ಹೊಸಬರ ಸಿನಿಮಾ 'ಕಂಗ್ರಾಜುಲೇಷನ್ ಬ್ರದರ್' ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್!
ಹೊಸಬರ ಸಿನಿಮಾಗಳು ಇರಲಿ, ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿಲ್ಲ. ಹೀಗಿದ್ದರೂ ಪ್ರಯತ್ನಗಳು ನಿಲ್ಲುತ್ತಿಲ್ಲ. ಹೊಸಬರು ಪ್ರಯತ್ನಗಳನ್ನು ಮಾಡೋದನ್ನು ನಿಲ್ಲಿಸಿಲ್ಲ. ವಿಭಿನ್ನ ಕಂಟೆಂಟ್‌ಗಳನ್ನು ಹೊತ್ತು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗ ಇಂತಹದ್ದೇ ಇನ್ನೊಂದು ಹೊಸ ಪ್ರತಿಭೆಗಳ ಕನ್ನಡಿಗರ ಮನಗೆಲ್ಲುವುದಕ್ಕೆ ಸಜ್ಜಾಗಿದೆ. ಆದರೆ, ಅನುಭವಿ ನಿರ್ದೇಶಕ ಹರಿ ಸಂತೋಷ್ ಕ್ರಿಯೇಟಿವ್ ಹೆಡ್ ಆಗಿರುವುದು ಚಿತ್ರರಂಗಕ್ಕೆ ಬಲ ಬಂದಂತಾಗಿದೆ.
ಅಂದ್ಹಾಗೆ ಆ ಹೊಸ ಪ್ರತಿಭೆಗಳ ಸಿನಿಮಾವೇ 'Congratulations ಬ್ರದರ್'. ಟೈಟಲ್‌ನಿಂದಲೇ ಸಿನಿಪ್ರಿಯರ ಗಮನ ಸೆಳೆದಿತ್ತು. ಈಗ ಟೀಸರ್ ರಿಲೀಸ್ ಆಗಿದ್ದು, ಸಿನಿಪ್ರೇಮಿಗಳ ಗಮನ ಸೆಳೆದಿದೆ. ಯಾಕಂದ್ರೆ, ಟೀಸರ್ ಅನ್ನು ವಿಭಿನ್ನವಾಗಿ ಶೂಟ್ ಮಾಡಿದ್ದು, ಸಿನಿಪ್ರಿಯರಿಗೆ ಥಿಯೇಟರ್‌ಗೆ ಹೋದ ಅನುಭವ ಆಗಿದೆ. ನೀವು ಈಗಾಗಲೇ ಈ ಟೀಸರ್ ನೋಡಿದ್ದರೆ, ಅದ್ಹೇಗೆ ಅನ್ನೋದು ಅನುಭವಕ್ಕೆ ಬಂದಿರುತ್ತೆ.

ಸಾಮಾನ್ಯವಾಗಿ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಹೋದಾಗ ಆರಂಭದಲ್ಲಿಯೇ ಪಾನ್, ಗುಟ್ಕಾ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶ ಬರುತ್ತೆ. ಅದರಲ್ಲಿ "ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡೇ ಇರಲಿಲ್ಲ" ಎಂಬ ಸೀನ್ ಅನ್ನು ಎಲ್ಲರೂ ನೋಡಿರುತ್ತಾರೆ. ಅದರಂತೆ ಈ ಸಿನಿಮಾದ ಟೀಸರ್ ಅನ್ನು ಕ್ರಿಯೇಟ್ ಮಾಡಿರುವುದು ವಿಶೇಷ.
'Congratulations ಬ್ರದರ್' ಸಿನಿಮಾ ಟೀಸರ್ ಈ ಫಾರ್ಮೆಟ್‌ನಲ್ಲಿಯೇ ಶೂಟ್ ಮಾಡಲಾಗಿದೆ. ಪ್ರೀತಿ ಪ್ರೇಮ ಇಂದೇ ತ್ಯಜಿಸಿ.. ಹೆಚ್ಚಿನ ಮಾಹಿತಿಗೆ ಕಾಂಟಾಕ್ಟ್ ಮಾಡಿ" ಎಂದು ಸಿನಿಮಾದ ಟೀಸರ್‌ನಲ್ಲಿ ಹೇಳಲಾಗಿದೆ. ಈ ಮೂಲಕ ಪ್ರೇಮಿಯ ನೋವು, ಸಂಕಟ, ಪರದಾಟದ ದೃಶ್ಯಗಳು ಜನರನ್ನು ಸೆಳೆಯುವಂತೆ ಮಾಡಿದೆ. ಅಂದ್ಹಾಗೆ ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಇತ್ತೀಚೆಗೆ ತೆರೆಕಂಡಿರುವ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಹಾಗೂ ಕಿರೀಟಿ ನಟನೆಯ 'ಜೂನಿಯರ್' ಸಿನಿಮಾದ ಪ್ರದರ್ಶನದ ವೇಳೆ ಟೀಸರ್ ಅನ್ನು ಪ್ರದರ್ಶನ ಮಾಡಲಾಗಿತ್ತು. ಅಲ್ಲಿಗೆ ಈ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದೊಂದು ತ್ರಿಕೋನ ಪ್ರೇಮ ಕಥೆಯ ಸಿನಿಮಾ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗುತ್ತೆ? ಅನ್ನೋದನ್ನು ಈ ಸಿನಿಮಾ ತಂಡ ಹೇಳುವುದಕ್ಕೆ ಹೊರಟಿದೆ. ಈ ಸಿನಿಮಾದ "ಪ್ರೀತಿ ಪಜೀತಿ.." ಎನ್ನುವ ಹಾಡು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದರ ಬೆನ್ನಲ್ಲೇ 'Congratulations ಬ್ರದರ್' ಸಿನಿಮಾದ ಟೀಸರ್ ಕೂಡ ಜೋರಾಗಿ ಸದ್ದು ಮಾಡುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ.
'Congratulations ಬ್ರದರ್' ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಅನುಭವಿ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಾಪ್ ಗಂಧರ್ವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯುವ ನಟ ರಕ್ಷಿತ್ ನಾಗ್ ನಟಿಸಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್, ಅನುಶಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಕಾರವಾರ, ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಇತ್ತೀಚೆಗೆ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೂಗು ಎಲ್ಲಾ ಕಡೆ ಕೇಳಿ ಬರುತ್ತಿದೆ. ಹೀಗಿರುವಾಗ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕರೆ ಸ್ನೇಹಿತರು ಹೇಳುವ ಕಾಮನ್ ಡೈಲಾಗ್ "Congratulations ಬ್ರದರ್". ಇದೇ ಎಳೆಯನ್ನು ಇಟ್ಟಿಕೊಂಡು ಜನರಿಗೆ ಮನರಂಜನೆಯನ್ನು ನೀಡುವುದಕ್ಕೆ ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಮುಂದಾಗಿದ್ದಾರೆ. ಈ ಹಿಂದೆ ಎರಡು ಮೂರು ಸಿನಿಮಾಗಳಿಗೆ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದು, ಇದು ಅವರ ನಿರ್ಮಾಣದ ಮೊದಲ ಸಿನಿಮಾ.
ಇನ್ನು ನಿರ್ದೇಶಕ ಪ್ರತಾಪ್ ಗಂಧರ್ವ ಅವರಿಗೂ ಇದು ಚೊಚ್ಚಲ ಸಿನಿಮಾ. ಇಡೀ ತಂಡಕ್ಕೆ ಬೆನ್ನೆಲುಬಾಗಿ ಹರಿ ಸಂತೋಷ್ ಸಾತ್ ನೀಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ನೀಡಿದ್ದರೆ, ಗುರುಪ್ರಸಾದ್ ಕ್ಯಾಮರಾ ವರ್ಕ್ ಇದೆ. ಇನ್ನೂ ಈ ಸಿನಿಮಾದ ಹೀರೋ ರಕ್ಷಿತ್ ನಾಗ್ ರಂಗಭೂಮಿ ಪ್ರತಿಭೆ, ಜೊತೆಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ ಇದು ಅವರ ಚೊಚ್ಚಲ ಸಿನಿಮಾ. ಹೀರೋ ತಂದೆಯ ಪಾತ್ರದಲ್ಲಿ ಹಿರಿಯ ನಟ ಶಶಿಕುಮಾರ್ ನಟಿಸಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











