"ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸಿದ್ದು ನೋವಾಯ್ತಾ?" ಕೋಪದಲ್ಲಿ ಕಲಾವಿದರಿಗೆ ಪ್ರಶ್ನೆ ಮಾಡಿದ ನಾಗ ಪಾತ್ರಿ
ಕನ್ನಡ ಚಿತ್ರರಂಗ ಏಳಿಗೆ ಕಾಣುತ್ತಿಲ್ಲ. ಚಿತ್ರರಂಗ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಿದ್ದು, ಈ ಸಂಕಷ್ಟದಿಂದ ಪಾರಾಗುವುದಕ್ಕೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಡೀ ಕನ್ನಡ ಚಿತ್ರರಂಗಕ್ಕೆ ಆಹ್ವಾನವನ್ನು ನೀಡಲಾಗಿತ್ತು. ಸಿನಿಮಾರಂಗ ಎಲ್ಲಾ ಕ್ಷೇತ್ರದಿಂದಲೂ ಹಲವು ಮಂದಿ ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ಅವರ ಸಲಹೆಯಂತೆ ಇಂದು ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ, 'ಗಣಯಾಗ', 'ಅಶ್ಲೇಷ ಬಲಿ', 'ಸರ್ಪ ಶಾಂತಿ' ಹಾಗೂ ಮೃತ್ಯುಂಜಯ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ನಾಗ ದರ್ಶನ ಕೂಡ ನಡೆಯಿತು. ಈ ವೇಳೆ ನಾಗ ಪಾತ್ರಿ ಕನ್ನಡದ ಕಲಾವಿದರ ಮೇಲೆ ಸಿಟ್ಟು ಮಾಡಿಕೊಂಡಿದೆ.

ಕನ್ನಡದ ಹಿರಿಯ ನಟ ಜಗ್ಗೇಶ್, ದೊಡ್ಡಣ್ಣ ಹಾಗೂ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಎದುರಲ್ಲಿ ಕೋಪವನ್ನು ಹೊರ ಹಾಕಿದೆ. ಕಲಾವಿದರಲ್ಲಿ ಸಂಘದಲ್ಲಿ ದೇವರ ಪೂಜೆಯೇ ನಡೆಯುತ್ತಿಲ್ಲ. ಬದಲಾಗಿ ಕಲಾವಿದರ ಹುಟ್ಟಿದ ಹಬ್ಬವನ್ನು ಆಚರಣೆ ಮಾಡುತ್ತಿದ್ದೀರಿ ಎಂದು ನುಡಿಕೊಟ್ಟಿದೆ ದೈವ ಪಾತ್ರಿ. ಈ ಮಾತುಗಳನ್ನು ಕೇಳಿ ಕಲಾವಿದರು ಬೆಚ್ಚಿಬಿದ್ದಿದ್ದಾರೆ.
ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಜಗ್ಗೇಶ್ ಮುಂದೆ ನಾಗ ಪಾತ್ರಿ "ಈ ಕಲಾವಿದರ ಸಂಘವನ್ನು ಅಲುಗಾಡುವುದಕ್ಕೆ ಬಿಡುವುದಿಲ್ಲ. ಆದರೆ, ಪ್ರತಿ ತಿಂಗಳು ನನಗೆ ಏನು ಮಾಡುತ್ತೀರಿ?" ಎಂದು ಪ್ರಶ್ನೆ ಮಾಡಿತ್ತು. ಆ ವೇಳೆ ಯಾರೂ ಉತ್ತರ ಕೊಡುವುದಕ್ಕೆ ಮುಂದೆ ಬಾರದೇ ಇದ್ದಾಗ, "ಯಾಕೆ ಧನ ಕಡಿಮೆ ಆಯ್ತಾ? ಇದು ಶಾರದೆಯ ಸ್ಥಳ. ನಾನು ಇಲ್ಲಿ ಆಡಂಬರದಲ್ಲಿ ಪೂಜೆ ಪುನಸ್ಕಾರ ಮಾಡುವಂತೆ ಹೇಳಿದ್ನಾ? ಈ ಸ್ಥಳದಲ್ಲಿ ಶಾರದಾ ಪೂಜೆ, ಗಣೇಶ ಚತುರ್ಥಿ ಈ ಸ್ಥಳದಲ್ಲಿ ನಡೆಯುತ್ತಿತ್ತು. ನಿಮಗೆ ದೇವರು ಹುಟ್ಟಿದ ದಿನ ಬೇಡ. ತಾವು ಹುಟ್ಟಿದ ಆಚರಣೆ ಮಾಡುತ್ತೀರ ಇಲ್ಲಿ." ಎಂದು ನಾಗ ಪಾತ್ರಿಯ ಪ್ರಶ್ನೆ ಮಾಡಿದಾಗ ಹಿರಿಯ ಕಲಾವಿದರು ತಬ್ಬಿಬ್ಬಾಗಿದ್ದಾರೆ.
ಇದೇ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್ ದೈವ ಭಕ್ತಿಯ ಬಗ್ಗೆನೂ ನಾಗ ಪಾತ್ರಿ ಹೇಳಿದೆ. "ಸ್ವಾಮಿಯ ಆರಾಧನೆಯನ್ನು ಮುಂಚೂಣಿಯಲ್ಲಿ ಇಟ್ಟು ಕೊಂಡವವರು ನೀವು. " ಎಂದು ನಟ ಜಗ್ಗೇಶ್‌ಗೆ, "ಭಗವತಿಯ ಆರಾಧೆಯನ್ನು ಮುಂಚೂಣಿಯಲ್ಲಿ ಇಟ್ಟುಕೊಂಡವವರು" ಎಂದು ರಾಕ್‌ಲೈನ್ ವೆಂಕಟೇಶ್‌ಗೆ ಹಾಗೂ "ಎಲ್ಲಾ ದೇವರನ್ನು ಪೂಜಿಸುವವರು ನೀವು" ಎಂದು ದೊಡ್ಡಣ್ಣಗೆ ನಾಗ ಪಾತ್ರಿ ಹೇಳಿದೆ.

ಇನ್ಮುಂದೆ ಈ ಸ್ಥಳದಲ್ಲಿ ಉತ್ತಮ ಕೆಲಸಗಳು ನಡೆಯಬೇಕು. ಈ ಹಿಂದೆ ಯಾರೆಲ್ಲ ಹಿರಿಯರು ಸೇರುತ್ತಿದ್ದರೋ, ಇಂದಿನ ತಲೆ ಮಾರು ಸೇರುತ್ತಿದೆಯೋ, ಅವರೆಲ್ಲರನ್ನೂ ಒಗ್ಗೂಡಸಬೇಕು. ಇವರೆಲ್ಲರೂ ಮುಂದೆಯೂ, ಹಿಂದೆಯೂ ಒಗ್ಗೂಡುವಂತೆ ಆದಿಶೇಷನಾಗಿ ನಾನು ಬರುತ್ತೇನೆ ಎಂದು ನಾಗ ಪಾತ್ರಿ ಹೇಳಿದೆ. ಹಾಗೇ ಕಲಾವಿದರ ಸಂಘದಲ್ಲಿ ತನ್ನ ಬಿಂಬವನ್ನು ಪ್ರತಿಷ್ಠಾಪನೆಯನ್ನು ಮಾಡಬೇಕು ಎಂದು ಹೇಳಿದೆ.
ಕಲಾವಿದರ ಸಂಘದಲ್ಲಿ ನಾಗಾರಾಧನೆ ಮಾಡುವ ಸಂದರ್ಭದಲ್ಲಿ ನಟಿ ಜ್ಯೋತಿಯವರ ಮೈಮೇಲೆ ದೇವರ ಆವಾಹನೆಯಾಗಿದೆ. ಈ ದೃಶ್ಯ ಕೂಡ ಕಂಡು ಬಂದಿತ್ತು. ಇಂದು (ಆಗಸ್ಟ್ 14) ಕಲಾವಿದರ ಸಂಘದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಕಲಾವಿದರ ನಾಗ ಪಾತ್ರಿ ಒಂದಿಷ್ಟು ಸಲಹೆಯನ್ನು ನೀಡಿದ್ದು, ಅದರಂತೆ ಕಲಾವಿದರು ನಡೆದುಕೊಳ್ಳುತ್ತಾರಾ ಅನ್ನೋದು ನೋಡಬೇಕಿದೆ.


Click it and Unblock the Notifications











