'ಮೈನೆ ಪ್ಯಾರ್ ಕಿಯಾ' ಹೀರೋಯಿನ್ ಭಾಗ್ಯಶ್ರೀ ಪುತ್ರಿ ಸ್ಯಾಂಡ್‌ವುಡ್‌ಗೆ ಎಂಟ್ರಿ; "ಕ್ಯೂ" ಕೊಟ್ಟ ನಾಗಶೇಖರ್
ಕನ್ನಡದ ನಿರೀಕ್ಷೆಯ ಸಿನಿಮಾಗಳಲ್ಲೊಂದು 'ಸಂಜು ವೆಡ್ಸ್ ಗೀತಾ 2'. ನಾಗಶೇಖರ್ ಹಾಗೂ ಶ್ರೀನಗರ ಕಿಟ್ಟಿ ಒಟ್ಟಿಗೆ ಸೇರಿಕೊಂಡಿರುವ ಸಿನಿಮಾವಿದು. ಈಗಾಗಲೇ ಸಿನಿಮಾ ಮುಗಿದು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಈ ರೊಮ್ಯಾಂಟಿಕ್ ಸಿನಿಮಾ ರಿಲೀಸ್ ಆಗುವುದರೊಳಗೆ ಮತ್ತೊಂದು ಸಿನಿಮಾಗೆ ನಾಗಶೇಖರ್ ಕೈ ಹಾಕಿದ್ದಾರೆ. ಈ ಬಾರಿ ನಿರ್ದೇಶನ ಅಷ್ಟೇ ಅಲ್ಲ. ನಿರ್ಮಾಣ ಕೂಡ ಅವರದ್ದೇ.
ನಾಗಶೇಖರ್ 'ಸಂಜು ವೆಡ್ಸ್ ಗೀತಾ' ನೋಡುವುದಕ್ಕೆ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ನಾಗಶೇಖರ್ ಹೊಸ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಸೀದಾ ಮುಂಬೈಗೆ ಹೋಗಿ ತಮ್ಮ ಹೊಸ ಸಿನಿಮಾಗೆ ನಾಯಕಿಯನ್ನು ಹುಡುಕಿಕೊಂಡು ಬಂದಿದ್ದಾರೆ. ಆ ಹೀರೋಯಿನ್ ಯಾರು? ಯಾಕಿಷ್ಟು ಹೈಪ್? ಸಿನಿಮಾದ ಹೆಸರೇನು? ಅಂತ ಹೇಳಿದರೆ ನಿಮ್ಮಲ್ಲೂ ಈ ಸಿನಿಮಾ ಬಗ್ಗೆ ಆಸಕ್ತಿ ಮೂಡಬಹುದು.

ನಾಗಶೇಖರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಹೊಚ್ಚ ಹೊಸ ಸಿನಿಮಾದ ಹೆಸರು 'ಕ್ಯೂ'. ಇದೇ ಸಿನಿಮಾಗೆ ಬಾಲಿವುಡ್‌ನ ಜನಪ್ರಿಯ ನಾಯಕಿಯ ಪುತ್ರಿಯನ್ನು ಸ್ಯಾಂಡಲ್‌ವುಡ್‌ಗೆ ಕರೆದುಕೊಂಡು ಬಂದಿದ್ದಾರೆ. 1989ರಲ್ಲಿ ಸಲ್ಮಾನ್ ಖಾನ್ ನಟಿಸಿದ ಸೂಪರ್ ಹಿಟ್ ಸಿನಿಮಾ 'ಮೈನೆ ಪ್ಯಾರ್ ಕಿಯಾ' ಸಿನಿಮಾ ನಾಯಕಿ ಭಾಗ್ಯಶ್ರೀ. ಇವರ ಪುತ್ರಿ ಅವಂತಿಕಾ ದಸ್ಸಾನಿ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಅವಂತಿಕಾ ದಸ್ಸಾನಿ ಈಗಾಗಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾಗಿದೆ. ಮೊದಲ ಬಾಲಿವುಡ್ ಸಿನಿಮಾ 'ಯು ಶೇಪ್ ಕಿ ಗಲ್ಲಿ'ಯಲ್ಲಿ ನಟಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ 'ಮಿತ್ಯ' ಅನ್ನುವ ವೆಬ್ ಸೀರಿಸ್‌ನಲ್ಲಿಯೂ ನಟಿಸಿದ್ದರು. ಆದರೆ, ಬಾಲಿವುಡ್ ಸಿನಿಮಾಗೆ ಅಂದ್ಕೊಂಡಷ್ಟು ರೆಸ್ಪಾನ್ಸ್ ಸಿಕ್ಕಿಲ್ಲ. ಈಗ ನಾಗಶೇಖರ್ ನಿರ್ದೇಶಿಸುತ್ತಿರುವ 'ಕ್ಯೂ' ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈ 'ಕ್ಯೂ' ಸಿನಿಮಾಗೆ ಹೀರೋ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್. ಯುವ ಜೋಡಿಯನ್ನು ಇಟ್ಟುಕೊಂಡು ನಾಗಶೇಖರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದೊಂದು ಬಿಗ್ ಬಜೆಟ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
'ಸಂಜು ವೆಡ್ಸ್ ಗೀತಾ', 'ಮೈನಾ'ದಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಾಗಶೇಖರ್ ತಮ್ಮದೇ ನಾಗಶೇಖರ್ ಮ್ಯಾಜಿಕ್ಸ್ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. 'ಕ್ಯೂ' ಸಿನಿಮಾಗೆ ಕಥೆ ಹಾಗೂ ಚಿತ್ರಕಥೆ ಕೂಡ ಅವರದ್ದೇ. ಈ ಬಾರಿ ನಾಗಶೇಖರ್ ಸಂಗೀತದ ಜವಾಬ್ದಾರಿಯನ್ನೂ ತಾವೇ ಹೊತ್ತು ಕೊಂಡಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿದ್ದು, 'ಕ್ಯೂ' ಮುಂದಿನ ತಿಂಗಳಿಂದ ಆರಂಭ ಆಗಲಿದೆ.
ಈ ಮಧ್ಯೆ 'ಸಂಜು ವೆಡ್ಸ್ ಗೀತಾ 2' ರಿಲೀಸ್ ಕೂಡ ಆಗಬೇಕಿದೆ. ಇನ್ನು 'ಮೈನೆ ಪ್ಯಾರ್ ಕಿಯಾ' ನಟಿ ಭಾಗ್ಯಶ್ರೀಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಅವರು ನಟಿಸಿರುವ ಕೆಲವೇ ಕೆಲವು ಸಿನಿಮಾಗಳಲ್ಲಿ ಕನ್ನಡದ್ದೇ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವಣ್ಣನಿಗೆ ನಾಯಕಿ 'ಅಮ್ಮಾವ್ರ ಗಂಡ' ಹಾಗೂ 'ಗಂಡುಗಲಿ ಕುಮಾರರಾಮ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ನಿಖಿಲ್ ಕುಮಾರಸ್ವಾಮಿ ಸಿನಿಮಾ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











