15 ಜನ ಅಷ್ಟೇ ಅಂತ 'ಕೇಸ್ ಆಫ್ ಕೊಂಡಾಣ' ಹಾಕಲ್ಲ ಅಂದ್ರಾ ಸಿಬ್ಬಂದಿ? ಯಾವ ಥಿಯೇಟರ್ ಅದು?
ಕಳೆದ ವಾರ ಸ್ಯಾಂಡಲ್‌ವುಡ್‌ನಲ್ಲಿ ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲೊಂದು ಸಿನಿಮಾ ವಿಜಯ್ ರಾಘವೇಂದ್ರ ನಟನೆಯ 'ಕೇಸ್ ಆಫ್ ಕೊಂಡಾಣ' ಕೂಡ ಒಂದು. ಈ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆನೂ ವ್ಯಕ್ತವಾಗಿದೆ. ಆದರೆ, ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.
ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದರಿಂದ ಬೆಂಗಳೂರಿನ ಬೇರೆ ಬೇರೆ ಕಡೆಗಳಿಂದ ಬಂದು ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರೇಕ್ಷಕರೇ ಚಿತ್ರತಂಡಕ್ಕೆ ದೂರನ್ನು ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮುಖ ಚಿತ್ರಮಂದಿರದಲ್ಲೇ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ನಿರಾಕರಿಸಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಬೆಂಗಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿಯಲ್ಲಿ 'ಕೇಸ್ ಆಫ್ ಕೊಂಡಾಣ' ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಕೇವಲ 15 ಮಂದಿ ಇದ್ದಾರೆಂದು 7.30ರ ಶೋ ಕ್ಯಾನ್ಸಲ್ ಮಾಡುವುದಕ್ಕೆ ಚಿತ್ರಮಂದಿರದ ಸಿಬ್ಬಂದಿ ನಿರ್ಧರಿಸಿದ್ದರು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಇಷ್ಟೇ ಅಲ್ಲದೆ, ಶಿವಣ್ಣ, ಕಿಚ್ಚ ಸುದೀಪ್‌ಗೆ ಇಂತಹ ಸಿನಿಮಾವನ್ನು ಬೆಂಬಲಿಸುವಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಆ ಪೋಸ್ಟ್‌ನ ಝಲಕ್ ಹೀಗಿದೆ.
"ಕನ್ನಡ ಚಿತ್ರರಂಗದವರು ಓದಲೇಬೇಕು. ಕೇಸ್ ಆಫ್ ಕೊಂಡಾಣ ಪ್ರದರ್ಶನ ಕಾಣುತ್ತಿರುವ ನರ್ತಕಿ ಚಿತ್ರಮಂದಿರದ ಬಳಿ ನಡೆದ ಘಟನೆ. ಸಿನಿಮಾ ನೋಡಲು ಹೋದ ಒಬ್ಬ ಪ್ರೇಕ್ಷಕ ಹಂಚಿಕೊಂಡಿರುವ ಫೋಟೋ. ಥಿಯೇಟರ್ ನಡೆಸುವವರು ಪ್ರದರ್ಶನ ಕೊಡಲಾಗುವುದಿಲ್ಲ. ಬರೀ 15 ಜನ ಇದ್ದಾರೆ. ಥಿಯೇಟರ್ ನಡೆಸಲು ಪ್ರತಿ ಶೋಗೆ 6000 ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ.
ಪ್ರೇಕ್ಷಕರ ಒತ್ತಾಯಕ್ಕೆ ಮಣಿದು, ತುಂಬಾ ದೂರದಿಂದ ಬಂದಿದ್ದಾರೆ ಎಂದು ಹೇಳಿ ಚಿತ್ರ ಪ್ರದರ್ಶನ ಮಾಡಿದ್ದಾರೆ. ಕನ್ನಡ ಚಲನಚಿತ್ರಗಳ ಪರಿಸ್ಥಿತಿ ಇದು. 15 ಜನರನ್ನು ಲೆಕ್ಕ ಹಾಕಿದ ರೀತಿ ಕೂಡ ತುಂಬಾ ವಿನೂತನವಾಗಿತ್ತಂತೆ. ಥಿಯೇಟರ್ ಬಳಿ ಕೂತಿದ್ದ ಜನರನ್ನು ಹೋಗಿ ನೀವು ಯಾವ ಚಿತ್ರಕ್ಕೆ ಬಂದಿದ್ದೀರಿ ಎಂದು ಕೇಳಿ ಲೆಕ್ಕ ಹಾಕಿದ್ದರಂತೆ. 7.15ಕ್ಕೆ ಶುರುವಾಗಬೇಕಾದ ಶೋ ಆರಂಭ ಆಗಿದ್ದು, 7.40ಕ್ಕೆ 17 ಜನ ಬಂದ ಮೇಲಂತೆ. ಒಂದು ಒಳ್ಳೆಯ ಚಿತ್ರ ಕೊಟ್ಟರೂ, ಅದನ್ನು ಉಳಿಸಿಕೊಳ್ಳಲು ಕಷ್ಟ. ನಮ್ಮ ಹಿರಿಯರಾದ ಶಿವಣ್ಣ, ಕಿಚ್ಚ ಸುದೀಪ್ ಈ ರೀತಿ ಸಿನಿಮಾಗಳಿಗೆ ಬೆಂಬಲಿಸಿ ಪ್ರೋತ್ಸಾಹಿಸಿಬೇಕು. ಬಂದ 17 ಜನ ಹೇಳಿದ್ದು, ಬೇರೆ ಕಡೆ ಎಲ್ಲೂ ಶೋ ಇಲ್ಲ." ಎಂದು ಬರೆದು ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟ್‌ಗೂ ಮುನ್ನ ಸ್ವತ: ವಿಜಯ ರಾಘವೇಂದ್ರ 'ಕೇಸ್ ಆಫ್ ಕೊಂಡಾಣ' ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಹೀಗಾಗಿ ಸ್ಕ್ರೀನ್‌ಗಳು ಹೆಚ್ಚಾಗುವ ಸಂಭವವಿದೆ ಎಂದಿದ್ದಾರೆ. "ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಇನ್ಮುಂದೆ ಹೆಚ್ಚು ಥಿಯೇಟರ್‌ಗಳಾಗಲಿ, ಸ್ಕ್ರೀನ್‌ಗಳಾಗಿ ಸಿಗುವ ಸಂಭವವಿದೆ. ಹಾಗಾಗಿ ನಾನು ಎಲ್ಲರನ್ನೂ ಕೇಳಿಕೊಳ್ಳುತ್ತಿದ್ದೇನೆ. ನಾವು ಚೆನ್ನಾಗಿದೆ ಅಂತ ಅಂದುಕೊಂಡಿದ್ದೇವೆ. ನೀವೆಲ್ಲರೂ ಸಿನಿಮಾ ಚೆನ್ನಾಗಿದೆ ಅಂದಿದ್ದರಿಂದ ಇನ್ನು ಹೆಚ್ಚು ಜನ ಥಿಯೇಟರ್‌ಗೆ ಬರಬೇಕು ಅನ್ನೋ ಆಸೆ." ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
"ಬೇಕಾದಂತಹ ಜಾಗದಲ್ಲಿ, ಬೇಕಾದಂತಹ ಶೋ ಸಿಗಲಿಲ್ಲ ಅಂದಾಗ ಹೀಗಾಗುತ್ತೆ. ಎಷ್ಟೋ ಜನ ನನಗೆ ಮೆಸೇಜ್ ಮಾಡಿದ್ದರು. ನಾವಿರೋ ಜಾಗದಲ್ಲಿ ನಾಲ್ಕು ಮಲ್ಟಿಪ್ಲೆಕ್ಸ್ ಇದ್ದಾವೆ. ಆದರೆ ನಿಮ್ಮದು ಒಂದು ಶೋ ಇಲ್ಲ ಅಂತ ಹೇಳಿದ್ದಾರೆ. ಪ್ರಾಕ್ಟಿಕಲ್ ಪ್ರಾಬ್ಲಮ್ ಇದೆ. ಹೆಚ್ಚು ಸಿನಿಮಾಗಳು ರಿಲೀಸ್ ಆದಾಗ, ಹೆಚ್ಚು ಅವಕಾಶಗಳು ಸಿಗೋದಿಲ್ಲ. ಆ ಅವಕಾಶ ಸಿಗುವವರೆಗೂ ಕಾಯಬೇಕಾಗುತ್ತೆ." ಎಂದು ವಿಜಯ್ ರಾಘವೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
'ಸೀತಾರಾಂ ಬಿನೋಯ್' ಸಿನಿಮಾ ತಂಡವೇ 'ಕೇಸ್ ಆಫ್ ಕೊಂಡಾಣ' ನಿರ್ಮಾಣ ಮಾಡಿದೆ ಎಂದು ಹೇಳಿದ ಮೇಲೆ ಹೆಚ್ಚು ಜನರು ಥಿಯೇಟರ್‌ಗೆ ಬರುತ್ತಿದ್ದಾರೆ ಎಂದಿದ್ದಾರೆ. "ಸೀತಾರಾಂ ಬಿನೋಯ್ ಟೀಮ್ ಈ ಸಿನಿಮಾ ಮಾಡಿದೆ ಅನ್ನೋದಕ್ಕೆ ಕೆಲವರು ಫಸ್ಟ್ ಡೇ ಬಂದಿದ್ದಾರೆ. ಅದು ಗೊತ್ತಾದ ಮೇಲೆ ಇನ್ನೊಂದಿಷ್ಟು ಮಂದಿ ಬರುತ್ತಾರೆ. ಈ ಸಿನಿಮಾ ಮಿಸ್ ಮಾಡಬಾರದು ಅಂತಾನೂ ಮೆಸೇಜ್ ಮಾಡುತ್ತಿದ್ದಾರೆ." ಎಂದು ವಿಜಯ್ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದರು.


Click it and Unblock the Notifications











