'ಸೈನಿಕ'ನ ಎದುರು ತೊಡೆ ತಟ್ಟಿದ 'ಅಭಿಮನ್ಯು'; ನಿಖಿಲ್ ಕುಮಾರಸ್ವಾಮಿ ಘೋಷಿಸಿಕೊಂಡ ಆಸ್ತಿ ಎಷ್ಟು?
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಅದರಲ್ಲೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸಾಕಷ್ಟು ಚರ್ಚೆಯಲ್ಲಿತ್ತು. ಸಿ ಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರ ಹೆಸರುಗಳು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದವು. ಸಿ ಪಿ ಯೋಗೇಶ್ವರ್ ಬಿಜೆಪಿಯಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಬಯಸಿದ್ದರು. ಇತ್ತ ಕುಮಾರಸ್ವಾಮಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದರು.
ಈ ಗೊಂದಲದಲ್ಲಿ ಸಿ ಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ನಿರೀಕ್ಷೆ ಮಾಡಿದಂತೆ ಉತ್ತರ ಸಿಕ್ಕಿದೆ. ನಿಖಿಲ್ ಕುಮಾರಸ್ವಾಮಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.

ಸಿನಿಮಾ ತಾತ್ಕಾಲಿಕ ಬ್ರೇಕ್ ಕೊಟ್ಟು ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯ ವಿವರವನ್ನು ಘೋಷಣೆ ಮಾಡಿಕೊಂಡಿದ್ದಾರೆ. ಹಾಗಿದ್ದರೆ, ನಿಖಿಲ್ ಕುಮಾರಸ್ವಾಮಿ ಬಳಿಕ ಎಷ್ಟು ಮೌಲ್ಯದ ಆಸ್ತಿ ಇದೆ? ಪತ್ನಿ ಹಾಗೂ ಮಗನ ಹೆಸರಿನಲ್ಲಿ ಎಷ್ಟು ಆಸ್ತಿಯಿದೆ? ತಿಳಿಯಲು ಮುಂದೆ ಓದಿ.
ನಿಖಿಲ್ ಕುಮಾರಸ್ವಾಮಿ ಈಗಾಗಲೇ ಎರಡು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಎದುರು ಸೋಲುಂಡಿದ್ದರು. ಎರಡನೇ ಬಾರಿ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಹೀಗಾಗಿ ಮೂರನೇ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿದ್ದು ಗೆಲ್ಲಲೇಬೇಕಾದ ಒತ್ತಡವಿದೆ.
ನಿಖಿಲ್ ಕುಮಾರಸ್ವಾಮಿ ಇಂದು (ಅಕ್ಟೋಬರ್ 25) ನಾಮಪತ್ರವನ್ನು ಸಲ್ಲಿಕೆ ಮಾಡಿದ್ದು, ತಮ್ಮ ಬಳಿ ಇರುವ ಆಸ್ತಿಯ ವಿವರವನ್ನು ಸಲ್ಲಿಸಿದ್ದಾರೆ. ನಿಖಿಲ್ ವಿದ್ಯಾಬ್ಯಾಸ, ಚರಾಸ್ತಿ, ಸ್ಥಿರಾಸ್ತಿ ಸೇರಿದಂತೆ ಪತ್ನಿ ಹಾಗೂ ಮಗನ ಹೆಸರಿನಲ್ಲಿ ಇರುವ ಆಸ್ತಿಯ ಮೌಲ್ಯವನ್ನು ಘೋಷಣೆ ಮಾಡಿದ್ದಾರೆ. ಹಾಗೇ ತಮ್ಮ ಹೆಸರಿನಲ್ಲಿ ಇರುವ ಸಾಲವನ್ನು ಸಹ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಬಿಬಿಎ ವಿದ್ಯಾಭ್ಯಾಸ ಮಾಡಿರುವ ನಿಖಿಲ್ ಕುಮಾರಸ್ವಾಮಿ ನೂರು ಕೋಟಿಯ ಒಡೆಯ. ಅವರೇ ಘೋಷಿಸಿಕೊಂಡಂತೆ ಅವರ ಬಳಿಕ 113 ಕೋಟಿ ರೂಪಾಯಿ ಆಸ್ತಿ ಇದೆ. ಅದರಲ್ಲಿ 78.15 ಕೋಟಿ ರೂಪಾಯಿ ಚರಾಸ್ತಿ ಹಾಗೂ 29.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಹೆಸರಿನಲ್ಲಿ 1.488 ಕೆಜಿ ಚಿನ್ನ ಹಾಗೂ 16 ಕೆಜಿ ಬೆಳ್ಳಿ ಇದೆ.
ಹಾಗೇ ಪತ್ನಿ ರೇವತಿ ಹೆಸರಿನಲ್ಲಿ 5.49 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, 43 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ಹಾಗೇ 1.411 ಕೆಜಿ ಚಿನ್ನ ಹಾಗೂ 33.05 ಕೆಜಿ ಬೆಳ್ಳಿಯ ಜೊತೆಗೆ 13 ಕ್ಯಾರೆಟ್ ಡೈಮಂಡ್ ಇದೆ. ಪುತ್ರ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ರೂಪಾಯಿ ಹಣವಿದೆ ಘೋಷಣೆಯಾಗಿದೆ. ಇದರೊಂದಿಗೆ ರೇಂಜ್ ರೋವರ್, ಇನ್ನೋವಾ ಐ ಕ್ರಾಸ್, ಎರಡು ಕ್ಯಾರಾವ್ಯಾನ್ ಹಾಗೂ ಇನ್ನೋವಾ ಕ್ರಿಸ್ಟ ಕಾರು ಇದೆ. ಇಷ್ಟೆಲ್ಲ ಆಸ್ತಿಯ ಜೊತೆ ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 70.44 ಕೋಟಿ ರೂಪಾಯಿ ಸಾಲವಿದ್ದರೆ, ಪತ್ನಿ ಹೆಸರಲ್ಲಿ 4.96 ಕೋಟಿ ರೂಪಾಯಿ ಸಾಲವಿದೆ.


Click it and Unblock the Notifications











