Munirathna: ಘೋಷಣೆಗಷ್ಟೇ ಸೀಮಿತವಾದ 'ಉರಿಗೌಡ ನಂಜೇಗೌಡ'.. ಶ್ರೀಗಳ ಭೇಟಿ ಬಳಿಕ ಉಲ್ಟಾ ಹೊಡೆದ ಮುನಿರತ್ನ!
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲೊಂದು ಟೈಟಲ್ ಸಂಚಲನ ಸೃಷ್ಟಿಸಿತ್ತು. ಅದುವೇ 'ಉರಿಗೌಡ ನಂಜೇಗೌಡ'. ಈ ವಿವಾತ್ಮಕ ಶೀರ್ಷಿಕೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಮುನಿರತ್ನ ಘೋಷಣೆ ಕೂಡ ಮಾಡಿದ್ದರು.
ಶಾಸಕ,ನಿರ್ಮಾಪಕ ಮುನಿರತ್ನ 'ಉರಿಗೌಡ ನಂಜೇಗೌಡ' ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡುತ್ತಿದ್ದಂತೆ ರಾಜಕೀಯ ಮುಖಂಡರು ಕಿಡಿಕಾರಿದ್ದರು. ಈ ವಿವಾದಾತ್ಮಕ ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ತಿರುಗಿಬಿದ್ದಿದ್ದರು. ಎಚ್‌ಡಿ ಕುಮಾರಸ್ವಾಮಿ ಕೂಡ ಮುನಿರತ್ನ ವಿರುದ್ಧ ಸರಣಿ ಟ್ವೀಟ್‌ಗಳನ್ನೇ ಮಾಡಿ ಆಕ್ರೋಶ ಹೊರಹಾಕಿದ್ದರು.

'ಉರಿಗೌಡ ನಂಜೇಗೌಡ' ವಿವಾದ ತಾರಕ್ಕೇರುತ್ತಿದ್ದಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳಿಂದ ಮುನಿರತ್ನಗೆ ಕರೆ ಬಂದಿತ್ತು. ಈ ಸಂಬಂಧ ಇಂದು (ಮಾರ್ಚ್ 20) ಮುನಿರತ್ನ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿ, ಸಿನಿಮಾ ಬಗ್ಗೆ ಚರ್ಚೆ ನಡೆಸಿದ್ದರು.
ಶ್ರೀಗಳ ಭೇಟಿ ಬಳಿಕ ಸಿನಿಮಾ ಕ್ಯಾನ್ಸಲ್
ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮುನಿರತ್ನ ಸಿನಿಮಾ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. 'ಉರಿಗೌಡ ನಂಜೇಗೌಡ' ಸಿನಿಮಾ ಮಾಡದೇ, ಇಲ್ಲಿಗೆ ಕೈಬಿಟ್ಟಿರುವುದಾಗಿ ನಿರ್ಮಾಪಕ ಮುನಿರತ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ಮಲಾನಂದ ಶ್ರೀಗಳು ನಿರ್ಮಾಪಕ ಮುನಿರತ್ನಗೆ ಸಿನಿಮಾ ಕೈ ಬಿಡುವಂತೆ ಸಲಹೆ ನೀಡಿದ್ದಾರೆ. " ಸಿನಿಮಾ ಮಾಡುವುದು ತಪ್ಪಲ್ಲ. ಆದರೆ, ಇನ್ನೊಬ್ಬರ ಮನಸ್ಸಿಗೆ ನೋವು ಮಾಡಿ ಸಿನಿಮಾ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಸಿನಿಮಾವನ್ನು ಕೈ ಬಿಡುವುದಾಗಿ ಹೇಳಿದ್ದಾರೆ." ಎಂದು ನಿರ್ಮಲಾನಂದ ಶ್ರೀಗಳು ಸಲಹೆ ನೀಡಿದ್ದಾರೆಂದು ಮುನಿರತ್ನ ಹೇಳಿದ್ದಾರೆ.
'ಉರಿಗೌಡ ನಂಜೇಗೌಡ' ಸಿನಿಮಾ ಬಗ್ಗೆ ಯಾಕೆ ವಿರೋಧ
ಉರಿಗೌಡ ಹಾಗೂ ನಂಜೇಗೌಡ ಈ ಎರಡು ಪಾತ್ರಗಳು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿವೆ. ಕೆಲವು ವಲಯಗಳು ಈ ಎರಡು ಪಾತ್ರಗಳು ಇತಿಹಾಸದಲ್ಲಿ ಇದ್ದವು ಎಂದು ವಾದ ಮಾಡುತ್ತಿವೆ. ಅದೇ ಇನ್ನೊಂದು ಕಡೆ ಈ ಎರಡು ಪಾತ್ರಗಳು ಕಲ್ಪಿತ ಪಾತ್ರಗಳು ಎಂದು ಆಕ್ರೋಶ ಹೊರ ಹಾಕುತ್ತಿವೆ.
1750 ರಿಂದ 1799ರವರೆಗಿನ ಇತಿಹಾಸದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ಇಬ್ಬರು ವೀರರು ಇದ್ದರು. ಇವರಿಬ್ಬರು ಟಿಪ್ಪು ಸುಲ್ತಾನ್ ಅನ್ನು ಹತ್ಯೆ ಮಾಡಿದ್ದರು ಎಂದು ಒಂದು ಗುಂಪು ಹೇಳುತ್ತಿದೆ. ಅದೇ ಇನ್ನೊಂದು ಕಡೆ ಈ ಎರಡೂ ಪಾತ್ರಗಳು ಕಾಲ್ಪನಿಕ ಎಂದು ಇನ್ನೊಂದು ಗುಂಪು ಹೇಳುತ್ತಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಈ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.
ಎಚ್‌ಡಿಕೆ ಸರಣಿ ಟ್ವೀಟ್
ಮುನಿರತ್ನ 'ಉರಿಗೌಡ ನಂಜೇಗೌಡ' ಸಿನಿಮಾ ಟೈಟಲ್ ಅನ್ನು ಫಿಲ್ಮ್ ಚೇಂಬರ್‌ನಲ್ಲಿ ನೋಂದಣಿ ಮಾಡಿಸುತ್ತಿದ್ದಂತೆ ಎಚ್‌ಡಿಕೆ ತಿರುಗಿಬಿದ್ದಿದ್ದರು. ಆ ಬಳಿಕ ನಿರಂತರವಾಗಿ 11 ಟ್ವೀಟ್‌ಗಳನ್ನು ಮಾಡಿ ಮುನಿರತ್ನ ವಿರುದ್ಧ ಆಕ್ರೋಶ ಹೊರಹಾಕಿದ್ದರು.
"ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಶ್ರೀ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ' ಉರಿಗೌಡ ನಂಜೇಗೌಡ ' ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ." ಎಂದಿದ್ದರು.
"ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ. ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೇ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶವಾಗಿದೆ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ." ಎಂದು ಕುಮಾರಸ್ವಾಮಿ ಕಿಡಿಕಾರಿದ್ದರು.
"ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ.ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ" ಹೀಗೆ ಎಚ್‌ಡಿಕೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.


Click it and Unblock the Notifications











