'ಕೆಜಿಎಫ್', 'ಕಾಂತಾರ' ವಿಶ್ವದ ಗಮನ ಸೆಳೆದರೂ 'ಅವತಾರ್ 2' ಕನ್ನಡದಲ್ಲಿ ಯಾಕಿಲ್ಲ? ನೆಟ್ಟಿಗರ ಆಕ್ರೋಶ!
ಜೇಮ್ಸ್ ಕ್ಯಾಮೆರಾನ್ ಸಿನಿಮಾಗಳನ್ನು ನೋಡುವುದಕ್ಕೆ ಇಡೀ ವಿಶ್ವವೇ ಕಾದು ಕೂತಿರುತ್ತೆ. ಅದರಲ್ಲೂ ಅವತಾರ್ ಸೀಕ್ವೆಲ್ ಅನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ತುದಿಗಾಲ್ಲಿ ನಿಂತಿದ್ದಾರೆ. ಅದಕ್ಕೆ ಕಾರಣ 2009ರಲ್ಲಿ ತೆರೆಕಂಡಿದ್ದ 'ಅವತಾರ್' ಸಿನಿಮಾ.
ಸಿನಿಮಾ ಜಗತ್ತಿಗೆ 'ಅವತಾರ್' ಒಂದು ವಿಸ್ಮಯದಂತೆ ಕಂಡಿತ್ತು. 3ಡಿಯಲ್ಲಿ ಹೊಸ ಪ್ರಚಂಚವನ್ನು, ದೃಶ್ಯ ವೈಭವವನ್ನು ಕಣ್ತುಂಬಿಕೊಂಡಿದ್ದ ಜನರಿಗೆ 'ಅವತಾರ್' ಸೀಕ್ವೆಲ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ. ಜೇಮ್ಸ್ ಕ್ಯಾಮೆರಾನ್ ಇದೇ ಸಿನಿಮಾದ ಸೀಕ್ವೆಲ್ ತರೋಕೆ ಬಹಳ ವರ್ಷನೇ ತೆಗೆದುಕೊಂಡರು. ಸುಮಾರು 13 ವರ್ಷಗಳ ಬಳಿಕ 'ಅವತಾರ್' ಎರಡನೇ ಚಾಪ್ಟರ್ ರಿಲೀಸ್‌ಗೆ ರೆಡಿಯಾಗಿದೆ. ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಆದರೆ, ಕನ್ನಡಿಗರಿಗೆ ಮಾತ್ರ ನಿರಾಸೆಯಾಗಿದೆ.
'ಅವತಾರ್ 2' ಟ್ರೈಲರ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ. ಈ ಬಾರಿ ನೀರಿನೊಳಗೆ ಕರೆದುಕೊಂಡು ಹೋಗುತ್ತಿರುವ ಜೇಮ್ಸ್ ಕ್ಯಾಮೆರಾನ್ ಕಲ್ಪನೆಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಆದರೆ, ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿದ್ದರೂ, ಕನ್ನಡದಲ್ಲಿ ಟ್ರೈಲರ್ ರಿಲೀಸ್ ಆಗಿಲ್ಲ ಅಂತ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

'ಅವತಾರ್ 2' ಕನ್ನಡದಲ್ಲಿ ಯಾಕಿಲ್ಲ?
ನಿನ್ನೆ (ನವೆಂಬರ್ 02) ಇಡೀ ವಿಶ್ವವೇ ಕಾದು ಕೂತಿರುವ ಸಿನಿಮಾ 'ಅವತಾರ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ನೋಡಿದ ಅಸಂಖ್ಯಾತ ಮಂದಿ ಖುಷಿ ಪಟ್ಟಿದ್ದಾರೆ. ಜೇಮ್ಸ್ ಕ್ಯಾಮೆರಾನ್ ಕಲ್ಪನೆಯನ್ನು ಮೆಚ್ಚಿಕೊಂಡಾಡಿದ್ದಾರೆ. ಮತ್ತೆ ದೃಶ್ಯ ವೈಭವವನ್ನು ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಕನ್ನಡಿಗರು ಮಾತ್ರ ಬೇಸರ ಪಟ್ಟುಕೊಂಡಿದ್ದಾರೆ. ಯಾಕಂದ್ರೆ 'ಅವತಾರ್ 2' ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ.

ಕನ್ನಡದಲ್ಲೇ ಬೇಕು 'ಅವತಾರ್ 2'
'ಅವತಾರ್ 2' ಟ್ರೈಲರ್ ರಿಲೀಸ್ ಆದ ಬಳಿಕ ಕನ್ನಡಿಗರು ರೊಚ್ಚಿಗೇಳುವುದಕ್ಕೆ ಕಾರಣವಿದೆ. 'ಅವತಾರ್ 2' ಟ್ರೈಲರ್ ಹಿಂದಿ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಿದೆ. ಆದರೆ ಕನ್ನಡದಲ್ಲಿ ಮಾತ್ರ ಟ್ರೈಲರ್ ರಿಲೀಸ್ ಮಾಡಿಲ್ಲ. ಈ ಕಾರಣಕ್ಕೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. " ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಅವತಾರ್ ಟ್ರೈಲರ್ ಓಕೆ. ಕನ್ನಡ ಟ್ರೈಲರ್ ಎಲ್ಲಿ." ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. "ಪ್ರತಿ ಬಾರಿ ಕನ್ನಡಕ್ಕೆ ಯಾಕೆ ಈ ಅನ್ಯಾಯ" ಅಂತ ಮತ್ತೊಬ್ಬರು ಕಿಡಿಕಾರಿದ್ದಾರೆ.

ಕನ್ನಡಿಗರ ಮೇಲೆ ಯಾಕೀ ಅಸಡ್ಡೆ?
ಕನ್ನಡ ಚಿತ್ರರಂಗ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ವರ್ಷ ತೆರೆಕಂಡ 'ಕೆಜಿಎಫ್ 2', 'ಜೇಮ್ಸ್', 'ವಿಕ್ರಾಂತ್ ರೋಣ', '777 ಚಾರ್ಲಿ' ಹಾಗೂ 'ಕಾಂತಾರ' ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೀಗಿದ್ದರೂ, 'ಅವತಾರ್ 2' ಟ್ರೈಲರ್ ರಿಲೀಸ್ ಮಾಡುವಾಗ ಕನ್ನಡ ನೆನಪಾಗಲಿಲ್ಲವೇ? ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. " 6 ಕೋಟಿ ಕನ್ನಡಿಗರಿಗೆ ಯಾಕೆ ಪ್ರತಿಸಲ ಅನ್ಯಾಯ ವಾಗೋದು? ನಾನು ಇತ್ತೀಚೆಗೆ ಸಿನಿಮಾ ಜಗತ್ತಿಗೆ ಕೊಟ್ಟಿರುವ ಕೊಡುಗೆ ನಿಮಗೆ ಯಾಕೆ ನೆನಪಾಗುತ್ತಿಲ್ಲ. ಕನ್ನಡ ಭಾಷೆ, ಕನ್ನಡಿಗರು ಅಂದರೆ ಅಸಡ್ಡೆ ಯಾಕೆ?

'ನೋ ಕನ್ನಡ.. ನೋ ಬ್ಯುಸಿನೆಸ್'
'ಅವತಾರ್ 2' ಕನ್ನಡದಲ್ಲಿ ಬರಲೇಬೇಕು ಅಂತ ಕನ್ನಡಿಗರು ಒತ್ತಡ ಹೇರಿದ್ದಾರೆ. " ನಾವು ಅವತಾರ್ ಹಾಗೂ ಪಠಾಣ್ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿಲ್ಲ ಅಂದರೆ ನೋಡುವುದಿಲ್ಲ. ನೋ ಕನ್ನಡ.. ನೋ ಬ್ಯುಸಿನೆಸ್ ಅನ್ನೋ ಪಾಠವನ್ನು ನಾವು ಕಲಿಸಬೇಕಿದೆ." ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications











