"ಕೀರವಾಣಿ ಮಾತು ಕೇಳಿ ಸತ್ತಂತೆ ಅನಿಸಿತು"– ಆಸ್ಕರ್ ಗೆದ್ದ ಸಂಗೀತ ನಿರ್ದೇಶಕನಿಗೆ RGV ಹೀಗಂದಿದ್ಯಾಕೆ?
ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಭಾರತೀಯ ಚಿತ್ರರಂಗಕ್ಕೆ ಅಷ್ಟೇ ಅಲ್ಲ. ಇಡೀ ವಿಶ್ವಕ್ಕೆ ಚಿರಪರಿಚಿತ. ಅದರಲ್ಲೂ RRR ಸಿನಿಮಾ "ನಾಟು ನಾಟು.." ಹಾಡಿಗೆ ಆಸ್ಕರ್ ಗೆದ್ದ ಬಳಿಕ ಕೀರವಾಣಿ ಸಂಗೀತವನ್ನು ಇಡೀ ವಿಶ್ವವೇ ಗುರುತಿಸುವಂತಾಗಿದೆ.
ಆಸ್ಕರ್ ಪ್ರಶಸ್ತಿ ಸಮಾರಂಭದ ಬಳಿಕ ಕೀರವಾಣಿ ಭಾರತಕ್ಕೆ ಮರಳಿದ್ದಾರೆ. ಇದೇ ಖುಷಿಯಲ್ಲಿ ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕೀರವಾಣಿ ಬಹುಭಾಷಾ ಸಂಗೀತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದರು.

ಈ ಸಂದರ್ಶನದಲ್ಲಿ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ನಿರ್ದೇಶಕ ಆರ್‌ಜಿವಿ ಬಗ್ಗೆ ಸಂಚಲನ ಸೃಷ್ಟಿಸುವ ಕಮೆಂಟ್ ಮಾಡಿದ್ದರು. ಆ ಕಮೆಂಟ್‌ಗೆ ರಾಮ್ ಗೋಪಾಲ್ " ನಿಮ್ಮ ಮಾತು ಕೇಳಿ ಸತ್ತಂತೆ ಭಾಸವಾಯಿತು" ಎಂದ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಕೀರವಾಣಿ ಏನಂದ್ರು? ಆರ್‌ಜಿವಿ ಹೀಗ್ಯಾಕಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
"RGV ಕೊಟ್ಟ ಅವಕಾಶವೇ ನನ್ನ ಮೊದಲ ಆಸ್ಕರ್"
ಪ್ರಶಸ್ತಿ ಪಡೆದ ಬಳಿಕ ನೀಡಿದ ಸಂದರ್ಶನದಲ್ಲಿ ಕೀರವಾಣಿ ಇದು ನನಗೆ ಸಿಕ್ಕ ಎರಡನೇ ಆಸ್ಕರ್. ಆರ್‌ಜಿವಿ ನಿರ್ದೇಶಿಸಿದ 'ಕ್ಷಣ ಕ್ಷಣಂ' ಸಿನಿಮಾದ ಮೂಲಕ ಕೀರವಾಣಿಗೆ ಜನಪ್ರಿಯತೆ ಸಿಕ್ಕಿತ್ತು. ಈ ಹಿಂದೆ ನೀಡಿದ ಸಿನಿಮಾಗಳು ಹೆಚ್ಚು ಯಶಸ್ಸು ಕಂಡಿರಲಿಲ್ಲ. ಹೀಗಾಗಿ "ರಾಮ್ ಗೋಪಾಲ್ ವರ್ಮ ಕೊಟ್ಟ ಅವಕಾಶವೇ ನನ್ನ ಮೊದಲ ಆಸ್ಕರ್" ಎಂದು ಹೇಳಿದ್ದಾರೆ.
'ಕ್ಷಣ ಕ್ಷಣಂ' ಸಿನಿಮಾಗೂ ಮುನ್ನ ಹಲವು ಸಿನಿಮಾಗಳಿಗೆ ಅವಕಾಶಕ್ಕಾಗಿ ಪ್ರಯತ್ನ ಪಟ್ಟಿದ್ದರು. ಆ ವೇಳೆ ಇವರು 50 ಮಂದಿಗೆ ಟ್ಯೂನ್‌ಗಳನ್ನು ನೀಡಿದ್ದರು. ಆಗ ಅವರೆಲ್ಲರೂ ಕಸದ ಬುಟ್ಟಿಗೆ ಎಸೆದಿದ್ದರು. ಮತ್ತೆ ಕೆಲವರು ಇಷ್ಟಪಟ್ಟರೂ ಅವಕಾಶ ಸಿಗಲಿಲ್ಲ ಎಂದು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಹೀಗಾಗಿ ರಾಮ್ ಗೋಪಾಲ್ ವರ್ಮಾರಿಂದಲೇ ಆಸ್ಕರ್ ಬಂದಿದೆ ಎಂದು ಹೇಳಿ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
"ಕೀರವಾಣಿ ಮಾತು ಸತ್ತಂತೆ ಅನಿಸಿತು" ಎಂದಿದ್ದೇಕೆ?
ಎಂಎಂ ಕೀರವಾಣಿ ತಮ್ಮ ಬಗ್ಗೆ ಆಡಿದ ಮಾತಿನ ತುಣುಕುಗಳನ್ನು ಆರ್‌ಜಿವಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕೀರವಾಣಿ ಮಾತುಗಳಿಗೆ ತಮ್ಮದೇ ಶೈಲಿಯಲ್ಲಿ ಕಮೆಂಟ್ ಕೂಡ ಮಾಡಿದ್ದಾರೆ. ಹಲವರ ಕಾಲೆಳೆದಂತೆ, ಕೀರವಾಣಿಯ ಕಾಲು ಎಳೆದಿದ್ದಾರೆ.
"ಕೀರವಾಣಿ ನನಗೆ ನಾನು ಸತ್ತಿದ್ದೇನೆ ಎಂಬಂತೆ ಭಾಸವಾಗುತ್ತಿದೆ. ಏಕೆಂದರೆ, ಸತ್ತವರನ್ ಮಾತ್ರ ಹೀಗೆ ಹೊಗಳುತ್ತಾರೆ" ಎಂದು ಕೀರವಾಣಿಗೆ ಕಮೆಂಟ್ ಮಾಡಿದ್ದಾರೆ. ಇದರೊಂದಿಗೆ ಅಳುವ ಎಮೋಜಿಗಳನ್ನು ಹಾಕಿದ್ದಾರೆ. ಎಂಎಂ ಕೀರವಾಣಿ ಮಾತುಗಳು ಹಾಗೂ ಆರ್‌ಜಿವಿ ಟ್ವೀಟ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಆಸ್ಕರ್ ಖುಷಿಯಲ್ಲಿ ಕೀರವಾಣಿ
ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ RRR ಸಿನಿಮಾ "ನಾಟು ನಾಟು.." ಹಾಡು ಆಸ್ಕರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಭಾರತದ ನಿರ್ಮಾಣ ಕಂಪನಿಯಿಂದಲೇ ತಯಾರಾದ ಚಿತ್ರಕ್ಕೆ ಈ ವಿಭಾಗದಲ್ಲಿ ಸಿಕ್ಕ ಮೊದಲ ಪ್ರಶಸ್ತಿ ಎಂಬ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡಿದೆ. ಈ ಹಿಂದೆ 'ಸ್ಲಮ್ ಡಾಗ್ ಮಿಲಿಯನೇರ್' ಸಿನಿಮಾ "ಜೈ ಹೋ.." ಹಾಡಿಗೆ ಇದೇ ವಿಭಾಗದಲ್ಲಿ ಪ್ರಶಸ್ತಿ ಬಂದಿತ್ತು. ಆದರೆ, ಅದನ್ನು ಅಮೆರಿಕದ ಕಂಪನಿ ನಿರ್ಮಾಣ ಮಾಡಿತ್ತು.
ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಕೀರವಾಣಿ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಇದೇ ವೇಳೆ ಕೀರವಾಣಿ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆಂದು ಇತ್ತೀಚೆಗೆ ಟಾಲಿವುಡ್ ಸುದ್ದಿ ಹರಿದಾಡಿತ್ತು. ಒಟ್ನಲ್ಲಿ ಕೀರವಾಣಿ ತನಗೆ ಅವಕಾಶ ನೀಡಿದವರನ್ನು ನೆನಪಿಸಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











