"ಪೃಥ್ವಿ ಭಟ್‌ಗೆ ನನ್ನ ಪತಿ ಧಾರೆ ಎರೆದು ಕೊಟ್ಟಿಲ್ಲ, ಆರೋಪಕ್ಕೆಲ್ಲ ಪ್ರೂಫ್ ಕೊಡಬೇಕು"; ನರಹರಿ ದೀಕ್ಷಿತ್ ಪತ್ನಿ ಪ್ರತಿಕ್ರಿಯೆ
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮದುವೆ ವಿವಾದಕ್ಕೆ ಸಿಲುಕಿದೆ. ಗಾಯಕಿಯ ತಂದೆ ಶಿವಪ್ರಸಾದ್ ತಮ್ಮ ಮಗಳನ್ನು ವಶೀಕರಣ ಮಾಡಿ ಮದುವೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಪ್ರಮುಖವಾಗಿ ಗಾಯಕ ಹಾಗೂ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ತಮ್ಮ ಮಗಳಿಗೆ ಧಾರೆ ಎರೆದು ಕೊಟ್ಟಿದ್ದೇ ನರಹರಿ ದೀಕ್ಷಿತ್ ಎಂದು ಆರೋಪಿಸಿದ್ದರು. ಈ ಪ್ರತ್ಯುತ್ತರವಾಗಿ ಗಾಯಕ ನರಹರಿ ದೀಕ್ಷಿತ್ ಕೂಡ ತಿರುಗೇಟು ಕೊಟ್ಟಿದ್ದರು.
ಈಗ ಪತಿ ನರಹರಿ ದೀಕ್ಷಿತ್ ಅವರ ಬೆಂಬಲಕ್ಕೆ ಪತ್ನಿ ಪಾರ್ವತಿ ದೀಕ್ಷಿತ್ ನಿಂತಿದ್ದಾರೆ. ಪೃಥ್ವಿ ಭಟ್ ಮದುವೆಗೆ ತಮ್ಮ ಪತಿ ನರಹರಿ ದೀಕ್ಷಿತ್ ಕಾರಣರಲ್ಲ. ಪತಿಯ ಮೇಲೆ ಇಷ್ಟೆಲ್ಲ ಗಂಭೀರ ಆರೋಪ ಮಾಡುವಾಗ ಅವರ ಬಳಿ ಸಾಕ್ಷಿಗಳನ್ನು ಕೊಡಬೇಕು. ಪೃಥ್ವಿ ಭಟ್ ಮದುವೆಗೂ ನಮ್ಮ ಮನೆಯವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಗಾಯಕಿ ಪೃಥ್ವಿ ಭಟ್ ಮನೆಯರ ವಿರೋಧದ ನಡುವೆ ಜೀ ಕನ್ನಡದಲ್ಲಿ ಉದ್ಯೋಗಿ ಅಭಿಷೇಕ್ ಎಂಬುವವರನ್ನು ವಿವಾಹವಾಗಿದ್ದಾರೆ. ಈ ಸಂಬಂಧ ಗಾಯಕಿ ತಂದೆಯ ಆಡಿಯೋ ವೈರಲ್ ಆಗಿತ್ತು. ಮನೆಯನ್ನು ತೊರೆದು ಮಗಳು ಮದುವೆ ಆಗಿದ್ದಕ್ಕೆ ಗಾಯಕ ನರಹರಿ ದೀಕ್ಷಿತ್ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಅದಕ್ಕೀಗ ನರಹರಿಯವರ ಪತ್ನಿ ಮದುವೆ ದಿನ ಏನಾಯ್ತು? ಅನ್ನೋದನ್ನು ವಿವರಿಸಿದ್ದಾರೆ.
ಆರೋಪ ಮಾಡುವಂತಹ ತಪ್ಪು ಮಾಡಿಲ್ಲ.
ಗಾಯಕಿ ಪೃಥ್ವಿ ಭಟ್ ಚಿಕ್ಕ ವಯಸ್ಸಿನಿಂದ ನರಹರಿ ದೀಕ್ಷಿತ್ ಅವರ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ದೀಕ್ಷಿತ್ ಅವರ ಕುಟುಂಬ ಪೃಥ್ವಿ ಭಟ್ ಅವರನ್ನು ಚಿಕ್ಕಂದಿನಿಂದ ನೋಡಿದೆ. ನರಹರಿ ದೀಕ್ಷಿತ್ ಅವರ ಪತ್ನಿಗೂ ಪೃಥ್ವಿ ಭಟ್ ತುಂಬಾನೇ ಆತ್ಮೀಯರು. ಈಗ ಗಾಯಕಿಯ ಮನೆಯವರು ಮಾಡುತ್ತಿರುವ ಆರೋಪವನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
"ನಮಗೆಲ್ಲ ಶಾಕ್ ಆಗಿತ್ತು. ಇಷ್ಟೆಲ್ಲ ಆರೋಪ ಮಾಡುವಷ್ಟು ತಪ್ಪು ಮಾಡಿದ್ದಾರಾ ಅಂತ. ಪೃಥ್ವಿ ಭಟ್ ಮದುವೆ ಆದ್ಮೇಲೆ ಇವರು ಕ್ಯಾಂಪ್‌ಗೆ ಹೋಗಿದ್ದರು. ಅವರು ಕ್ಯಾಂಪ್‌ನಿಂದ ಬರುವಷ್ಟರಲ್ಲಿ ಸ್ವಲ್ಪ ಡಲ್ ಆಗಿದ್ದರು. ಆದರೆ, ಅವತ್ತಿನ ದಿನ ಶೂಟಿಂಗ್‌ಗೆ ಹೋಗಬೇಕಿತ್ತು. ಇತ್ತ ಪೃಥ್ವಿ ಭಟ್ ಅವರ ತಾಯಿ ಫೋನ್ ಮಾಡಿ, ನಿಮ್ಮ ಮನೆಯವರು ಮದುವೆಗೆ ಹೋಗಿದ್ದಾರೆ. ನೀವು ಹೋಗಿದ್ರಾ? ಅಂತೆಲ್ಲ ಪ್ರಶ್ನೆ ಕೇಳಿದರು. ಇಲ್ಲ ನಾನು ಹೋಗಿಲ್ಲ. ನಾನು ಊರಲ್ಲಿ ಇರಲಿಲ್ಲ. ನನಗೆ ಗೊತ್ತಿಲ್ಲ ಎಂದೆ. ಹಾಗೇ ಅವರಿಗೆ ಧಾರೆ ಎರೆದು ಕೊಟ್ಟಿದ್ದೆಲ್ಲ ನನಗೆ ಗೊತ್ತಿಲ್ಲ ಎಂದೆ. " ಎಂದು ಪೃಥ್ವಿ ಭಟ್ ಅವರ ತಾಯಿಯೊಂದಿಗಿನ ಸಂಭಾಷಣೆಯನ್ನು ನರಹರಿ ದೀಕ್ಷಿತ್ ಅವರ ಪತ್ನಿ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ಮದುವೆಗೆ ತಯಾರಿ ನಡೆದಿತ್ತು
ನರಹರಿ ದೀಕ್ಷಿತ್ ಅವರು ಪೃಥ್ವಿ ಭಟ್ ಮದುವೆ ವಿಚಾರವನ್ನು ಅವರ ತಂದೆಗೆ ಮೊದಲೇ ತಿಳಿಸಿದ್ದರು. ಆ ವಿಚಾರವನ್ನು ಪತ್ನಿಗೂ ತಿಳಿಸಿದ್ದರು. "ಮದುವೆ ವಿಚಾರ ಅಂತೆ. ನಾನು ಅವರ ಮನೆವರೆಗೂ ಹೋಗಿ ಬಂದಿದ್ದೀನಿ. ಇನ್ನು ನಿರ್ಧಾರ ಅವರ ಮನೆಯವರಿಗೆ ಬಿಟ್ಟಿದ್ದು ಅಂತ ನನ್ನ ಮನೆಯವರು ಹೇಳಿದ್ರು. ಮದುವೆ ಹಿಂದಿನ ದಿನ ನಮ್ಮ ಮನೆಯವರು ಶೂಟಿಂಗ್‌ಗೆ ಹೋಗಿದ್ದರು. ಪೃಥ್ವಿ ಭಟ್ ಕೂಡ ಇದ್ದರು. ಶೂಟಿಂಗ್ ಎಲ್ಲಾ ಮುಗಿಸಿಕೊಂಡು ಬಂದಿದ್ದಾರೆ. ಮದುವೆಯಾದ ದಿನ ನಾನು ಊರಲ್ಲಿ ಇರಲಿಲ್ಲ. ಆ ದಿನ ಇವರು ಮದುವೆ ಆಯ್ತು ಅಂತ ಹೇಳಿದರು. ಇಷ್ಟು ಬೇಗ ಹೇಗೆ ಮದುವೆ ಆಯ್ತು ಅಂತ ಕೇಳಿದೆ. ಅದಕ್ಕೆ ಇವರು ಮನೆಯಲ್ಲಿ ಬೇರೆ ಏನೋ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಅಂತ ಅನಿಸುತ್ತೆ. ಇವರು ಡಿಸೈಡ್ ಮಾಡಿಕೊಂಡು ಮದುವೆ ಆಗಿದ್ದಾರೆ. ನನ್ನನ್ನು ಕರೆದಾಗ, ಏನೋ ಮಾತುಕಥೆಗೆ ಇರಬಹುದು ಅಂದುಕೊಂಡೆ. ನಾನು ಹೋದಾಗ ಮದುವೆಗೆ ತಯಾರಿ ನಡೆದಿತ್ತು" ಎಂದು ಆ ದಿನ ನಡೆದ ಘಟನೆಯನ್ನು ಪತ್ನಿಯ ಬಳಿ ವಿವರಿಸಿದ್ದರು.
ಫೋನ್ ಮಾಡಿ ಬೈಯ್ಯುತ್ತಿದ್ದರು
"ಇವರ ಸ್ಟುಡೆಂಟ್‌ಗಳು ಬಂದು ನಮಸ್ಕಾರ ಮಾಡಿ, ಆಮಂತ್ರಣ ಪತ್ರಿಕೆ ಕೊಟ್ಟು ಮದುವೆ ಇದೆ ಬನ್ನಿ ಅಂತ ಹೇಳಿ ಆಶೀರ್ವಾದ ತೆಗೆದುಕೊಂಡು ಪ್ರೀತಿಯಿಂದ ಹೋಗುತ್ತಾರೆ. ಇದು ಆಕೆಯ ಮನೆಯವರು ಇಲ್ಲದೆ ನಡೆದ ಮದುವೆ. ಹೀಗಾಗಿ ಮದುವೆ ಆಗಿದೆ ಬಿಡು ಒಳ್ಳೆಯದಾಗಿ ಅಂತ ನಾನು ಅಂದುಕೊಂಡೆ. ಮದುವೆ ಆದ ನಾಲ್ಕು ದಿನಗಳಾದ್ಮೇಲೆ ಇವರಿಗೆ ಸಿಕ್ಕಾಪಟ್ಟೆ ಫೋನ್ ಕಾಲ್‌ಗಳು ಬರುವುದಕ್ಕೆ ಶುರುವಾಗಿದ್ದವು. ಪೋನ್ ಮಾಡಿ ಬೈಯ್ಯುವುದೆಲ್ಲ ಮಾಡುತ್ತಿದ್ದರು. ಇದ್ಯಾಕೆ ಇಷ್ಟೊಂದು ದೊಡ್ಡ ಅಪರಾಧ ಮಾಡಿದ್ದೇವಾ? ಅಂದು ಬೇಜಾರಾಯ್ತು." ಎನ್ನುತ್ತಾರೆ ನರಹರಿ ದೀಕ್ಷಿತ್ ಪತ್ನಿ.
ಆರೋಪದಲ್ಲಿ ನಿಜಾಂಶವಿಲ್ಲ
ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಮಾಡಿದ ಸತ್ಯಾಂಶವಿಲ್ಲ ಎಂದು ನರಹರಿ ದೀಕ್ಷಿತ್ ಅವರ ಪತ್ನಿ ಪಾರ್ವತಿ ದೀಕ್ಷಿತ್ ಹೇಳಿದ್ದಾರೆ. "ಅವರು ಮಾಡುತ್ತಿರುವ ಆರೋಪದಲ್ಲಿ ನಿಜಾಂಶ ಅಂತೂ ಇಲ್ಲವೇ ಇಲ್ಲ. ಆಮೇಲೆ ನಮ್ಮ ಮನೆಯವರು ಮಾಡಿದ್ದು ಅಷ್ಟು ದೊಡ್ಡ ಅಪರಾಧ ಅಲ್ಲವೇ ಅಲ್ಲ. ಮದುವೆ ಆದಾಗ ಅಲ್ಲಿಗೆ ಹೋದರು. ಎಲ್ಲಾ ಮಕ್ಕಳಿಗೂ ಆಶೀರ್ವಾದ ಮಾಡುವಂತೆ ಇವರೂ ಅವರಿಬ್ಬರಿಗೆ ಒಳ್ಳೆಯದಾಗಲಿ ಅಂತ ಹರಸಿ ಬಂದರು ಅಷ್ಟೇ. ಇದರ ಬಗ್ಗೆ ಮಾಹಿತಿ ಏನೂ ಇರಲಿಲ್ಲ. ಇದನ್ನು ಸ್ಪಷ್ಟವಾಗಿಯೇ ಹೇಳುತ್ತಿದ್ದೇವೆ. ಧಾರೆ ಎರೆದುಕೊಟ್ಟರು ಅಂತ ಹೇಳುತ್ತಿದ್ದಾರಲ್ಲ ಅದೆಲ್ಲ ಸುಳ್ಳು. ಆಶೀರ್ವಾದ ಮಾಡಿ ಬಂದಿದ್ದಷ್ಟೇ. ಅವರು ಮಾಡಿದ ಆರೋಪಕ್ಕೆಲ್ಲ ಪ್ರೂಫ್ ಕೊಡಬೇಕಾಗುತ್ತೆ." ಎನ್ನುತ್ತಾರೆ.

ಇಷ್ಟು ರಂಪಾಟ ಮಾಡುತ್ತಿರಲಿಲ್ಲ
"ಮಗಳು ಹೀಗಿರಬೇಕು ಅಂತ ಕನಸು ಕಟ್ಟಿಕೊಳ್ಳುವುದು ಸಹಜ. ಆದರೆ, ಅವರ ಹಣೆಮೇಲೆ ಏನೋ ಬರೆದಿರುತ್ತೆ. ಅದನ್ನು ಅವರೂ ತಪ್ಪಿಸುವುದಕ್ಕೆ ಆಗಲ್ಲ. ನಾವು ತಪ್ಪಿಸುವುದಕ್ಕೂ ಆಗಲ್ಲ. ಅವರ ಮಗಳ ಬಗ್ಗೆ ಒಳ್ಳೆಯ ಅಭಿಪ್ರಾಯ, ಕನಸು ಇಟ್ಟುಕೊಂಡಿದ್ದರೆ ಇಷ್ಟು ದೊಡ್ಡ ರಂಪಾಟ ಮಾಡುತ್ತಿರಲಿಲ್ಲ. ಅವರು ಬನ್ನಿ ನಮ್ಮ ಗುರುಗಳ ಹತ್ತಿರ ಹೋಗೋಣ. ನೀವು ಮಾಡಿದ್ದು ಸರಿನಾ ಅಂತ ಕೇಳಬಹುದಿತ್ತು. ಪೊಲೀಸರು ಹತ್ತಿರ, ವಕೀಲರ ಹತ್ತಿರ ಹೋಗಬಹುದಿತ್ತು. ನಮ್ಮ ಯಜಮಾನರು ಏನೋ ದೊಡ್ಡ ಅಪರಾಧ ಮಾಡಿದ್ದಾರೆ ಎಂತ ಹೇಳುವುದನ್ನು ಅವರು ಸಾಬೀತು ಮಾಡಬೇಕಾಗುತ್ತೆ." ಎಂದು ಪಾರ್ವತಿ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಗಾಯಕಿ ಪೃಥ್ವಿ ಭಟ್ ಅವರನ್ನು ವಿವಾಹವಾಗಿರುವ ಅಭಿಷೇಕ್ ಜೀ ಕನ್ನಡ ಮ್ಯೂಸಿಕ್ ಶೋ ಸರಿಗಮಪದ ಸಹ ನಿರ್ದೇಶಕರಾಗಿದ್ದಾರೆ. ಕಳೆದ 9 ವರ್ಷಗಳಿಂದ ಈ ಶೋನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪೃಥ್ವಿ ಭಟ್ ಈ ಶೋದ ಸ್ಪರ್ಧಿಯಾಗಿದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಆದರೆ, ಪೃಥ್ವಿ ಭಟ್ ಮನೆಯವರು ಒಪ್ಪಿರಲಿಲ್ಲ. ನರಹರಿ ದೀಕ್ಷಿತ್ ಅವರು ಹೇಳುವ ಪ್ರಕಾರ, ಇವರಿಬ್ಬರ ವಿಷಯ ತಿಳಿಯುತ್ತಿದ್ದಂತೆ ಪೃಥ್ವಿ ಭಟ್‌ಗೆ ಬೇರೆ ಸಂಬಂಧವನ್ನು ಹುಡುಕುತ್ತಿದ್ದರು. ಈ ವಿಷಯ ತಿಳಿದು ಇಬ್ಬರೂ ಮನೆಯವರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದೇ ಈಗ ರಂಪಾಟವಾಗಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.


Click it and Unblock the Notifications











