ಪ್ರೇಮಿಗಳ ದಿನದಂದೇ ಸೆಟ್ಟೇರಲಿದೆ 'ಪ್ರೇಮಂ ಪೂಜ್ಯಂ' ಪಾರ್ಟ್ 2: ಹೈಲೈಟ್ ಏನು?
ನೆನಪಿರಲಿ ಪ್ರೇಮ್ ಯುವಪ್ರೇಮಿಗಳ ಅಚ್ಚುಮೆಚ್ಚಿನ ಹೀರೊ. ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಇಷ್ಟ ಪಡುವ ಸ್ಮಾರ್ಟ್ ಹೀರೊ ಪ್ರೇಮ್. ಹೀಗಾಗಿ ಪ್ರೇಮ್ ಅಭಿಮಾನಿಗಳಿಗಾಗಿಯೇ ನಿರ್ಮಾಣಗೊಂಡಿದ್ದ ಪ್ರೇಮ ಕಥೆ 'ಪ್ರೇಮಂ ಪೂಜ್ಯಂ'. ಅಂದಹಾಗೆ ಈ ಸಿನಿಮಾ ಪ್ರೇಮ್ ನಟಿಸಿದ 25ನೇ ಸಿನಿಮಾ ಕೂಡ ಹೌದು. ಈ ಸಿನಿಮಾ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, 50 ದಿನಗಳ ಸನಿಹದಲ್ಲಿದೆ.
ಇನ್ನೊಂದು ಕಡೆ ಯುವಕರಿಗಾಗಿಯೇ ಪರಿಶುದ್ಧ ಪ್ರೇಮ ಕಥೆಯನ್ನು ವೈದ್ಯರಾಗಿರುವ ಡಾ. ಬಿ ಎಸ್ ರಾಘವೇಂದ್ರ ರಚಿಸಿದ್ದರು. ಸಿನಿಮಾ ಹಾಡುಗಳಿಂದ ಹಿಡಿದು, ಚಿತ್ರದ ಛಾಯಾಗ್ರಹಣ , ಕಾಸ್ಟ್ಯೂಮ್ ಪ್ರತಿಯೊಂದು ವಿಚಾರದಲ್ಲೂ ಗಮನ ಹರಿಸಿ ಸಿನಿಮಾ ಮಾಡಲಾಗಿತ್ತು. ಹೀಗಾಗಿಯೇ 'ಪ್ರೇಮಂ ಪೂಜ್ಯಂ' ಪ್ರೇಮಿಗಳ ಹೃದಯ ಗೆದ್ದಿತ್ತು. ಈ ಬೆನ್ನೆಲ್ಲೇ ಪಾರ್ಟ್ 2 ಮಾಡಲು ಡಾ. ಬಿ ಎಸ್ ರಾಘವೇಂದ್ರ ಸಜ್ಜಾಗಿ ನಿಂತಿದ್ದಾರೆ. ಪ್ರೇಮಿಗಳ ದಿನದಂದು ಸಿನಿಮಾ ಸೆಟ್ಟೇರಲಿದೆ.

ಪ್ರೇಮಿಗಳ ದಿನಕ್ಕೆ 'ಪ್ರೇಮಂ ಪೂಜ್ಯಂ 2'
ನೆನಪಿರಲಿ ಪ್ರೇಮ್ ಹಾಗೂ ನಿರ್ದೇಶಕ ಡಾ ಬಿ ಎಸ್ ರಾಘವೇಂದ್ರ ಜೋಡಿ ಮತ್ತೆ ಒಂದಾಗುತ್ತಿದೆ. 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಬಿಡುಗಡೆ ಬಳಿಕ ಮತ್ತೆ ಇದರ ಮುಂದುವರೆದ ಭಾಗದಲ್ಲಿ ನಟಿಸಲು ನೆನಪಿರ ಪ್ರೇಮ್ ನಿರ್ಧರಿಸಿದ್ದಾರೆ. ಸದ್ಯ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸುವುದರಲ್ಲಿದೆ. ಈ ಸಂಭ್ರಮದಲ್ಲಿರುವುವಾಗಲೇ 'ಪ್ರೇಮಂ ಪೂಜ್ಯಂ 2' ಸೆಟ್ಟೇರಿಸಲು ನಿರ್ದೇಶಕ ರಾಘವೇಂದ್ರ ಸಜ್ಜಾಗಿದ್ದಾರೆ. ಇದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಲವ್ ಸ್ಟೋರಿ ಆಗಿರುವುದರಿಂದ ಪ್ರೇಮಗಳ ದಿನದಂದೇ ಪಾರ್ಟ್ 2 ಆರಂಭಿಸಲು ಸಜ್ಜಾಗಿದ್ದಾರೆ.

100 ಚಿತ್ರಮಂದಿರಗಳಲ್ಲಿ 100 ದಿನದ ಕಾನ್ಸೆಪ್ಟ್
2022ರ ಫೆಬ್ರವರಿ 14ರಂದು ಪ್ರೇಮಿಗಳ ದಿನ. ಅಂದೇ 'ಪ್ರೇಮಂ ಪೂಜ್ಯಂ' ಪಾರ್ಟ್ 2ಗೆ ಚಾಲನೆ ನೀಡಲು ಮುಂದಾಗಿದ್ದಕ್ಕೆ ಕಾರಣವಿದೆ. ಅಂದೇ 'ಪ್ರೇಮಂ ಪೂಜ್ಯಂ' ಸಿನಿಮಾ ಶತದಿನವನ್ನು ಪೂರೈಸಲಿದೆ. ಹೀಗಾಗಿ ಚಿತ್ರತಂಡ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. 100 ದಿನನೇ ದಿನ ತಮ್ಮ 'ಪ್ರೇಮಂ ಪೂಜ್ಯಂ' ಸಿನಿಮಾ 100 ಚಿತ್ರಮಂದಿರಗಳಲ್ಲಿ ಶತದಿನವನ್ನು ಆಚರಿಸಬೇಕು ಅನ್ನುವ ಆಸೆ ಚಿತ್ರತಂಡದ್ದು. ಹೀಗಾಗಿ ಚಿತ್ರಮಂದಿರಗಳನ್ನು ಹೆಚ್ಚಿಸುತ್ತಿದೆ. ಸದ್ಯ 63 ಚಿತ್ರಮಂದಿರಗಳಲ್ಲಿ 'ಪ್ರೇಮಂ ಪೂಜ್ಯಂ' ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.

ತಂತ್ರಜ್ಞರು ಕಲಾವಿದರ ತಂಡ ಬದಲಾಗುವುದಿಲ್ಲ
'ಪ್ರೇಮಂ ಪೂಜ್ಯಂ' ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳಿದೆ. ನೆನಪಿರಲಿ ಪ್ರೇಮ್ ವೈದ್ಯಕೀಯ ವಿದ್ಯಾರ್ಥಿಯಾಗಿ ನಟಿಸಿದ್ದರೆ, ಬೃಂದಾ ಆಚಾರ್ಯ, ಐಂದ್ರಿತಾರೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಸಂದೇಶ ಈ ಸಿನಿಮಾದಲ್ಲಿತ್ತು. ಈಗ ಸಿನಿಮಾದ ಕಥೆಗೆ ಟ್ವಿಸ್ಟ್ ಕೊಟ್ಟು, ಪಾರ್ಟ್ 2 ಮಾಡಲು ನಿರ್ದೇಶಕ ರಾಘವೇಂದ್ರ ಮುಂದಾಗಿದ್ದು, ಅದೇ ತಂಡವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ರೀಮೇಕ್ ಹಾಗೂ ಓಟಿಟಿಗೆ ಹೆಚ್ಚಿದ ಬೇಡಿಕೆ
ಡಾ.ಬಿ.ಎಸ್. ರಾಘವೇಂದ್ರ ಅವರ ನಿರ್ದೇಶನದ 'ಪ್ರೇಮಂ ಪೂಜ್ಯಂ' ಚಿತ್ರ ಬಿಡುಗಡೆಯಾದೆಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ತಮಿಳು ಹಾಗೂ ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಇದರೊಂದಿಗೆ 'ಪ್ರೇಮಂ ಪೂಜ್ಯಂ' ಸಿನಿಮಾಗೆ ಒಟಿಟಿಯಿಂದಲೂ ಬೇಡಿಕೆ ಹೆಚ್ಚಿದೆ. ಆದರೆ ಸಿನಿಮಾ 100 ದಿನಗಳನ್ನು ಪೂರೈಸುವವರೆಗೂ ಸಿನಿಮಾವನ್ನು ಮಾರದೆ ಇರಲು ನಿರ್ಧರಿಸಿದ್ದಾರೆ.


Click it and Unblock the Notifications











