ಕನ್ನಡದಲ್ಲಿ ಪೋಸ್ಟ್ ಮಾಡಲು ಹೇಳಿದ್ದಕ್ಕೆ ಕಿರಿಕ್: ನಟಿ ಅಶ್ವಿತಿ ಶೆಟ್ಟಿ ವಿರುದ್ಧ ಅಸಮಾಧಾನ
ಕನ್ನಡದ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗ ಕನ್ನಡವನ್ನು ಮರೆಯುತ್ತಾರೆ. ಯಾವಾಗಲೂ ಇಂಗ್ಲಿಷ್‌ನಲ್ಲಿಯೇ ಪೋಸ್ಟ್‌ಗಳನ್ನು ಹಾಕುತ್ತಾರೆ, ಜತೆಗೆ ಅಭಿಮಾನಿಗಳ ಜತೆ ಕೂಡ ಕನ್ನಡದಲ್ಲಿ ಸಂವಹಿಸುವುದಿಲ್ಲ ಎಂಬ ಆರೋಪವಿದೆ. ಕನ್ನಡಾಭಿಮಾನಿಗಳು ಕಲಾವಿದರ ಇಂಗ್ಲಿಷ್ ಪೋಸ್ಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
Recommended Video
ಇತ್ತೀಚೆಗೆ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟಿ ನಯನಾ, ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದಿದ್ದ ವ್ಯಕ್ತಿಯೊಬ್ಬರಿಗೆ 'ಅಪ್ಪಾ ಕನ್ನಡದ ಭಕ್ತ' ಎಂದು ವ್ಯಂಗ್ಯವಾಗಿ ಹೇಳಿದ್ದು ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು. ಕೊನೆಗೆ ನಯನಾ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತಿಲಾಂಜಲಿ ಇರಿಸಿದ್ದರು. ಈಗ ಅವಳಿ ಸಹೋದರಿ ನಟಿಯರಲ್ಲಿ ಒಬ್ಬರಾದ ಅಶ್ವಿತಿ ಶೆಟ್ಟಿ ಕೂಡ ವಿವಾದಕ್ಕೆ ಸಿಲುಕಿದ್ದಾರೆ. ಕನ್ನಡದಲ್ಲಿ ಪೋಸ್ಟ್ ಹಾಕಿ ಎಂದಿದ್ದ ವ್ಯಕ್ತಿಯೊಬ್ಬರಿಗೆ ಅಶ್ವಿತಿ ನೀಡಿದ ಉತ್ತರ ಅನೇಕರನ್ನು ಕೆರಳಿಸಿದೆ. ಮುಂದೆ ಓದಿ.

ಮರು ಪ್ರಶ್ನೆ ಹಾಕಿದ ಅಶ್ವಿತಿ
ಫೇಸ್‌ಬುಕ್‌ನಲ್ಲಿ ಅಶ್ವಿತಿ ಹಾಕಿದ್ದ ವಿಡಿಯೋ ಒಂದರಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಇದಕ್ಕೆ ಒಬ್ಬರು ಕನ್ನಡವನ್ನು ಬಳಸಿ ಮೇಡಂ, ದಯವಿಟ್ಟು ಎಂದು ಮನವಿ ಮಾಡಿದ್ದರು. ಅದಕ್ಕೆ ಅಶ್ವಿತಿ ನಿಮ್ಮ ಬಯೋದಲ್ಲಿ ಏಕೆ ಇಂಗ್ಲಿಷ್ ಬಳಕೆ ಎಂದು ಮರುಪ್ರಶ್ನೆ ಹಾಕಿದ್ದರು.

ಊಟದ ಜತೆ ಉಪ್ಪಿನಕಾಯಿ
ನಾನು ಕನ್ನಡವನ್ನೇ ಬಳಸಿ ಎಂದು ಹೇಳುತ್ತಿಲ್ಲ. ಕನ್ನಡವನ್ನೂ ಬಳಸಿ ಎನ್ನುತ್ತಿರುವುದು. ನೀವೇನೂ ಹಾಲಿವುಡ್ ಜೇಮ್ಸ್ ಕ್ಯಾಮೆರನ್ ಜತೆ ಕೆಲಸ ಮಾಡ್ತಿಲ್ಲ. ಕನ್ನಡ ನಿರ್ದೇಶಕರ ಜತೆ ಕೆಲಸ ಮಾಡುತ್ತಿರುವುದು. ನಿಮ್ಮನ್ನು ಪರದೆ ಮೇಲೆ ಹೆಚ್ಚಾಗಿ ಕನ್ನಡಿಗರೇ ನೋಡೋದು ಹೊರತು ಬೇರೆ ಭಾಷೆಯವರಾಗಲಿ, ಬೇರೆ ರಾಷ್ಟ್ರದವರಾಗಲೀ ನೋಡೊಲ್ಲ. ನಾವು ಆಂಗ್ಲ ಭಾಷೆಯನ್ನು ಊಟದ ಜತೆ ಉಪ್ಪಿನಕಾಯಿ ರೀತಿ ಬಳಸುತ್ತೇವೆ ಹೊರತು, ಆಂಗ್ಲ ಭಾಷೆಯನ್ನೇ ಊಟದ ರೀತಿ ನೋಡೊಲ್ಲ. ಕನ್ನಡ ಬಳಸಿ ಎಂದರೆ ಪತ್ತೇದಾರಿ ಕೆಲಸ ಮಾಡುತ್ತೀರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿಲೀಟ್ ಮಾಡಿದ ಅಶ್ವಿತಿ
ಅಶ್ವಿತಿ ಶೆಟ್ಟಿ ಅವರ ಪ್ರತಿಕ್ರಿಯೆಗೆ ಅನೇಕರು ಖಾರವಾದ ಉತ್ತರ ನೀಡಿದ್ದಾರೆ. ನಿಮಗೆ ಏಕೆ ಇಂಗ್ಲಿಷ್ ವ್ಯಾಮೋಹ. ಕನ್ನಡ ಬಳಸಲು ಏಕೆ ತಾತ್ಸಾರ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಅಶ್ವಿತಿ ಆ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದಾರೆ. ಬಳಿಕ ಕನ್ನಡದಲ್ಲಿ ಕೆಲವು ಪೋಸ್ಟ್‌ಗಳನ್ನು ಹಾಕಿದ್ದಾರೆ.

ಕನ್ನಡ ಬಳಸಿದ್ದಕ್ಕೆ ಧನ್ಯವಾದ
ಆದರೆ, ಅವರ ಪೋಸ್ಟಿನ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಅಶ್ವಿತಿ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಅವರು ನಂತರ ಹಾಕಿರುವ ಪೋಸ್ಟ್‌ಗಳಿಗೆ, 'ಕನ್ನಡ ಬಳಸಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ಕನ್ನಡ ಬಳಸುವುದರಿಂದ ಕೀಳರಿಮೆ ಆಗೊಲ್ಲ
ಅಶ್ವಿತಿ ಶೆಟ್ಟಿ ಅವರೇ, ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಕನ್ನಡ ಬಳಸಿ.ಇದು ಕರ್ನಾಟಕ ಕನ್ನಡ ಇಲ್ಲಿನ ಆಡುಭಾಷೆ ಮತ್ತು ಆಡಳಿತ ಭಾಷೆ ಕೊಡ. ಏನೇ ಮಾಹಿತಿ ನೀಡಿದರು ಮೊದಲು ಕನ್ನಡದಲ್ಲಿರಲಿ ನಂತರ ಎರಡನೇ ಭಾಷೆಯಾಗಿ ಬೇಕಾದರೆ ಸಂಪರ್ಕ ಭಾಷೆಯನ್ನಾಗಿ ಇಂಗ್ಲೀಷ್ ಬಳಸಿ. ನೀವು ಕನ್ನಡ ಬಳಸುವುದರಿಂದ ನಿಮ್ಮ ಮೇಲಿನ ಅಭಿಮಾನ, ಗೌರವ ಹಿಮ್ಮಡಿಯಾಗುತ್ತೆ ವಿನಃ ಇದರಿಂದ ಕೀಳರಿಮೆ ನಿಮಗೆ ಖಂಡಿತ ಆಗುವುದಿಲ್ಲ.


Click it and Unblock the Notifications











