಿ' ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನೂ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ಅಷ್ಟರಲ್ಲೇ ಮತ್ತೊಂದು ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅದುವೇ 'ಗಾರ್ಡನ್'.

'ಕೋಲಾರ', 'ಇಂಗ್ಲಿಷ್ ಮಂಜ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಆರ್ಯ ಮಹೇಶ್ ಮತ್ತೊಂದು ರಾ ಸಬ್ಜೆಕ್ಟ್‌ಗಳನ್ನು ಕೈಗೆತ್ತಿಕೊಂಡು ಬಂದಿದ್ದಾರೆ. ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳಲ್ಲಿ ಕಥೆಯನ್ನು ನೈಜವಾಗಿ ಕಟ್ಟಿಕೊಡುವುದರಲ್ಲಿ ಆರ್ಯ ಮಹೇಶ್ ಮೆಚ್ಚುಗೆ ಗಳಿಸಿದ್ದರು. ಈ ಸಲ ಯಾರೂ ಮುಟ್ಟದ ಸ್ಟೋರಿಯನ್ನು ಮಹೇಶ್ ಟಚ್ ಮಾಡಿದ್ದಾರೆ.
ಚಿತ್ರರಂಗದಲ್ಲಿ ಯಾವುದೇ ಇಮೇಜ್ ಇಲ್ಲದ, ಕಮರ್ಷಿಯಲ್ ಅಂಶಗಳಿಗೂ ಒಗ್ಗುವ ಹೀರೋ ಹುಡುಕಾಟದಲ್ಲಿ ನಿರ್ದೇಶಕರಿದ್ದರು. ಅದಕ್ಕೆ ಸರಿಯಾಗಿ 'ಟಕ್ಕರ್' ಮನೋಜ್ ಕಣ್ಣಿಗೆ ಬಿದ್ದಿದ್ದಾರೆ. 'ಅಂಬರೀಶ', 'ಚಕ್ರವರ್ತಿ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿ 'ಟಕ್ಕರ್' ಸಿನಿಮಾ ಮೂಲಕ ಹೀರೋ ಆಗಿರುವ ಮನೋಜ್ ಈ ಸಿನಿಮಾಗೆ ಸರಿಯಾದ ಆಯ್ಕೆ ಎಂದು ತಂಡ ಹೇಳಿಕೊಂಡಿದೆ. ಗಾರ್ಡನ್ ಸಿನಿಮಾ ಬಗ್ಗೆ ಹೀರೋ ಮನೋಜ್, ನಿರ್ದೇಶಕ ಆರ್ಯ ಮಹೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
"ಕಣ್ಮುಂದೆ ಕಾಣುವ ವಿಚಾರಗಳು, ಕ್ಯಾರೆಕ್ಟರುಗಳನ್ನೇ ಯಥಾವತ್ತಾಗಿ ಕಥೆಯ ರೂಪದಲ್ಲಿ ಕಟ್ಟುವುದು ನನ್ನ ಶೈಲಿ. ಸಿನಿಮಾದ ಮೂಲಕ ಯಾರೂ ಹೇಳದ ನೈಜವಾದ ವಿಚಾರಗಳನ್ನು ತೋರಿಸಬೇಕು ಎನ್ನುವುದು ನನ್ನ ಬಯಕೆ. ಈ ಸಲ ನಾನು ಮಾಡಿಕೊಂಡಿರುವ ಕಥೆಗೆ ಪೂರಕವಾಗಿ ಮನೋಜ್ ಅವರು ಜೊತೆಯಾಗಿದ್ದಾರೆ. ಈ ಸಿನಿಮಾದ ನಿರ್ಮಾಪಕರಾಗಿರುವ ಜಿ. ಮುನಿರಾಜು ಅವರು ಕೂಡಾ ಪ್ರೀತಿಯಿಂದ ನಮಗೆ ಜವಾಬ್ದಾರಿಯನ್ನು ವಹಿಸಿದ್ದಾರೆ. ಒಂದೊಳ್ಳೆ ಸಿನಿಮಾವನ್ನು ನೀಡುತ್ತೇವೆ ಎನ್ನುವ ನಂಬಿಕೆ ನನ್ನಲ್ಲಿದೆ." ಎಂದು ನಿರ್ದೇಶಕ ಆರ್ಯ ಮಹೇಶ್ ಹೇಳಿದ್ದಾರೆ.
ಹಾಗೇ ಸಿನಿಮಾದ ಹೀರೋ ಮನೋಜ್ ಕೂಡ ಈ ಸಬ್ಜೆಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ಈ ಹಿಂದೆ ನಟಿಸಿದ್ದ 'ಟಕ್ಕರ್' ಸೈಬರ್ ಕ್ರೈಮ್ ಕಥಾವಸ್ತುವನ್ನು ಹೊಂದಿತ್ತು. ಸದ್ಯ ಚಿತ್ರೀಕರಣದಲ್ಲಿರುವ ಧರಣಿಯ ಜಗತ್ತೇ ಬೇರೆ. ಕೋಳಿ ಕಾಳಗ ಸೇರಿದಂತೆ ಪಕ್ಕಾ ಈ ನೆಲದ ಕಥಾವಸ್ತುವನ್ನು ಅದು ಹೊಂದಿದೆ. ಈ ಹೊತ್ತಿನಲ್ಲಿ ಈ ಎರಡೂ ಚಿತ್ರಕ್ಕಿಂತಾ ಭಿನ್ನ ಅಂಶಗಳಿರುವ, ಪಕ್ಕಾ ಬೆಂಗಳೂರು ಲೋಕಲ್ ಕಥೆ ಮತ್ತು ಭಾಷೆಯನ್ನು ಹೊಂದಿರುವ ʻಗಾರ್ಡನ್ʼ ಒಪ್ಪಿದ್ದೇನೆ. ನಿರ್ದೇಶಕ ಆರ್ಯ ಮಹೇಶ್ ಅವರ ಮೇಲೆ ಅಪಾರ ಭರವಸೆ ಹೊಂದಿದ್ದೇನೆ. ಅವರು ಮಾಡಿಕೊಂಡಿರುವ ಸ್ಕ್ರಿಪ್ಟ್ ಕೇಳಿದಾಗಲೇ ಈ ಸಿನಿಮಾದಲ್ಲಿ ನಾನು ನಟಿಸಲೇಬೇಕು ಅಂತಾ ತೀರ್ಮಾನಿಸಿದೆ. ಈ ಸಿನಿಮಾದ ಕಥಾವಸ್ತು ಮತ್ತು ಪಾತ್ರ ಹೇಗಿದೆ ಅನ್ನೋದು ಅತಿ ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ." ಎಂದು ನಟ ಮನೋಜ್ ಉತ್ಸಾಹ ಹೊರಹಾಕಿದ್ದಾರೆ.
ಇನ್ನು ಈ ಸಿನಿಮಾವನ್ನು ಜಿ. ಮುನಿರಾಜು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ 'ಗಾರ್ಡನ್' ಸಿನಿಮಾ ಸೆಟ್ಟೇರಿದೆ. ಸೆಪ್ಟೆಂಬರ್ ತಿಂಗಳಿನಿಂದ ಬೆಂಗಳೂರಿನ ಸುತ್ತಮುತ್ತ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.


Click it and Unblock the Notifications











