ಮುನಿರತ್ನಗೆ ಶುಭಾಶಯ: ವಿವಾದದ ಕುರಿತು ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ನಟ ನಿಖಿಲ್ ಕುಮಾರಸ್ವಾಮಿ ಮತ್ತು ನಿರ್ಮಾಪಕ ಮುನಿರತ್ನ ನಾಯ್ಡು ಇಬ್ಬರಿಗೂ ಸಿನಿಮಾದಾಚೆಗೂ ಒಂದು ಸಂಬಂಧವಿದೆ. ಅದು ರಾಜಕೀಯ. ಮುನಿರತ್ನ ನಾಯ್ಡು ಅವರ ಜನ್ಮದಿನಕ್ಕೆ ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಶುಭಾಶಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
Recommended Video
'ಸೃಜನಶೀಲ ನಿರ್ಮಾಪಕರು ಮತ್ತು ಆತ್ಮೀಯರೂ ಆದ ಮುನಿರತ್ನ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ನಿಖಿಲ್ ಶುಭ ಕೋರಿದ್ದರು. ಆದರೆ ಇದಕ್ಕೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಇದರ ಕುರಿತು ಅಸಮಾಧಾನ ತೋರಿಸಿದ್ದರು. ಮುನಿರತ್ನ ನಾಯ್ಡು, ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದ್ರೋಹ ಎಸಗಿ ಸರ್ಕಾರ ಬೀಳುವಂತೆ ಮಾಡಿದ್ದರು. ಅವರಿಗೆ ಶುಭ ಕೋರಿದ್ದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ನಿಖಿಲ್ ವಿವರಣೆ ನೀಡಿದ್ದಾರೆ. ಮುಂದೆ ಓದಿ.

ನಟನಾಗಿ ಶುಭ ಕೋರಿದ್ದೇನೆ
ಮುನಿರತ್ನ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. 'ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ ಎಂದು ನಿಖಿಲ್ ಹೇಳಿದ್ದಾರೆ.

ಇದು ರಾಜಕೀಯ ಸತ್ಸಂಪ್ರದಾಯ
ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು, ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ, ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾ ಹಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಅವರಿಗೆ ಕಣದಲ್ಲಿ ಉತ್ತರ ನೀಡೋಣ
ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ನಿರ್ಮಿಸುತ್ತಿರುವ ನಿಖಿಲ್
ನಿಖಿಲ್ ಕುಮಾರಸ್ವಾಮಿ ತಂದೆಯಂತೆಯೇ ಸಿನಿಮಾ ನಿರ್ಮಾಣದ ಹಾದಿ ತುಳಿದಿದ್ದಾರೆ. ಎನ್‌ಕೆ ಎಂಟರ್‌ಟೈನ್‌ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, 'ಹಂಬಲ್ ಪೊಲಿಟೀಶಿಯನ್ ನೊಗ್‌ರಾಜ್' ನಿರ್ದೇಶಿಸಿದ್ದ ಸಾದ್ ಖಾನ್ ಈ ಸಿನಿಮಾ ನಿರ್ದೇಶಿಸಲಿದ್ದಾರೆ.


Click it and Unblock the Notifications











