63 ವರ್ಷಗಳ ಮೊದಲೇ 'ಚಂದ್ರಯಾನ' ಮಾಡಿದ್ದ ಉಮೇಶ್-ನರಸಿಂಹರಾಜು: ಇಲ್ಲಿದೆ ವಿಡಿಯೋ!
'ಚಂದ್ರಯಾನ 3' ಭಾರತದ ಪ್ರತಿಷ್ಠಿತ ಮಿಷನ್. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಅದರಲ್ಲೂ ಭಾರತೀಯರು 'ಚಂದ್ರಯಾನ 3' ಯಶಸ್ವಿಯಾಗಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಇಸ್ರೋ ವಿಕ್ರಮ್ ಲ್ಯಾಂಡರ್ ಅನ್ನು ನಾಳೆ (ಆಗಸ್ಟ್ 23)ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ಇಳಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಾಗಿ ಲ್ಯಾಂಡರ್ ಈಗ ಚಂದ್ರನಿಗೆ ತೀರಾ ಸಮೀಪದಲ್ಲಿದೆ. ಈ ಲ್ಯಾಂಡರ್ ಸೇಫ್ ಆಗಿ ಚಂದ್ರನ ಮೇಲೆ ಇಳಿದರೆ, ಭಾರತದ ಗರಿಮೆ ವಿಶ್ವ ಶೈನ್ ಆಗುತ್ತೆ.

ಸದ್ಯ ಚಂದ್ರನ ದಕ್ಷಿಣ ಧ್ರುವದ ಫೋಟೊಗಳನ್ನು ವಿಕ್ರಮ್ ಲ್ಯಾಂಡರ್ ಕಳುಹಿಸಿಕೊಟ್ಟಿದೆ. ಇದು ನೋಡಿ ಜನರು ಪುಳಕಿತರಾಗಿದ್ದಾರೆ. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿದು ಮನುಷ್ಯರು ವಾಸಿಸಲು ಯೋಗ್ಯವೆನಿಸಿದರೆ, ಮತ್ತೆ ಹೊಸ ಪ್ರಯೋಗಗಳು ಆಗಬಹುದೇನೋ. ಆದರೆ, 'ಚಂದ್ರಯಾನ 3' ಚರ್ಚೆಯಲ್ಲಿರುವ ವೇಳೆ ನೀಲ್ ಆರ್ಮ್‌ಸ್ಟ್ರಾಂಗ್‌ಗಿಂತಲೂ ಮುನ್ನ ಕನ್ನಡಿಗರಿಬ್ಬರು ಚಂದ್ರ ಮೇಲೆ ಕಾಲಿಟ್ಟಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮೊದಲು ಚಂದ್ರನ ಮೇಲೆ ಕಾಲಿಟ್ಟಿದ್ದು ಕನ್ನಡಿಗರು
ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ವಿಡಿಯೋ ಒಂದು ಹರಿದಾಡುತ್ತಿದೆ. ಚಂದ್ರನ ಮೇಲೆ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಕಾಲಿಡುವುದಕ್ಕೂ ಮುನ್ನ ಇಬ್ಬರು ಕನ್ನಡಿಗರು ಕಾಲಿಟ್ಟಿದ್ದರು. 63 ವರ್ಷದ ಹಿಂದಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಅಸಲಿಗೆ ಚಂದ್ರನ ಮೇಲೆ ಮೊದಲಿಗೆ ಕಾಲಿಟ್ಟ ಆ ಇಬ್ಬರು ಕನ್ನಡಿಗರು ಯಾರು ಅಂತಿರಾ? ತಿಳಿಯಲು ಮುಂದೆ ಓದಿ.

ಆ ಇಬ್ಬರು ಕನ್ನಡಿಗರು ಇವರೇ!
ಚಂದ್ರ ಮೇಲೆ ಕಾಲಿಟ್ಟ ಇಬ್ಬರು ಕನ್ನಡಿಗರು ಯಾರು? ಅಂದರೆ, ಅದು ಕನ್ನಡ ಚಿತ್ರರಂಗದ ಇಬ್ಬರು ಮೇರು ನಟರು ಉಮೇಶ್ ಹಾಗೂ ದಿವಂಗತ ನರಸಿಂಹರಾಜು. ಇಬ್ಬರು ಹಾಸ್ಯ ಕಲಾವಿದರು 1960ರಲ್ಲಿ ತೆರೆಕಂಡಿದ್ದ 'ಮಕ್ಕಳ ರಾಜ್ಯ' ಸಿನಿಮಾದಲ್ಲಿಯೇ ಚಂದ್ರ ಮೇಲೆ ಕಾಲಿಟ್ಟಿದ್ದರು. ಅದೇ ದೃಶ್ಯ 'ಚಂದ್ರಯಾನ 3' ಸಂದರ್ಭದಲ್ಲಿ ವೈರಲ್ ಆಗುತ್ತಿದೆ. ಈ ಸಿನಿಮಾವನ್ನು ಬಿ ಆರ್ ಪಂತುಲು ನಿರ್ದೇಶನ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಶಿವಾಜಿ ಗಣೇಶನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸಿನಿಮಾದಲ್ಲಿದ್ದ ಕಲ್ಪನೆ ಮೆಚ್ಚುಗೆ
1960ರಲ್ಲಿ ತೆರೆಕಂಡ ಕನ್ನಡ ಸಿನಿಮಾವೊಂದು ಈ ಮಟ್ಟಿಗೆ ಅಡ್ವಾನ್ಸ್ ಆಗಿ ಹೇಗೆ ಯೋಚನೆ ಮಾಡಿತು ಅನ್ನೋದೇ ಇಂಟ್ರೆಸ್ಟಿಂಗ್. ಉಮೇಶ್ ಹಾಗೂ ನರಸಿಂಹರಾಜು ಇಬ್ಬರೂ ವಿಶೇಷ ವಿಮಾನದ ಮೂಲಕ ಚಂದ್ರನಲ್ಲಿಗೆ ಹಾರಿ ಬರುವ ದೃಶ್ಯವಿದೆ. ಹಾಗಂತ ಬಂದು ನೇರವಾಗಿ ಇಳಿಯುವುದಿಲ್ಲ. ಇಂದಿನಂತೆ ಆಕ್ಸಿಜನ್ ಹೊತ್ತು, ಮುಖವಾಡ ಧರಿಸಿ ಬರುವ ದೃಶ್ಯವೂ ಇದೆ. ಚಂದ್ರನಲ್ಲಿಗೆ ಗಗನಯಾತ್ರೆ ಮಾಡುವುದಕ್ಕೂ ಮುನ್ನವೇ ಇಂತಹ ಕಲ್ಪನೆಯನ್ನು ಸಿನಿಮಾ ಬಿಆರ್ ಪಂತುಲು ಕಟ್ಟಿಕೊಟ್ಟಿದ್ದರು.
ಎರಡು ಭಾಷೆಗೆ ಡಬ್ ಆಗಿತ್ತು
'ಮಕ್ಕಳ ರಾಜ್ಯ' ಸಿನಿಮಾ ಎರಡು ಭಾಷೆಗೆ ಡಬ್ ಆಗಿತ್ತು. ಕನ್ನಡದಲ್ಲಿ ಯಶಸ್ಸು ಕಂಡ ಬಳಿಕ ತಮಿಳಿಗೆ ರಿಮೇಕ್ ಆಗಿತ್ತು. ತೆಲುಗಿಗೆ ಡಬ್ ಆಗಿತ್ತು. ತಮಿಳಿನಲ್ಲಿ 'ಕುಳಂಧೈಗಳ್ ಕಂಡ ಕುಡಿಯರಸು' ಹೆಸರಿನಲ್ಲಿ ನಿರ್ಮಾಣ ಆಗಿತ್ತು. ಹಾಗೇ ತೆಲುಗಿಗೆ 'ಪಿಲ್ಲಲು ತೇಚಿನ ಚಲ್ಲನಿ ರಾಜ್ಯಂ' ಎಂದು ಡಬ್ ಮಾಡಲಾಗಿತ್ತು. ವಿಶೇಷ ಅಂದರೆ, 'ಮಕ್ಕಳ ರಾಜ್ಯಂ' ಸಿನಿಮಾ ತೆರೆಕಂಡ ಬರೋಬ್ಬರಿ 9 ವರ್ಷಗಳ ಬಳಿಕ ಅಂದರೆ, 1969ರಲ್ಲಿ ಅಮೆರಿಕದ ನಾಸಾದ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟಿದ್ದರು.


Click it and Unblock the Notifications











