'ಮ್ಯಾಕ್ಸ್' ಲುಕ್ ಕೊಟ್ಟ ಕಿಚ್ಚ; ನೆಟ್ಟಿಗರು ಸಿನಿಮಾದ ಕಥೆ ಬಗ್ಗೆ ಚರ್ಚೆ ಮಾಡುತ್ತಿರೋದ್ಯಾಕೆ?
ಕಿಚ್ಚನ 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಬಳಿಕ ಮತ್ತೊಂದು ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟಿದ್ದರು. ಲೆಕ್ಕ ಹಾಕಿ ಅಳೆದು ತೂಗಿ ಸ್ಟೋರಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಅದುವೇ 'ಮ್ಯಾಕ್ಸ್'. ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್ ತನು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಿರೀಕ್ಷೆಯಂತೆಯೇ ಇಂದು (ಜುಲೈ 16) 'ಮ್ಯಾಕ್ಸ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಮೂಲಕ ಸಿನಿಮಾದ ಬಗ್ಗೆ ಒಂದಿಷ್ಟು ಸುಳಿವುಗಳನ್ನು ಬಿಟ್ಟುಕೊಟ್ಟಿದೆ. ಕಿಚ್ಚನೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಲಾವಿದರ ಗುಟ್ಟನ್ನು ಬಿಟ್ಟುಕೊಟ್ಟಿದೆ. ಇನ್ನೊಂದು ಕಡೆ ಕಿಚ್ಚನ ಮ್ಯಾನರಿಸಂನ ಝಲಕ್ ರಿವೀಲ್ ಮಾಡಲಾಗಿದೆ.

ಇಷ್ಟು ದಿನ 'ಮ್ಯಾಕ್ಸ್' ಅಪ್‌ಡೇಟ್‌ಗಾಗಿ ಕಾದು ಕೂತ್ತಿದ್ದ ಕಿಚ್ಚನ ಅಭಿಮಾನಿಗಳು ಟೀಸರ್ ನೋಡಿ ದಿಲ್ ಖುಷ್ ಆಗಿದ್ದಾರೆ. ಆದರೆ, ವೇಳೆ 'ಮ್ಯಾಕ್ಸ್' ಸ್ಟೋರಿ ಲೈನ್ ಬಗ್ಗೆ ನೆಟ್ಟಿಗರು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಮ್ಯಾಕ್ಸ್' ಟೀಸರ್‌ನಲ್ಲಿ ಸ್ಟೋರಿ ಲೈನ್ ಬಿಟ್ಟು ಕೊಟ್ರಾ ಕಿಚ್ಚ? ಮ್ಯಾಕ್ಸ್ ಕಥೆಯನ್ನೇ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರಾ? ಅಸಲಿಗೆ ಚರ್ಚೆಯಾಗುತ್ತಿರುವ 'ಮ್ಯಾಕ್ಸ್' ಕಥೆಯೇನು?
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಹಾಗೇ 'ಮ್ಯಾಕ್ಸ್' ಸಿನಿಮಾದಲ್ಲೂ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ ಎನ್ನಲಾಗಿದೆ. ಟೀಸರ್‌ನಲ್ಲಿ ಖಾಕಿ ತೊಟ್ಟ ಗೆಟಪ್‌ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿಲ್ಲ . ಆದರೂ, ಕಿಚ್ಚನ 'ಮ್ಯಾಕ್ಸ್' ಸಿನಿಮಾ ಸ್ಟೋರಿ ಲೈನ್ ಬಗ್ಗೆ ಈ ಹಿಂದೆನೇ ಚರ್ಚೆಯಾಗಿತ್ತು. ಅದೇ ಸ್ಟೋರಿ ಈಗ ಮತ್ತೆ ಟೀಸರ್ ರಿಲೀಸ್ ಆದ ಬಳಿಕವೂ ಸುದ್ದಿಯಾಗುತ್ತಿದೆ.

ಅಂದ್ಹಾಗೆ, 'ಮ್ಯಾಕ್ಸ್' ಸಿನಿಮಾದಲ್ಲಿ ಕಿಚ್ಚ ಸುದೀಪ್ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕಿಚ್ಚನ ಪಾತ್ರದ ಹೆಸರು ಅರ್ಜುನ್ ಮಹಾಕ್ಷಯ್. ಈ ಮಹಾಕ್ಷಯ್ ಅನ್ನೋ ಹೆಸರನ್ನೇ ಚಿಕ್ಕದಾಗಿ 'ಮ್ಯಾಕ್ಸ್' ಎಂದು ಕರೆಯುತ್ತಾರೆ. ಈ ಅರ್ಜುನ್ ಮಾಹಾಕ್ಷಯ್ ಎರಡು ತಿಂಗಳು ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿ. ಆ ಅವಧಿಯನ್ನು ಮುಗಿಸಿ, ಹೊಸ ಪೊಲೀಸ್ ಠಾಣೆಗೆ ಪೋಸ್ಟ್ ಆದಾಗ, ಅಲ್ಲಿನ ಭ್ರಷ್ಟಾಚಾರದ ವಿರುದ್ಧ ಯಾವ ರೀತಿ ಹೋರಾಟ ಮಾಡುತ್ತಾನೆ. ಆ ವೇಳೆ ಏನೇನಾಗುತ್ತೆ ಅನ್ನೋದೇ ಕಥೆ ಎಂದು ಹೇಳಲಾಗುತ್ತಿದೆ.
ಅಸಲಿಗೆ ಇದೇ 'ಮ್ಯಾಕ್ಸ್' ಸಿನಿಮಾದ ಒಂದೆಳೆ ಕಥೆಯೇ? ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಚಿತ್ರತಂಡ ಇನ್ನೂ ಈ ಸಿನಿಮಾದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಇದು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯಷ್ಟೇ. ಮಾಸ್ ಆಕ್ಷನ್ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಕಿಚ್ಚ ಸುದೀಪ್ ಸಿನಿಮಾದ ಕಥೆ ಚರ್ಚೆಗೆ ಬಂದಿದೆ.
ಬಹು ನಿರೀಕ್ಷೆಯ 'ಮ್ಯಾಕ್ಸ್' ಸಿನಿಮಾದ ಬಹುತೇಕ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲಿನ ಮಹಾಬಲಿಪುರಂನಲ್ಲಿ ಮ್ಯಾಕ್ಸ್‌ಗಾಗಿ ಬೃಹತ್ ಸೆಟ್ ಅನ್ನು ಹಾಕಲಾಗಿತ್ತು. ಅಲ್ಲಿಯೇ ಹೆಚ್ಚಿನ ಚಿತ್ರೀಕರಣ ನಡೆದಿದೆ. 'ವಿಕ್ರಾಂತ್ ರೋಣಾ' ಬಳಿಕ 'ಮ್ಯಾಕ್ಸ್' ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ಕಿಚ್ಚ ಸುದೀಪ್ ಜೊತೆ 'ಮ್ಯಾಕ್ಸ್' ಸಿನಿಮಾದಲ್ಲಿ ಟಾಲಿವುಡ್ ನಟ ಸುನೀಲ್, ವರಲಕ್ಷ್ಮೀ ಶರತ್‌ಕುಮಾರ್, ನರೇನ್, ಕನ್ನಡದ ನಟರಾದ ಶರತ್ ಲೋಹಿತಾಶ್ವ, ಪ್ರಮೊದ್ ಶೆಟ್ಟಿ, ಸಂಯಕ್ತಾ ಹೊರನಾಡು ಸೇರಿದಂತೆ ಹಲವರು ನಟಿಸಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.


Click it and Unblock the Notifications











