"ನಮ್ಮ ಕಷ್ಟಕಾಲದಲ್ಲಿ ಅವರು ಕೈ ಹಿಡಿದು ಬೆಳೆಸಿದ್ದಾರೆ, ಅವರಿಗೆ ಅಲ್ಲಿ ಏನಾಗ್ತಿದೆಯೋ ಗೊತ್ತಾಗ್ತಿಲ್ಲ" ಅಳಿಯ ಮನೋಜ್
ಟಕ್ಕರ್ ಮನೋಜ್ ನಟಿಸುತ್ತಿರುವ 'ಗಾರ್ಡನ್' ಸಿನಿಮಾವನ್ನು ಆರ್ಯ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತದ ದಿನ ಫಸ್ಟ್ ಲುಕ್ ಪೋಸ್ಟರ್ ಕೂಡಾ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಮನೋಜ್ ಮುಖವನ್ನು ನೇರವಾಗಿ ರಿವೀಲ್ ಮಾಡದೇ ಹೋದರೂ, ಕೈ ಮುಷ್ಟಿ ಹಿಡಿದು, ಹಿಮ್ಮುಖವಾಗಿ ನಿಂತಿದ್ದಾರೆ. ಅದರ ಮೇಲೆ ಬಿಬಿಎಂಪಿ ಬಿಲ್ಡಿಂಗ್, ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಮುದ್ರೆ ಮುಂತಾದ ಎಲಿಮೆಂಟುಗಳನ್ನು ಬಳಕೆ ಮಾಡಲಾಗಿದೆ.
ಮೂರನೇ ಸಿನಿಮಾದ ಮುಹೂರ್ತ ಆದ ಖುಷಿ ಒಂದು ಕಡೆಯಾದರೆ, ಇನ್ನೊಂದು ಕಡೆ ದರ್ಶನ್ ಜೈಲಿನಲ್ಲಿ ಇರೋ ಬೇಸರ ಮತ್ತೊಂದು ಕಡೆ. ಈ ಸಿನಿಮಾ ಮುಹೂರ್ತದ ವೇಳೆ ಜೈಲಿನಲ್ಲಿ ದರ್ಶನ್ ಅನುಭವಿಸುತ್ತಿರುವ ಕಷ್ಟಗಳನ್ನು ನೆನೆದು ಮನೋಜ್ ಬೇಸರ ಪಟ್ಟುಕೊಂಡಿದ್ದಾರೆ. ಅದರಲ್ಲೂ ದರ್ಶನ್ ನ್ಯಾಯಾಧೀಶರಿಗೆ ವಿಷ ಕೊಡಿ ಎಂದು ಕೇಳಿದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಅಳಿಯ ಮನೋಜ್ ನಟಿಸಿದ ಮೊದಲ ಸಿನಿಮಾ 'ಟಕ್ಕರ್'. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಾಸ್ ಸಿನಿಮಾ 'ಟಕ್ಕರ್' ಮೊದಲ ಸಿನಿಮಾ ಆದರೆ, ಇವರು ನಟಿಸಿದ 2ನೇ ಸಿನಿಮಾ ಧರಣಿ. ಈ ಎರಡು ಸಿನಿಮಾಗಳ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೊಂದು ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದುವೇ 'ಗಾರ್ಡನ್'. ಇದರ ಮುಹೂರ್ತ ಈಗ ನೆರವೇರಿದೆ.
'ಗಾರ್ಡನ್' ಸಿನಿಮಾದ ಮುಹೂರ್ತದ ವೇಳೆ ದಿನಕರ್ ತೂಗುದೀಪ ಮುಖ್ಯ ಅತಿಥಿಯಾಗಿ ಬಂದಿದ್ದರು. ಬಹುಶ: ದರ್ಶನ್ ಹೊರಗಡೆ ಇದ್ದಿದ್ದರೆ, ಅವರೂ ಕೂಡ ಅತಿಥಿಯಾಗಿ ಬರುವ ಸಾಧ್ಯತೆ ಇರುತ್ತಿತ್ತು. ಈ ವೇಳೆ ಅಳಿಯನಿಗೆ ದರ್ಶನ್ ಅವರು ಸದ್ಯ ಪರಿಸ್ಥಿತಿ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮೇಲೆ ಕಟ್ಟಿ ನಿಟ್ಟಿನ ನಿಗಾ ಇಡಲಾಗಿದೆ. ಇದರಿಂದ ಬೇಸತ್ತು ದರ್ಶನ್ ನ್ಯಾಯಾಧೀಶರ ಬಳಿ ವಿಷ ಕೊಡಿ ಎಂದು ಹೇಳಿದ್ದರು. ಈ ಘಟನೆಯ ಬಗ್ಗೆ ಮನೋಜ್ ಪ್ರತಿಕ್ರಿಯೆ ನೀಡಿದ್ದಾರೆ.
"ಆ ವಿಷಯವನ್ನು ಕೇಳಿ ತುಂಬಾನೇ ಬೇಜಾರು ಆಗುತ್ತಿದೆ. ಅಲ್ಲಿ ಏನು ಪರಿಸ್ಥಿತಿಯಿದೆ ಅನ್ನೋದು ಗೊತ್ತಾಗುತ್ತಿಲ್ಲ. ಆ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಅಂದರೆ, ಅವರಿಗೆ ಆ ನೋವು ಏನು ಅನ್ನೋದು ಗೊತ್ತಿರುತ್ತೆ. ಆದರೆ, ಸರ್‌ಗೆ ಒಳ್ಳೆಯದಾಗಲಿ. ಅದೇ ಅದನ್ನೆಲ್ಲ ನೆನಪಿಸಿಕೊಂಡರೆ, ಭಾವುಕನಾಗುತ್ತೇನೆ. ಮಾತಾಡುವುದಕ್ಕೆ ಆಗುವುದಿಲ್ಲ" ಎಂದು ಮನೋಜ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಡೆವಿಲ್ ಸಿನಿಮಾ ಪ್ರಚಾರದಲ್ಲಿ ಕಂಡಿತವಾಗಿಯೂ ಭಾಗಿಯಾಗುತ್ತೇನೆ. ಏಕೆಂದರೆ, ನಮ್ಮ ಕಷ್ಟ ಕಾಲದಲ್ಲಿ ಅವರು ಕೈ ಹಿಡಿದು ನಡೆಸಿದ್ದಾರೆ. ಈಗ ಅವರ ಸಿನಿಮಾಗೆ ನಾವೆಲ್ಲರೂ ನಿಂತುಕೊಳ್ಳುತ್ತೇವೆ. ನಾವು ಸಪೋರ್ಟ್ ಮಾಡೋದೇನು ಬೇಕಾಗಿಲ್ಲ. ಅವರ ಸೆಲೆಬ್ರೆಟಿಗಳೇ ಇದ್ದಾರೆ. ನಮ್ಮದು ಅಳಿಲು ಸೇವೆ ಎಂದು ಅವರೊಂದಿಗೆ ನಿಂತುಕೊಳ್ಳುತ್ತೇವೆ" ಎಂದು ದರ್ಶನ್ ಅಳಿಯ ಮನೋಜ್ ಹೇಳಿದ್ದಾರೆ.


Click it and Unblock the Notifications











