ತಮ್ಮ ಕುರಿತ ಈ ಸುದ್ದಿ ಸತ್ಯವಲ್ಲ ಎಂದ 'ಪಟಾಕಾ' ನಭಾ ನಟೇಶ್
ತಮ್ಮ ಮೊದಲ ಚಿತ್ರ 'ವಜ್ರಕಾಯ'ದಲ್ಲಿ ಪಟಾಕಾ ಹೆಸರಲ್ಲಿ ಖ್ಯಾತಿ ಗಳಿಸಿದವರು ನಟಿ ನಭಾ ನಟೇಶ್. ನಭಾ ಅವರಲ್ಲಿ ಬೆಂಕಿಯ ಉರಿಯಂತಹ ನಟನೆಯಿದೆ ಎಂದು ಅನೇಕರು ಹೇಳಿದ್ದರು. ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿ ಸಿಕ್ಕಿದ್ದಾರೆ ಎಂದೇ ಹೇಳಲಾಗಿತ್ತು.
Recommended Video
ಆದರೆ ವಕ್ರಕಾಯ ತೆರೆಕಂಡು ಐದು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ನಭಾ ನಟಿಸಿರುವ ಚಿತ್ರಗಳ ಸಂಖ್ಯೆ ಕೇವಲ 9. ಕನ್ನಡದ ಚಿತ್ರಗಳ ಸಂಖ್ಯೆ ಮೂರೇ ಮೂರು. ಅದರಲ್ಲಿಯೂ ಒಂದು ಹಾಡೊಂದರಲ್ಲಿಯಷ್ಟೇ ಕಾಣಿಸಿಕೊಂಡಿರುವುದು. 'ವಜ್ರಕಾಯ' ಮತ್ತು 'ಲೀ' ಎಂಬ ಸಿನಿಮಾದ ಹೊರತು ನಭಾ ಕನ್ನಡದ ಬೇರೆ ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಪಡೆದಿಲ್ಲ. ಕಳೆದ ಮೂರು ವರ್ಷಗಳಲ್ಲಿ ತೆಲುಗಿನಲ್ಲಿಯೇ ಅವರು ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂದೆ ಓದಿ...

ಸಿನಿಮಾಗಳು ಏಕೆ ಬರುತ್ತಿಲ್ಲ?
ನಭಾ ನಟೇಶ್ ಹೆಚ್ಚು ಸಂಭಾವನೆ ಕೇಳುತ್ತಾರೆ. ಇದರಿಂದಾಗಿ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾಗುತ್ತಿಲ್ಲ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡಿತ್ತು. ಇದು ಅವರಿಗೇ ಅಚ್ಚರಿ ಮೂಡಿಸಿದೆ. ನಿರ್ದೇಶಕರು ನನ್ನನ್ನು ತಮ್ಮ ಚಿತ್ರಕ್ಕೆ ಹಾಕಿಕೊಳ್ಳಲು ಏಕೆ ಮುಂದಾಗುತ್ತಿಲ್ಲ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಕಥೆ ಇಷ್ಟವಾದರೆ ಉಳಿದ ಮಾತುಕತೆ
ಸಿನಿಮಾವೊಂದರಲ್ಲಿ ನಟಿಸಲು ಆಸಕ್ತಿ ಮೂಡದ ಹೊರತು ಸಂಭಾವನೆ ವಿಚಾರ ತಾವು ಚರ್ಚಿಸುವುದೇ ಇಲ್ಲ. ಯಾವ ಭಾಷೆಯಲ್ಲಾದರೂ ಸರಿ. ಯಾವ ನಿರ್ಮಾಪಕರೂ ಹಣದ ಕುರಿತು ಮೊದಲು ಮಾತನಾಡುವುದಿಲ್ಲ. ನಾನು ಮೊದಲು ಕಥೆಯ ವಿವರ ತಿಳಿದುಕೊಳ್ಳುತ್ತೇನೆ. ಎಲ್ಲವೂ ಸರಿ ಎನಿಸಿದ ಬಳಿಕವೇ ಹಣಕಾಸಿನ ಮಾತುಕತೆ ನಡೆಯುತ್ತದೆ ಎಂದಿದ್ದಾರೆ.

ಕಥೆ ಇಷ್ಟವಾದರೆ ಸಂಭಾವನೆ ಮುಖ್ಯವಲ್ಲ
ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಎಂದಿಗೂ ಅಧಿಕ ಹಣ ಬೇಡಿಕೆ ಇರಿಸಿಲ್ಲ. ತೆಲುಗಿನಲ್ಲಿ ನಾನು ಡಿಮ್ಯಾಂಡ್ ಮಾಡುವುದು ಅಲ್ಲಿನ ಮಾರುಕಟ್ಟೆ ಮತ್ತು ನನ್ನ ಯಶಸ್ಸಿಗೆ ಅನುಗುಣವಾಗಿ ಮಾತ್ರ. ಯಾವ ನಿರ್ಮಾಪಕರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು, ಯಾರು ನನ್ನ ಪರವಾಗಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಎನ್ನುವುದು ಕೂಡ ಗೊತ್ತಿಲ್ಲ. ಒಂದು ವೇಳೆ ಕಥೆ ಇಷ್ಟವಾದರೆ ಅದರ ಇತರೆ ವ್ಯವಹಾರಗಳಿಗಿಂತ ಮುಖ್ಯವಾಗಿ ಆ ಸಿನಿಮಾದಲ್ಲಿ ನಟಿಸಲು ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಇದೆಲ್ಲ ಊಹೆಯಷ್ಟೇ
ಕನ್ನಡ ಚಿತ್ರರಂಗದ ಅನೇಕ ಜನರೊಂದಿಗೆ ತಾವು ಸಂಪರ್ಕದಲ್ಲಿ ಇರುವುದಾಗಿ ಕೂಡ ನಭಾ ತಿಳಿಸಿದ್ದಾರೆ. ತಮಗೆ ಕನ್ನಡ ಚಿತ್ರಗಳಲ್ಲಿ ಆಸಕ್ತಿ ಇಲ್ಲ ಎಂಬುದಾಗಿ ಎಂದು ಚಿತ್ರರಂಗದಲ್ಲಿ ಭಾವನೆ ಉಂಟಾಗಿದೆ ಎಂಬುದನ್ನು ಕೂಡ ಅವರಿವರ ಬಾಯಿಂದ ಕೇಳಿಸಿಕೊಂಡಿದ್ದಾರೆ. ಇದೆಲ್ಲವೂ ಕೇವಲ ಊಹೆಯಷ್ಟೇ ಎಂದು ನಭಾ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











